ಭಾನುವಾರ, ಫೆಬ್ರವರಿ 23, 2020
19 °C

ಬಾಯಲ್ಲಿಟ್ಟರೆ ಕರಗುವ ಅವಕಾಡೊ ಅಥವಾ ಬೆಣ್ಣೆ ಹಣ್ಣು ತಿನಿಸು

ಪಲ್ಲವಿ ಬಿ ಎನ್ Updated:

ಅಕ್ಷರ ಗಾತ್ರ : | |

ಅವಕಾಡೊ ಅಥವಾ ಬೆಣ್ಣೆಹಣ್ಣು ಈಗ ಎಲ್ಲೆಡೆಯೂ ಲಭ್ಯ. ಹಣ್ಣುಗಳು ಸ್ವಲ್ಪ ದುಬಾರಿಯಾದರೂ ತಿನ್ನಲು ಬಲು ರುಚಿ. ಈ ಹಣ್ಣಿನ ತಿನಿಸುಗಳನ್ನು ಮಾಡಿ ತಿಂದರೆ ಇನ್ನೂ ರುಚಿ ಜಾಸ್ತಿ. ಇವುಗಳಿಗೆ ನಮ್ಮ ದೇಸಿ ಮಸಾಲೆಯನ್ನು ಸೇರಿಸಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸವಿಯಬಹುದು ಎನ್ನುತ್ತಾರೆ ಪಲ್ಲವಿ ಬಿ.ಎನ್.

ಮಿಲ್ಕ್ ಶೇಕ್

ಬೇಕಾಗುವ ಸಾಮಗ್ರಿಗಳು: ಅವಕಾಡೊ - 1, ಹಾಲು - 1 ಕಪ್, ಬಾಳೆಹಣ್ಣು-2, ಕೋಕೊ ಪುಡಿ - 1 ಚಮಚ, ಜೇನುತುಪ್ಪ - 2 ಚಮಚ, ಸಕ್ಕರೆ - ಅರ್ಧ ಕಪ್,
ಏಲಕ್ಕಿ - ಚಿಟಕೆ, ನೀರು - ಎರಡು ಗ್ಲಾಸ್, ಪಿಸ್ತಾ - ಎರಡು ಚಮಚ.

ತಯಾರಿಸುವ ವಿಧಾನ: ಮಿಕ್ಸಿಗೆ ಸಿಪ್ಪೆ, ಬೀಜ ತೆಗೆದು ತುಂಡರಿಸಿದ ಅವಕಾಡೊ ಜೊತೆಗೆ ಕೋಕೊ ಪುಡಿ, ಜೇನುತುಪ್ಪ, ಹಾಲು, ಬಾಳೆಹಣ್ಣು, ಏಲಕ್ಕಿ ಮಿಶ್ರಗೊಳಿಸಿ ನಯವಾದ ಪದರವು ಬರುವವರೆಗೆ ರುಬ್ಬಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ನಿಮಗೆ ಬೇಕಾದ ಹದಕ್ಕೆ ತಯಾರಿಸಿಕೊಳ್ಳಿ. ಅವಕಾಡೊ ಮಿಲ್ಕ್ ಶೇಕ್ ಮತ್ತು 2 ಐಸ್ ಕ್ಯೂಬ್ ಅನ್ನು ಒಂದು ಲೋಟಕ್ಕೆ ಹಾಕಿ ಅದರ ಮೇಲೆ ಹೆಚ್ಚಿದ ಪಿಸ್ತಾವನ್ನು ಹಾಕಿ ಅಲಂಕರಿಸಿ. ಅವಕಾಡೊ ವಿಟಮಿನ್‌ಗಳಿ೦ದ ಸಮೃದ್ಧವಾಗಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

ಅವಕಾಡೊ ಪರೋಟ

ಬೇಕಾಗುವ ಸಾಮಗ್ರಿಗಳು:  ಅವಕಾಡೊ - 2, ಗೋಧಿಹಿಟ್ಟು - 2 ಕಪ್, ಆಲೂಗೆಡ್ಡೆ ತುರಿ - 1 ಕಪ್, ಜೀರಿಗೆ - ಅರ್ಧ ಚಮಚ, ಖಾರದ ಪುಡಿ - ಅರ್ಧ ಚಮಚ, ಗರಂ ಮಸಾಲ - ಕಾಲು ಚಮಚ, ತುಪ್ಪ – 10 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಒಂದು ಬಟ್ಟಲಿಗೆ ಸಿಪ್ಪೆ, ಬೀಜ ತೆಗೆದ ಅವಕಾಡೊ ಹಾಕಿ ಚೆನ್ನಾಗಿ ಸ್ಮ್ಯಾಶ್ ಮಾಡಿ. ನಂತರ ಗೋಧಿಹಿಟ್ಟು, ಆಲೂಗೆಡ್ಡೆ ತುರಿ, ಜೀರಿಗೆ, ಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು, 1 ಚಮಚ ಎಣ್ಣೆ ಹಾಕಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಹೆಚ್ಚು ನೀರು ಹಾಕಬೇಡಿ. ಅವಕಾಡೊ ಮತ್ತು ಆಲೂಗೆಡ್ಡೆಯಲ್ಲಿರುವ ನೀರಿನಂಶವೇ ಸಾಕಷ್ಟು ಇರುತ್ತದೆ. 30 ನಿಮಿಷದ ನಂತರ ಸಾಧಾರಣ ಚಪಾತಿಯಂತೆ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ತುಪ್ಪ ಹಾಕಿ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ಅವಕಾಡೊ ಪರೋಟ ಸಿದ್ಧ.

ಡಿಪ್

ಬೇಕಾಗುವ ಸಾಮಗ್ರಿಗಳು: ಅವಕಾಡೊ -2, ಗಟ್ಟಿ ಮೊಸರು- 6 ದೊಡ್ಡ ಚಮಚ, ನಿಂಬೆಹಣ್ಣು - ಅರ್ಧ ಚಮಚ, ಆಲಿವ್ ಆಯಿಲ್ - ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು - ಕಾಲು ಕಪ್,  ಕೆಂಪು ಮೆಣಸಿನ ಪುಡಿ - ಅರ್ಧ ಚಮಚ.

ತಯಾರಿಸುವ ವಿಧಾನ: ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ಒಂದು ಮಿಕ್ಸಿಗೆ ಹಾಕಿಕೊಳ್ಳಿ. ನಂತರ ಅದಕ್ಕೆ ಗಟ್ಟಿ ಮೊಸರು, ನಿಂಬೆಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಕೆಂಪುಮೆಣಸಿನ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಐದು ಸೆಕೆಂಡ್ ಗ್ರೈಂಡ್ ಮಾಡಿ. ಇದನ್ನು ಗಟ್ಟಿ ರೊಟ್ಟಿ, ಆಲೂ ಚಿಪ್ಸ್ ಅಥವಾ ಇನ್ನಿತರ ಚಿಪ್ಸ್‌ನೊಂದಿಗೆ ತಿಂದರೆ ರುಚಿಕರವಾದ ಅನುಭವನ್ನು ಆಸ್ವಾದಿಸಬಹುದು. ಬೇಕಿದ್ದರೆ ಒಂದು ಗಂಟೆ ಫ್ರಿಜ್‌ನಲ್ಲಿಟ್ಟು ಸವಿಯಿರಿ.

ಐಸ್‌ಕ್ರೀಮ್

ಬೇಕಾಗುವ ಸಾಮಗ್ರಿಗಳು: ಅವಕಾಡೊ -2, ಹಾಲು – 1 ಲೀಟರ್, ಸಕ್ಕರೆ - 175 ಗ್ರಾಂ, ಹಾಲಿನ ಕೆನೆ ಅಥವಾ ಫ್ರೆಶ್ ಕ್ರೀಂ -100 ಗ್ರಾಂ, ಮೆಕ್ಕೆಜೋಳದ ಹಿಟ್ಟು - 3 ಚಮಚ, ಕೋಕೊ ಪುಡಿ - 1 ಚಮಚ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಕೋಕೊ ಪುಡಿ, 1/4 ಲೋಟ ಹಾಲನ್ನು ಹಾಕಿ ಗಂಟುಗಳು ಬಾರದಂತೆ ಚೆನ್ನಾಗಿ ಮಿಶ್ರ ಮಾಡಿಕೊಂಡು ಪಕ್ಕದಲ್ಲಿಡಿ. ಸಣ್ಣ ಉರಿಯಲ್ಲಿ ತಳಪಾಯವಿರುವ ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲನ್ನು ಕಡಿಮೆ ಶಾಖದಲ್ಲಿ ಹತ್ತು ನಿಮಿಷ ಕುದಿಸಿ ಒಲೆಯ ಮೇಲಿಂದ ಇಳಿಸಿ ಪೂರ್ತಿ ತಣ್ಣಗಾಗಲು ಬಿಡಿ. ಹಾಲಿನ ಕೆನೆಯೊಂದಿಗೆ, ಸ್ಮ್ಯಾಶ್ ಮಾಡಿದ ಅವಕಾಡೊ ಹಾಕಿ ಮಿಕ್ಸ್ ಮಾಡಿಕೊಳ್ಳಿ ಮತ್ತು ನಿಮಗೆ ಬೇಕಾದ ಎಸೆನ್ಸ್ ಅನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬೇರೆ ಪಾತ್ರೆಗೆ ಹಾಕಿ ಫ್ರಿಜ್‌ನಲ್ಲಿ ಒಂದು ಗಂಟೆ ಇಡಿ. ನಂತರ ನೊರೆ ಬರುವವರೆಗೆ ಮಿಕ್ಸರ್‌ನಲ್ಲಿ ಬೀಟ್‌ ಮಾಡಿಕೊಳ್ಳಿ. ಮೋಲ್ಡ್‌ಗಳಿಗೆ ಇದನ್ನು ಸುರಿಯಿರಿ ಮತ್ತು 2 ಗಂಟೆಗಳ ಕಾಲ ಅದನ್ನು ಫ್ರಿಜ್‌ನಲ್ಲಿ ಇಟ್ಟು ತೆಗೆಯಿರಿ. ರುಚಿಕರವಾದ ಅವಕಾಡೊ ಐಸ್‌ಕ್ರೀಮ್ ಸವಿಯಲು ರೆಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)