ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಾಪುರ ಮಿಲ್ಟ್ರಿ ಹೋಟೆಲ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಇತಿಹಾಸ

Last Updated 17 ಅಕ್ಟೋಬರ್ 2019, 9:53 IST
ಅಕ್ಷರ ಗಾತ್ರ

‘ಕೇರಳಾಪುರ ಹಿಂದೂ ಮಿಲ್ಟ್ರಿ ಹೋಟೆಲ್’ ಹೆಸರು ಕಿವಿ ಮೇಲೆ ಬಿದ್ದರೆ ಮಾಂಸಾಹಾರ ಪ್ರಿಯರ ನಾಲಿಗೆಯಲ್ಲಿ ನೀರೂರಲೇಬೇಕು. ಸೌದೆ ಒಲೆಯಲ್ಲಿ ಮಾಡಿದ ಖಾದ್ಯದ ರುಚಿ ಸವಿಯುವುದು ಮಜವೇ ಮಜಾ! ಈ ಹೋಟೆಲ್‌ಗಳಲ್ಲಿ ನಾಟಿ ಶೈಲಿಯ ಚಿಕನ್ ಫ್ರೈ, ಚಿಕನ್ ಡ್ರೈ, ಬಿರಿಯಾನಿ, ಸಾಂಬಾರು ಹಾಗೂ ಮುದ್ದೆಯ ರುಚಿಗೆ ಮಾರುಹೋಗದವರೇ ಇಲ್ಲ. ಮಟನ್ ಫ್ರೈ, ಡ್ರೈ, ಕೀಮಾ, ಬೋಟಿ ಫ್ರೈ, ಡ್ರೈ, ಫಿಶ್ ಕರಿ, ಡ್ರೈ, ತಲೆಮಾಂಸವನ್ನು ಭೋಜನಪ್ರಿಯರು ಹೆಚ್ಚು ಕೇಳುವುದುಂಟು.

ಹೆಚ್ಚು ಮಸಾಲೆ ಬೆರೆಸದೆ ಬಗೆಬಗೆಯ ಖಾದ್ಯಗಳನ್ನು ತಯಾರಿಸುವುದು ಇಲ್ಲಿನ ವಿಶೇಷ. ಕುಟುಂಬದ ಸದಸ್ಯರೇ ಅಡುಗೆ ಸಿದ್ಧ ಮಾಡಿಡುತ್ತಾರೆ. ರಾಗಿ ಮುದ್ದೆಯನ್ನು ಮಹಿಳೆಯರು ಕಟ್ಟುತ್ತಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಕೇರಳಾಪುರ ಗ್ರಾಮವಿದೆ. ಪಟ್ಟಸಾಲಿ ದೇವಾಂಗ ಸಮುದಾಯಕ್ಕೆ ಸೇರಿದವರು ಈ ಗ್ರಾಮದಲ್ಲಿ ಹೆಚ್ಚಿದ್ದಾರೆ. ನೇಯ್ಗೆ ಇವರ ಕುಲಕಸುಬು. ಕುಲಕಸುಬು ದುಸ್ತರವಾದಾಗ ಕಾಲ ಕ್ರಮೇಣ ಕೇರಳಾಪುರದ ಅನೇಕ ಕುಟುಂಬಗಳು ಕರ್ನಾಟಕದ ವಿವಿಧೆಡೆ ವಲಸೆ ಹೋದವು. ಅವರ ಪೈಕಿ ಕೆಲವರು ಹೋಟೆಲ್ ಉದ್ಯಮ ಆಯ್ಕೆ ಮಾಡಿಕೊಂಡರು.

ಐದು ದಶಕದ ಹಿಂದೆ ಹಂಪಯ್ಯ ಶೆಟ್ಟಿ, ಬೋರೆ ಯಲ್ಲಪ್ಪ ಶೆಟ್ಟಿ, ಮತ್ತಿಕರಿಯಪ್ಪ ಎಂಬುವರು ‘ಕೇರಳಾಪುರ ಮಿಲ್ಟ್ರಿ ಹೋಟೆಲ್‌’ ಆರಂಭಿಸಿದರು. ಆಗ ಬಸ್ ಚಾಲಕರು ಈ ಹೋಟೆಲ್‌ಗಳಿಗೆ ಊಟಕ್ಕೆ ಬರುತ್ತಿದ್ದರು. ಅವರ ಜತೆ ಪ್ರಯಾಣಿಕರು ಬರುತ್ತಿದ್ದರು. ಖಾದ್ಯದ ರುಚಿ ಸವಿದ ಪ್ರಯಾಣಿಕರು ಇತರರಿಗೆ ಹೇಳತೊಡಗಿದರು. ಮಿಲ್ಟ್ರಿ ಹೋಟೆಲ್‌ ಕೀರ್ತಿ ಬಾಯಿಂದ ಬಾಯಿಗೆ ಹರಡಿ, ಎಲ್ಲೆಡೆ ಹೆಸರುವಾಸಿ ಪಡೆದುಕೊಂಡಿದೆ. ಕೇರಳಾಪುರ ಬಸ್ ನಿಲ್ದಾಣದಲ್ಲಿ ಇಳಿದು ರಸ್ತೆ ದಾಟಿದರೆ ‘ಕೇರಳಾಪುರ ಹಿಂದೂ ಮಿಲಿಟರಿ ಹೋಟೆಲ್’ ಎಂಬ ಫಲಕ ಕಣ್ಣಿಗೆ ರಾಚುತ್ತದೆ.

ರಮೇಶ್ ಅವರ ಮಿಲ್ಟ್ರಿ ಹೋಟೆಲ್ ಸುಮಾರು ಐವತ್ತು ವರ್ಷಗಳ ಹಿಂದೆ ಆರಂಭಗೊಂಡಿದೆ. ಈಗಲೂ ಈ ಹೋಟೆಲ್ ಶುಚಿ, ರುಚಿಗೆ ಹೆಸರಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ ಜಿಲ್ಲೆ ಸೇರಿ 280ಕ್ಕೂ ಹೆಚ್ಚು ಕೇರಳಾಪುರ ಹೋಟೆಲ್‌ಗಳು ಇವೆ.
ಕೇರಳಾಪುರದಲ್ಲಿ ಸದ್ಯ ಐದು ಹೋಟೆಲ್‌ಗಳು ನಡೆಯುತ್ತಿವೆ. ಗ್ರಾಹಕರು ಕುಟುಂಬ ಸಮೇತ ಇಲ್ಲಿಗೆ ಬರುತ್ತಾರೆ. ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಈ ಹೋಟೆಲ್‌ಗಳ ಊಟದ ಸವಿರುಚಿಗೆ ಮಾರುಹೋಗಿದ್ದಾರೆ.

ಸಾಮಾನ್ಯವಾಗಿ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತದೆ. ಇಲ್ಲಿ ಪರಿಸ್ಥಿತಿ ತದ್ವಿರುದ್ಧ. ಮಾಂಸಾಹಾರಿ ಹೋಟೆಲ್ ಕಮಟು ವಾಸನೆ ಇಲ್ಲಿ ಹೊರಹೊಮ್ಮುವುದಿಲ್ಲ. ಊಟದ ಬೆಲೆಯೂ ದುಬಾರಿಯಲ್ಲ. ಕೈಗೆಟುಕುವ ಬೆಲೆಯಲ್ಲೇ ಎಲ್ಲವೂ ಲಭ್ಯ.

‘ಕೇರಳಾಪುರ ಹೋಟೆಲ್‌ನಲ್ಲಿ ಒಮ್ಮೆ ರುಚಿ ಸವಿದರೆ ಮತ್ತೆ ಹುಡುಕಿಕೊಂಡು ಬರುತ್ತಾರೆ. ನಾವು ರುಚಿ–ಶುಚಿಗೆ ಫೇಮಸ್. ಅಡುಗೆಗೆ ಸೋಡಾ ಬೆರೆಸುವುದಿಲ್ಲ. ಇಲ್ಲಿ ಊಟ ಮಾಡಿದವರು ಈವರೆಗೂ ಒಂದೇ ಒಂದು ಕಂಪ್ಲೇಂಟ್‌ ಮಾಡಿಲ್ಲ. ಹೋಟೆಲ್‌ಗೆ ವಾರದ ರಜೆ ಇಲ್ಲ. ಗೌರಿ–ಗಣೇಶ, ಯುಗಾದಿ, ದೀಪಾವಳಿ ಹಬ್ಬಕ್ಕೆ ರಜೆ’ ಎಂದು ಹೋಟೆಲ್ ಮಾಲೀಕ ರಮೇಶ್‌ ಹೇಳಿದರು.

‘ಈ ಹೋಟೆಲ್ ಅನ್ನು ನನ್ನ ತಾತ ಮಾಳಶೆಟ್ಟಿ ಆರಂಭಿಸಿದರು. ಅವರ ನಂತರ ನನ್ನ ತಂದೆ ನಾಗರಾಜ್, ಈಗ ನಾನು ನಡೆಸುತ್ತಿದ್ದೇನೆ. ಮೈಸೂರು, ಬೆಂಗಳೂರಿನಲ್ಲೂ ಹೋಟೆಲ್ ನಡೆಸುತ್ತಿದ್ದೇವೆ’ ಎಂದರು ರಮೇಶ್.

‘ಕೇರಳಾಪುರ ಹೋಟೆಲ್‌ನಲ್ಲಿ ಗುಣಮಟ್ಟದ ಅನುಮಾನಕ್ಕೆ ಆಸ್ಪದ ಇಲ್ಲ. ಕುರಿ, ಕೋಳಿ, ಮೀನಿನ ಖಾದ್ಯ ಮಾತ್ರ ತಯಾರಿಸಲಾಗುತ್ತದೆ. ಮನೆಯವರೇ ಅಡುಗೆ ಮಾಡುವುದು. ಹುಣಸೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜಕುಮಾರ್‌ ಅವರು ನಮ್ಮ ಹೋಟೆಲ್‌ನಿಂದಲೇ ಅಡುಗೆ ಮಾಡಿಸಿದ್ದರು’ ಎಂದರು ಹುಣಸೂರಿನಲ್ಲಿ ಹೋಟೆಲ್ ನಡೆಸುತ್ತಿರುವ ಕೇರಳಾಪುರದ ಶಿವಪ್ಪ ಶೆಟ್ಟಿ.

(2019ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT