ಶನಿವಾರ, ಸೆಪ್ಟೆಂಬರ್ 19, 2020
22 °C

ಚಿಕನ್‌ನಲ್ಲೂ ಮಾಡಿ ನೋಡಿ ಮಂಚೂರಿ

ಮನಸ್ವಿ Updated:

ಅಕ್ಷರ ಗಾತ್ರ : | |

ನೀವು ಚಿಕನ್ ಪ್ರಿಯರೇ? ಪ್ರತಿ ಬಾರಿ ಮನೆಯಲ್ಲಿ ಚಿಕನ್ ಸಾರು, ಕಬಾಬ್ ಹಾಗೂ ಬಿರಿಯಾನಿ ತಿಂದು ಬೇಜಾರಾಗಿದೆಯೇ? ಚಿಕನ್‌ನ ಬಗೆ ಬಗೆ ಖಾದ್ಯಗಳನ್ನು ಹೋಟೆಲ್‌ನಲ್ಲಿ ಕುಳಿತು ಬಾಯಿ ಚಪ್ಪರಿಸುವಾಗ ಮನೆಯಲ್ಲೇ ಮಾಡಿಕೊಂಡು ತಿನ್ನುವಂತಿದ್ದರೆ ಎಷ್ಟು ಚೆನ್ನ ಎನ್ನಿಸಿದೆಯೇ? ಚಿಕನ್ ಲಾಲಿಪಾಪ್, ಚಿಕನ್ ಮಂಚೂರಿಯನ್‌ನಂತಹ ಖಾದ್ಯಗಳನ್ನು ಒಮ್ಮೆ ಸವಿದರೆ ಅದರ ರುಚಿ ನಾಲಿಗೆ ತುದಿಯಲ್ಲಿ ಸದಾ ನೀರೂರಿಸುತ್ತದೆ. ಅಂತಹ ನಿಮ್ಮ ನೆಚ್ಚಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸುವ ಬಗೆ ವಿವರಿಸಿದ್ದಾರೆ ಮನಸ್ವಿ.

**

ಚಿಕನ್ ಮಂಚೂರಿಯನ್
ಬೇಕಾಗುವ ಸಾಮಗ್ರಿಗಳು : 
ಚಿಕನ್ – 1/2 ಕೆ.ಜಿ. (ಬೋನ್‌ಲೆಸ್, ಚಿಕ್ಕದಾಗಿ ಕತ್ತರಿಸಿದ್ದು), ಎಣ್ಣೆ – ಕರಿಯಲು
ಕಲೆಸಲು ಸಾಮಗ್ರಿಗಳು: ಎಲ್ಲಾ ಬಗೆಯ ಹಿಟ್ಟುಗಳು - 5 ಟೇಬಲ್ ಚಮಚ, ಕಾರ್ನ್ ಸ್ಟ್ರ್ಯಾಚ್‌ – 3 ಟೇಬಲ್ ಚಮಚ, ಕಾಳುಮೆಣಸಿನ ಪುಡಿ – 1/4 ಟೀ ಚಮಚ, ನೀರು – 1/4 ಕಪ್‌, ಉಪ್ಪು – ರುಚಿಗೆ

ಸಾಸ್‌ಗೆ: ಎಣ್ಣೆ – 1 ಟೇಬಲ್ ಚಮಚ, ಈರುಳ್ಳಿ – 1/2 ಮಧ್ಯಮ ಗಾತ್ರದ್ದು (ಸಣ್ಣಗೆ ಹೆಚ್ಚಿದ್ದು), ಹಸಿಮೆಣಸಿನಕಾಯಿ – ರುಚಿಗೆ ಬೇಕಾದಷ್ಟು, ಬೆಳ್ಳುಳ್ಳಿ – 4 ರಿಂದ 5 ಎಸಳು (ಸಿಪ್ಪೆ ಬಿಡಿಸಿ ಚಿಕ್ಕದಾಗಿ ಕತ್ತರಿಸಿದ್ದು), ಟೊಮೆಟೊ ಕೆಚಪ್‌ – 3 ಟೇಬಲ್ ಚಮಚ, ಕೆಂಪುಮೆಣಸಿನ ಸಾಸ್‌ – 2 ಟೇಬಲ್ ಚಮಚ, ಸೋಯಾ ಸಾಸ್ – 4 ಟೀ ಚಮಚ, ಬಿಳಿ ವಿನೇಗರ್ – 2 ಟೀ ಚಮಚ, ನೀರು – 6 ಟೇಬಲ್ ಚಮಚ, ಕಾರ್ನ್ ಸ್ಟ್ರ್ಯಾಚ್‌ – 1 ಟೀ ಚಮಚ, ಸ್ಪ್ರಿಂಗ್ ಆನಿಯನ್ – 2 ದಂಟು (ಚಿಕ್ಕದಾಗಿ ಕತ್ತರಿಸಿ)

ತಯಾರಿಸುವ ವಿಧಾನ: ಮೊದಲು ಎಲ್ಲಾ ಬಗೆಯ ಹಿಟ್ಟುಗಳು, ಕಾರ್ನ್ ಸ್ಟ್ರ್ಯಾಚ್, ಉಪ್ಪು, ಕಾಳುಮೆಣಸಿನ ಹುಡಿ ಹಾಗೂ ನೀರು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ತೆಗೆದಿಡಿ.
ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಕಲೆಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ನಂತರ ಎಲ್ಲವನ್ನೂ ಟಿಶ್ಯೂ ಪೇಪರ್‌ ಮೇಲೆ ಹಾಕಿ ಬದಿಗಿಡಿ.

ನಾನ್ ಸ್ಟಿಕ್ ಪಾನ್‌ವೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಟೊಮೆಟೊ ಕೆಚಪ್, ಕೆಂಪುಮೆಣಸಿನ ಸಾಸ್ ಸೇರಿಸಿ ಎಣ್ಣೆ ಬಿಡುವವರೆಗೂ ಮಿಕ್ಸ್ ಮಾಡಿ. ಅದಕ್ಕೆ ಸೋಯಾ ಸಾಸ್ ಹಾಗೂ ವಿನೇಗರ್ ಸೇರಿಸಿ ಮತ್ತೆ ಕಲೆಸಿ. ನಂತರ ಕಾರ್ನ್ ಸ್ಟ್ರ್ಯಾಚ್‌ಗೆ ನೀರು ಸೇರಿಸಿ ಅದನ್ನು ಪಾನ್‌ಗೆ ಸೇರಿಸಿ. ಮಿಶ್ರಣ ದಪ್ಪವಾಗುವವರೆಗೂ ಕಲೆಸುತ್ತಿರಿ. ಈಗ ಕರಿದಿಟ್ಟುಕೊಂಡ ಚಿಕನ್ ತುಂಡುಗಳನ್ನು ಪಾನ್‌ಗೆ ಸೇರಿಸಿ. ಚಿಕನ್ ಅದರೊಂದಿಗೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲೆಸಿ. ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಸೇರಿಸಿ ಮತ್ತೆ ಮಿಕ್ಸ್ ಮಾಡಿ. ಇದು ಫ್ರೈಡ್ ರೈಸ್ ಹಾಗೂ ನೂಡಲ್ಸ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಚಿಕನ್ ಲಾಲಿಪಾಪ್
ಬೇಕಾಗುವ ಸಾಮಗ್ರಿಗಳು: 
ಚಿಕನ್ ತುಂಡುಗಳು – 6, ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 1/2 ಟೀ ಚಮಚ, ಕೆಂಪುಮೆಣಸಿನ ಸಾಸ್ – 1 ಟೀ ಚಮಚ, ಸೋಯಾ ಸಾಸ್ – 2 ಟೀ ಚಮಚ, ವಿನೇಗರ್ ಅಥವಾ ನಿಂಬೆಹಣ್ಣಿನ ರಸ – 1/2 ಟೀ ಚಮಚ, ಕಾಳುಮೆಣಸಿನ ಪುಡಿ – 1/2 ಟೀ ಚಮಚ, ಅಜಿನಮೊಟೊ – ರುಚಿಗೆ, ಸ್ಪ್ರಿಂಗ್ ಆನಿಯನ್ – 4 (ಹೆಚ್ಚಿದ್ದು), ಕಾರ್ನ್ ಸ್ಟ್ರ್ಯಾಚ್ – 2 ಟೇಬಲ್ ಚಮಚ, ಹಿಟ್ಟು – 2 ಟೇಬಲ್ ಚಮಚ, ಎಣ್ಣೆ – ಕರಿಯಲು, ಮೊಟ್ಟೆಯ ಹಳದಿ ಭಾಗ – 2 (ಮೊಟ್ಟೆಯದ್ದು), ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ನೀರಿಲ್ಲದಂತೆ ಹಿಂಡಿ ಪಾತ್ರೆಯೊಂದರಲ್ಲಿ ಇಡಿ. ಮೂಳೆಯಿಂದ ಕೋಳಿಯ ಮಾಂಸವನ್ನು ಕೆಳಗೆ ತಳ್ಳಿ ಒಂದು ಕಡೆ ಮಾಂಸವೆಲ್ಲ ಸೇರುವಂತೆ ಮಾಡಿ. ಆದರೆ ಯಾವುದೇ ಕಾರಣಕ್ಕೂ ಚಿಕನ್ ತುಂಡು ಸಂಪೂರ್ಣವಾಗಿ ಮೂಳೆಯಿಂದ ಹೊರ ಹೋಗಬಾರದು.

ನೆನೆಸಿಟ್ಟುಕೊಳ್ಳಲು ಬೇಕಾಗುವ ಸಾಮಗ್ರಿಗಳನ್ನು ಬೌಲ್‌ವೊಂದರಲ್ಲಿ ಹಾಕಿ ಚೆನ್ನಾಗಿ ಕಲೆಸಿ. ನಂತರ ಚಿಕನ್ ತುಂಡುಗಳನ್ನು ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕೋಟ್ ಆಗುವಂತೆ ಕಲೆಸಿ. ಅದನ್ನು 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಡಿ.

ನಂತರ ಪಾನ್‌ವೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಚಿಕನ್ ತುಂಡುಗಳನ್ನು ಅದಕ್ಕೆ ಸೇರಿಸಿ ಮಧ್ಯಮ ಉರಿಯಲ್ಲಿ 5ನಿಮಿಷ ಹುರಿಯಿರಿ. (ಲಾಲಿಪಾಪ್ ಒಳಗಿನಿಂದ ಚೆನ್ನಾಗಿ ಬೇಯಬೇಕು. ಒಂದು ವೇಳೆ ಉರಿ ಹೆಚ್ಚು ಇರಿಸಿಕೊಂಡರೆ ಹೊರಗಷ್ಟೇ ಬಣ್ಣ ಬದಲಾಗುತ್ತದೆ. ಒಳಗೆ ಬೆಂದಿರುವುದಿಲ್ಲ. ಹಾಗಾಗಿ ಮಧ್ಯಮ ಉರಿಯಲ್ಲಿಯೇ ಕಾಯಿಸಬೇಕು). ಕರಿದ ಲಾಲಿಪಾಪ್‌ಗಳನ್ನು ಟಿಶ್ಯು ಪೇಪರ್ ಮೇಲೆ ತೆಗೆದಿರಿಸಬೇಕು. ನಂತರ ಕೆಂಪುಮೆಣಸಿನ ಸಿಹಿ ಸಾಸ್ ಅನ್ನು ಚಿಮುಕಿಸಿದರೆ ರುಚಿಯಾದ ಚಿಕನ್ ಲಾಲಿಪಾಪ್ ತಿನ್ನಲು ರೆಡಿ.

ಚಿಕನ್ ಸ್ಟ್ರೀವ್‌
ಬೇಕಾಗುವ ಸಾಮಗ್ರಿಗಳು: 
ಚಿಕನ್ – 1/2 ಕೆ.ಜಿ. , ಆಲೂಗೆಡ್ಡೆ – 1, ಈರುಳ್ಳಿ – 2 (ದೊಡ್ಡ ಗಾತ್ರದ್ದು), ಕ್ಯಾರೆಟ್‌ – 1 ದೊಡ್ಡದು, ಹಸಿಮೆಣಸಿನಕಾಯಿ – 5, ಬೆಳ್ಳುಳ್ಳಿ – 8 ಎಸಳು, ಶುಂಠಿ – 1 ತುಂಡು, ಚಕ್ಕೆ – 2 ತುಂಡು, ಲವಂಗ – 4, ಏಲಕ್ಕಿ – 3, ದಾಲ್ಚಿನ್ನಿ ಎಲೆ – 1, ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನೆಣ್ಣೆ – 3 ಟೀ ಚಮಚ, ತೆಂಗಿನಹಾಲು – 1 ಕಪ್‌ (ದಪ್ಪದ್ದು), ಕಾಳುಮೆಣಸಿನ ಹುಡಿ – 1/2 ಟೀ ಚಮಚ

ತಯಾರಿಸುವ ವಿಧಾನ: ಮೊದಲು ಆಲೂಗೆಡ್ಡೆ, ಚಿಕನ್ ಹಾಗೂ ಕ್ಯಾರೆಟ್ ಅನ್ನು ಬೇಕಾಗ ಆಕಾರಕ್ಕೆ ಕತ್ತರಿಸಿಕೊಳ್ಳಿ. ಪಾತ್ರೆಯೊಂದರಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಏಲಕ್ಕಿ, ಚಕ್ಕೆ ಹಾಗೂ ಲವಂಗ ಸೇರಿಸಿ, ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್, ಆಲೂಗೆಡ್ಡೆ ಹಾಗೂ ಹಸಿಮೆಣಸು ಸೇರಿಸಿ. ಮತ್ತೆ ಇವೆಲ್ಲವನ್ನೂ ಎಣ್ಣೆಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ. ಮತ್ತೆ ಕುದಿಸಿ. ನಂತರ ಅದಕ್ಕೆ ದಾಲ್ಚಿನ್ನಿ ಎಲೆ ಹಾಕಿ ಅರ್ಧ ಕಪ್ ನೀರು ಸೇರಿಸಿ. ಪಾತ್ರೆ ಮುಚ್ಚಿ ಸ್ವಲ್ಪ ಹೊತ್ತು ಕುದಿಸಿ. ನಂತರ ಅದನ್ನು ಇಳಿಸಿ ದಪ್ಪ ತಳದ ಪಾತ್ರೆಗೆ ಹಾಕಿ. ಅದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿ. ಅದು ಸ್ವಲ್ಪ ಕುದಿದ ನಂತರ ದಪ್ಪ ತೆಂಗಿನಹಾಲು ಹಾಗೂ ಸ್ವಲ್ಪ ಎಣ್ಣೆ ಸೇರಿಸಿ. ಚೆನ್ನಾಗಿ ಕುದಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಅಪ್ಪಂ ಜೊತೆಗೆ ಇದು ಸೂಪರ್ ಕಾಂಬಿನೇಷನ್.

ಅಪ್ಪಂ
ಬೇಕಾಗುವ ಸಾಮಗ್ರಿಗಳು: 
ಅಕ್ಕಿ – 1/2ಕಪ್, ತೆಂಗಿನತುರಿ – 1 ಕಪ್‌, ಯೀಸ್ಟ್ – 1/2 ಟೀ ಚಮಚ, ಉಪ್ಪು – ರುಚಿಗೆ, ಸಕ್ಕರೆ – 3 ಟೀ ಚಮಚ, ಅನ್ನ – 1/2 ಕಪ್‌

ತಯಾರಿಸುವ ವಿಧಾನ: ಅಕ್ಕಿ ತೊಳೆದು 8 ಗಂಟೆ ನೆನೆಸಿಡಿ. ನಂತರ ಮಿಕ್ಸಿ ಜಾರಿಗೆ ಅಕ್ಕಿ, ಅನ್ನ ಹಾಗೂ ತೆಂಗಿನತುರಿ ಹಾಕಿ ರುಬ್ಬಿಕೊಳ್ಳಿ. ಯೀಸ್ಟ್, ಉಪ್ಪು ಹಾಗೂ ಸಕ್ಕರೆಯನ್ನು ಬಿಸಿ ನೀರಿಗೆ ಹಾಕಿ ಅರ್ಧ ಗಂಟೆ ಬಿಡಿ. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಿ 8 ಗಂಟೆ ಇಡಿ. ಮಧ್ಯಮ ದಪ್ಪಕ್ಕೆ ಹಿಟ್ಟನ್ನು ತಯಾರಿಸಿಕೊಂಡು ಅಪ್ಪ ತವಾದ ಮೇಲೆ ದೋಸೆಯ ರೀತಿ ಹಾಕಿ. ಇದು ಚಿಕನ್ ಸ್ಟೀವ್ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.