ಶನಿವಾರ, ಅಕ್ಟೋಬರ್ 16, 2021
22 °C

ನವರಾತ್ರಿ ನೈವೇದ್ಯಕ್ಕೆ ಬೆಲ್ಲದ ದೋಸೆ, ಎರಿಯಪ್ಪ

ವೇದಾವತಿ ಎಚ್.ಎಸ್. Updated:

ಅಕ್ಷರ ಗಾತ್ರ : | |

Prajavani

ಸಿಹಿ ಬೂಂದಿಕಾಳು ಮತ್ತು ಬೂಂದಿ ಲಡ್ಡು
ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು – 2 ಕಪ್, ಉಪ್ಪು – ಅರ್ಧ ಟೀ ಚಮಚ, ನೀರು – ಒಂದೂವರೆ ಕಪ್, ಎಣ್ಣೆ – 1 ಟೇಬಲ್ ಚಮಚ (ಕಲೆಸಿದ ಹಿಟ್ಟಿಗೆ ಹಾಕಲು), ಗೋಡಂಬಿ – 20, ದ್ರಾಕ್ಷಿ – 30, ಲವಂಗ – 10, ಸಕ್ಕರೆ – 1 ಕಪ್, ನೀರು – ಮುಕ್ಕಾಲು ಕಪ್, ಕೇಸರಿದಳ – 10 ರಿಂದ 15, ಏಲಕ್ಕಿ ಪುಡಿ – ಅರ್ಧ ಟೀ ಚಮಚ, ಬೂಂದಿ ಕಾಳು – 2 ಕಪ್, ಪಟಿಕ ಚಿಟಿಕೆ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಕಡಲೆಹಿಟ್ಟು ಮತ್ತು ಉಪ್ಪನ್ನು ಒಟ್ಟಿಗೆ ಹಾಕಿ ಜರಡಿ ಹಿಡಿಯಿರಿ. ಹಿಟ್ಟಿಗೆ ಒಂದೂವರೆ ಕಪ್ ನೀರನ್ನು ಹಾಕಿ ಮಿಶ್ರಣ ಮಾಡಿ. ಅದಕ್ಕೆ 1 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ದೋಸೆ ಹಿಟ್ಟಿನ ಹದವಿರಲಿ. ಎಣ್ಣೆಯನ್ನು ಬಿಸಿ ಮಾಡಿ. ರಂಧ್ರವಿರುವ ಜಾಲರಿ ಸೌಟಿಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಕರಿಯಿರಿ. ಕಾಳು ಗರಿಗರಿಯಾಗಿ ಬೆಂದ ನಂತರ ಎಣ್ಣೆಯಿಂದ ತೆಗೆಯಿರಿ.

ಬೂಂದಿ ಲಡ್ಡು ಮತ್ತು ಸಿಹಿ ಬೂಂದಿ ತಯಾರಿಸುವ ವಿಧಾನ: ಬಾಣಲೆಗೆ 1 ಟೇಬಲ್ ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಗೋಡಂಬಿ, ದ್ರಾಕ್ಷಿ, ಲವಂಗವನ್ನು ಹಾಕಿ ಹುರಿದುಕೊಳ್ಳಿ. ಸಕ್ಕರೆಯನ್ನು ಬಾಣಲೆಗೆ ಹಾಕಿ ನೀರನ್ನು ಹಾಕಿ ಕುದಿಸಿ. ಚಿಟಿಕೆ ಪಟಿಕ, ಕೇಸರಿದಳ, ಏಲಕ್ಕಿಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಸಕ್ಕರೆ ಒಂದೆಳೆ ಪಾಕ ಬಂದಾಗ ಒಲೆಯನ್ನು ಆರಿಸಿ. ಹುರಿದ ಗೋಡಂಬಿ, ದ್ರಾಕ್ಷಿ, ಲವಂಗ, ಬೂಂದಿಕಾಳನ್ನು ಹಾಕಿ ಮಿಶ್ರಣ ಮಾಡಿ. ಬೂಂದಿಕಾಳು ಸಕ್ಕರೆಯನ್ನು ಹೀರಿಕೊಳ್ಳುವವರೆಗೆ ಬಿಡಿ. ಅರ್ಧ ಭಾಗದಷ್ಟು ಬೂಂದಿ ಕಾಳನ್ನು ತೆಗೆದು ತಟ್ಟೆಗೆ ಆರಲು ಹಾಕಿ. ಉಳಿದ ಅರ್ಧ ಭಾಗದ ಬೂಂದಿ ಕಾಳನ್ನು ಬಿಸಿ ಇರುವಾಗಲೇ ಉಂಡೆಯನ್ನು ಕಟ್ಟಿಕೊಳ್ಳಿ. ರುಚಿಕರವಾದ ಬೂಂದಿ ಕಾಳು ಮತ್ತು ಬೂಂದಿ ಲಡ್ಡು ಸವಿಯಲು ಸಿದ್ಧ.

ಬೆಲ್ಲದ ದೋಸೆ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು - 2 ಕಪ್, ಅಕ್ಕಿಹಿಟ್ಟು - 1 ಕಪ್‌, ಬೆಲ್ಲದ ಪುಡಿ – ಮುಕ್ಕಾಲು ಕಪ್, ತೆಂಗಿನತುರಿ – ಕಾಲು ಕಪ್, ಏಲಕ್ಕಿಪುಡಿ – 1 ಟೀ ಚಮಚ, ಶುಂಠಿ ಪುಡಿ – 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡ – ಕಾಲು ಟೀ ಚಮಚ, ನೀರು ಮೂರೂವರೆ ಕಪ್ (ಹಿಟ್ಟು ದೋಸೆ ಹಿಟ್ಟಿನ ಹದವಿರಲಿ), ಕಾಯಿಸಲು ತುಪ್ಪ ಅಥವಾ ಎಣ್ಣೆ

ತಯಾರಿಸುವ ವಿಧಾನ: ಬೌಲ್‌ಗೆ ಗೋಧಿಹಿಟ್ಟು, ಅಕ್ಕಿಹಿಟ್ಟು, ಬೆಲ್ಲ, ತೆಂಗಿನತುರಿ, ಏಲಕ್ಕಿಪುಡಿ, ಶುಂಠಿಪುಡಿ, ಉಪ್ಪು, ಅಡುಗೆ ಸೋಡ ಹಾಕಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ತವಾವನ್ನು ಬಿಸಿ ಮಾಡಿಕೊಂಡು ಹಿಟ್ಟನ್ನು ತವಕ್ಕೆ ತೆಳುವಾಗಿ ಹರಡಿ. ದೋಸೆ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ದೋಸೆ ಕೆಂಬಣ್ಣ ಬರುವವರೆಗೆ ಬೇಯಿಸಿ. ಗರಿಗರಿಯಾದ, ರುಚಿಕರವಾದ ಬೆಲ್ಲದ ದೋಸೆ ದೇವರ ನೈವೇದ್ಯಕ್ಕೆ ರೆಡಿ. ಇದು ತುಪ್ಪ ಅಥವಾ ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಎರಿಯಪ್ಪ
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್, ಕಾಯಿತುರಿ – 1/2 ಕಪ್, ಬೆಲ್ಲದ ಪುಡಿ – 1 ಕಪ್, ಉಪ್ಪು – ರುಚಿಗೆ, ಗಸಗಸೆ – 1 ಟೀ ಚಮಚ, ಏಲಕ್ಕಿ ಪುಡಿ – 1/2 ಟೀ ಚಮಚ, ನೀರು – 1/2 ಕಪ್, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆ ಹಾಕಿ. ನಂತರ ಅಕ್ಕಿಯ ಜೊತೆಗೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ದೋಸೆಹಿಟ್ಟಿನ ಹದಕ್ಕೆ ಇರಲಿ. ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕಾದ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟನ್ನು ಹಾಕಿ.

ಹಿಟ್ಟು ಕಜ್ಜಾಯದ ರೀತಿಯಲ್ಲಿ ಎಣ್ಣೆಯಿಂದ ಮೇಲಕ್ಕೆ ತೇಲಿಕೊಂಡು ಬರುತ್ತದೆ. ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಬೇಯಿಸಿ. ರುಚಿಕರವಾದ ಎರಿಯಪ್ಪ ಸವಿಯಲು ಸಿದ್ದ.

(ಲೇಖಕಿ: ‘ಮನೆ ಅಡುಗೆ ವಿಥ್‌ ವೇದಾ’ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.