ಸೋಮವಾರ, ಮಾರ್ಚ್ 30, 2020
19 °C

ಪೂರಿಗೂ ಚಪಾತಿಗೂ ಸೈ ಮಸಾಲೆಯುಕ್ತ ಕುರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರತಿದಿನ ಮನೆಯಲ್ಲಿ ಚಪಾತಿ, ಪೂರಿ ತಿನ್ನುವವರಿಗೆ ಜೊತೆಗೆ ನೆಂಜಿಕೊಳ್ಳಲು ಏನು ಮಾಡಬೇಕು ಎಂಬುದೇ ಚಿಂತೆಯಾಗಿರುತ್ತದೆ. ಅದೇ ಚಟ್ನಿ, ಆಲೂ ಪಲ್ಯ ತಿಂದು ನಾಲಿಗೆ ಜಡ್ಡು ಕಟ್ಟಿರುತ್ತದೆ. ಮನೆಯಲ್ಲಿ ಮಕ್ಕಳೂ ಹೊಸತೇನಾದರೂ ಮಾಡಮ್ಮ ಎಂದು ಗೋಗರೆಯುತ್ತಾರೆ. ಅಂಥವರು ಬಾಂಬೆ ಕುರ್ಮ, ತರಕಾರಿ ಕುರ್ಮ, ಟೊಮೆಟೊ ಕುರ್ಮದಂತಹ ಬಗೆ ಬಗೆಯ ಕುರ್ಮಗಳನ್ನು ಮಾಡಿ ನೋಡಬಹುದು. ಇವು ಚಪಾತಿ, ಪೂರಿ ಜೊತೆಗೆ ಅನ್ನಕ್ಕೂ ಜೊತೆಯಾಗುತ್ತವೆ ಎನ್ನುತ್ತಾರೆ ವೇದಾವತಿ ಎಚ್‌. ಎಸ್‌.

ಬಾಂಬೆ ಕುರ್ಮ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ – 4, ಕಡಲೆಹಿಟ್ಟು – 2 ಟೇಬಲ್ ಚಮಚ, ಹಸಿಮೆಣಸು – 3-4, ಶುಂಠಿ ಒಂದಿಂಚು, ಒಣಮೆಣಸಿನಕಾಯಿ – 2, ಕಡಲೆಬೇಳೆ – 2 ಟೀ ಚಮಚ, ಉದ್ದಿನಬೇಳೆ – ಒಂದೂವರೆ ಚಮಚ, ಇಂಗು – ಕಾಲು ಟೀ ಚಮಚ, ಕರಿಬೇವು – ಸ್ವಲ್ಪ, ನಿಂಬೆಹಣ್ಣು – ಅರ್ಧ, ಅರಿಸಿನ – ಅರ್ಧ ಟೀ ಚಮಚ, ಎಣ್ಣೆ – 2 ಟೇಬಲ್ ಚಮಚ, ಈರುಳ್ಳಿ – 2, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿಯಾದ ಮೇಲೆ ಇಂಗು, ಕಡಲೆಬೇಳೆ, ಉದ್ದಿನಬೇಳೆ, ಹಸಿಮೆಣಸು, ಒಣಮೆಣಸಿನಕಾಯಿ, ಈರುಳ್ಳಿ, ಶುಂಠಿ ಎಲ್ಲವನ್ನೂ ಒಂದೊಂದಾಗಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ.

ಅದಕ್ಕೆ ಕರಿಬೇವು, ಅರಿಸಿನ ಹಾಕಿ. ನಂತರ ಬೌಲ್‌ಗೆ ಕಡಲೆಹಿಟ್ಟನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಗಂಟಿಲ್ಲದ ರೀತಿಯಲ್ಲಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮಸಾಲೆ ಪದಾರ್ಥಕ್ಕೆ ಸೇರಿಸಿ. ನಂತರ ಕಡಲೆಹಿಟ್ಟಿನ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ಆಗ ಅದು ಗಟ್ಟಿಯಾದ ಕಣಕದ ರೀತಿಯಲ್ಲಿ ಆಗುತ್ತದೆ. ನಂತರ ಆ ಬೆಂದ ಕಣಕಕ್ಕೆ ನೀರನ್ನು ಹಾಕಿ ನಿಮಗೆ ಎಷ್ಟು ತೆಳ್ಳಗೆ ಬೇಕೋ ಅಷ್ಟು ನೀರನ್ನು ಹಾಕಿ ಕುದಿಸಿ. ಒಂದು ಕುದಿ ಬಂದ ನಂತರ ಬೇಯಿಸಿ, ಒಂದೇ ರೀತಿಯಲ್ಲಿ ಕತ್ತರಿಸಿಕೊಂಡ ಆಲೂಗೆಡ್ಡೆಯನ್ನು ಹಾಕಿ ಮಿಶ್ರಣ ಮಾಡಿ. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಹಾಕಿ ಒಲೆಯಿಂದ ಇಳಿಸಿ.
***

ವೆಜ್ ವೈಟ್ ಕುರ್ಮ

ರುಬ್ಬಿಕೊಳ್ಳಲು ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ – ಅರ್ಧ ಕಪ್‌, ಹುರಿಗಡಲೆ – 1 ಟೇಬಲ್ ಚಮಚ. ಗೋಡಂಬಿ 10, ಹಸಿಮೆಣಸು 2, ಚಕ್ಕೆ – ಅರ್ಧ ಇಂಚು, ಏಲಕ್ಕಿ – 2, ಸೋಂಪು – 1 ಟೀ ಚಮಚ, ಗಸಗಸೆ – 1 ಟೇಬಲ್ ಚಮಚ ಇವೆಲ್ಲವನ್ನೂ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.

ಕುರ್ಮ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಜೀರಿಗೆ – 1 ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಪಲಾವ್ ಎಲೆ – 1, ಈರುಳ್ಳಿ – 1 (ಹೆಚ್ಚಿಕೊಂಡಿದ್ದು), ಕ್ಯಾರೆಟ್ – 2, ಆಲೂಗೆಡ್ಡೆ – 2, ಬೀನ್ಸ್ – 10, ಬಟಾಣಿ – ಅರ್ಧ ಕಪ್, ಎಣ್ಣೆ – 2 ಟೇಬಲ್ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿಸೊಪ್ಪು – ಸ್ವಲ್ಪ, ಕರಿಬೇವು – ಸ್ವಲ್ಪ, ನಿಂಬೆಹಣ್ಣು – ಅರ್ಧ.

ತಯಾರಿಸುವ ವಿಧಾನ: ತರಕಾರಿಗಳನ್ನು ಒಂದೇ ಅಳತೆಯಲ್ಲಿ ಕತ್ತರಿಸಿ ಕುಕ್ಕರ್‌ನಲ್ಲಿ ಎರಡು ವಿಷಲ್ ಬರುವವರೆಗೆ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಪಲಾವ್ ಎಲೆಯನ್ನು ಹಾಕಿ. ನಂತರ ಈರುಳ್ಳಿ ಕೆಂಬಣ್ಣ ಬರುವವರೆಗೆ ಹುರಿದು ಅದರೊಂದಿಗೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈಗ ಬೇಯಿಸಿಕೊಂಡ ತರಕಾರಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ. ನಂತರ ನಿಮಗೆ ಎಷ್ಟು ತೆಳ್ಳಗೆ ಬೇಕೋ ಅಷ್ಟು ನೀರನ್ನು ಸೇರಿಸಿ. ಕರಿಬೇವು ಮತ್ತು ಉಪ್ಪನ್ನು ಸೇರಿಸಿ ಕುದಿಸಿ. ಕೊನೆಯಲ್ಲಿ ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. 

***

ಟೊಮೆಟೊ ಕುರ್ಮ

ಬೇಕಾಗುವ ಸಾಮಗ್ರಿಗಳು: ಗೋಡಂಬಿ – 20, ಗಸಗಸೆ – 1 ಟೇಬಲ್ ಚಮಚ, ಹಸಿಮೆಣಸು – 3, ತೆಂಗಿನತುರಿ – ಕಾಲು ಕಪ್, ಕೊತ್ತಂಬರಿ ಸೊಪ್ಪು, ಎಣ್ಣೆ – 2 ಟೇಬಲ್ ಚಮಚ, ಜೀರಿಗೆ ಅರ್ಧ ಟೀ ಚಮಚ, ಲವಂಗ – 2, ಚಕ್ಕೆ, ಪಲಾವ್ ಎಲೆ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಈರುಳ್ಳಿ – 2, ಟೊಮೆಟೊ – 5, ಉಪ್ಪು – ರುಚಿಗೆ ತಕ್ಕಷ್ಟು, ಅರಿಸಿನ – ಅರ್ಧ ಟೀ ಚಮಚ, ಅಚ್ಚ ಖಾರದ ಪುಡಿ – ಮುಕ್ಕಾಲು ಟೀ ಚಮಚ, ತೆಂಗಿನಹಾಲು – 1 ಕಪ್

ತಯಾರಿಸುವ ವಿಧಾನ: ಗೋಡಂಬಿ ಮತ್ತು ಗಸಗಸೆಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿ.  ಮಿಕ್ಸಿಯಲ್ಲಿ  ತೆಂಗಿನತುರಿ, ಹಸಿ ಮೆಣಸಿನಕಾಯಿ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ನೆನೆಸಿಕೊಂಡ ಸಾಮಗ್ರಿಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ, ಲವಂಗ, ಚಕ್ಕೆ, ಪಲಾವ್ ಎಲೆಯನ್ನು ಹಾಕಿ ಹುರಿದುಕೊಳ್ಳಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಆ ನಂತರ ಉದ್ದಕ್ಕೆ ತೆಳುವಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಈಗ ಟೊಮೆಟೊ ಹಾಗೂ ಉಪ್ಪನ್ನು ಹಾಕಿ ಮೆತ್ತಗೆ ಬೇಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಆ ಮಿಶ್ರಣ ಮೆತ್ತಗಾದಾಗ ಮೇಲೆ ಅರಿಸಿನ ಮತ್ತು ಅಚ್ಚಖಾರದ ಪುಡಿ ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಎರಡು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಈ ಮಿಶ್ರಣಕ್ಕೆ ಕಾಯಿ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಮಗೆ ಎಷ್ಟು ತೆಳ್ಳಗೆ ಬೇಕೋ ಅಷ್ಟು ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಒಲೆಯಿಂದ ಇಳಿಸಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು