ಬುಧವಾರ, ಏಪ್ರಿಲ್ 21, 2021
25 °C

ತರಕಾರಿ, ಸೊಪ್ಪಿನ ಚಟ್ನಿ ನಂಟು

ಸೀತಾ ಎಸ್. ನಾರಾಯಣ Updated:

ಅಕ್ಷರ ಗಾತ್ರ : | |

Prajavani

ಟೊಮೆಟೊ ಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಟೊಮೆಟೊ ಕಾಯಿ – 2 ಕಪ್, ಹಸಿಮೆಣಸು – 2, ಉದ್ದಿನಬೇಳೆ – 2 ಚಮಚ, ಕಾಯಿತುರಿ – 1/2 ಕಪ್, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, ಬೆಲ್ಲ, ಉಪ್ಪು ರುಚಿಗೆ.

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಇಂಗು

ತಯಾರಿಸುವ ವಿಧಾನ: ಪಾತ್ರೆಯೊಂದಕ್ಕೆ 1 ಚಮಚ ಎಣ್ಣೆ ಹಾಕಿ ಬಿಸಿಯಾದ ಉದ್ದಿನಬೇಳೆ ಹಾಕಿ ಹುರಿಯಿರಿ. ಅದು ಕೆಂಪಗಾದ ಮೇಲೆ ಹೆಚ್ಚಿದ ಟೊಮೆಟೊ, ಹಸಿಮೆಣಸು ಹಾಕಿ ಬಾಡಿಸಿ. ಕಾಯಿತುರಿಯನ್ನೂ ಹಾಕಿ ಕೈಯಾಡಿಸಿ ಒಲೆ ಆರಿಸಿ. ಆರಿದ ಮೇಲೆ ಉಪ್ಪು, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, ಬೆಲ್ಲ, ಉಪ್ಪು ಹಾಕಿ ರುಬ್ಬಿ. ಎಣ್ಣೆ, ಸಾಸಿವೆ, ಇಂಗು ಒಗ್ಗರಣೆ ಮಾಡಿ ಹಾಕಿ. ಅನ್ನ, ರೊಟ್ಟಿ, ಚಪಾತಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಹರಿವೆ ಸೊಪ್ಪಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಹರಿವೆ ಸೊಪ್ಪು – 2 ಕಪ್, ಒಣ ಮೆಣಸು – 2, ಜೀರಿಗೆ ಹಾಗೂ ಕೊತ್ತಂಬರಿ ತಲಾ – 1/2 ಚಮಚ, ಕಾಯಿತುರಿ – 1 ಕಪ್, ಉಪ್ಪು, ಹುಣಸೆಹಣ್ಣು, ಬೆಲ್ಲ ರುಚಿಗೆ. ಎಣ್ಣೆ, ಸಾಸಿವೆ, ಇಂಗು.

ತಯಾರಿಸುವ ವಿಧಾನ: ಪಾತ್ರೆಗೆ ಅರ್ಧ ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ, ಸೊಪ್ಪು ಹಾಕಿ ಕೈಯಾಡಿಸಿ ನೀರು ಚಿಮುಕಿಸಿ ಬೇಯಿಸಿ. ಜೀರಿಗೆ, ಕೊತ್ತಂಬರಿ, ಒಣಮೆಣಸು ಹುರಿದು, ಕಾಯಿತುರಿ, ಉಪ್ಪು, ಹುಣಸೆಹಣ್ಣು, ಬೆಲ್ಲ ಬೆಂದ ಸೊಪ್ಪು ಹಾಕಿ ರುಬ್ಬಿ, ಎಣ್ಣೆ, ಸಾಸಿವೆ, ಇಂಗು, ಒಗ್ಗರಣೆ ಮಾಡಿ ಹಾಕಿ. ರುಚಿಯಾದ ಸೊಪ್ಪಿನ ಚಟ್ನಿ ರೆಡಿ. 

ಸೀಮೆಬದನೆಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಬೀಜ ತೆಗೆದು ಸಿಪ್ಪೆ ಸಹಿತ ಹೆಚ್ಚಿದ ಹೋಳುಗಳು – 2 ಕಪ್, ಹಸಿ ಅಥವಾ ಒಣಮೆಣಸು – 2, ಕರಿಬೇವು ಅಥವಾ ಕೊತ್ತಂಬರಿ ಸೊಪ್ಪು – ಸ್ವಲ್ಪ, ಹುರಿಗಡ್ಲೆ – 2 ಚಮಚ, ಕಾಯಿತುರಿ – 1/2 ಕಪ್, ರುಚಿಗೆ ಉಪ್ಪು, ಹುಣಸೆಹಣ್ಣು, ಬೆಲ್ಲ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು.

ತಯಾರಿಸುವ ವಿಧಾನ: ಬಾಣಲೆಗೆ ಅರ್ಧ ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಹೆಚ್ಚಿದ ಸೀಮೆ ಬದನೆ, ಹಸಿಮೆಣಸು, ಕರಿಬೇವು ಹಾಕಿ ಬಾಡಿಸಿ. ಆರಿದ ಮೇಲೆ ಉಳಿದ ಪದಾರ್ಥ ಹಾಕಿ ರುಬ್ಬಿ ಒಗ್ಗರಣೆ ಮಾಡಿ ಹಾಕಿ. ಸವಿಯಿರಿ.

ಹೀರೆಕಾಯಿ ಚಟ್ನಿ (ಸಿಪ್ಪೆಯಿಂದಲೂ ಮಾಡಬಹುದು)

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ – 2ಚಮಚ, ಮೆಂತ್ಯ – 1/¼ ಚಮಚ, ಹೆಚ್ಚಿದ ಹೀರೆಕಾಯಿ – 2 ಕಪ್, ಹಸಿ ಅಥವಾ ಒಣಮೆಣಸು – 2-3, ಕಾಯಿತುರಿ – 1/2 ಕಪ್, ರುಚಿಗೆ ಉಪ್ಪು, ಹುಣಸೆಹಣ್ಣು, ಬೆಲ್ಲ, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು.

ತಯಾರಿಸುವ ವಿಧಾನ: ಪಾತ್ರೆಗೆ ಅರ್ಧ ಚಮಚ ಎಣ್ಣೆಯೊಂದಿಗೆ ಕಡ್ಲೆಬೇಳೆ ಹಾಗೂ ಮೆಂತ್ಯವನ್ನು ಕೆಂಪಗೆ ಹುರಿದು, ಅದಕ್ಕೆ ಹಸಿಮೆಣಸು, ಹೀರೆಕಾಯಿ ಹಾಕಿ ಚೆನ್ನಾಗಿ ಬಾಡಿಸಿ. ಆರಿದ ಮೇಲೆ ಉಳಿದ ಪದಾರ್ಥದೊಂದಿಗೆ ರುಬ್ಬಿ, ಒಗ್ಗರಣೆ ಮಾಡಿ ಹಾಕಿ.

ಕಲ್ಲಂಗಡಿ ಬಿಳಿ ತಿರುಳಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ ಬಿಳಿ ತಿರುಳು – 2 ಕಪ್‌, ಹಸಿಮೆಣಸು – 2, ಹುರಿಗಡ್ಲೆ – 2 ಚಮಚ, ಕಾಯಿತುರಿ – 1/2 ಕಪ್, ರುಚಿಗೆ ಉಪ್ಪು, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು.

ತಯಾರಿಸುವ ವಿಧಾನ: ಸ್ವಲ್ಪ ಎಣ್ಣೆಯೊಂದಿಗೆ ಹೋಳುಗಳನ್ನು ಮತ್ತು ಹಸಿಮೆಣಸು ಹಾಕಿ ಬಾಡಿಸಿ. ಆರಿದ ಮೇಲೆ ಹುರಿಗಡ್ಲೆ, ಕಾಯಿತುರಿ, ಉಪ್ಪು, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ. ಒಗ್ಗರಣೆ ಮಾಡಿ ಹಾಕಿ. ರೊಟ್ಟಿ, ತಾಲಿಪಟ್ಟು, ಅನ್ನ, ಚಪಾತಿಯೊಂದಿಗೆ ಸವಿಯಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು