ಸೋಮವಾರ, ಜೂನ್ 14, 2021
28 °C

ಗಣಪನ ನೈವೇದ್ಯಕ್ಕೆ ಒಣಹಣ್ಣುಗಳ ಕರ್ಜಿಕಾಯಿ, ತರಕಾರಿ ಮೋದಕ

ಪ್ರಜಾವಾಣಿ ಫೀಚರ್‌ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಗಣೇಶ ಹಬ್ಬಕ್ಕೆ ಗಣಪತಿ ಕೂರಿಸುವುದರ ಜೊತೆಗೆ ಬಗೆಬಗೆಯ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ಈ ಬಾರಿ ಕೊರೊನಾ ಕಾರಣದಿಂದ ಹೊರ ಹೋಗುವುದು ಅಷ್ಟೊಂದು ಸುರಕ್ಷಿತವಲ್ಲ. ಆ ಕಾರಣಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಗಣೇಶನಿಗೆ ಇಷ್ಟವಾಗುವ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ. ಮನೆಯಲ್ಲೇ ಸುರಕ್ಷಿತವಾಗಿ ಹಬ್ಬ ಆಚರಿಸಿ.

ಮಿಶ್ರ ಹಣ್ಣುಗಳ ಪಾಯಸ

ಬೇಕಾಗುವ ಸಾಮಗ್ರಿಗಳು: ನೆನೆಸಿಟ್ಟ ಗೋಡಂಬಿ – 10, ನೆನೆಸಿಟ್ಟ ಬಾದಾಮಿ – 10 (ಸಿಪ್ಪೆ ತೆಗೆದಿದ್ದು), ಹಾಲು – 1 ಲೀಟರ್‌, ಏಲಕ್ಕಿ ಪುಡಿ – 1/4 ಟೀ ಚಮಚ, ಸಕ್ಕರೆ – 1/2 ಕಪ್‌, ಮಾವಿನಹಣ್ಣು – 2, ಬಾಳೆಹಣ್ಣು – 2, ಸೇಬಹಣ್ಣು – 2, ದ್ರಾಕ್ಷಿ – 1/2 ಕಪ್‌, ದಾಳಿಂಬೆ – 1/2 ಕಪ್‌, ಜೇನುತುಪ್ಪ – 2 ಟೇಬಲ್ ಚಮಚ

ತಯಾರಿಸುವ ವಿಧಾನ: ಸುಮಾರು 5ರಿಂದ 6 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ಬಾದಾಮಿ ಹಾಗೂ ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಾಲನ್ನು ಬಿಸಿ ಮಾಡಲು ಇಡಿ. ಕುದಿಯಲು ಆರಂಭಿಸಿದಾಗ ಗೋಡಂಬಿ ಹಾಗೂ ಬಾದಾಮಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತಿರಿ. ಆ ಮಿಶ್ರಣ ಮುಕ್ಕಾಲು ಭಾಗ ಆಗುವವರೆಗೂ ಸಣ್ಣ ಉರಿಯಲ್ಲಿ ಕುದಿಸಿ. ತಳ ಹಿಡಿಯದಂತೆ ಆಗಾಗ ಕೈಯಾಡಿಸಿ. ಅದಕ್ಕೆ ಸಕ್ಕರೆ ಸೇರಿಸಿ ಅರ್ಧ ಭಾಗ ಆಗುವವರೆಗೂ ಕುದಿಸಿ. ಏಲಕ್ಕಿ ಪುಡಿ ಸೇರಿಸಿ ಕೆಳಗಿರಿಸಿ. ತಣ್ಣಗಾದ ಮೇಲೆ ಒಂದು ಗಂಟೆ ಫ್ರಿಜ್‌ನಲ್ಲಿಡಿ. ಹಣ್ಣುಗಳನ್ನು ಕತ್ತರಿಸಿ ಜೇನುತುಪ್ಪ ಸೇರಿಸಿ ಫ್ರಿಜ್‌ನಲ್ಲಿಡಿ. ನಂತರ ಹಾಲಿನ ಮಿಶ್ರಣ ಹಾಗೂ ಹಣ್ಣನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತಿನ್ನಲು ಕೊಡಿ.


ಮೋದಕ

ಮಿಶ್ರ ತರಕಾರಿ ಮೋದಕ 

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – ಒಂದೂವರೆ ಕಪ್‌, ಉಪ್ಪು– ರುಚಿಗೆ, ನೀರು, ಎಣ್ಣೆ,

ಹೂರಣಕ್ಕೆ: ಎಣ್ಣೆ – 3 ಟೀ ಚಮಚ, ಬೆಳ್ಳುಳ್ಳಿ – 3 ಎಸಳು, ಶುಂಠಿ – 1 ಇಂಚು, ಹಸಿಮೆಣಸು – 2 ಚೆನ್ನಾಗಿ ಹೆಚ್ಚಿಕೊಂಡಿದ್ದು, ಕ್ಯಾರೆಟ್ – 1 ಕಪ್ (ತುರಿದುಕೊಂಡಿದ್ದು), ಎಲೆಕೋಸ್ – 1ಕಪ್ (ಹೆಚ್ಚಿಕೊಂಡಿದ್ದು), ಬೀನ್ಸ್‌ – 1/2ಕಪ್ (ಸಣ್ಣಗೆ ಹೆಚ್ಚಿಕೊಂಡಿದ್ದು), ಕಾಳುಮೆಣಸಿನಪುಡಿ – ಚಿಟಿಕೆ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಮೊದಲು ಹೂರಣ ತಯಾರಿಸಲು ಪಾತ್ರೆಗೆ 3 ಚಮಚ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಗೂ ಹೆಚ್ಚಿಕೊಂಡ ಹಸಿಮೆಣಸು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಕ್ಯಾರೆಟ್, ಬೀನ್ಸ್ ಹಾಗೂ ಎಲೆಕೋಸು ಸೇರಿಸಿ ದೊಡ್ಡ ಉರಿಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಕಾಳುಮೆಣಸು ಹಾಗೂ ಉಪ್ಪು ಸೇರಿಸಿ ಹುರಿದುಕೊಳ್ಳಿ. ಮೈದಾಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಗೂ ನೀರು ಸೇರಿಸಿ ಹಿಟ್ಟು ತಯಾರಿಸಿಕೊಳ್ಳಿ. ಹಿಟ್ಟಿನಿಂದ ಉಂಡೆ ತಯಾರಿಸಿಕೊಂಡು ಅದನ್ನು ಚಪ್ಪಟ್ಟೆ ಮಾಡಿ. ಅದರೊಳಗೆ ತಯಾರಿಸಿಕೊಂಡ ತರಕಾರಿ ಹೂರಣ ಸೇರಿಸಿ ಮೋದಕದ ಆಕಾರಕ್ಕೆ ಮಡಿಸಿ. ನಂತರ ಹಬೆಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ಈಗ ರುಚಿಯಾದ ತರಕಾರಿ ಮೋದಕ ರೆಡಿ.


ಕರ್ಜಿಕಾಯಿ

ಒಣಹಣ್ಣುಗಳ ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 3 ಕಪ್‌, ತುಪ್ಪ – 1/4 ಕಪ್‌, ಉಪ್ಪು – ರುಚಿಗೆ

ಹೂರಣಕ್ಕೆ: ಬಾದಾಮಿ – 1/4 ಕಪ್‌, ಪಿಸ್ತಾ – 1/4 ಕಪ್‌, ಗೋಡಂಬಿ – 1/4 ಕಪ್, ಕರ್ಜೂರ – 1/4 ಕಪ್‌, ಒಣದ್ರಾಕ್ಷಿ – 1/4 ಕಪ್‌
ಏಲಕ್ಕಿ – ಸ್ವಲ್ಪ.

ತಯಾರಿಸುವ ವಿಧಾನ: ಮೈದಾಹಿಟ್ಟಿಗೆ ತುಪ್ಪ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಆಗಾಗ ನೀರು ಚಿಮುಕಿಸಿಕೊಳ್ಳಿ. ಚಪಾತಿಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಅದನ್ನು ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ಹೂರಣ ತಯಾರಿಸಲು ಮಿಕ್ಸಿ ಜಾರಿಗೆ ಬಾದಾಮಿ, ಪಿಸ್ತಾ, ಕರ್ಜೂರ ಹಾಗೂ ಒಣದ್ರಾಕ್ಷಿ ಸೇರಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಇನ್ನೊಂದು ಸುತ್ತು ತಿರುಗಿಸಿ.
ಈಗ ಮೊದಲೆ ತಯಾರಿಸಿಕೊಂಡ ಹಿಟ್ಟನ್ನು ಚಿಕ್ಕ ಚಿಕ್ಕ ಚಪಾತಿಗಳಂತೆ ಮಾಡಿ ಅದರೊಳಗೆ ಹೂರಣಕ್ಕೆ ತಯಾರಿಸಿದ ಒಣಹಣ್ಣುಗಳ ಮಿಶ್ರಣ ಸೇರಿಸಿ. ಅದನ್ನು ಕರ್ಜಿಕಾಯಿ ಆಕಾರಕ್ಕೆ ಮಡಿಸಿ. ಎಣ್ಣೆಯಲ್ಲಿ ಕರಿಯಿರಿ. ಒಣಹಣ್ಣುಗಳ ಕರ್ಜಿ ಕಾಯಿ ಮಾಡುವುದು ಸುಲಭ, ಆರೋಗ್ಯಕ್ಕೂ ಉತ್ತಮ.


ಕೊಬ್ರಿ ಲಡ್ಡು

ಕೊಬ್ರಿ ಲಡ್ಡು

ಬೇಕಾಗುವ ಸಾಮಗ್ರಿಗಳು: ಒಣ ಕೊಬ್ರಿ ತುರಿ – 1ಕಪ್‌ (ಕೊಬ್ರಿ ತುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡಿದ್ದು), ಸಕ್ಕರೆ – 1/2 ಕಪ್‌,
ಹಾಲು – 1/2 ಕಪ್‌, ಏಲಕ್ಕಿ – ಚಿಟಿಕೆ

ತಯಾರಿಸುವ ವಿಧಾನ: ಮೊದಲು ಕೊಬ್ರಿ ತುರಿಯನ್ನು ಬಿಸಿ ಮಾಡಿಕೊಂಡ ಬಾಣಲೆಗೆ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ಅದಕ್ಕೆ ಕಾಯಿ ಆರಿಸಿದ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಕರಗುವವರೆಗೂ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ, ಸಕ್ಕರೆ ಚೆನ್ನಾಗಿ ಕರಗಿದ ಮೇಲೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಗ್ಯಾಸ್ ಆಫ್ ಮಾಡಿ ಸ್ವಲ್ಪ ಬಿಸಿ ಇರುವಾಗಲೇ ಉಂಡೆ ಕಟ್ಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು