ಸೂರು ನೀರಿನ ಚಟಪಟ ಸದ್ದು, ಕೊರಕಲಲ್ಲಿ ಹರಿಯುವ ನೀರ ನಿನಾದ, ಎಲೆಗಳ ಮೇಲೆ ಮಳೆ ಹನಿಯ ಬಿಂದು, ಮಗ್ಗುಲಲ್ಲೇ ಸೌದೆ ಒಲೆಯಲ್ಲಿ ತಯಾರಾದ ಪತ್ರೊಡೆ ಬಾಯಲ್ಲಿ ನೀರೂರಿಸಿತ್ತು. ಕೆಸುವಿನ ಎಲೆ ಕಿತ್ತು ತಂದು, ನೆನೆಹಾಕಿದ ಅಕ್ಕಿ ಒರಳುಕಲ್ಲಲ್ಲಿ ಕಡೆದು, ಮಸಾಲೆ ಬೆರೆಸಿ ತಯಾರಿಸಿದ ಪತ್ರೊಡೆ, ಮಳೆಗಾಲದ ತಂಗಾಳಿಯ ಚಳಿಯನ್ನು ಹೊಡೆದೋಡಿಸಿ ನಾಲಿಗೆಯ ರುಚಿಮೊಗ್ಗು ಅರಳಿಸಿತ್ತು...

ಭಟ್ ‘ಎನ್’ ಭಟ್ ಯೂಟ್ಯೂಬ್ ಅಡುಗೆ ಚಾನೆಲ್ನ ಸುದರ್ಶನ ಭಟ್ ಬೆದ್ರಡಿ ಅವರು ಹೇಳಿಕೊಡುವ ಪ್ರತಿ ರೆಸಿಪಿಯೂ ಇಂಥದ್ದೊಂದು ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಎಲೆ, ಸೊಪ್ಪು, ಕಾಯಿ, ಕಾಡುಹಣ್ಣುಗಳಿಂದ ತಯಾರಿಸುವ ವಿಶಿಷ್ಟ ರೆಸಿಪಿಗಳು ನಾಲಿಗೆ ಮೇಲೆ ಸ್ವಾದದ ಟಿಸಿಲೊಡೆಯುವಂತೆ ಮಾಡುತ್ತವೆ. ಇಂದಿನ ಫಾಸ್ಟ್ಫುಡ್ ಯುಗದಲ್ಲಿ ತೆರೆಮರೆಗೆ ಸರಿದಿರುವ, ಈಗಿನವರು ಹೆಸರನ್ನೇ ಕೇಳಿರದ, ಕೇಳಿದ್ದರೂ ಮರೆತೇಹೋಗಿರಬಹುದಾದ ಬಗೆಬಗೆಯ ಸಾಂಪ್ರದಾಯಿಕ ಅಡುಗೆಗಳು ಈ ಚಾನೆಲ್ನ ಅಂಗಳದಲ್ಲಿವೆ.

‘ಬೇಗ ಮಾಡು, ಬೇಗ ತಿನ್ನು, ಓಡು’ ಎನ್ನುವ ಧಾವಂತದ ಬದುಕಿನಲ್ಲೂ ಹಿಂದಿನ ರಾತ್ರಿ ನೆನೆಹಾಕಿದ ಅಕ್ಕಿಯನ್ನು ಒರಳುಕಲ್ಲಲ್ಲಿ ಕಡೆದು ದೋಸೆ ಹೊಯ್ಯುವಂತಹ ಸಾಂಪ್ರದಾಯಿಕ ಶೈಲಿಯ ರೆಸಿಪಿಗಳಿಗೇ ಆದ್ಯತೆ ನೀಡುವ ಈ ಚಾನೆಲ್ ಅನ್ನು ಪಾಕಪ್ರಿಯರು ಮೆಚ್ಚಿಕೊಂಡಿದ್ದಾರೆ. ದಿನವೂ ಅಲ್ಲದಿದ್ದರೂ ಬಿಡುವಾದಾಗ ಅವನ್ನು ತಯಾರಿಸಿ ಸವಿದಿದ್ದಾರೆ. ಈವರೆಗೆ ಅವರು ಹೇಳಿಕೊಟ್ಟಿರುವ 500ಕ್ಕೂ ಹೆಚ್ಚು ರೆಸಿಪಿಗಳು 26 ಕೋಟಿ ವೀಕ್ಷಣೆ ಪಡೆದಿರುವುದೇ ಇದಕ್ಕೆ ನಿದರ್ಶನ.

ಕೇರಳದ ಕಾಸರಗೋಡಿನಲ್ಲಿರುವ ಅವರು ತಮ್ಮ ಅವಳಿ ಸಹೋದರ ಮನೋಹರ ಭಟ್ ಬೆದ್ರಡಿ ಅವರೊಂದಿಗೆ ಸೇರಿ ಈ ಚಾನೆಲ್ ನಡೆಸುತ್ತಿದ್ದಾರೆ . ಸುದರ್ಶನ ತೆರೆ ಮೇಲೆ ರಸಪಾಕ ಹೇಳಿಕೊಟ್ಟರೆ, ಆ ದೃಶ್ಯವನ್ನು ಅಚ್ಚುಕಟ್ಟಾಗಿ ಸೆರೆಹಿಡಿಯುವಲ್ಲಿ ಮನೋಹರ ಪ್ರವೀಣರು. ಇವರ ಅಡುಗೆ ತಯಾರಿಗೆ ಸಹೋದರಿ ಪ್ರಸನ್ನಾ ಭಟ್ ಜೊತೆಯಾಗಿದ್ದಾರೆ. ಕಾನೂನು ಪದವಿ ವ್ಯಾಸಂಗದ ಬಿಡುವಿನ ಸಮಯದಲ್ಲಿ ಚಿಕ್ಕಪುಟ್ಟ ಸಮಾರಂಭಗಳಿಗೆ ಅಡುಗೆ ತಯಾರಿಸಲು ಹೋಗುತ್ತಿದ್ದ ಸುದರ್ಶನ ಅವರಿಗೆ ಲಾಕ್ಡೌನ್ ಸಮಯದಲ್ಲಿ ಯೂಟ್ಯೂಬ್ನ ನಂಟು ಹತ್ತಿತು.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿನ ಸಾಂಪ್ರದಾಯಿಕ ಅಡುಗೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿಯೇ ಪ್ರಸ್ತುತಪಡಿಸುವುದು ಇವರ ವಿಶೇಷ.

ಹಳ್ಳಿ ಮನೆಯಲ್ಲಿ, ಹಳ್ಳಿ ಸೊಗಡನ್ನು ಬಿಂಬಿಸುವ ಪಾತ್ರೆಗಳು, ಒರಳುಕಲ್ಲಿನಲ್ಲಿ ರುಬ್ಬುವ ವಿಧಾನ, ಪ್ರತಿ ರೆಸಿಪಿಯಲ್ಲೂ ಇರುವ ಆರೋಗ್ಯವರ್ಧಕ ಅಂಶಗಳ ವಿವರಣೆ ಗಮನ ಸೆಳೆಯುತ್ತವೆ. ಮಂಗಳೂರಿನ ಗಂಜಿ ಈಗ ಬೆಂಗಳೂರಿನ ಅಡುಗೆ ಮನೆಗಳಲ್ಲೂ ಕಾಣುತ್ತಿರುವುದರಲ್ಲಿ, ಕೇರಳದ ವಿಶೇಷ ತಿಂಡಿ ‘ನೈಯಪ್ಪ’ ಉತ್ತರ ಕರ್ನಾಟಕದ ಬಾಣಲೆಯಲ್ಲೂ ಸ್ಥಾನ ಪಡೆದಿರುವುದರಲ್ಲಿ ಇವರ ಕೊಡುಗೆಯೂ ಇದೆ.

ದೇಸಿತನದೊಂದಿಗೆ ಆಧುನಿಕ ಸ್ಪರ್ಶ ನೀಡುವ ಸಮೋಸ, ಬಾಳೆಕಾಯಿ ಚಿಪ್ಸ್, ಸ್ವದೇಶಿ ಕೇಕ್, ಹಣ್ಣುಗಳ ಐಸ್ಕ್ರೀಮ್, ಬಿಸ್ಕೆಟ್ ರೊಟ್ಟಿ, ಮಂಗಳೂರು ಗೋಳಿಬಜೆ... ತಿನಿಸುಪ್ರಿಯರ ನಾಲಿಗೆಯ ದಾಹ ತಣಿಸಿವೆ.

‘ಬಹುತೇಕ ಸಾಂಪ್ರದಾಯಿಕ ಅಡುಗೆಗಳನ್ನು ಹಿರಿಯರಿಂದ ಕೇಳಿ ಕಲಿತು ಮಾಡುತ್ತೇವೆ. ಕೆಲವೊಮ್ಮೆ ಕಸದಿಂದ ರಸಪಾಕ ತಯಾರಿಸಿದ್ದೇವೆ. ಕೆಸುವಿನ ಎಲೆಯ ದಂಟನ್ನು ಬಹುತೇಕರು ಬಿಸಾಡುತ್ತಾರೆ. ನಾವು ಅದರಲ್ಲಿ ಸ್ವಾದಿಷ್ಟ ಪಲ್ಯ ಮಾಡಿದ್ದೇವೆ. ತೆರೆಮರೆಗೆ ಸರಿಯುತ್ತಿರುವ ಸಾಂಪ್ರದಾಯಿಕ ಅಡುಗೆಗಳನ್ನೇ ಹೆಚ್ಚು ಆಸ್ಥೆ ವಹಿಸಿ ಹೇಳಿಕೊಡುತ್ತೇವೆ. ಆಯಾ ಪ್ರದೇಶದಲ್ಲಿ, ಆಯಾ ಕಾಲಕ್ಕೆ ಜನಪ್ರಿಯವಾದ ತಿನಿಸನ್ನು ತಯಾರಿಸುವವರ ಬಳಿಗೇ ಹೋಗಿ ಅವರಿಂದಲೇ ಅಡುಗೆ ಹೇಳಿಸಿಕೊಡುವ
ಪ್ರಯತ್ನವನ್ನೂ ಮಾಡಿದ್ದೇವೆ. ದೇಸಿತನದ ಅಡುಗೆಗಳು ಮರೆಯಾಗಬಾರದು, ಎಲ್ಲರ ಅಡುಗೆ ಮನೆಗಳಲ್ಲೂ ಅವು ತಯಾರಾಗಬೇಕು ಎನ್ನುವುದು ನಮ್ಮ ಕಾಳಜಿ’ ಎನ್ನುತ್ತಾ ಮುಗುಳ್ನಗುತ್ತಾರೆ ಸುದರ್ಶನ.

ವರ್ಷದ ಒಂದೆರಡು ತಿಂಗಳಲ್ಲಷ್ಟೇ ಸಿಗುವ ಕಳಲೆ ಅಥವಾ ಕಣಿಲೆಯಿಂದ (ಸುದರ್ಶನ ಅವರ ಮಾತಲ್ಲೇ ಹೇಳುವುದಾದರೆ, ಬಿದಿರಿನ ಚಿಕ್ಕ ಪಿಳ್ಳೆ) ಹತ್ತು ಹಲವು ಬಗೆಯ ತಿಂಡಿಗಳನ್ನು ಅವರು ಮಾಡಬಲ್ಲರು. ಅಷ್ಟೇ ಅಲ್ಲ, ಕಣಿಲೆ ಕಿತ್ತು ತೆಗೆಯುವುದು ಹೇಗೆ ಎಂಬಂತಹ ಸಂಗತಿಗಳನ್ನೂ ಅವರು ರೆಸಿಪಿಯ ಜೊತೆಗೆ ತೋರಿಸಿಕೊಡುತ್ತಾರೆ.

ಮಂಗಳೂರು, ಉಡುಪಿಯ ಪ್ರಸಿದ್ಧ ತಿನಿಸಾದ ಸಾಟು, ತೆಳುವಾದ ಅಕ್ಕಿ ರೊಟ್ಟಿ (ತುಳುವಿನಲ್ಲಿ ಕೋರಿ ರೊಟ್ಟಿ), ಕೃಷ್ಣಾಷ್ಟಮಿಗೆ ತಯಾರಿಸುವ ಅವಲಕ್ಕಿ ಮನೋಹರ, ಗಣೇಶ ಚತುರ್ಥಿಯ ಅಪ್ಪ ಕಜ್ಜಾಯ, ಬಾಳೆಕಾಯಿ ಸೇಮಿಗೆ (ಶಾವಿಗೆ), ನಾಗರಪಂಚಮಿಗೆ ತಯಾರಿಸುವ ಕಾಯಿ ಗೆಣಸಲೆ (ಪಾತೋಳಿ), ಅತಿರಸ (ಕಜ್ಜಾಯ), ಕುಚ್ಚಲಕ್ಕಿಯಲ್ಲಿ ಮಾಡಿದ ಉಬ್ಬು ರೊಟ್ಟಿ, ಗೋಧಿ ಹುಡಿ ತುಕ್ಕುಡಿ, ಇಡ್ಲಿ ಪುಟ್ಟು, ಸಜ್ಜಿಗೆ ರೊಟ್ಟಿ, ಒಗ್ಗರಣೆ ಉಂಡೆ,
ದೇವಸ್ಥಾನಗಳಲ್ಲಿ ನೈವೇದ್ಯಕ್ಕೆ ಮಾಡುವ ನೈಪಾಯಸ, ಬಾಳೆಹೂವಿನ ಪಲ್ಯ, ಸಂಜೀರಾ (ಸಿಹಿ ಪೂರಿ), ಕೊಚ್ಚಕ್ಕಿ ಕೋಡುಬಳೆ, ಮೆಣಸಿನ ಸಂಡಿಗೆ, ಸಿಹಿಗೆಣಸಿನ ಹಪ್ಪಳ, ಮರಗೆಣಸು ಹಪ್ಪಳ, ತೊಡೆದೇವು, ಬೂದುಗುಂಬಳ ಪೇಟ, ಕಾಶಿ ಹಲ್ವ, ಬಾಳೆಹಣ್ಣಿನ ಹಲ್ವ, ಅಮೃತ ಫಲ, ಚೇಟ್ಲ ಕೂಟು... ಹೀಗೆ ಕರಾವಳಿ, ಮಲೆನಾಡು ಭಾಗದ ವಿಶಿಷ್ಟ ತಿನಿಸುಗಳ ಘಮ ಕರ್ನಾಟಕದ ಗಡಿಯಷ್ಟೇ ಅಲ್ಲ ಸಾಗರದಾಚೆಗೂ ಪಸರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.