ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಬಾಕಾಹು ಬರ್ಫಿ, ಉಂಡೆ

Last Updated 23 ಜುಲೈ 2021, 19:30 IST
ಅಕ್ಷರ ಗಾತ್ರ

ಬಾಳೆಕಾಯಿಗೆ ಮಾರುಕಟ್ಟೆ ಇರದೇ ಕೃಷಿಕರು ಒದ್ದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಬಾಳೆಕಾಯಿಯನ್ನು ಪುಡಿ ಮಾಡಿ ಅದನ್ನು ಸದುಪಯೋಗ ಮಾಡಿಕೊಳ್ಳುವ ಮಾಹಿತಿ ಬಹಳ ಜನಪ್ರಿಯವಾಗುತ್ತಿದೆ. ಇದು ‘ಬಾಕಾಹು’ ಎಂದೇ ಪ್ರಸಿದ್ಧವಾಗಿದೆ. ಹಲವಾರು ಕೃಷಿಕರು ಹಾಗೂ ಗೃಹಿಣಿಯರು ಇತ್ತೀಚೆಗೆ ಬಾಳೆಕಾಯಿ ಹಿಟ್ಟನ್ನು ಬಳಸುತ್ತಿದ್ದಾರೆ. ಇದರಿಂದ ಮಾಡಬಹುದಾದ ಕೆಲವು ರುಚಿಕರ ರೆಸಿಪಿಗಳು ಇಲ್ಲಿವೆ.

ಬಾಕಾಹು ಬರ್ಫಿ

ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ ಹಿಟ್ಟು ಒಂದು ಕಪ್, ಹಾಲು ಒಂದು ಕಪ್, ಸಕ್ಕರೆ ಒಂದು ಕಪ್, ತುಪ್ಪ ಅರ್ಧ ಕಪ್, ಏಲಕ್ಕಿ ಪುಡಿ, ಗೋಡಂಬಿ ಚೂರುಗಳು

ತಯಾರಿಸುವ ವಿಧಾನ: ಮೊದಲು ಬಾಳೆಕಾಯಿ ಹುಡಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಸುಮಾರು 3–4 ನಿಮಿಷ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಹಾಲು ಸೇರಿಸಿ. ಕೈ ಬಿಡದೆ ಗೊಟಾಯಿಸುತ್ತಾ ಇರಿ. ಮೊದಲು ಗಂಟಿನಂತೆ ಕಂಡುಬಂದರೂ ಚೆನ್ನಾಗಿ ಮಿಶ್ರಣ ಮಾಡುವಾಗ ಸರಿಯಾಗುತ್ತದೆ. ನಂತರ ಸಕ್ಕರೆ ಹಾಕಿ. ಮಧ್ಯೆ ಮಧ್ಯೆ ತುಪ್ಪ ಹಾಕಿಕೊಳ್ಳುತ್ತಾ ಗಟ್ಟಿ ಮುದ್ದೆಯಾಗುವವರೆಗೂ ಮಗುಚಿ, ಏಲಕ್ಕಿ ಪುಡಿ ಹಾಕಿ. ಸಂಪೂರ್ಣ ತಳ ಬಿಟ್ಟ ನಂತರ ತುಪ್ಪ ಸವರಿದ ಪ್ಲೇಟಿಗೆ ಹಾಕಿ. ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಕತ್ತರಿಸಿ.

ಬಾಕಾಹು ಉಂಡೆ

ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ ಹಿಟ್ಟು ಒಂದು ಕಪ್, ಅವಲಕ್ಕಿ (ಪೇಪರ್) ಒಂದು ಕಪ್, ಬಾದಾಮಿ ಒಂದು ಕಪ್, ಗೋಡಂಬಿ ಚೂರು ಸ್ವಲ್ಪ, ತುಪ್ಪ ಒಂದು ಕಪ್.

ತಯಾರಿಸುವ ವಿಧಾನ: ಮೊದಲು ಬಾಳೆಕಾಯಿ ಹಿಟ್ಟನ್ನು ತುಪ್ಪದಲ್ಲಿ ಚೆನ್ನಾಗಿ ಹುರಿಯಬೇಕು. ಅವಲಕ್ಕಿ ಮತ್ತು ಬಾದಾಮಿಯನ್ನು ತುಪ್ಪದಲ್ಲಿ ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿ. ಎಲ್ಲವನ್ನೂ ಮಿಕ್ಸ್ ಮಾಡಿ ಮತ್ತೆ ಅದನ್ನು ತುಪ್ಪದಲ್ಲಿ ಸ್ವಲ್ಪ ಹುರಿಯಿರಿ. ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ. ಬೇಕಾದರೆ ಬೇರೆ ಒಣ ಹಣ್ಣುಗಳನ್ನು ಹಾಕಬಹುದು. ಆಮೇಲೆ ಎಲ್ಲವನ್ನೂ ಮಿಶ್ರಣ ಮಾಡಿ. ಸಕ್ಕರೆಗೆ ಚೂರು ನೀರು ಹಾಕಿ ಒಂದೆಳೆ ಪಾಕ ಮಾಡಿ ಈ ಮಿಶ್ರಣಕ್ಕೆ ಹಾಕಿ ಒಂದೆರಡು ನಿಮಿಷ ಒಲೆಯ ಮೇಲಿಟ್ಟು ಕೈಯಾಡಿಸಿ. ಹದ ಉಂಡೆ ಕಟ್ಟುವ ಹಾಗೆ ಇರಬೇಕು. ಸ್ವಲ್ಪ ತಣ್ಣಗಾದ ನಂತರ ಉಂಡೆ ಮಾಡಿ. ಈ ರುಚಿಯಾದ ಉಂಡೆಯನ್ನು 3–4 ದಿನ ಇಟ್ಟು ತಿನ್ನಬಹುದು.

ಬಾಕಾಹು ಬನ್ಸ್

ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು 3–4, ಬಾಳೆಕಾಯಿ ಹುಡಿ, ಮೊಸರು 2–3 ಚಮಚ, ಸೋಡಾ (ಬೇಕಾದರೆ), ಉಪ್ಪು, ಸಕ್ಕರೆ 3–4 ಚಮಚ, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಮೊದಲು ಬಾಳೆಹಣ್ಣನ್ನು ಹೆಚ್ಚಿಕೊಳ್ಳಿ. ಅದಕ್ಕೆ ಮೊಸರು, ಉಪ್ಪು, ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಚಿಟಿಕೆ ಸೋಡಾ ಹಾಕಿ ನಂತರ ಅದಕ್ಕೆ ಹಿಡಿಯುವಷ್ಟು ಬಾಳೆಕಾಯಿ ಹಿಟ್ಟನ್ನು ಹಾಕಿ ಚೆನ್ನಾಗಿ ನಾದಿ ಕಲೆಸಿ ಮುಚ್ಚಿಡಿ. ತುಂಬಾ ಗಟ್ಟಿಯಾಗಿ ಹಿಟ್ಟನ್ನು ಕಲೆಸಿಕೊಳ್ಳಬಾರದು. ಸ್ವಲ್ಪ ಹೊತ್ತಿನ ನಂತರ ಉಂಡೆ ಮಾಡಿ ಕೈಯಲ್ಲಿ ತಟ್ಟಿ ಅಥವಾ ಲಟ್ಟಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

ಬಾಕಾಹು ಶಂಕರಪೋಳಿ

ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ ಹಿಟ್ಟು ಎರಡು ಕಪ್, ಸಕ್ಕರೆ 3–4 ಚಮಚ, ಚಿಟಿಕೆ ಉಪ್ಪು, ಚಿರೋಟಿ ರವೆ ಅರ್ಧ ಕಪ್, ಕರಿಯಲು ಎಣ್ಣೆ, ಒಂದು ಚಮಚ ತುಪ್ಪ

ತಯಾರಿಸುವ ವಿಧಾನ: ಬಾಳೆಕಾಯಿ ಹುಡಿಗೆ ಚಿರೋಟಿ ರವೆ ಸೇರಿಸಿ ಚೂರು ಉಪ್ಪು, ಎಣ್ಣೆ 2 ಚಮಚ ಹಾಕಿ ನೀರು ಹಾಕದೇ ಕಲೆಸಿ. ನಂತರ ಹಾಲನ್ನು ಸ್ವಲ್ಪ ಬಿಸಿಮಾಡಿ ಅದಕ್ಕೆ ಸಕ್ಕರೆ ಹಾಕಿ ಕರಗಿಸಿ. ಅದನ್ನು ಹಿಟ್ಟಿಗೆ ಎಷ್ಟು ಬೇಕು ನೋಡಿಕೊಂಡು ಹಾಕಿ ಕಲೆಸಿ. (ನೀರು ಹಾಕಿ ಕಲೆಸಿದರೆ ಅಂಚು ಒಡೆಯಬಹುದು) ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ನಾದಿ, ಹತ್ತು ನಿಮಿಷ ಮುಚ್ಚಿಡಿ. ಮತ್ತೆ ಉಂಡೆ ಮಾಡಿ ಸ್ವಲ್ಪ ದಪ್ಪಗೆ ಲಟ್ಟಿಸಿ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕರಿಯಿರಿ. ತಣ್ಣಗಾದ ನಂತರ ಗರಿ ಗರಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT