ಮಂಗಳವಾರ, ಮೇ 17, 2022
26 °C

ನಳಪಾಕ: ರುಚಿಕರ ಚಿಕನ್ ಕಟ್ಲೆಟ್, ಚಿಕನ್ ಹರಿಯಾಲಿ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಬೇಕಾಗುವ ಸಾಮಗ್ರಿಗಳು: ಚರ್ಮ ಹಾಗೂ ಮೂಳೆ ರಹಿತ ಚಿಕನ್ ತುಂಡುಗಳು– 1 ಕಪ್‌, ಆಲೂಗೆಡ್ಡೆ– 1 ದೊಡ್ಡದು, ಈರುಳ್ಳಿ– 1 ಮಧ್ಯಮ ಗಾತ್ರದ್ದು (ಚಿಕ್ಕದಾಗಿ ಹೆಚ್ಚಿದ್ದು), ಹಸಿಮೆಣಸು– 2 ರಿಂದ 3 (ಚಿಕ್ಕದಾಗಿ ಹೆಚ್ಚಿದ್ದು), ಶುಂಠಿ– 1 ಟೇಬಲ್‌ ಚಮಚ (ಚಿಕ್ಕದಾಗಿ ಹೆಚ್ಚಿದ್ದು), ಬೆಳ್ಳುಳ್ಳಿ– 3 ಎಸಳು (ಚಿಕ್ಕದಾಗಿ ಹೆಚ್ಚಿದ್ದು), ಕರಿಬೇವು– 2 ಎಸಳು (ಚಿಕ್ಕದಾಗಿ ಹೆಚ್ಚಿದ್ದು), ಅರಿಸಿನ ಪುಡಿ– ಚಿಟಿಕೆ, ಖಾರದಪುಡಿ– 1/2 ಚಮಚ, ಗರಂ ಮಸಾಲೆ– 1 ಚಮಚ, ಚಿಕನ್ ಮಸಾಲೆ– 1 ಚಮಚ, ಎಣ್ಣೆ– 2 ಚಮಚ, ಬ್ರೆಡ್‌ ಪುಡಿ– 1/2 ಕಪ್‌, ಮೊಟ್ಟೆ– 1, ಎಣ್ಣೆ– ಕರಿಯಲು, ಉಪ್ಪು– ರುಚಿಗೆ, ನೀರು– ಬೇಕಾದಷ್ಟು.

ನೆನೆ ಹಾಕಲು: ಅರಿಸಿನ– ಚಿಟಿಕೆ, ಕಾಶ್ಮೀರಿ ಮೆಣಸಿನ ಪುಡಿ– 1 ಚಮಚ, ಕಾಳುಮೆಣಸಿನ ಪುಡಿ– 1/2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ನಿಂಬೆರಸ– 1 ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ನೆನೆ ಹಾಕಲು ತಿಳಿಸಿದ ವಸ್ತುಗಳೊಂದಿಗೆ ಕಲೆಸಿ 15 ನಿಮಿಷ ನೆನೆಸಿಡಿ. ಕುಕರ್‌ನಲ್ಲಿ ಆಲೂಗೆಡ್ಡೆಯನ್ನು ಬೇಯಿಸಿ ಪುಡಿಮಾಡಿಕೊಳ್ಳಿ. ನೆನೆಸಿಟ್ಟ ಚಿಕನ್‌ಗೆ ಸ್ವಲ್ಪ ನೀರು ಸೇರಿಸಿ 20 ನಿಮಿಷ ಬೇಯಿಸಿಕೊಳ್ಳಿ. ಪ್ಯಾನ್‌ವೊಂದಕ್ಕೆ ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಬಾಡಿಸಿ. ಅದಕ್ಕೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಗೂ ಕರಿಬೇವು ಹಾಕಿ ಬಾಡಿಸಿ. ನಂತರ ಅರಿಸಿನ, ಖಾರದಪುಡಿ, ಚಿಕನ್ ಮಸಾಲ, ಗರಂ ಮಸಾಲ ಸೇರಿಸಿ ಕೈಯಾಡಿಸಿ. ಚಿಕನ್‌ ಹಾಗೂ ಉಪ್ಪು ಸೇರಿಸಿ 10 ನಿಮಿಷ ಬೇಯಿಸಿ. ಪುಡಿ ಮಾಡಿದ ಆಲೂಗೆಡ್ಡೆ ಸೇರಿಸಿ ಅದನ್ನು ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಕಟ್ಲೆಟ್ ಆಕಾರಕ್ಕೆ ತಟ್ಟಿ. ಒಂದು ಬೌಲ್‌ನಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಬ್ರೆಡ್‌ ಪುಡಿ ಸೇರಿಸಿ ಮಿಶ್ರಣ ಮಾಡಿ. ಕಟ್ಲೆಟ್‌ ಅನ್ನು ಅದರಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ.

***

ಚಿಕನ್ ಹರಿಯಾಲಿ

ಬೇಕಾಗುವ ಸಾಮಗ್ರಿಗಳು: ಚಿಕನ್‌– ಅರ್ಧ ಕೆ.ಜಿ., ಎಣ್ಣೆ– 2 ಚಮಚ, ಕರಿಬೇವು– 1 ಎಸಳು, ಜೀರಿಗೆ– 1/2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್– 1 ಚಮಚ, ಮೊಸರು– 1/4 ಕಪ್‌, ಉಪ್ಪು– 1/2 ಚಮಚ, ಗರಂಮಸಾಲೆ– 1 ಚಮಚ, ಕೊತ್ತಂಬರಿ ಪುಡಿ– 1 ಚಮಚ.

ಗ್ರೀನ್ ಪೇಸ್ಟ್‌ ತಯಾರಿಸಲು: ಕೊತ್ತಂಬರಿ ಸೊಪ್ಪು– 1 ಕಪ್‌, ಮೆಂತ್ಯೆ ಸೊಪ್ಪು– 1/2 ಕಪ್‌, ಈರುಳ್ಳಿ– 1 ಮಧ್ಯಮ ಗಾತ್ರದ್ದು, ಹಸಿಮೆಣಸು– 3,

ತಯಾರಿಸುವ ವಿಧಾನ: ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಮೆಂತ್ಯೆ ಸೊಪ್ಪು, ಈರುಳ್ಳಿ, ಶುಂಠಿ ಹಾಗೂ ಬೆಳ್ಳುಳ್ಳಿ ಸೇರಿಸಿ ನೀರು ಸೇರಿಸದೆ ನುಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಜೀರಿಗೆ, ಸಾಸಿವೆ ಸಿಡಿಸಿ, ಅದಕ್ಕೆ ಕರಿಬೇವು ಹಾಕಿ ಬಾಡಿಸಿ. ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಗರಂ ಮಸಾಲೆ, ಕೊತ್ತಂಬರಿ ಪುಡಿ ಹಾಗೂ ಚಿಕನ್ ಸೇರಿಸಿ ಹುರಿಯಿರಿ. ನಂತರ ಮುಚ್ಚಳ ಮುಚ್ಚಿ 2– 3 ನಿಮಿಷ ಬೇಯಿಸಿ. ಅದಕ್ಕೆ ಗ್ರೀನ್ ಪೇಸ್ಟ್‌ ಸೇರಿಸಿ ಮತ್ತೆ ಕೈಯಾಡಿಸಿ ಮುಚ್ಚಳ ಮುಚ್ಚಿ 4 ನಿಮಿಷ ಕುದಿಸಿ. ಮೊಸರು, ಹದಕ್ಕೆ ತಕ್ಕಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ಚಿಕನ್ ಹರಿಯಾಲಿ ಸವಿಯಲು ಸಿದ್ಧ. ಇದು ಚಪಾತಿ, ರೊಟ್ಟಿ, ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು