ಗುರುವಾರ , ಆಗಸ್ಟ್ 5, 2021
27 °C

ಮೇಕೆ ಮಾಂಸದ ಖಾದ್ಯಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

goat meat recipe

ಮೇಕೆ ಮಾಂಸದಲ್ಲಿ ಬಗೆಬಗೆ ಖಾದ್ಯಗಳನ್ನು ತಯಾರಿಸುವುದರಲ್ಲಿ ಹಳೆಯ ಮೈಸೂರು ಭಾಗದ ಜನ ಎತ್ತಿದ ಕೈ. ಮಾಂಸಾಹಾರ ಪ್ರಿಯರಾದ ಅವರು ತಯಾರಿಸುವ ಮೇಕೆ ಕಾಲಿನ ಸೂ‍‍ಪ್ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸುವಂತಿರುತ್ತದೆ. ಮೇಕೆಯ ಬೋಟಿ ಕುರ್ಮ, ಕಾಲಿನ ಸೂಪ್‌ ಹಾಗೂ ತಲೆಕಾಲು ಮಾಂಸದ ಸಾರು ತಿಂದೇ ಸವಿಯಬೇಕು ಎನ್ನುತ್ತಾರೆ ಎಂ.ಎಸ್‌. ಧರ್ಮೇಂದ್ರ.

ಬೋಟಿ ಕುರ್ಮ

ಬೇಕಾಗುವ ಸಾಮಗ್ರಿಗಳು: ಬೋಟಿ – 1/2 ಕೆ.ಜಿ., ಹಸಿ ಅವರೆಕಾಳು – 1 ಕಪ್‌, ಆಲೂಗೆಡ್ಡೆ – 2, ಬಾಳೆಕಾಯಿ – 1, ಶುಂಠಿ – 2 ಇಂಚು ಉದ್ದದ್ದು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನ – ಸ್ವಲ್ಪ, ಈರುಳ್ಳಿ – 2, ಟೊಮೆಟೊ – 2, ಕಾಳುಮೆಣಸಿನ ಪುಡಿ – ಸ್ವಲ್ಪ, ಗರಂ ಮಸಾಲೆ – 1 ಚಮಚ, ಕೊತ್ತಂಬರಿ ‍ಪುಡಿ – 1 ಚಮಚ, ಖಾರದ ಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ತೆಂಗಿನಕಾಯಿ – ಸ್ವಲ್ಪ, ಎಣ್ಣೆ, ಸಾಸಿವೆ, ಉಪ್ಪು. 

ತಯಾರಿಸುವ ವಿಧಾನ: ಬೋಟಿಯನ್ನು ಸುಣ್ಣ ಹಾಕಿ ಚೆನ್ನಾಗಿ ತೊಳೆದು ತೆರೆದ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ, ನೊರೆಯ ರೀತಿ ತೇಲುವುದನ್ನು ಚೆಲ್ಲಿ. ಮತ್ತೆ ಮತ್ತೆ ತೊಳೆದು, ಒಂದೆರೆಡು ಬಾರಿ ವಾಸನೆ ಹೋಗುವ ತನಕ ಕುದಿಸಿ ನೀರನ್ನು ಚೆಲ್ಲುತ್ತೀರಿ. (ಚೆನ್ನಾಗಿ ತೊಳೆಯುವುದು ಮುಖ್ಯ ತೊಳೆಯದಿದ್ದರೆ  ಗ್ರೇವಿ ತಯಾರಿಸಿದ ನಂತರ ಕೆಟ್ಟ ವಾಸನೆ ಬರುತ್ತದೆ).

ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದಿನ, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಮಸಾಲೆಗೆ: ಟೊಮೆಟೊ, ಕೊತ್ತಂಬರಿ ಪುಡಿ, ಖಾರದಪುಡಿ, ಕಾಳುಮೆಣಸಿನ ಪುಡಿ, ತೆಂಗಿನಕಾಯಿ, ಗರಂಮಸಾಲೆಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಚೆನ್ನಾಗಿ ತೊಳೆದ ಬೋಟಿಯನ್ನು ಹಾಕಿ ಉಪ್ಪನ್ನು ಬೆರೆಸಿ ಉಪ್ಪು ಹಿಡಿಯುವ ರೀತಿ ಹುರಿಯಿರಿ. ಅದಕ್ಕೆ ತಯಾರಿಸಿಟ್ಟುಕೊಂಡ ಈರುಳ್ಳಿ ಖಾರ ಹಾಕಿ ಕುಕ್ಕರ್ ಮುಚ್ಚಿ 10 ವಿಶಲ್‌ ಹಾಕಿಸಿ. ಆರಿದ ನಂತರ ಕುಕ್ಕರ್ ಮುಚ್ಚಳ ತೆಗೆದು  ಹಸಿ ಅವರೆಕಾಳು, ಕತ್ತರಿಸಿದ ಆಲೂಗೆಡ್ಡೆ, ಬಾಳೆಕಾಯಿ ಮತ್ತು ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಬೋಟಿಗೆ ಹಿಡಿಯುವ ತನಕ ಚೆನ್ನಾಗಿ ಬೇಯಿಸಿ. ಬೆಂದ ನಂತರ ಬೇಕೆಂದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಮೇಕೆ ಕಾಲಿನ ಸೂಪ್

ಬೇಕಾಗುವ ಪದಾರ್ಥಗಳು: ಮೇಕೆ ಕಾಲು– 4, ಶುಂಠಿ – 1 ಇಂಚು, ಬೆಳ್ಳುಳ್ಳಿ – 1/2 ಉಂಡೆ, ಕರಿಬೇವು – 1ಕಡ್ಡಿ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನ – ಸ್ವಲ್ಪ, ಹಸಿ ಮೆಣಸಿನಕಾಯಿ – 2, ಕಾಳುಮೆಣಸು– ಸ್ವಲ್ಪ, ಜೀರಿಗೆ– ಸ್ವಲ್ಪ, ಈರುಳ್ಳಿ – 1, ಟೊಮೆಟೊ – 1, ಎಣ್ಣೆ, ತುಪ್ಪ, ಸಾಸಿವೆ, ಅರಿಸಿನ ಪುಡಿ – ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಶುಂಠಿ, ಬೆಳ್ಳುಳ್ಳಿ ಜಜ್ಜಿಟ್ಟುಕೊಳ್ಳಿ. ಮೆಣಸು ಮತ್ತು ಜೀರಿಗೆ ಹುರಿದು ಪುಡಿಮಾಡಿಕೊಳ್ಳಿ. ಎಣ್ಣೆ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ, ಕರಿಬೇವು, ಮೇಕೆಕಾಲು ಮತ್ತು ಉಪ್ಪು ಹಾಕಿ. ಉಪ್ಪು ಮೇಕೆಕಾಲಿಗೆ ಹಿಡಿಯುವಂತೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ, ಪುದಿನ ಹುರಿದುಕೊಂಡು ಮೇಲೆ ನೀರು ಸೇರಿಸಿ ಜೀರಿಗೆ - ಕಾಳುಮೆಣಸಿನ ಪುಡಿ, ಅರಿಸಿನಪುಡಿ ಉದುರಿಸಿ ಕುಕ್ಕರ್ ಮುಚ್ಚಳ ಮುಚ್ಚಿ. 15 ವಿಷಲ್ ಹಾಕಿಸಿ. ಪ್ರೆಶರ್ ಆರಿದ ನಂತರ ಮುಚ್ಚಳ ತೆಗೆದು ಸ್ವಲ್ಪ ಸಮಯ ಬೇಯಿಸಿ.

ತಲೆಕಾಲು ಮಾಂಸದ ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ತಲೆ – 1, ಕಾಲು – 2, ಶುಂಠಿ – 2 ಇಂಚು ಉದ್ದದ್ದು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನ ಸೊಪ್ಪು – ಸ್ವಲ್ಪ, ಕೊತ್ತಂಬರಿ ಪುಡಿ – 3 ಚಮಚ, ಖಾರದಪುಡಿ – 3 ಚಮಚ, ಅರಿಸಿನ ಪುಡಿ – ಸ್ವಲ್ಪ, ಕಾಳುಮೆಣಸು– 5, ಲವಂಗ – 2, ಗಸೆಗಸೆ – ಸ್ವಲ್ಪ, ಏಲಕ್ಕಿ – 2, ಚಕ್ಕೆ ಒಂದು ಇಂಚು ಉದ್ದದ್ದು, ಹುರಿಗಡ್ಲೆ – ಸ್ವಲ್ಪ, ಗರಂ ಮಸಾಲೆ, ಈರುಳ್ಳಿ – 3, ಟೊಮೆಟೊ – 2, ತೆಂಗಿನಕಾಯಿ – ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೇಕೆ ಕಾಲನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಮತ್ತು ಉಪ್ಪು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ.

ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದಿನ, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಖಾರ ಮಸಾಲೆಗೆ: ಟೊಮೆಟೊ, ಕೊತ್ತಂಬರಿ ಪುಡಿ, ಖಾರದಪುಡಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕಾಯಿ ಮಸಾಲೆಗೆ: ಗರಂ ಮಸಾಲೆ, ತೆಂಗಿನಕಾಯಿ, ಕಾಳುಮೆಣಸು, ಲವಂಗ, ಗಸೆಗಸೆ, ಹುರಿಗಡ್ಲೆ, ಏಲಕ್ಕಿ, ಚಕ್ಕೆಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ತೊಳೆದ ಮಾಂಸ, ಬೆಂದ ಕಾಲು, ಉಪ್ಪನ್ನು ಹಾಕಿ ಮಾಂಸಕ್ಕೆ ಉಪ್ಪು ಹಿಡಿಯುವ ತನಕ ಹುರಿಯಿರಿ. ನಂತರ ಈರುಳ್ಳಿ ಖಾರ ಮಿಶ್ರಣ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಹಾಕಿಸಿ. ಮುಚ್ಚಳ ತೆಗೆದು ಖಾರ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ. ಮಾಂಸ ಬೆಂದ ನಂತರ ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಸಾರು ಬೆಂದ ನಂತರ ಬೇಕೆಂದರೆ ಕೊತ್ತಂಬರಿ ಸೊಪ್ಪು ಉದುರಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು