ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪುರದಲ್ಲಿ ಕನ್ನಡತನದ ರಸದೌತಣ

ಬೆಂಗಳೂರಿನಲ್ಲಿ ಶೆಖಾವತಿ ಊಟ
ಆರ್ನಿ
Published 30 ಡಿಸೆಂಬರ್ 2023, 5:39 IST
Last Updated 30 ಡಿಸೆಂಬರ್ 2023, 5:39 IST
ಅಕ್ಷರ ಗಾತ್ರ

’ಮದರಾಸಿಯ ಇಡ್ಲಿ ಗೊತ್ತು, ಇದ್ಯಾವುದಿದು ತಟ್ಟೆ ಇಡ್ಲಿ?’ ಇಂಥ ಪ್ರಶ್ನೆಯಿಂದಲೇ ಶುರುವಾಗಿತ್ತು ಗ್ರಾಹಕರ ಕುತೂಹಲ. ಚೆನ್ನೈ ಮೂಲದ ಹೋಟೆಲ್‌ಗಳಲ್ಲಿ ಟೊಮೆಟೊ ಸಾರುಂಡವರು, ಉಡುಪಿ ರುಚಿಯ ಹುಳಿಯನ್ನು ಸಾಂಬಾರ್‌ ಎಂದು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. 

ಆದರೆ ಇದೀಗ ಬೆಳಗಿನ ತಿಂಡಿ ಎಂದರೆ ತುಮಕೂರಿನ ತಟ್ಟೆ ಇಡ್ಲಿ, ಮೈಸೂರು ಮಸಾಲೆ ದೋಸೆ, ಖಾರಾಭಾತು, ಚೌಚೌಭಾತುಗಳೇ ಉತ್ತಮ ಎಂದು ಒಪ್ಪಿಕೊಂಡಿದ್ದಾರೆ.


ಇದು ರಾಜಸ್ಥಾನದಲ್ಲಿ ಕನ್ನಡಿಗರ ತಿಂಡಿಯನ್ನು ಉಣಬಡಿಸುತ್ತಿರುವ ’ಅನ್ನಪೂರ್ಣಂ’ಹೋಟೆಲ್‌ನ ಮಾಲೀಕರಾದ ಸಿದ್ಧಾರ್ಥ್‌ ಗೊಯೆಂಕಾ ಅವರ ಮಾತುಗಳು. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಂಗಳೂರಿನಲ್ಲಿಯೇ ಬೆಳೆದು, ಬೆಂಗಳೂರಿಗರಿಗೆ ಶೇಖಾವತಿ ಖಾದ್ಯಗಳನ್ನು ಉಣಬಡಿಸುತ್ತಿರುವ ಸಿದ್ಧಾರ್ಥ್‌  ಆಹಾರಪ್ರೀತಿ ಅಗಾಧವಾದುದು.


ಭಾರತೀಯ ಆಹಾರ ಶೈಲಿಯ ಕುರಿತು ಗಂಟೆಗಟ್ಟಲೆ ಮಾತನಾಡುವ ಅವರು ಕನ್ನಡಿಗರ ತಿಂಡಿ ತಿನಿಸುಗಳನ್ನು ರಾಜಸ್ಥಾನದ ಜಯಪುರಕ್ಕೆ ತಲುಪಿಸಿದ್ದಾರೆ. ಬೇಲೂರು ಹಳೆಬೀಡಿನ ದೇಗುಲಗಳ ದೊಡ್ಡ ದೊಡ್ಡ ಚಿತ್ರಗಳಿಂದ ಸಿಂಗರಿಸಿರುವ ತಮ್ಮ ಹೊಟೆಲ್‌ನಲ್ಲಿ ಎಲ್ಲಕ್ಕೂ ಮೀರಿದ ಕನ್ನಡತನವನ್ನು ಉಣಬಡಿಸುತ್ತಿದ್ದಾರೆ.

ಈ ’ಅನ್ನಪೂರ್ಣಂ‘ ಹಿಂದಿನ ಸ್ಪೂರ್ತಿ, ಮತ್ತು ಸಾಹಸದ ಕುರಿತು ಸಿದ್ಧಾರ್ಥ್‌ ಗೋಯೆಂಕಾ ಅವರೇ ವಿವರಿಸಿದ್ದಾರೆ. 


ಸ್ಥಳೀಯ ರುಚಿಗಳನ್ನು ಶುಚಿಯಾಗಿ ಮಾಡಿ, ಜನರಿಗೆ ಉಣಬಡಿಸಬೇಕು. ಇದೀಗ ಉತ್ತರ ಭಾರತದಲ್ಲಿ ದಕ್ಷಿಣವೆಂದರೆ ಮದರಾಸಿ ಎಂಬ ಭಾವವೇ ದಟ್ಟವಾಗಿದೆ. ಅಲ್ಲಿ ಕರ್ನಾಟಕದ ಖಾದ್ಯಗಳನ್ನು ಪರಿಚಯಿಸಿದಾಗ ತಿಳಿವು ಮೂಡಿಸುವುದೇ ದೊಡ್ಡ ಸವಾಲಾಗಿತ್ತು. ರುಚಿ ಮತ್ತು ಖಾದ್ಯವೈವಿಧ್ಯ ಜನರನ್ನು ಸೆಳೆಯಿತು. 

ಹಿಂದೆ ಒಂದು ಕಾಲದಲ್ಲಿ ಹುಷಾರಿಲ್ಲದಿದ್ದರೆ ಮಾತ್ರ ಅನ್ನ ಎನ್ನುವ ಮಾತಿತ್ತು. ಇದೀಗ ಅದು ಇಡ್ಲಿ ಎಂದು ಬದಲಾಗಿದೆ. ನಮ್ಮ ಊಟದ ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ. ಎಲ್ಲೆಡೆಯೂ ಮೈದಾದಿಂದ ಮಾಡಿದ ತಂದೂರಿ ರೋಟಿಗಳು, ಪನ್ನೀರ್‌ ಮತ್ತು ಆಲು ಮಟರ್‌, ಗೋಬಿಗಳು ರಾರಾಜಿಸುವಾಗ, ನಮ್ಮ ನೆಲದ ಸಂಸ್ಕೃತಿಯ ಆಹಾರ ವಿಧಾನವನ್ನು ಕಾಪಾಡಬೇಕಿದೆ. 

ಶೆಖಾವತಿ ಊಟದಲ್ಲಿ ಸಿಹಿಯದ್ದೇ ಮೇಲುಗೈ. ಅಲ್ಲಿಯ ಚಾಟ್‌, ಸಬ್ಜಿ, ಭಾಜಿಗಳ ಜೊತೆಗೆ ಪೂರಿ ಶ್ರೀಖಂಡ, ಪೂರಿ ಹಲ್ವಾ, ಪೂರಿ ಖೀರ್‌, ಘೇವರ್‌ ದಾಲ್‌ ಭಾಟಿ ಚೂರ್ಮ, ಇವುಗಳನ್ನೆಲ್ಲ ನಮ್ಮ ’ಕೇಸರಿಯಾ‘ ರೆಸ್ಟುರಾಂಟ್‌ನಲ್ಲಿ ಉಣಬಡಿಸಲಾಗುತ್ತದೆ. ಇದಕ್ಕೆ ಕನ್ನಡಿಗರಿಂದ ಅಮೋಘವಾದ ಪ್ರತಿಸ್ಪಂದನೆ ದೊರೆಯಿತು. ನಮ್ಮದಲ್ಲದ ನೆಲದಲ್ಲಿ ಹೀಗೆ ಉಣಬಡಿಸುವ ಸಂತೃಪ್ತಿಯೇ ಜಯಪುರದಲ್ಲಿ ಕನ್ನಡಿಗರ ಊಟವನ್ನು ಉಣಬಡಿಸಲು ಸ್ಪೂರ್ತಿ ಆಯಿತು.

ಕರ್ನಾಟಕ ನಮ್ಮ ಕರ್ಮಭೂಮಿ. ಆದರೆ ನನ್ನ ತಲೆಮಾರಿನವರಿಗೆ ಮಾತೃಭೂಮಿಯೂ ಹೌದು. ಕನ್ನಡನಾಡಿನ, ಕನ್ನಡ ನೆಲದ ಋಣ ತೀರಿಸಲೆಂದೇ ಈ ಪ್ರಯತ್ನವನ್ನು ಕೈಗೊಂಡಿರುವೆ. ಅಲ್ಲಿ ನಮ್ಮೂರಿನಲ್ಲಿ ಈ ಊರಿನ ರುಚಿಯುಣಿಸುವುದು, ಈ ಊರಿನಲ್ಲಿ ನಮ್ಮೂರಿನ ರುಚಿಯುಣಿಸುವುದು, ಗಡಿ ಮೀರಿದ ಪ್ರೀತಿಯನ್ನು ತಿಂದುಣಿಸುವುದು ನನಗಿಷ್ಟದ ಕೆಲಸ. 

ಇನ್ನು ಕರ್ನಾಟಕದ ಬಯಲು ಸೀಮೆ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ, ಘಟ್ಟದ ಊಟ ಹೀಗೆ ಹಲವಾರು ಬಗೆಯ ಊಟಗಳನ್ನು ಪರಿಚಯಿಸಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಕನ್ನಡಿಗರು ಕೈ ಹಿಡಿದರೆ ಈ ಕೆಲಸ ಸರಾಗವಾಗುತ್ತದೆ ಎನ್ನುತ್ತ ತಮ್ಮ ಮಾತನ್ನು ಮುಗಿಸಿದರು. ಮೈಸೂರಿನ ಶೆಫ್‌ ಇವರೊಟ್ಟಿಗೆ ಕೈ ಜೋಡಿಸಿದ್ದಾರೆ. ಕನ್ನಡದ ಖಾದ್ಯಗಳ:ನ್ನು ಕರ್ನಾಟಕದ ಸಂಸ್ಕೃತಿಯಂತೆ ಹಿತ್ತಾಳೆಯ ಪಾತ್ರೆಗಳಲ್ಲಿಯೇ ಉಣಬಡಿಸುತ್ತಿದ್ದಾರೆ.

ನಂದಿನಿ ತುಪ್ಪದ ಕೇಸರಿಭಾತು ಜಯಪುರದಲ್ಲಿರುವ ಅನ್ನಪೂರ್ಣಂ ಹೊಟೆಲ್‌ನ ಮುಖ್ಯ ಆಕರ್ಷಣೆ
ನಂದಿನಿ ತುಪ್ಪದ ಕೇಸರಿಭಾತು ಜಯಪುರದಲ್ಲಿರುವ ಅನ್ನಪೂರ್ಣಂ ಹೊಟೆಲ್‌ನ ಮುಖ್ಯ ಆಕರ್ಷಣೆ
ಬೇಲೂರು ಹಳೆಬೀಡಿನ ಕೆತ್ತನೆಗಳನ್ನು ಪರಿಚಯಿಸುವ ಒಳಾಂಗಣ
ಬೇಲೂರು ಹಳೆಬೀಡಿನ ಕೆತ್ತನೆಗಳನ್ನು ಪರಿಚಯಿಸುವ ಒಳಾಂಗಣ
ಬೆಳ್ಳಿ ತಟ್ಟೆಯಲ್ಲಿ ಶೆಖಾವತಿ ಊಟ
ಬೆಳ್ಳಿ ತಟ್ಟೆಯಲ್ಲಿ ಶೆಖಾವತಿ ಊಟ
ಸಿದ್ಧಾರ್ಥ್‌ ಗೊಯೆಂಕಾ
ಸಿದ್ಧಾರ್ಥ್‌ ಗೊಯೆಂಕಾ

ಖಾದ್ಯಕ್ಕೆ ಖಾಸು ಮಸಾಲೆ. ಪ್ರತಿ ಪ್ರದೇಶಕ್ಕೂ ಒಂದು ರುಚಿಯಿದೆ. ಅದಕ್ಕೆ ಅಲ್ಲಿಯದೇ ಘಮ ಬರಬೇಕೆಂದರೆ ಸ್ಥಳೀಯ ಸಾಮಗ್ರಿಗಳೇ ಇರಬೇಕು ಎನ್ನುತ್ತಾರೆ ಸಿದ್ಧಾರ್ಥ. ಇಲ್ಲಿಯ ಕೇಸರಿಯಾ ರೆಸ್ಟುರಾಂಟ್‌ನಲ್ಲಿ ರಾಜಸ್ಥಾನದಿಂದಲೇ ಮಸಾಲೆಗಳನ್ನು ತರಿಸುತ್ತಾರೆ. ಪ್ರತಿದಿನವೂ ಹೊಸ ಬಗೆಯ ಶರಬತ್ತುಗಳನ್ನು ಪೂರೈಸುವ ಅವರು ಕಾಶ್ಮೀರದಿಂದ ಕೇಸರಿಯನ್ನು ಕರ್ನಾಟಕದಿಂದ ಚಂದನವನ್ನು ಹೀಗೆ ಆಯಾ ಪ್ರದೇಶಗಳಿಂದ ಅಲ್ಲಿಯ ಖ್ಯಾತ ಮಸಾಲೆಗಳನ್ನು ಖರೀದಿಸಿ ತರುತ್ತಾರೆ.  ರಾಮನಗರ ಕನಕಪುರದಿಂದ ಅವರ ’ಕೇಸರಿಯಾ‘ ಹೋಟೆಲ್‌ಗೆ ತರಕಾರಿಗಳು ಸರಬರಾಜು ಆಗುತ್ತವೆ. ಉಣಬಡಿಸಲು ಬಳಸುವ ಬೆಳ್ಳಿಯ ತಟ್ಟೆ ಲೋಟಗಳನ್ನು ಪುಣೆಯಿಂದ ಸಿದ್ಧಪಡಿಸಲಾಗಿದೆ.  ಜಯಪುರದಲ್ಲಿರುವ ಅನ್ನಪೂರ್ಣಂ ಗೆ ಕರ್ನಾಟಕದಿಂದಲೇ ದೋಸೆ ಅಕ್ಕಿ ಕೇಸರಿಭಾತ್‌ಗೆ ನಂದಿನಿ ತುಪ್ಪ ಮಡಿಕೇರಿಯಿಂದ ಕಾಫಿ ವಲ್ಲೆಪುರಂನಿಂದ ಚಹಾಪುಡಿ ಸರಬರಾಜು ಆಗುತ್ತದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT