ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ತುಂಬ ಸಂಬಳದ ನೌಕರಿ ಬಿಟ್ಟು, ಹೋಟೆಲ್‌ ಇಟ್ಟರು!

ಉದ್ಯಮಿ ಮಾತು
Last Updated 4 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಸದಾ ಹೊಸತನಕ್ಕಾಗಿ ತುಡಿಯುವ ಮತ್ತುವಿಭಿನ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳುವಮೂವರು ಗೆಳೆಯರ ಪ್ರಯೋಗಶೀಲ ಮನಸ್ಸು ಮತ್ತು ಸಾಹಸದ ಫಲವಾಗಿ ಹುಟ್ಟಿದ್ದೇ ‘ಮೇನ್‌ ಕೋರ್ಸ್’ ಎಂಬ ಹೋಟೆಲ್‌.

ಐದಾರು ವರ್ಷಗಳ ಹಿಂದೆಪುಟ್ಟಬಾಡಿಗೆ ಕೋಣೆ (ಕಿಚನ್) ಮತ್ತು ವಾಹನದೊಂದಿಗೆ ಆರಂಭವಾದ ಮೂವರ ಪಯಣ ಈಗ ಚರ್ಚ್‌ಸ್ಟ್ರೀಟ್‌ ಬಂದು ತಲುಪಿದೆ. ಕೆಲವೇ ವರ್ಷಗಳಲ್ಲಿ ಕನಸಿನ ಹೋಟೆಲ್‌ ಕಟ್ಟಿ ಬೆಳೆಸಿ ಯಶಸ್ವಿ ಸ್ಟಾರ್ಟ್ ಅಪ್ ಉದ್ಯಮಿಗಳು ಎನಿಸಿಕೊಂಡ ರಹಮತ್‌ ಉಲ್ಲಾ ಗಫೂರ್‌,ನಿಸಾರ್‌ ಅಹಮದ್‌ ಎನ್‌.ಎಂ. ಮತ್ತುಸಾಫ್ಟವೇರ್‌ ಎಂಜಿನಿಯರ್‌ ಜುನೇದ್‌ (ಸುಹೇಲ್‌ ಅಹಮ್ಮದ್‌) ಅವರ ಯಶೋಗಾಥೆ ನಿಜಕ್ಕೂ ಕುತೂಹಲಕಾರಿಯಾಗಿದೆ.

ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್‌ (ನವೋದ್ಯಮ) ಗಾಳಿ ಬಲವಾಗಿ ಬೀಸುತ್ತಿದ್ದಾಗ ಅದರ ಸೆಳೆತಕ್ಕೆ ಸಿಕ್ಕ ರಹಮತ್‌, ನಿಸಾರ್‌ ಮತ್ತು ಜುನೇದ್‌ ಅವರಸ್ವಂತ ಉದ್ಯಮ ಆರಂಭಿಸುವ ಅಭಿರುಚಿ ಮೂವರನ್ನು ಒಂದುಗೂಡಿಸಿತು.ವಿವಿಧ ಖಾಸಗಿ ಕಂಪನಿಗಳ ನೌಕರರು ಮಧ್ಯಾಹ್ನದ ಊಟಕ್ಕಾಗಿ ಪಡುತ್ತಿದ್ದ ಬವಣೆಯನ್ನು ಕಣ್ಣಾರೆ ಕಂಡಿದ್ದ ಮೂವರಿಗೆ ಆಗ ಹೊಳೆದದ್ದೇ ಹೋಟೆಲ್‌ ಆರಂಭಿಸುವ ಯೋಚನೆ.

ಪ್ರತಿಷ್ಠಿತ ಜೆ.ಪಿ. ಮೋರ್ಗಾನ್‌ ಉದ್ಯೋಗಿಯಾಗಿದ್ದರಹಮತ್‌ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಡುಗೆ ಮನೆ ಹೊಕ್ಕರು. ಸ್ವಂತ ವಹಿವಾಟು ಹೊಂದಿದ್ದಎಂಬಿಎ ಪದವೀಧರ ನಿಸಾರ್‌ ಮತ್ತುಸಾಫ್ಟವೇರ್‌ ಎಂಜಿನಿಯರ್‌ಜುನೇದ್‌(ಸುಹೇಲ್‌ ಅಹಮ್ಮದ್‌) ಒಂದೊಂದು ವಿಭಾಗದ ಉಸ್ತುವಾರಿ ಹೊತ್ತರು.

ಕೇವಲ₹35 ಸಾವಿರ ಬಂಡವಾಳದೊಂದಿಗೆ ನಾಗವಾರದಲ್ಲಿ ಸಣ್ಣ ರೂಂ ಬಾಡಿಗೆ ಪಡೆದು ಕಿಚನ್‌ ಆರಂಭಿಸಿದರು. ಅಲ್ಲಿ ಸಿದ್ಧ ಮಾಡಿದ ಅಡುಗೆಯನ್ನು ಸಣ್ಣ ವಾಹನದಲ್ಲಿ ತುಂಬಿಕೊಂಡು ವೈಟ್‌ಫೀಲ್ಡ್‌ ಕೊಂಡೊಯ್ಯುತ್ತಿದ್ದರು. ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದ್ದ ರುಚಿ ಮತ್ತು ಶುಚಿಯಾದ ಊಟಕ್ಕೆ ಸುತ್ತಮುತ್ತಲಿನ ಖಾಸಗಿ ಕಂಪನಿಗಳ ಉದ್ಯೋಗಿಗಳು ಮುಗಿಬೀಳುತ್ತಿದ್ದರು. ಇದರಿಂದ ಸ್ಥಳೀಯ ವರ್ತಕರ ಪ್ರತಿರೋಧಎದುರಿಸಬೇಕಾಯಿತು. ಜಾಗ ಬದಲಾದರೂ ಸ್ಥಳೀಯರ ಕಿರಿಕಿರಿ ತಪ್ಪಲಿಲ್ಲ.

ಮುಗಿಬಿದ್ದ ಗ್ರಾಹಕರು

ಆಗ ಅಲ್ಲಿಂದ ನೇರವಾಗಿ ಬಂದಿದ್ದು ಎಂ.ಜಿ. ರಸ್ತೆಯ ಶೃಂಗಾರ ಕಾಂಪ್ಲೆಕ್ಸ್‌ನ ಪುಟ್ಟ ಮಳಿಗೆಗೆ.ಎಂ.ಜಿ. ರಸ್ತೆಯಂತಹ ದುಬಾರಿ ಪ್ರದೇಶದಲ್ಲಿ ಕೈಗೆಟಕುವ ಬೆಲೆಯಲ್ಲಿ ಮನೆಯ ರುಚಿ ನೆನಪಿಸುವ ಊಟ ಕಡಿಮೆ ಅವಧಿಯಲ್ಲಿ ಎಲ್ಲರಿಗೂ ರುಚಿಸಿತು. ಕೇವಲ ನಾಲ್ವತ್ತ ರೂಪಾಯಿಗೆ ಸಿಗುತ್ತಿದ್ದ ರುಚಿಕಟ್ಟಾದ ಮತ್ತುಗುಣಮಟ್ಟದಅನ್ನ ಮತ್ತು ದಾಲ್‌ (ಬೇಳೆಸಾರು) ಅನ್ನು ಜನರು ಹುಡುಕಿಕೊಂಡು ಬರತೊಡಗಿದರು.ಚಿಕನ್‌, ಮಟನ್‌,ಮೀನು, ಚಪಾತಿ, ಪಲ್ಯ, ಬಿರಿಯಾನಿ ಎಲ್ಲರಿಗೂ ಹಿಡಿಸಿದವು.

ಸುತ್ತಮುತ್ತ ಅಂಗಡಿ, ಖಾಸಗಿ ಸಂಸ್ಥೆಗಳಲ್ಲಿಕೆಲಸ ಮಾಡುತ್ತಿದ್ದ ನೌಕರರು ಪ್ರತಿನಿತ್ಯ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದರು. ಗ್ರಾಹಕರ ಸಂಖ್ಯೆ ಹೆಚ್ಚಾದ ತೊಡಗಿದಂತೆ ಜಾಗ, ಊಟ ಸಾಕಾಗುತ್ತಿರಲಿಲ್ಲ.ಜಾಗ ಇಕ್ಕಟ್ಟಾದ ಕಾರಣ ಜನರು ಹೊರಗಡೆ ಕಾಯುತ್ತಿದ್ದರು.

ಬಾಂಧವ್ಯ ಬೆಸೆದ ಸೇವೆ

‘ಈ ನಡುವೆ ನೋಟುರದ್ದು ನಿರ್ಧಾರದ ನಂತರ ಗ್ರಾಹಕರು ನಿಧಾನವಾಗಿ ಕರಗತೊಡಗಿದರು. ಬಹುತೇಕ ಕೆಳಮಧ್ಯಮ ವರ್ಗಕ್ಕೆ ಸೇರಿದ ಕೆಲಸಗಾರರಬಳಿ ಹಣವಿರುತ್ತಿರಲಿಲ್ಲ ಎಂಬ ಸಂಗತಿ ತಿಳಿಯಿತು. ಹಣವಿಲ್ಲದಿದ್ದರೂ ಚಿಂತೆ ಇಲ್ಲ, ಸಂಕೋಚ ಇಲ್ಲದೆ ಬಂದು ಊಟ ಮಾಡಿ ಹೋಗಿ. ಹಣವಿದ್ದಾಗ ಕೊಡಿ ಎಂದು ಆಹ್ವಾನ ನೀಡಿದೆವು.ಗ್ರಾಹಕರು ಪ್ರಾಮಾಣಿಕವಾಗಿ ಹಣ ತಲುಪಿಸಿದರು’ ಎಂದುನಿಸಾರ್‌ ಅಹಮ್ಮದ್‌ ಸ್ಮರಿಸಿಕೊಳ್ಳುತ್ತಾರೆ.

ಕೋರ್ಟ್‌ ವ್ಯಾಜ್ಯದಲ್ಲಿದ್ದಶೃಂಗಾರ ಕಾಂಪ್ಲೆಕ್ಸ್‌ ಮುಚ್ಚಿದ ಕಾರಣ ಕೆಲವು ತಿಂಗಳುಅನಿವಾರ್ಯವಾಗಿ ಹೋಟೆಲ್‌ ಬಾಗಿಲು ಎಳೆಯಬೇಕಾಯಿತು. ಹತ್ತಿರದಲ್ಲಿಯೇ ಹೋಟೆಲ್‌ ಆರಂಭಿಸುವಂತೆ ಗ್ರಾಹಕರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚ ತೊಡಗಿತು. ಹಣಕ್ಕಾಗಿ ಹಪಾಹಪಿಸದ ನಮ್ಮ ಸೇವೆ ಗ್ರಾಹಕರಿಗೆ ಇಷ್ಟವಾಗಿತ್ತು. ನಮ್ಮ ಮತ್ತು ಅವರ ನಡುವೆ ಬಾಂಧವ್ಯದ ಮೊಳಕೆಯೊಂದು ಕುಡಿಯೊಡೆದಿತ್ತು. ಹೀಗಾಗಿಯೇಬಾಡಿಗೆ ದುಬಾರಿಯಾದರೂ ಚಿಂತೆಯಿಲ್ಲ ಗ್ರಾಹಕರನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ.ಕೊನೆಗೆ ಚರ್ಚ್‌ಸ್ಟ್ರೀಟ್‌ನಲ್ಲಿ‘ಮೇನ್‌ ಕೋರ್ಸ್’ ಆರಂಭಿಸಬೇಕಾಯಿತು. ಹಾಗಂತ ಬೆಲೆ ಏರಿಸಿಲ್ಲ. ಮೊದಲಿನ ಹಾಗೆಯೇ ಎಲ್ಲವೂ ಅಗ್ಗವಾಗಿವೆ ಎನ್ನುತ್ತಾರೆ ನಿಸಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT