ಮಂಗಳವಾರ, ಜೂನ್ 22, 2021
28 °C

ಹಳ್ಳಿ ಸೊಗಡಿನ ಸಾಂಪ್ರದಾಯಿಕ ರೈಸ್‌ಬಾತ್‌ ವೈವಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿ ಅನ್ನ ಅಥವಾ ಬುತ್ತಿ ಅನ್ನ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ಬ್ಯಾಡಗಿ ಮೆಣಸಿನಕಾಯಿ – 6, ಕೆಂಪು ಮೆಣಸಿನಕಾಯಿ – 6, ಜೀರಿಗೆ – 1 ಚಮಚ, ಬೆಳ್ಳುಳ್ಳಿ – 20 ಎಸಳು, ಎಣ್ಣೆ – 7-8 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಹುಣಸೆಹಣ್ಣು – ಒಂದು ನಿಂಬೆ ಹಣ್ಣಿನ ಗಾತ್ರ, ಅರಿಸಿನ – ಕಾಲು ಚಮಚ, ಬೆಲ್ಲ – 1 ಚಮಚ, ಕರಿಬೇವು – ಸ್ವಲ್ಪ.

ತಯಾರಿಸುವ ವಿಧಾನ: ಮೊದಲು ಅನ್ನ ಮಾಡಿಕೊಳ್ಳಬೇಕು. ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಅದಕ್ಕೆ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಹುರಿದುಕೊಳ್ಳಿ. ನಂತರ ಹುರಿದಿಟ್ಟುಕೊಂಡ ಸಾಮಗ್ರಿಗಳ ಜೊತೆ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಉಳಿದ ಎಣ್ಣೆಯನ್ನು ಹಾಕಿ ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿಕೊಂಡು, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ, ಬೆಲ್ಲ ಸೇರಿಸಿ ಎಣ್ಣೆ ಬಿಡುವವರೆಗೂ ಚೆನ್ನಾಗಿ ಕುದಿಸಿ. ಈ ಮಿಶ್ರಣವನ್ನು ಮಾಡಿಟ್ಟುಕೊಂಡ ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಮುದ್ದೆಯ ರೀತಿ ಉಂಡೆ ಕಟ್ಟಿಕೊಳ್ಳಬಹುದು ಅಥವಾ ಹಾಗೆಯೇ ಬಡಿಸಬಹುದು. ಈಗ ರುಚಿಯಾದ ಹಳ್ಳಿ ಶೈಲಿಯ ಬುತ್ತಿ ಅನ್ನ ಅಥವಾ ಹುಳಿಯನ್ನ ಸವಿಯಲು ಸಿದ್ಧ.

ಕುಕರ್ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ಎಣ್ಣೆ – 3-4 ಚಮಚ, ಸಾಸಿವೆ – ಅರ್ಧ ಚಮಚ, ಕಡಲೆ ಬೇಳೆ – ಒಂದು ಚಮಚ, ಕಡಲೆಬೀಜ – ಎರಡು ಚಮಚ, ಹಸಿಮೆಣಸಿನಕಾಯಿ – 6, ಈರುಳ್ಳಿ – 1, ಟೊಮೆಟೊ – 1, ಉಪ್ಪು – ರುಚಿಗೆ ತಕ್ಕಷ್ಟು, ಕರಿಬೇವು – 10 ಎಲೆಗಳು

ತಯಾರಿಸುವ ವಿಧಾನ: ಮೊದಲು ಕುಕರ್‌ಗೆ ಎಣ್ಣೆಯನ್ನು ಹಾಕಿ, ಅದು ಕಾದ ನಂತರ ಸಾಸಿವೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈಗ ಇದಕ್ಕೆ ಕಡಲೆಬೇಳೆ ಹಾಗೂ ಕಡಲೆಕಾಯಿ ಬೀಜ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಹಾಕಿ ಚೆನ್ನಾಗಿ ಹುರಿದುಕೊಂಡು, ಎರಡು ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನೀರು ಕುದಿ ಬಂದ ನಂತರ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಕುಕರ್ ಮುಚ್ಚಿ ಎರಡು ಕೂಗು ಕೂಗಿಸಿ. ಈಗ ರುಚಿಯಾದ ಧಿಡೀರನೆ ಮಾಡುವಂತಹ ಕುಕರ್ ಚಿತ್ರಾನ್ನ ಸವಿಯಲು ಸಿದ್ಧ.

ಅಕ್ಕಿ ಉಸ್ಲಿ

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ಎಣ್ಣೆ – ಮೂರರಿಂದ ನಾಲ್ಕು ಚಮಚ, ಸಾಸಿವೆ – ಅರ್ಧ ಚಮಚ, ಕಡಲೆ ಬೇಳೆ – 1 ಚಮಚ, ಹಸಿಮೆಣಸಿನಕಾಯಿ – 6, ಈರುಳ್ಳಿ – 1, ಟೊಮೆಟೊ – 1, ಹುರುಳಿಕಾಯಿ, ಕ್ಯಾರೆಟ್, ನವಿಲುಕೋಸು ಎಲ್ಲಾ ಸೇರಿ – 1 ಕಪ್, ಬಟಾಣಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಹುರಿಗಡಲೆ – 1 ಟೇಬಲ್ ಚಮಚ, ತೆಂಗಿನತುರಿ – ಸ್ವಲ್ಪ , ಕೊತ್ತಂಬರಿ ಸೊಪ್ಪು – ಸ್ವಲ್ಪ.

ತಯಾರಿಸುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಒಂದು ಕುಕರ್‌ಗೆ ಎಣ್ಣೆಯನ್ನು ಹಾಕಿ ಅದಕ್ಕೆ ಸಾಸಿವೆ, ಕಡಲೆಬೇಳೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ಅದಕ್ಕೆ ಹೆಚ್ಚಿದ ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಹಾಕಿ ಹುರಿಯಿರಿ. ನಂತರ ತರಕಾರಿ, ಬಟಾಣಿ ಎಲ್ಲಾ ಸೇರಿಸಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಎರಡು ಲೋಟ ನೀರು ಹಾಕಿ ಕುದಿಸಬೇಕು. ಕುದಿ ಬಂದ ನಂತರ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಕುಕರ್ ಮುಚ್ಚಿ 2 ಕೂಗು ಕೂಗಿಸಿಕೊಳ್ಳಿ. ಕುಕರ್ ಆರಿದ ನಂತರ ಇದಕ್ಕೆ ಪುಡಿ ಮಾಡಿದ ಹುರಿಗಡಲೆ, ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಅಕ್ಕಿ ಉಸ್ಲಿ ಸವಿಯಲು ಸಿದ್ಧ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು