ಮಂಗಳವಾರ, ಮೇ 24, 2022
28 °C

ನಳಪಾಕ: ಫಲ ಪೇಯಗಳು

ಜಾನಕಿ ಎಸ್. Updated:

ಅಕ್ಷರ ಗಾತ್ರ : | |

Prajavani

ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಬೇಸಿಗೆಯ ದಾಹ ತಣಿಸುವ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶ ಗಳನ್ನು ನೀಡುತ್ತವೆ. ಸೀಜನ್‌ನಲ್ಲಿ ಸಿಗುವ ಹಣ್ಣುಗಳನ್ನು ಸಂಗ್ರಹಿಸಿ, ಮೌಲ್ಯವರ್ಧಿಸಿದರೆ, ರುಚಿ ರುಚಿಯಾದ ಖಾದ್ಯಗಳು, ಪೇಯಗಳು ಸಿದ್ಧವಾಗುತ್ತವೆ. ಅಂಥ ಹಣ್ಣಿನ ಖಾದ್ಯಗಳ ತಯಾರಿ ಕುರಿತ ಮಾಹಿತಿ ಇಲ್ಲಿದೆ.

ಚಿಕ್ಕುಹಣ್ಣಿನ ಹಲ್ವ

ಬೇಕಾಗುವ ವಸ್ತುಗಳು:  ಚಿಕ್ಕು ಹಣ್ಣು 6,ಹಸಿ ದ್ರಾಕ್ಷಿ 1ಕಪ್, ಖರ್ಜೂರ 5 - 6, ಸ್ವಲ್ಪ ಬೆಲ್ಲ, ಏಲಕ್ಕಿ, ಒಣ ಶುಂಠಿ ಪುಡಿ, ಕಾಳು ಮೆಣಸು 4-5,ತಾಜಾ ತುಪ್ಪ 2 ಚಮಚ.

ತಯಾರಿಸುವ ವಿಧಾನ: ಎಲ್ಲಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ ಈ ಹಣ್ಣುಗಳನ್ನು ಮಿಶ್ರ ಮಾಡಬೇಕು. ಒಲೆ ಉರಿಯು ಮಧ್ಯಮ ಉರಿಯಲ್ಲಿರಲಿ. ನಂತರ ಎರಡು ಚಮಚ ಬೆಲ್ಲ ಸೇರಿಸಿ. ಆಮೇಲೆ ಶುಂಠಿ ಪುಡಿ ಚಿಟಿಕೆ, ಏಲಕ್ಕಿ, ಕಾಳುಮೆಣಸು ಪುಡಿ ಹಾಕಿ ಚೆನ್ನಾಗಿ ಕೈಯಾಡಿಸುತ್ತ ನೀರಿನ ಅಂಶ ಹೋಗುವವರೆಗೆ ಕೆದಕಿದರೆ ಸಾಕು. ಇದು ಚಪಾತಿ, ದೋಸೆ ಜೊತೆಗೆ ತಿನ್ನಲು, ಹಾಗೆ ತಿನ್ನಲು ಚೆನ್ನಾಗಿರುತ್ತದೆ. ಎರಡು ಚಮಚ ಹಲ್ವವನ್ನು ಒಂದು ಗ್ಲಾಸ್ ಹಾಲಿಗೆ ಸೇರಿಸಿ ಮಿಕ್ಸಿಯಲ್ಲಿ ಮಿಕ್ಸ್ ಮಾಡಿ ಮಿಲ್ಕ್ ಶೇಕ್ ಮಾಡಿ ಕುಡಿದರೆ ರುಚಿಯಾಗಿರುತ್ತದೆ.

ಕೋಕೊ ಶೇಂಗಾ ಚಾಕಲೇಟ್

ಬೇಕಾಗುವ ವಸ್ತುಗಳು: ಶೇಂಗಾ ಬೀಜ – 1 ಕಪ್, ಹಾಲಿನ ಪುಡಿ – 1/3 ಕಪ್, ಬೆಣ್ಣೆ – 1/2 ಕಪ್, ಸಕ್ಕರೆ ಹಿಟ್ಟು – 1 ಕಪ್, ಕೊಕೊ ಪುಡಿ ಅಥವಾ ಬೊರನ್‌ವಿಟಾ/ಬೂಸ್ಟ್ 1-2 ಚಮಚ.

ತಯಾರಿಸುವ ವಿಧಾನ: ಶೇಂಗಾ ಹುರಿದು ಸಿಪ್ಪೆ ತೆಗೆದು ಅರ್ಧ ಆಗುವಂತೆ ಒಡೆದಿರಬೇಕು. ದಪ್ಪ ತಳದ ಬಾಣಲೆಗೆ ಬೆಣ್ಣೆ ಹಾಕಿ ಕರಗುತ್ತಿದ್ದಾಗ, ಸಕ್ಕರೆ ಹಿಟ್ಟು ಸೇರಿಸಿ, ಹಾಲಿನ ಪುಡಿ ಹಾಕಿ ಕೈಯಾಡಿಸುತ್ತಿರಬೇಕು. ಪಾಕ ಬಂದು ತಳ ಬಿಡುವಾಗ ಶೇಂಗಾ, ಕೊಕೊ ಪುಡಿ ಹಾಕಿ ಚೆನ್ನಾಗಿ ಕಲೆಸಿದರೆ 10 ನಿಮಿಷದಲ್ಲಿ ಚಾಕಲೇಟ್ ರೆಡಿ ಆಗುತ್ತದೆ. ಬೇಕಾದ ಆಕಾರ ಮಾಡಿಕೊಳ್ಳಿ.

ನೆಲ್ಲಿಕಾಯಿ ರಸಾಯನ

ಬೇಕಾಗುವ ವಸ್ತುಗಳು : ಬೆಟ್ಟದ ನೆಲ್ಲಿಕಾಯಿ – 15, ಒಣದ್ರಾಕ್ಷಿ – 1 ಕಪ್, ಕಾಳುಮೆಣಸು – 15, ಜೀರಿಗೆ ಪುಡಿ – 1ಚಮಚ, ಬೆಲ್ಲ – 2 ಕಪ್.

ತಯಾರಿಸುವ ವಿಧಾನ : ನೆಲ್ಲಿಕಾಯಿಯನ್ನು ನೀರಿನಲ್ಲಿ ಒಂದು ಕುದಿ ಕುದಿಸಿಕೊಂಡು, ಬೀಜ ತೆಗೆಯಿರಿ. ಅರ್ಧ ತಾಸು ನೆನೆಸಿಟ್ಟ ಒಣದ್ರಾಕ್ಷಿ, ಬೇಯಿಸಿದ ನೆಲ್ಲಿಕಾಯಿ ಮಿಕ್ಸಿಯಲ್ಲಿ ನುಣ್ಣಗೆ  ರುಬ್ಬಿಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ಈ ಮಿಶ್ರಣದ ಜೊತೆಗೆ, ಬೆಲ್ಲ ಹಾಕಿ ಚೆನ್ನಾಗಿ ಕಾಯಿಸುತ್ತಾ ಇರಬೇಕು. ನೀರಿನಂಶ ಆರುತ್ತಾ ಇದ್ದಾಗ ಕಾಳುಮೆಣಸು, ಜೀರಿಗೆ ಪುಡಿ ಸೇರಿಸಿ ಕೈಯಾಡಿಸಿ ಸರಿಯಾಗಿ ಇನ್ನೊಮ್ಮೆ ಕುದಿಸಿದರೆ ರಸಾಯನ ಸಿದ್ದ.

ಇದನ್ನು ಗಾಜಿನ ಬಾಟಲಿಯಲ್ಲಿ ಶೇಖರಿಡುವುದು ಉತ್ತಮ. ಇದು ತಿಂಗಳವರೆಗೆ ಕೆಡದಂತೆ ಇರುತ್ತದೆ. ಒಂದು ಚಮಚ ರಸಾಯನವನ್ನು ಒಂದು ಲೋಟ ನೀರಿಗೆ ಬೆರೆಸಿ, ಪಾನಕ ಮಾಡಿ ಕುಡಿಯಬಹುದು ಅಥವಾ ಒಂದು ಚಮಚದಷ್ಟು ತಿಂದು ನೀರು ಕುಡಿದರೂ ರುಚಿಯಾಗಿರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.