ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಳೆಯ ಸರಿಗಮದ ನಡುವೆ ಕೆಸುವಿನ ಘಮ

Last Updated 6 ಜುಲೈ 2021, 14:43 IST
ಅಕ್ಷರ ಗಾತ್ರ

ಬಾಲಿವುಡ್‌ನ ಪ್ರತಿಭಾವಂತ ನಟಿ ಹಾಗೂ ವಿವಾದ ಸೃಷ್ಟಿಸುವಲ್ಲಿ ಸದಾ ಮುಂದಿರುವ ಕಂಗನಾ ರನೌತ್ ಏನಾದರೂ ಹೇಳಿಕೆ ನೀಡಿದರೆಂದರೆ ಎಲ್ಲರಲ್ಲೂ ಕುತೂಹಲ ಹುಟ್ಟುತ್ತದೆ. ಇಂಥ ಕಂಗನಾಗೆ ‘ಕೆಸುವಿನ ಪತ್ರೊಡೆ’ ಎಂದರೆ ಬಲು ಇಷ್ಟ. ಕಳೆದ ವರ್ಷ ಪತ್ರೊಡೆ ಎಷ್ಟು ರುಚಿ ಎಂದು ಟ್ವೀಟ್‌ ಮಾಡಿ ಬಣ್ಣಿಸಿದ್ದರು. ‌

ಇದೇ ‘ಪತ್ರೊಡೆ’ ಈ ವರ್ಷ ಆಯುಷ್‌ ಇಲಾಖೆಯ ಸಾಂಪ್ರದಾಯಿಕ ಅಡುಗೆಗಳ ಪಟ್ಟಿ ಸೇರಿದ್ದು ಕರಾವಳಿ ಹಾಗೂ ಮಲೆನಾಡಿನ ತಿನಿಸುಪ್ರಿಯರಲ್ಲಿ ಹರ್ಷವನ್ನುಂಟು ಮಾಡಿದೆ. ಪತ್ರೊಡೆಯಷ್ಟೇ ಅಲ್ಲ, ಇದರ ತರಹೇವಾರಿ ಅಡುಗೆಗಳು ಬಾಯಲ್ಲಿ ನೀರೂರಿಸುತ್ತವೆ.

ಮಳೆಗಾಲದಲ್ಲಿ ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ ಸುತ್ತಲೂ ಕಣ್ಣು ಹಾಯಿಸಿದರೆ ಹೃದಯದಾಕಾರದ ಎಲೆಗಳು ಕಣ್ಮನ ಸೆಳೆಯುತ್ತವೆ. ಕೆಲವು ಗಾಢ ಹಸಿರು ವರ್ಣಗಳಲ್ಲಿ ಇದ್ದರೆ, ಕೆಲವು ಹಸಿರು, ಕೆಲವು ಗುಲಾಬಿ ಹಾಗೂ ಹಸಿರು ವರ್ಣಗಳ ಮಿಶ್ರಣದಲ್ಲಿದ್ದು ಗಮನ ಸೆಳೆಯುತ್ತವೆ. ಕೆಸುವಿನ ಈ ವಿಶಿಷ್ಟ ಎಲೆಗಳ ಮೇಲೆ ನೀರು ಹಾಕಿದರೂ ಅದು ನಿಲ್ಲುವುದಿಲ್ಲ. ಹೀಗಾಗಿ ಮಳೆಯಲ್ಲೇ ಇದ್ದರೂ ಕೆಸುವಿನ ಎಲೆಗಳನ್ನು ಸ್ಪರ್ಶಿಸಿದರೆ ಒಣದಾಗಿಯೇ ಇರುತ್ತವೆ. ನೀರು ಹಾಕಿದರೆ ಎಲೆಯ ಚೂಪಾದ ತುದಿಯಿಂದ ಮಣಿಗಳಂತೆ ನೀರಿನ ಹನಿಗಳು ಉದುರುವುದನ್ನು ನೋಡುವುದೇ ಅಂದ. ಮಳೆಗಾಲದ ಅಡುಗೆಯಲ್ಲಿ ರುಚಿ ಹೆಚ್ಚಿಸಲು ಕೆಸುವಿನ ಕೊಡುಗೆ ದೊಡ್ಡದು.

ಕೆಸುವಿನ ಎಲೆಗಳು
ಕೆಸುವಿನ ಎಲೆಗಳು

ಕರಾವಳಿ ಹಾಗೂ ಮಲೆನಾಡಿನ ಕೊಂಕಣಿಗರು ಇದರ ಎಲೆಗೆ ಕೆಸು ಎನ್ನುವುದಕ್ಕಿಂತ ‘ಪತ್ರೊಡೆ ಪಾನ್‌’ ಎಂದೇ ಕರೆಯುವುದೇ ಹೆಚ್ಚು. ಮಳೆಗಾಲದಲ್ಲಿ ಇವರ ಮನೆಗೆ ಅತಿಥಿಗಳು ಬಂದರೆಂದರೆ ಪತ್ರೊಡೆ ಆತಿಥ್ಯ ಗ್ಯಾರಂಟಿ. ಕೆಸುವಿನ ಎಲೆಯ ಇನ್ನೂ ಹತ್ತಾರು ಬಗೆಯ ರುಚಿಕರ ಅಡುಗೆಗಳೂ ವರ್ಷಧಾರೆಯ ಸಮಯದಲ್ಲಿ ಇನ್ನಷ್ಟು ರುಚಿಸುತ್ತವೆ.

ಹೆಚ್ಚು ನೀರು ನಿಲ್ಲುವ ಕಡೆ ಹಾಗೂ ಜೌಗು ಪ್ರದೇಶಗಳಲ್ಲಿ ಮಾತ್ರ ಬೆಳೆಯುವ ಕಾರಣ ಕೆಸು ಎಲ್ಲ ಪ್ರದೇಶಗಳಲ್ಲಿ ಸಿಗುವುದಿಲ್ಲ. ನಗರಗಳಲ್ಲಿ ಎಲ್ಲಿಯಾದರೂ ಮಂಗಳೂರು ಸ್ಟೋರ್‌ಗಳೋ ಅಥವಾ ಮಲೆನಾಡು–ಕರಾವಳಿಯ ವಿಶೇಷ ತರಕಾರಿಗಳನ್ನು ತರಿಸುವ ಅಂಗಡಿಗಳಲ್ಲಿ ಮಾತ್ರ ಸಿಗಬಹುದು. ಹೋಟೆಲ್‌ಗಳಲ್ಲೂ ಇವು ಲಭ್ಯವಾಗುವುದು ಅಪರೂಪ. ಹೀಗಾಗಿ ಇದು ಸಿಗುವ ಕಡೆ ನಿಮ್ಮ ಸ್ನೇಹಿತರೋ, ಸಂಬಂಧಿಗಳು ಇದ್ದರೆ ಮಾತ್ರ ಇದರ ರುಚಿ ನೋಡಲು ಸಾಧ್ಯ. ಈಚೆಗೆ ‘ಬಿಗ್ಬಾಸ್ಕೆಟ್‌’ ಹಾಗೂ ಕೆಲವು ಮಾಲ್‌ಗಳಲ್ಲೂ ಅಪರೂಪಕ್ಕೆ ಇವು ಮಾರಾಟಕ್ಕೆ ಸಿಗುತ್ತಿರುವುದು ಪಾಕಪ್ರಿಯರಲ್ಲಿ ಸಮಾಧಾನ ತಂದಿದೆ.

ಮಲೆನಾಡಿನ ಕೆಲವು ಕಡೆ ಕೆಸುವಿನ ಎಲೆಯ ಕರಕಲಿ (ಬಿಸಿ ಗೊಜ್ಜು)ಯೂ ಪ್ರಸಿದ್ಧ. ಧೋ ಎಂದು ಮಳೆ ಸುರಿಯುತ್ತಿರುವಾಗ ಕೆಸುವಿನ ಬಿಸಿ ಕರಕಲಿ ಖಾರವಾಗಿ ಮಾಡಿ ಅನ್ನಕ್ಕೆ ಹಾಕಿ ಸವಿಯುವವರಿಗೇನೂ ಕಡಿಮೆಯಿಲ್ಲ. ಪತ್ರೊಡೆ ಸಿಹಿ, ಖಾರ, ಹುಳಿಗಳ ಮಿಶ್ರಣದ ರುಚಿ ನೀಡಿದರೆ; ಕರಕಲಿ ಖಾರ, ಹುಳಿಯ ಖಡಕ್‌ ರುಚಿ ನೀಡುತ್ತದೆ.

ಕೆಸುವಿನ ಗಿಡಗಳು
ಕೆಸುವಿನ ಗಿಡಗಳು

ಹಿಂದಿಯಲ್ಲಿ ಅರ್ಬಿ ಕಾ ಸಾಗ್‌, ಮರಾಠಿಯಲ್ಲಿ ಆಲೂ ಚೆ ಪಾನ್‌, ಗುಜರಾತಿಯಲ್ಲಿ ಆಲೂ ನಾ ಪಾನ್‌, ಬಂಗಾಳಿಯಲ್ಲಿ ಕೋಚು, ಒಡಿಯಾ ಭಾಷೆಯಲ್ಲಿ ಸರ್ಯೂ, ತಮಿಳಿನಲ್ಲಿ ಸೆಪ್ಪಂ ಇಲೈಗಲ್‌, ಕನ್ನಡದಲ್ಲಿ ಕೆಸು ಅಥವ ಶಾಮನ ಗಡ್ಡೆ, ಮಲಯಾಳಂನಲ್ಲಿ ಚೆಂಬು ಇಲಗಿಯಲ್‌, ತೆಲುಗಿನಲ್ಲಿ ಚಾಮಾ ಅಕುಲು... ಹೀಗೆ ಕೆಸುವಿಗೆ ವಿವಿಧ ರಾಜ್ಯಗಳಲ್ಲಿ ಬೇರೆ–ಬೇರೆ ಹೆಸರುಗಳು ಇವೆ. ಅದರ ಖಾದ್ಯಗಳೂ ವೈವಿಧ್ಯಮಯ. ಬೃಹದಾಕಾರಾದ ಎಲೆಗಳನ್ನು ನೋಡಿ ಆನೆಯ ಕಿವಿ ಎನ್ನುವವರೂ ಇದ್ದಾರೆ. ಮಹಾರಾಷ್ಟ್ರದಲ್ಲಿ ಕೆಸುವಿನ ಎಲೆಯ ಪಾತಳ್‌ ಭಾಜಿ ಖ್ಯಾತ. ಎಲೆಗಳ ರಾಯತಾ, ಎಲೆಗಳ ಉಸುಳಿ ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಜನಪ್ರಿಯ. ಗುಜರಾತ್‌ನಲ್ಲಿ ‘ಲವಿಂಗ್ಯಾ ಪತ್ರ’ ಎಂಬ ಖಾದ್ಯ ಸುಪ್ರಸಿದ್ಧ.

ವಿಟಮಿನ್‌ ಎ, ವಿಟಮಿನ್‌ ಸಿ, ಕಬ್ಬಿಣಾಂಶ ಸಂಪನ್ನವಾಗಿರುವ ಕೆಸುವಿನ ಎಲೆಯ ಸೇವನೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಉತ್ತಮ ಆಹಾರ. ನಾರಿನ ಅಂಶವೂ ಸಮೃದ್ಧವಾಗಿರುವುದರಿಂದ ಜೀರ್ಣಶಕ್ತಿಯನ್ನು ಉತ್ತಮ ಗೊಳಿಸಲು ಸಹಕಾರಿ ಎಂದು ಆಯುಷ್‌ ಇಲಾಖೆ ಈಚೆಗೆ ಸಾರಿದೆ. ಎಷ್ಟೋ ತಲೆಮಾರುಗಳಿಂದ ಮಳೆಗಾಲದ ಇಷ್ಟದ ಆಹಾರವಾಗಿ ಕೆಸುವಿನ ಅಡುಗೆಗಳು ಜನಸಾಮಾನ್ಯರಲ್ಲಿ ರೂಢಿಗತವಾಗಿವೆ. ಗಣೇಶ ಚೌತಿಗೆ ನೈವೇದ್ಯಕ್ಕಾಗಿ ಸಿದ್ಧಪಡಿಸುವ 21 ಬಗೆಯ ಅಡುಗೆಗಳಲ್ಲಿ ಪತ್ರೊಡೆಯೂ ಒಂದು.

ಬಣ್ಣದ ಕೆಸು
ಬಣ್ಣದ ಕೆಸು

ಹಸಿಯಾಗಿ ತಿಂದರೆ ತುರಿಕೆ
ಕೆಸುವಿನ ವೈಜ್ಞಾನಿಕ ಹೆಸರು ಕೊಲೊಕೇಸಿಯಾ. ದಕ್ಷಿಣ ಪೂರ್ವ ಏಷ್ಯಾ ಹಾಗೂ ಭಾರತದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ಕೆಲವು ಕಡೆ ಇದರ ಕೃಷಿಯೂ ನಡೆಯುತ್ತದೆ. ಇದರ ಗಡ್ಡೆ, ದಂಟು ಹಾಗೂ ಎಲೆಗಳನ್ನು ಆಹಾರದಲ್ಲಿ ಬಳಸಲಾಗುತ್ತದೆ. ಆದರೆ ಒಂದು ಎಚ್ಚರಿಕೆ ವಹಿಸಬೇಕು. ಕೆಸುವಿನ ಎಲೆಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ನಾಲಿಗೆ, ಗಂಟಲು ತುರಿಸಲು ಶುರುವಾಗುತ್ತದೆ. ಇದಕ್ಕೆ ಸರಿಯಾಗಿ ಉಪ್ಪು, ಹುಳಿ ಹಾಕಿ ಬೇಯಿಸಿದರಷ್ಟೇ ತಿನ್ನಲು ಯೋಗ್ಯವಾಗುತ್ತದೆ. ಹೀಗಾಗಿ ಬೇಯಿಸಿದ ಪದಾರ್ಥಗಳನ್ನಷ್ಟೇ ಮಾಡಲು ಸಾಧ್ಯ. ಎಲೆಗಳನ್ನು ಹೆಚ್ಚಿದರೆ, ಅದರ ನಾರು ತೆಗೆದರೂ ಅಲ್ಪ ಪ್ರಮಾಣದ ಕಡಿತದ (ತುರಿಕೆ) ಅನುಭವ ಇದ್ದೇ ಇರುತ್ತದೆ. ಆದರೆ, ರುಚಿಕರ ಅಡುಗೆ ಬೇಕೆಂದರೆ ಇದನ್ನು ಸಹಿಸಿಕೊಂಡು ಮಾಡಬಹುದು. ಹೊಸದಾಗಿ ಮಾಡುವವರೂ ನೇರವಾಗಿ ಪ್ರಯೋಗಕ್ಕೆ ಕೈಹಾಕದೇ ಸರಿಯಾಗಿ ತಿಳಿದವರ ಬಳಿ ಮಾಡಿಸಿ ನೋಡಿಕೊಳ್ಳುವುದು ಒಳ್ಳೆಯದು.

ಮಳೆಗಾಲದಲ್ಲಿ ನೈಸರ್ಗಿಕವಾಗಿ ಹುಟ್ಟುವ ಇನ್ನೂ ಅನೇಕ ಸಸ್ಯಗಳು ಮಳೆಯಿಂದ ಉಂಟಾಗುವ ಶೀತ ವಾತಾವರಣದಲ್ಲೂ ದೇಹದ ಉಷ್ಣತೆ ಕಾಯ್ದುಕೊಳ್ಳಲು ಕಾರಣವಾಗುತ್ತವೆ. ಮಳೆಗಾಲದಲ್ಲಷ್ಟೇ ಸಿಗುವ ನಾಟಿ ಏಡಿಗಳು, ಅರಣ್ಯಗಳಲ್ಲಿ ಹುಟ್ಟುವ ಅಣಬೆಗಳು, ಬಿದಿರಿನ ಕಣಿಲೆ, ಮರಕೆಸ, ಮಡಹಾಗಲ ಹೀಗೆ ಮಳೆಗಾಲದ ಈ ಆಹಾರ ವೈವಿಧ್ಯಕ್ಕೆ ಎಲ್ಲೆ ಎನ್ನುವುದು ಇಲ್ಲ. ಒಂದೊಂದು ಪ್ರದೇಶದಲ್ಲೂ, ಒಂದೊಂದು ಸಮುದಾಯದವರಲ್ಲೂ ಬೆಳೆದು ಬಂದಿರುವ ಅಡುಗೆ ರುಚಿ ನೋಡಿದವರೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT