ಭಾನುವಾರ, ಜನವರಿ 17, 2021
19 °C

ಚಳಿಗಾಲಕ್ಕೆ ಹಿತ ಬೋಟಿ ಕುರ್ಮಾ, ಮೇಕೆ ಕೈಮಾ ಉಂಡೆ ಸಾರು

ಎಂ.ಎಸ್‌.ಧರ್ಮೇಂದ್ರ - ದೊಡ್ಡಮಗ್ಗೆ Updated:

ಅಕ್ಷರ ಗಾತ್ರ : | |

Prajavani

ಬೋಟಿ ಕೂರ್ಮ

ಬೇಕಾಗುವ ಸಾಮಗ್ರಿಗಳು: ಬೋಟಿ – 1/2 ಕೆ.ಜಿ. (ಜಠರ, ದೊಡ್ಡ ಕರುಳು, ಸಣ್ಣ ಕರುಳು ಮತ್ತು ಶ್ವಾಸಕೋಶ ಎಲ್ಲಾ ಸೇರಿ), ಹಸಿ ಅವರೇಕಾಳು – 1 ಕಪ್, ಆಲೂಗೆಡ್ಡೆ – 2, ಬಾಳೆಕಾಯಿ – 1, ಶುಂಠಿ – 2 ಇಂಚು ಉದ್ದದ್ದು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದಿನ ಸೊಪ್ಪು – ಸ್ವಲ್ಪ, ಈರುಳ್ಳಿ – 2, ಟೊಮೆಟೊ – 2, ಕಾಳುಮೆಣಸಿನ ಪುಡಿ –  ಸ್ವಲ್ಪ, ಗರಂ ಮಸಾಲೆ – 1 ಚಮಚ, ಕೊತ್ತಂಬರಿಪುಡಿ – 1 ಚಮಚ, ಖಾರದ ಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಕಾಯಿ – 1/4 ಹೋಳು, ಎಣ್ಣೆ, ಸಾಸಿವೆ, ಉಪ್ಪು.

ತಯಾರಿಸುವ ವಿಧಾನ: ಬೋಟಿಯನ್ನು ಸುಣ್ಣ ಹಾಕಿ ಚೆನ್ನಾಗಿ ತೊಳೆದು ತೆರೆದ ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ, ನೊರೆಯ ರೀತಿ ತೇಲುವುದನ್ನು ಚೆಲ್ಲಿ ಮತ್ತೆ ಮತ್ತೆ ತೊಳೆದು, ಒಂದೆರೆಡು ಬಾರಿ ವಾಸನೆ ಹೋಗುವ ತನಕ ಕುದಿಸಿ ನೀರನ್ನು ಚೆಲ್ಲಿ. (ಚೆನ್ನಾಗಿ ತೊಳೆಯುವುದು ಮುಖ್ಯ. ತೊಳೆಯದಿದ್ದರೆ ಗ್ರೇವಿ ತಯಾರಿಸಿದ ನಂತರ ಕೆಟ್ಟ ವಾಸನೆ ಬರುತ್ತದೆ).

ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದಿನ, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಮಸಾಲೆಗೆ: ಟೊಮೆಟೊ, ಕೊತ್ತಂಬರಿ ಪುಡಿ, ಖಾರದ ಪುಡಿ, ಕಾಳುಮೆಣಸಿನ ಪುಡಿ, ಕಾಯಿ, ಗರಂಮಸಾಲೆಗೆ ಸ್ವಲ್ಪ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕುಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಚೆನ್ನಾಗಿ ತೊಳೆದ ಬೋಟಿಯನ್ನು ಹಾಕಿ ಉಪ್ಪು ಬೆರೆಸಿ ಸ್ವಲ್ಪ ಉಪ್ಪು ಹಿಡಿಯುವ ರೀತಿ ಫ್ರೈ ಮಾಡಿ. ಅದಕ್ಕೆ ಈರುಳ್ಳಿ ಖಾರ ಹಾಕಿ ಕುಕರ್ ಮುಚ್ಚಳ ಮುಚ್ಚಿ 10 ವಿಷಲ್ ಹಾಕಿಸಿ. ಆರಿದ ನಂತರ ಕುಕರ್ ಮುಚ್ಚಳ ತೆಗೆದು ಹಸಿಅವರೇಕಾಳು, ಕತ್ತರಿಸಿದ ಆಲೂಗೆಡ್ಡೆ, ಬಾಳೆಕಾಯಿ ಮತ್ತು ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಬೋಟಿಗೆ ಹಿಡಿಯುವ ತನಕ ಚೆನ್ನಾಗಿ ಬೇಯಿಸಿ. ಬೆಂದ ನಂತರ ಬೇಕೆಂದರೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.

ಮೇಕೆ ಕೈಮಾ ಉಂಡೆ ತೊಗರಿಕಾಳು ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ಕೈಮಾ ಮಾಂಸ – 1/2 ಕೆ.ಜಿ, ಹಸಿ ತೊಗರಿಕಾಳು – 1 ಕಪ್, ಶುಂಠಿ – 2 ಇಂಚು ಉದ್ದದ್ದು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಹುರಿಗಡಲೆ – 4 ಚಮಚ, ಕೊತ್ತಂಬರಿ ಪುಡಿ – 4 ಚಮಚ, ಖಾರದ ಪುಡಿ – 3 ಚಮಚ, ಅರಿಸಿನ ಪುಡಿ – ಸ್ವಲ್ಪ, ಗರಂಮಸಾಲೆ – ಸ್ವಲ್ಪ, ಚಕ್ಕೆ – 2 ಇಂಚು, ಲವಂಗ – 8, ಮೆಣಸು – 10, ಈರುಳ್ಳಿ – 1, ಟೊಮೆಟೊ – 2, ಕಾಯಿ – ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಚಕ್ಕೆ, ಲವಂಗ, ಮೆಣಸು, ಕೊತ್ತಂಬರಿ ಸೊಪ್ಪು, ಕಾಯಿ, ಪುದಿನ, ಅರಿಸಿನ ಪುಡಿ, ಹುರಿಗಡಲೆ, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ 2 ಚಮಚ, ಖಾರದಪುಡಿ 2 ಚಮಚ, ಅರಿಸಿನ ಪುಡಿ, ಸ್ವಲ್ಪ ಹರಳುಪ್ಪು ಹಾಕಿ ನೀರು ಹಾಕದೆ ರುಬ್ಬಿಟ್ಟುಕೊಳ್ಳಿ. ರುಬ್ಬಿದ ಮಿಶ್ರಣದಲ್ಲಿ ಕಾಲು ಭಾಗವನ್ನು ತೆಗೆದುಕೊಂಡು ಅದಕ್ಕೆ ಮೇಕೆ ಕೈಮಾ ಮಾಂಸ ಹಾಕಿ, ನೀರು ಬೆರೆಸದೆ ಮಾಂಸ ಮತ್ತು ಖಾರ ಬೆರೆಯುವಂತೆ ಮಿಕ್ಸಿಯಲ್ಲಿ ರುಬ್ಬಿಕೊಂಡು ನಂತರ ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ. ಉಳಿದ ಮುಕ್ಕಾಲು ಭಾಗ ರುಬ್ಬಿದ ಮಿಶ್ರಣಕ್ಕೆ ಗರಂಮಸಾಲೆ, ಕೊತ್ತಂಬರಿ ಪುಡಿ 2 ಚಮಚ, ಖಾರದಪುಡಿ 1 ಚಮಚ, ಈರುಳ್ಳಿ 1, ಟೊಮೆಟೊ ಮತ್ತು ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಂಡು ಮೇಲೆ ರುಬ್ಬಿದ ಖಾರ ಮಿಶ್ರಣ, ಹಸಿ ತೊಗರಿಕಾಳು ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಖಾರ ಕುದಿಯಲು ಬಿಡಿ. ಉಂಡೆಗಳನ್ನು ಹಾಕಿದ ನಂತರ ಸ್ವಲ್ಪ ಸಮಯ ತಿರುಗಿಸದೆ ಮುಚ್ಚಳ ಮುಚ್ಚಿ ಬೇಯಿಸಿ ಆಮೇಲೆ ಸಾಂಬಾರು ತಿರುಗಿಸಿ ಚೆನ್ನಾಗಿ ಬೇಯಿಸಿ.

ಮಟನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮೇಕೆ ಮಾಂಸ – ಅರ್ಧ ಕೆ.ಜಿ, ಸೋನಾಮಸೂರಿ ಅಕ್ಕಿ – 1/4 ಕೆ.ಜಿ, ಬಾಸುಮತಿ ಅಕ್ಕಿ – 1/4 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಹಸಿಮೆಣಸಿನಕಾಯಿ – 15, ಮೊಸರು – 2 ಚಮಚ, ಖಾರದಪುಡಿ – 2 ಚಮಚ, ಕೊತ್ತಂಬರಿಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಬಿರಿಯಾನಿ ಮಸಾಲೆ – 2 ಚಮಚ, ಪತ್ರೆ – 2 ಎಸಳು, ಗೋಡಂಬಿ – 10, ಕಾಳುಮೆಣಸು – 20, ಏಲಕ್ಕಿ – 2, ಲವಂಗ – 5, ಚಕ್ಕೆ – 2 ಇಂಚು ಉದ್ದದ್ದು, ಪಲಾವ್ ಎಲೆ – 2, ಮೊರಾಠಿ ಮೊಗ್ಗು – 2, ಈರುಳ್ಳಿ – 5, ಟೊಮೆಟೊ – 3, ಎಣ್ಣೆ, ತುಪ್ಪ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮಾಂಸಕ್ಕೆ, ಅರಿಸಿನ ಪುಡಿ, ಖಾರದಪುಡಿ, ನೀರು ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ (ದಪ್ಪದಪ್ಪವಾಗಿ) ಕತ್ತರಿಸಿಟ್ಟುಕೊಳ್ಳಿ. ಕೊತ್ತಂಬರಿ ಮತ್ತು ಪುದಿನ ರುಬ್ಬಿಟ್ಟುಕೊಳ್ಳಿ. ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಮರಾಠಿ ಮೊಗ್ಗು, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ. ನಂತರ ಬೆಂದ ಮಾಂಸ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ನಂತರ ಟೊಮೆಟೊ ಹಾಕಿ ಮತ್ತೆ ಹುರಿಯಿರಿ. ಒಂದಕ್ಕೆ ಎರಡಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀರನ್ನು ಹಾಕಿ (ಮಾಂಸ ಬೇಯಿಸಿದ ನೀರನ್ನು ಬಳಸಿಕೊಳ್ಳಿ). ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಕಡಿಮೆಯಿದ್ದನ್ನು ಸೇರಿಸಿ. ಅಕ್ಕಿ ಮುಕ್ಕಾಲು ಭಾಗ ಬೆಂದಾಗ ಕತ್ತರಿಸಿದ ಕೊತ್ತಂಬರಿ ಮತ್ತು ಪುದಿನವನ್ನು ಉದುರಿಸಿ ಮುಚ್ಚಳ ಮುಚ್ಚಿ ಪಾತ್ರೆಯನ್ನು ತವಾದ ಮೇಲೆ ಬೇಯಲು ಇಡಿ. ಒಂದು ಪಾತ್ರೆಯಲ್ಲಿ ಬಿಸಿನೀರನ್ನು ಕಾಯಿಸಿ ಮುಚ್ಚಳದ ಮೇಲೆ ಬಿರಿಯಾನಿ ಬೇಯುವ ತನಕ ಇಡಿ ಬೆಂದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.