ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ್‌ ದೋಸೆ ತಂದ ಪಜೀತಿ

Last Updated 28 ಜೂನ್ 2019, 19:45 IST
ಅಕ್ಷರ ಗಾತ್ರ

ಯಾಕೋ ಏನೋ ಗೊತ್ತಿಲ್ಲ. ಆ ದಿನ ನೀರು ದೋಸೆ ತಿನ್ನುವ ಮನಸಾಯಿತು. ಆದ್ರೆ ಏನು ಮಾಡೋಣ; ನಮ್ಮ ರೂಮಲ್ಲಿ ಅಕ್ಕಿ ರುಬ್ಬೋಕ್ಕೆ ಮಿಕ್ಸಿನೇ ಇಲ್ಲ. ಆದ್ರೂ ನೀರು ದೋಸೆ ತಿನ್ನೋ ನಿರ್ಧಾರದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಮನವರಿಕೆ ಮಾಡಿಕೊಂಡೆ.

ನಾನು ಮತ್ತು ಅಕ್ಕ ಶಾಂತಿ ಎದುರುಗಡೆ ಮನೇಲಿ ಮಿಕ್ಸಿ ಕೇಳೋಣ ಅಂತ ಕಾಯುತ್ತಿದ್ವಿ. 7.30 ಆದರೂ ಆ ರೂಮಿನವರ ಪತ್ತೆಯೇ ಇಲ್ಲ. ಸರಿ ಕೆಳಗಡೆ ರೂಮ್ ಫ್ರೆಂಡ್‌ಗೆ ಕಾಲ್ ಮಾಡಿ ಕೇಳಿದ್ರೆ ‘ಇಲ್ಲ ನಾನು ಹೊರಗಡೆ ರಿಪೋರ್ಟಿಂಗ್‌ನಲ್ಲಿದ್ದೀನಿ’ ಅನ್ಬೇಕಾ! ಇನ್ನೂ ಕೂತ್ರೆ ಪ್ರಯೋಜನ ಇಲ್ಲಾಂತ ನಾವು ಅಕ್ಕಿ ರುಬ್ಬೋ ಅಂಗಡಿ ಕಡೆ ಸ್ಟೀಲ್ ಪಾತ್ರೇಲಿ ನೆನೆಸಿಟ್ಟ ಅಕ್ಕಿ ತಗೊಂಡು ಹೊರಟೇ ಬಿಟ್ವಿ. ಆದರೆ ಶಾಪ್ ಎಲ್ಲಿದೆ ಅಂತ ಇಬ್ರಿಗೂ ಗೊತ್ತಿಲ್ಲ. ಅಲ್ಪ ಸ್ಪಲ್ಪ ಗೊತ್ತಿದ್ದ ರೋಡ್ ಕೂಡ ಆ ದಿನ ಪೂರ್ತಿ ಮಿಸ್ ಆಗಿ ಬಿಡೋದಾ! ತ್ಯಾಗರಾಜ ನಗರದಿಂದ ಶಾಸ್ತ್ರಿ ನಗರದವರೆಗೂ ಅಡ್ಡಾದಿಡ್ಡಿಯಾಗಿ, ಅಡ್ಡರಸ್ತೆಗಳಲ್ಲಿ ಅಲೆದಾಡಿದ್ವಿ. ಸಂಜೆಯಾಗುತ್ತಿದ್ದಂತೆ ಮಳೆ ಜೋರಾಗಿ ಬಂತು. ಜೊತೆಗೆ ಸಿಡಿಲು, ಗಾಳಿ, ಮಳೆ. ಗಡಿಯಾರ ನೋಡಿದ್ರೆ ಸಮಯ 8 ಗಂಟೆ. ಗಾಳಿಗೆ ರಸ್ತೆ ಬದಿಯಲ್ಲಿ ಇದ್ದ ಮರಗಳು ಜೋರಾಗಿ ಅಲುಗಾಡಹತ್ತಿದ್ದವು. ಎಲ್ಲಿ ನಮ್ ಮೇಲೆ ಬಿದ್ದು ಬಿಡುತ್ತದೆ ಅಂತ ಭಯ ನನ್ನ ಕಾಡಲು ಆರಂಭಿಸಿತು. ಪಕ್ಕದಲ್ಲಿದ್ದ ಅಕ್ಕನಿಗೆ ಹೇಳಿದೆ. ನನಗೆ ಭಯ ಆಗ್ತಿದೆ ಅಕ್ಕಾ ಎಂದೆ. ಹೌದಾ! ಎಂದು ಕಿರು ನಗೆ ಬೀರಿದಳು. ಇದನ್ನೆಲ್ಲ ಎಂಜಾಯ್ ಮಾಡ್ಬೇಕು ಬಾ ಅನ್ನೋದಾ!

ಆ ಜೋರಾದ ಮಳೆಯಲ್ಲಿ ಉಡುಪಿ ವೆಜ್ ಹೋಟೆಲ್‌ನ ಮುಂಭಾಗದಲ್ಲಿ ನಿಂತು ನಮ್ಮ ಶಾಲಿನಿ ಆಂಟಿಗೆ ಕಾಲ್ ಮಾಡಿದಾಗ, ‘ನೀವು ಅಲ್ಲೇ ಇರಿ. ರವಿ ಕಾಕಾ ಅವರನ್ನು ಕಳಿಸ್ತೇನೆ’ ಅಂದ್ರು. ಯಾಕಂದ್ರೆ ನಮಗೆ ಫಸ್ಟ್ ಆ ಶಾಪ್‌ನಬಗ್ಗೆ ತಿಳಿಸಿದ್ದು ಅವರೇ. ನಾವು ಸುಮ್ಮನೇ ಕೂರಕ್ಕಾಗುತ್ತ? ಪುನಃ ಉಡುಪಿ ಹೋಟೆಲ್‌ನವರ ಜೊತೆ ರುಬ್ಬೋ ಹಿಟ್ಟಿನ ಬಗ್ಗೆ ಪ್ರಸ್ತಾಪಿದಾಗ ಇನ್ನೊಂದು ಶಾಪ್‌ನಬಗ್ಗೆ ಹೇಳಿದ್ರು. ಸರಿ ಮಳೆನೂ ನೋಡ್ದೆ ಹೊರಟೇ ಬಿಟ್ವಿ. ಸ್ವಲ್ಪ ಮುಂದೆ ಹೋದಾಗ ಮಳೆ ಇನ್ನು ಜೋರಾಯಿತು. ಆಸರೆಗಾಗಿ ಮೆಡಿಕಲ್ ಶಾಪ್ ಮುಂದೆ ನಿಂತಿದ್ವಿ. ಅವರು ಹೇಳಿದ ಶಾಪ್ ಏನೋ ಸಿಕ್ತು. ಆದರೆ ಅದು ನಮ್ಮ ವಿರುದ್ಧ ದಿಕ್ಕಿನಲ್ಲಿ ಇದ್ದುದ್ದರಿಂದ ರಸ್ತೆ ದಾಟಿ ಹೋಗಬೇಕಿತ್ತು. ಆದರೆ ಮಳೆ ನೋಡಿ; ಛತ್ರಿ ಬೇರೆ ಇಲ್ಲ. ಅರೇ ನಾವು ನೋಡು ನೋಡುತ್ತಿದ್ದಂತೆ ಹಿಟ್ಟಿನ ಶಾಪ್ ಕ್ಲೋಸ್ ಮಾಡುತ್ತಿದ್ದರು. ‘ನಾವು ಇದ್ದೀವಿ’ ಅಂದ್ರೂ ಮಳೆ ಅಬ್ಬರದಲ್ಲಿ ಶಾಪ್‌ನವರಿಗೆ ನಮ್ಮ ಮಾತು ಕೇಳಿಸಲೇ ಇಲ್ಲ. ಮತ್ತೆ ರವಿ ಕಾಕಾಗೆ ಕಾಲ್ ಮಾಡಿ ಬನ್ನಿ ಅಂದು, ಉಡುಪಿ ವೆಜ್ ಹೋಟೆಲತ್ರ ಮತ್ತೆ ಬಂದ್ವಿ. ‘ನಾನು ಕೂಡ ಉಡುಪಿ ಹೋಟೆಲ್ ಹತ್ರನೇ ಇದ್ದೀನಿ’ ಅಂದ್ರು. ಆದ್ರೂ ಸಿಗ್ಲೇ ಇಲ್ಲ. ಕೊನೆಗೆ ಗೊತ್ತಾಯ್ತು ಅವರು ಉಡುಪಿ ಗ್ರ್ಯಾಂಡ್ ವೆಜ್ ಹೋಟೆಲ್ ಹತ್ತಿರ ಆ ಜೋರಾದ ಮಳೆಯಲ್ಲಿ ನಮ್ಮನ್ನ ಹುಡುಕುತ್ತ ಬಂದರು.

ಸದಾ ನಗುವಿನ ಉತ್ಸಾಹದಲ್ಲಿರುತ್ತಿರುವ ರವಿ ಅಂಕಲ್ ಮುಖ ಯಾಕೋ ಸ್ವಲ್ಪ ಸಪ್ಪಗಿತ್ತು. ನಮಗೆ ಗೊತ್ತಾಯಿತು ಇವರು ಕೋಪದಲ್ಲೇ ಬಂದಿದ್ದು ಅಂತ. ಸ್ವಲ್ಪ ಮಳೆಯೂ ನಿಂತ ಹಾಗಿತ್ತು. ಈ ಮಳೆಯಲ್ಲಿ ನೀರದೋಸೆ ತಿನ್ನೋ ಬಯಕೆ ಕಡಿಮೆಯಾಗಿತ್ತು. ಅಬ್ಬ ಕೊನೆಗೂ ರುಬ್ಬೋ ಶಾಪ್ ಏನೋ ಸಿಕ್ತು. ಆದ್ರೆ, ಬೀಗ ಹಾಕ್ತಾ ಇದ್ರು. ಮತ್ತೆ ರಿಕ್ವೆಸ್ಟ್ ಮಾಡಿ ಅಕ್ಕಿ ಹಿಟ್ಟು ರೆಡಿ ಮಾಡಿಕೊಂಡು ಹಾಗೋ ಹೀಗೋ ರೂಮಿಗೆ ಬಂದ್ವಿ. ದೋಸೆ ಮಾಡಿಯೂ ಆಯ್ತು. ಆದ್ರೆ ದೋಸೆ ಕಾವಲಿ ಬಿಟ್ಟು ಸರಿಯಾಗಿ ಏಳಲೇ ಇಲ್ಲ. ಕಟ್ ಕಟ್ ಆಗಿತ್ತು. ನಾವೆನೋ ಇಡೀ ದೋಸೆನೇ ತಿಂತೀವಾ? ಕಟ್ ಕಟ್ ಮಾಡಿ ತಾನೆ ತಿನ್ನೊದು? ಅಂತ ನಮಗ್ ನಾವೇ ಸಮಾಧಾನ ಮಾಡ್ಕೊಂಡು ನೀರು ದೋಸೆ ತಿಂದ್ವಿ.

ಮಳೆ ಖುಷಿಗಿಂತ ಭಯಉಂಟುಮಾಡಿದ್ದೇ ಹೆಚ್ಚು. ನಾನು ಸಹ ಕರಾವಳಿ ಭಾಗದ ಹುಡುಗಿಯಾದರೂ ಇಂಥ ಮಳೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಈ ಅನುಭವ ಎರಡೇ ಗಂಟೆಯಲ್ಲಿ ನಡೆದು ಹೋಯಿತು. ಜತೆಗೆ ನನ್ನ ಬಾಲ್ಯದ ನೆನಪುಗಳು ಸಹ ಮರುಕಳಿಸಿದವು.

–ಸಂಗೀತಾ ಪೂಜಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT