ಭಾನುವಾರ, ಜನವರಿ 17, 2021
19 °C

PV Web Exclusive| ಸೊಗಡವರೆಯ ಸೊಬಗು

ಸುಮಾ ಬಿ. Updated:

ಅಕ್ಷರ ಗಾತ್ರ : | |

Prajavani

‘ಸೊಗಡು ಅವರೆ...’ ಈ ಪದ ಕಿವಿಗೆ ಬೀಳುತ್ತಿದ್ದಂತೆ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಅವರೆ ಕಾಳಿನಿಂದ ತಯಾರಿಸುವ ಖಾದ್ಯಗಳನ್ನು ನೆನೆದರೆ ರುಚಿಮೊಗ್ಗು ಅರಳುತ್ತದೆ. ಚಳಿಗಾಲದ ಬಾಯಿಚಪಲಕ್ಕೆ ಜತೆಯಾಗುವ ಅವರೆಯನ್ನು ಕಾಳುಗಳ ಸಾಲಿನಲ್ಲಿ ನಿಲ್ಲಿಸಿ ನೋಡಿದರೆ ಮೊದಲ ಸ್ಥಾನ ಅದಕ್ಕೇ. ಅವರೆಕಾಳಿನಲ್ಲಿ ತಯಾರಾಗುವಷ್ಟು ಖಾದ್ಯಗಳು ಬೇರಾವ ಕಾಳಿನಿಂದಲೂ ತಯಾರಾಗುವುದಿಲ್ಲ. ಹೀಗಾಗಿ ಈ ಹಿರಿಮೆ ಸಲ್ಲಬೇಕಾದುದು ನ್ಯಾಯಯುತವೇ.

ಚಳಿಗಾಲ ಬಂತೆಂದರೆ ಅವರೆ ಕಾಳಿಗೆ ಶುಕ್ರದೆಸೆ ಶುರುವಾಯಿತೆಂದೇ ಅರ್ಥ. ಡಿಸೆಂಬರ್‌, ಜನವರಿಯಲ್ಲಿ ಎರಡು ತಿಂಗಳು ಪೂರ್ತಿ ಬಹುತೇಕರ ಅಡುಗೆಮನೆಯಲ್ಲಿ ಅವರೆಕಾಯಿ ತನ್ನ ಸಾಮ್ರಾಜ್ಯ ಸ್ಥಾಪಿಸುತ್ತದೆ. ತಿಂಡಿಗೆ ಉಪ್ಪಿಟ್ಟು, ಚಿತ್ರಾನ್ನ, ದೋಸೆ, ಪುಲಾವ್‌; ಊಟಕ್ಕೆ ಬಸ್ಸಾರು, ಉಪ್ಪೆಸರು, ಪಲ್ಯ; ಸಂಜೆ ಸ್ನ್ಯಾಕ್ಸ್‌ಗೆ ಅವರೆ ಕಾಳು ವಡೆ, ಕರಿದ ಬೇಳೆ ಹೀಗೆ ವಿವಿಧ ಖಾದ್ಯಗಳ ರೂಪದಲ್ಲಿ ಜತೆಯಾಗುತ್ತದೆ. ಈ ಎರಡು ತಿಂಗಳಲ್ಲಿ ಏನೇ ಅಡುಗೆ ಮಾಡಿದರೂ ಅದಕ್ಕೆ ಅವರೆಕಾಳಿನ ಸ್ಪರ್ಶ ಇದ್ದೇ ಇರುತ್ತದೆ.

ಅವರೆಕಾಳಿನ ವ್ಯಾಮೋಹಿಗಳಿಗೆ ಅದರ ಉಪ್ಪಿಟ್ಟು ಅಚ್ಚುಮೆಚ್ಚು. ವರ್ಷದ ಮೊದಲ ಬೆಳೆ ಮಾರುಕಟ್ಟೆಗೆ ಲಗ್ಗೆ ಇಟ್ಟೊಡನೆ ಅದೆಷ್ಟೇ ಬೆಲೆಯಾದರೂ ಸರಿಯೇ, ಅವರೆಕಾಯಿ ತಂದು ಉಪ್ಪಿಟ್ಟು ಸವಿದರೇನೆ ಆತ್ಮಕ್ಕೆ, ಜಿಹ್ವೆಗೆ ತೃಪ್ತಿ.

ಹಳೆ ಮೈಸೂರು ಭಾಗದಲ್ಲಿ ಇದರ ಪ್ರಾಬಲ್ಯ ಹೆಚ್ಚು. ಈ ಸೀಜನ್‌ ಬಂತೆಂದರೆ ಮುಗಿಯಿತು, ಸಂಜೆಯ ಟೈಮ್‌ಪಾಸ್‌ಗೆ ಅವರೆಕಾಳು ಸಾಥ್‌ ನೀಡುತ್ತದೆ. ಮಾರುಕಟ್ಟೆಯಿಂದ ಅವರೆಕಾಳು ತಂದು ಸಿಪ್ಪೆ ಸುಲಿದು, ಕಾಳು ನೆನೆಹಾಕಿ ಹಿತಕಿದ ಅವರೆಬೇಳೆ ಮಾಡುವುದರಲ್ಲೇ ಹೆಣ್ಣುಮಕ್ಕಳು ಮುಳುಗಿಬಿಡುತ್ತಾರೆ. ಮನೆಯಲ್ಲಿ ವಯಸ್ಸಾದವರು ಇದ್ದರಂತೂ ಅವರಿಗೆ ಅದೇ ಕೆಲಸ. ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಕೌಟುಂಬಿಕ ಆಗು ಹೋಗುಗಳನ್ನು ಚರ್ಚಿಸುತ್ತ ಹಿತಕಿದ ಅವರೆ ಬೇಳೆ ತಯಾರಾಗುತ್ತವೆ. ಕೆಲವರು ವರ್ಷಕ್ಕಾಗುವಷ್ಟು ಹಿತಕಿದ ಅವರೆಬೇಳೆ ಮಾಡಿ ಒಣಗಿಸಿ ಇಟ್ಟುಕೊಳ್ಳುತ್ತಾರೆ. ಈಗೀಗ ವರ್ಷದ ಎಲ್ಲ ದಿನಗಳಲ್ಲೂ ಅವರೆಕಾಯಿ ಸಿಗುತ್ತದೆ. ಆದರೆ, ಅವರೆಯ ‘ಸೊಗಡು’ ಬೇಕೆಂದರೆ ಡಿಸೆಂಬರ್‌ವರೆಗೆ ಕಾಯಲೇಬೇಕು.

ಅವರೆಕಾಯಿ ಸುಲಿಯಲು ಸಾಕಷ್ಟು ಸಂಯಮ, ಸಮಯ ಬೇಕು. ಪ್ಯಾಟೆ ಮಂದಿಗೆ ಅಷ್ಟು ಸಮಯವಿಲ್ಲ. ಹೀಗಾಗಿ ಸುಲಿದ ಅವರೆಕಾಳೂ ಸಿಗುತ್ತದೆ. ಸುಲಿಯಲು ಸಮಯವಿಲ್ಲ ಎನ್ನುವವರು ತುಸು ಹೆಚ್ಚು ಬೆಲೆ ತೆತ್ತು ಅವರೆಕಾಳು ಕೊಳ್ಳಬಹುದು.

ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಬೆಂಗಳೂರು, ತುಮಕೂರು ಈ ಜಿಲ್ಲೆಗಳಲ್ಲಿ ಅವರೆಕಾಳಿನ ವ್ಯಾಮೋಹಿಗಳು ಹೆಚ್ಚು. ಮುದ್ದೆ, ಅವರೆಕಾಳು ಉಪ್ಪೆಸರಿಗೆ ಹಳೇಮೈಸೂರು ಭಾಗ ಹೆಸರುವಾಸಿ. ಇನ್ನು ಸಂಕ್ರಾಂತಿ ಹಬ್ಬದಲ್ಲೂ ಅವರೆಕಾಳಿನ ಖಾದ್ಯಗಳು ಪಾರಮ್ಯ ಮೆರೆಯುತ್ತವೆ. ಕಬ್ಬು, ಗೆಣಸು, ಶೇಂಗಾ ಜತೆಗೆ ಅವರೆಕಾಯಿಯೂ ಜತೆಯಾಗುತ್ತದೆ.


ಅವರೆಕಾಯಿ ಬರ್ಫಿ 

ಅವರೆಕಾಯಿ, ಆಲೂಗೆಡ್ಡೆ, ಬದನೆಕಾಯಿಗಳನ್ನೂ ಸೇರಿಸಿ ಚಕ್ಕೆ, ಲವಂಗ, ಗಸೆಗಸೆ, ಮೆಣಸಿನ ಕಾಯಿ, ತೆಂಗಿನಕಾಯಿ ತುರಿ ಸೇರಿಸಿ ರುಬ್ಬಿ ಮಾಡಿದ ಸಾರು ‘ಹಿಟ್ಟಿನ ಮೇಲವರೆ ಕಾಳು’ ಎಂದೇ ಜನಪ್ರಿಯ. ಈ ಸಾರನ್ನು ಮುದ್ದೆ, ಚಪಾತಿ, ಪರೋಟ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.

ಶಾಖಾಹಾರಕ್ಕೂ, ಮಾಂಸಾಹಾರಕ್ಕೂ ಅತ್ಯುತ್ತಮ ಜೋಡಿ ಅವರೆಕಾಳು. ಹಾಗೇ ಸಿಹಿಗೂ, ಖಾರದ ಖಾದ್ಯಕ್ಕೂ ಹೊಂದಿಕೆಯಾಗುವ ಬೇಳೆಯಿದು. ಹಿತಕಿದ ಅವರೆ ಬೇಳೆಯಲ್ಲಿ ತಯಾರಿಸಿದ ಖಾರ್‌ಬೇಳೆ ಪಲ್ಯ, ಅಕ್ಕಿ ರೊಟ್ಟಿ ಮಲೆನಾಡಿಗರ ಅಚ್ಚುಮೆಚ್ಚಿನ ಖಾದ್ಯ.

ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲೇ ಸಿಂಹಪಾಲಿನಷ್ಟು ಉತ್ಪಾದನೆಯಾಗುವ ಅವರೆಕಾಯಿ ಪೋಷಕಾಂಶಗಳ ಆಗರ. ಇದರಲ್ಲಿ ಪಿಷ್ಟದ ಪ್ರಮಾಣ ಹೆಚ್ಚಿರುವುದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ದೇಹದ ಉಷ್ಣತೆ ಕಾಪಾಡಲು ಸಹಕಾರಿಯಾಗಿದೆ. ಹಸಿ ಕಾಳಿನಲ್ಲಿ ಪೋಷಕಾಂಶ ಹೆಚ್ಚು. ಅನ್ನಾಂಗ ಬಿ, ಸಿ ಹಾಗೂ ಲವಣಾಂಶಗಳಿವೆ. ಸಸಾರಜನಕ, ಕೊಬ್ಬು, ಪೊಟ್ಯಾಷಿಯಂ, ಸೋಡಿಯಂ, ರಂಜಕದ ಅಂಶಗಳೂ ಅವರಕಾಯಿಯಲ್ಲಿ ಅಡಕವಾಗಿವೆ. ಅವರೆಕಾಳು ಗ್ಯಾಸ್ಟ್ರಿಕ್‌, ಅಲ್ಸರ್‌ ಸಮಸ್ಯೆ ಇರುವವರಿಗೆ ಆಗಿಬರುವುದಿಲ್ಲ. ವಾಯು ಜಾಸ್ತಿ ಎನ್ನುವ ಮಾತಿದೆ. ಈ ಸಮಸ್ಯೆ ಇದ್ದವರೂ ‘ಸೊಗಡಿ’ನ ಸೀಜನ್‌ನಲ್ಲಿ ಒಮ್ಮೆಯಾದರೂ ಅವರೆಕಾಳಿನ ಖಾದ್ಯ ಸವಿಯದೆ ಇರುವುದಿಲ್ಲ.

ಅವರೆಕಾಳು ಸಂಬ್ರ, ಸಾಗು, ಉಸಳಿ, ಸಾರು, ಉಪ್ಪೆಸರು, ಖುರ್ಮಾ, ಪಲ್ಯ, ಅವರೆಕಾಳು ಅಕ್ಕಿ ರೊಟ್ಟಿ, ದೋಸೆ, ವಡೆ, ಅವರೆ ಕಾಳು ಮಿಕ್ಚರ್‌, ಜಿಲೇಬಿ ಹೀಗೆ ಅವರೆಕಾಳಿನ ಖಾದ್ಯಗಳ ಸಂಶೋಧನೆ ನಡೆಯುತ್ತಲೇ ಇದೆ.

ಅವರೆ ಕಾಳಿನ ಖಾದ್ಯ ಎಂದೊಡೆನೆ ಬೆಂಗಳೂರಿಗರಿಗೆ ಥಟ್ಟನೆ ನೆನಪಾಗುವುದು ವಿ.ವಿ.ಪುರಂನಲ್ಲಿರುವ ವಾಸವಿ ಕಾಂಡಿಮೆಂಟ್ಸ್‌. ಅವರೆಕಾಳಿನ ಜಹಾಂಗೀರು, ಹಲ್ವಾ, ಕಾಜು ಬರ್ಫಿ, ಸ್ವೀಟ್‌ ಬೂಂದಿ, ಕಟ್‌ಲೆಟ್‌, ಹೋಳಿಗೆ, ನಿಪ್ಪಟ್ಟು, ಕೋಡುಬಳೆ, ಜಾಮೂನು, ಪಾಯಸ ಹೀಗೆ ಹಲವು ವೈವಿಧ್ಯಮಯ ಖಾದ್ಯಗಳು ಇಲ್ಲಿ ವರ್ಷಪೂರ್ತಿ ಲಭ್ಯವಿರುತ್ತವೆ.

ವರ್ಷಕ್ಕೊಮ್ಮೆ ವಾಸವಿ ಕಾಂಡಿಮೆಟ್ಸ್‌ ಆಯೋಜಿಸುವ ಅವರೆಕಾಯಿ ಪರಿಷೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಹೆಸರುವಾಸಿ. ಸ್ಥಳೀಯ ರೈತರಿಗೂ ಉತ್ತಮ ಮಾರುಕಟ್ಟೆ ಒದಗಿಸುವ ಅವರ ಪ್ರಯತ್ನ ಅನನ್ಯ. ಪ್ರತಿವರ್ಷ ಹೊಸದಾಗಿ ಸಂಶೋಧನೆಗೊಂಡ ಅವರೆಕಾಳಿನ ಖಾದ್ಯ ಪರಿಷೆಯ ಕೇಂದ್ರಬಿಂದುವಾಗಿರುತ್ತದೆ. ಇಲ್ಲಿನ ಖಾದ್ಯಗಳಿಗೆ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಹೆಚ್ಚು ಬೇಡಿಕೆ ಇದೆ.

‘ಕೋವಿಡ್‌ ಕಾರಣದಿಂದ ಈ ವರ್ಷ ಪರಿಷೆ ನಡೆಸುತ್ತಿಲ್ಲ. ಅವರೆಕಾಳಿನ ಖಾದ್ಯಗಳು ಲಭ್ಯ ಇರುತ್ತವೆ. ವಿವಿಧ ಫ್ಲೇವರ್‌ಗಳಲ್ಲಿ ತಯಾರಾಗುವ ಹಿತಕವರೆ ಬೇಳೆಗೆ ಹೆಚ್ಚು ಬೇಡಿಕೆ ಇದೆ. ನಿತ್ಯ 1ರಿಂದ 2 ಕೆ.ಜಿ ಖರಿದ ಬೇಳೆಯನ್ನು ಅಮೆರಿಕ, ಆಸ್ಟ್ರೇಲಿಯ, ಇಂಗ್ಲೆಡ್‌ ಸೇರಿದಂತೆ ಹಲವು ದೇಶಗಳಿಗೆ ಕಳುಹಿಸುತ್ತೇವೆ’ ಎನ್ನುವರು ವಾಸವಿ ಕಾಂಡಿಮೆಂಟ್ಸ್‌ನ ಉದ್ಯೋಗಿ ಮನೀಷ್‌. ಅಲ್ಲಿ 10 ವಿವಿಧ ಫ್ಲೇವರ್‌ಗಳಲ್ಲಿ ಕರಿದ ಬೇಳೆಗಳು ಸಿದ್ಧವಿರುತ್ತವೆ. ಬೆಳ್ಳುಳ್ಳಿ ಘಮಲಿನ ಅವರೆಕಾಳು ಗ್ರಾಹಕರ ಅಚ್ಚುಮೆಚ್ಚು.

20 ವರ್ಷಗಳಿಂದ ಅವರೆ ಮೇಳ ಆಯೋಜಿಸುತ್ತಿರುವ ವಾಸವಿ ಕಾಂಡಿಮೆಟ್ಸ್‌ನ ಗೀತಾ ಶಿವಕುಮಾರ್‌ ಪ್ರತಿ ವರ್ಷವೂ ಒಂದಿಲ್ಲೊಂದು ಹೊಸ ಖಾದ್ಯ ಪರಿಚಯ ಮಾಡುವ ಉಮೇದಿನಲ್ಲಿರುತ್ತಾರೆ. ಇಲ್ಲಿ ತಯಾರಾದ ಅವರೆಕಾಳಿನ ಹನಿ ಜಿಲೇಬಿ, ಹಲ್ವಾ, ಐಸ್‌ಕ್ರೀಂಗಳು ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡಿವೆ.

ಅವರೆಬೇಳೆ ಹಲ್ವಾವನ್ನು ಹೀಗೆ ಮಾಡಿ. ಮಕ್ಕಳೂ ಖುಷಿಯಿಂದ ತಿನ್ನುತ್ತವೆ. ಹೊಸ ಖಾದ್ಯ ಕಲಿತ ತೃಪ್ತಿಯೂ ಸಿಗುತ್ತದೆ.

ಅಗತ್ಯ ಪದಾರ್ಥಗಳು:

ಹಿತಕಿದ ಅವರೆಬೇಳೆ 1 ಕೆ.ಜಿ.

ಸಕ್ಕರೆ 600 ಗ್ರಾಂ

ತುಪ್ಪ 1/2 ಕೆ.ಜಿ

ಪಿಸ್ತಾ, ಏಲಕ್ಕಿ ಪೌಡರ್‌

ಹೀಗೆ ಮಾಡಿ

ಹಿತಕಿದ ಅವರೆಬೇಳೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೆಂದ ಅವರೆಬೇಳೆಯನ್ನು ನಿರಿನಿಂದ ಪ್ರತ್ಯೇಕಿಸಿ ಪೇಸ್ಟ್‌ ಹದಕ್ಕೆ ರುಬ್ಬಿಕೊಳ್ಳಬೇಕು. ಈ ಪೇಸ್ಟನ್ನು ಬಾಣಲೆಗೆ ಹಾಕಿ ಅವರೆಯ ಹಸಿ ವಾಸನೆ ಹೋಗವವರೆಗೂ ಬಾಡಿಸಬೇಕು. ಬಳಿಕ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಸಕ್ಕರೆ ಕರಗಿದ ಬಳಿಕ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಲ್ವದ ಹದಕ್ಕೆ ಬಂದ ಮೇಲೆ ಬಾಣಲೆಯಿಂದ ಅಗಲವಾದ ತಟ್ಟೆಯಲ್ಲಿ ಹರವಿಕೊಳ್ಳಬೇಕು. ಬಿಸಿ ಇರುವಾಗಲೇ ಏಲಕ್ಕಿ ಪುಡಿ, ಪಿಸ್ತಾ, ಬಾದಾಮಿ ತುಂಡುಗಳನ್ನು ಉದುರಿಸಿ. ಹಲ್ವಾ ಬಿಸಿ ಇರುವಾಗಲೂ, ತಣ್ಣಗಾದ ಬಳಿಕವೂ ಸವಿಯಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು