ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಎಲ್ಲೆಲ್ಲೂ ಘಮ್ಮೆನ್ನುವ ಬಿರಿಯಾನಿ

Last Updated 10 ಅಕ್ಟೋಬರ್ 2020, 13:01 IST
ಅಕ್ಷರ ಗಾತ್ರ

ಮೈಸೂರು ದಸರಾ ಜಂಬೂ ಸವಾರಿಯ ಸಮಯ. ಅತ್ತ ‘ಅರ್ಜುನ’ (ಆನೆ) ಅಂಬಾರಿ ಹೊತ್ತು ಬನ್ನಿಮಂಟಪದತ್ತ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಅದನ್ನು ಕಣ್ತುಂಬಿಕೊಂಡ ನೂರಾರು ಜನ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್‌ ಮೈದಾನದ ಆವರಣದತ್ತ ಲಗುಬಗೆಯಿಂದ ಪಾದ ಬೆಳೆಸಿದರು.

ದಸರಾ ‘ಆಹಾರ ಮೇಳ’ದ ಪ್ರಮುಖ ಆಕರ್ಷಣೆ ‘ಬೊಂಬು ಬಿರಿಯಾನಿ’ ಮಳಿಗೆ ಬಳಿ ಚೀಟಿ ಪಡೆದು ಸಾಲುಗಟ್ಟಿ ನಿಂತರು. ಬೊಂಬಿನೊಳಗೆ ಮಸಾಲೆ, ಚಿಕನ್‌, ಅಕ್ಕಿ ಸುರಿದು ಬಾಯಿಕಟ್ಟಿ ನಿಗಿನಿಗಿ ಕೆಂಡದಲ್ಲಿ ಬಿರಿಯಾನಿ ಬೇಯಿಸುತ್ತಿದ್ದ ಬುಡಕಟ್ಟು ಜನಾಂಗದ ಬಾಣಸಿಗರತ್ತಲೇ ಎಲ್ಲರ ದೃಷ್ಟಿ ನೆಟ್ಟಿತ್ತು. ಬೊಂಬು ಕೆಂಡದಿಂದ ಹೊರ ತೆಗೆಯುವುದನ್ನೇ ಕಾಯುತ್ತಿದ್ದ ಬಿರಿಯಾನಿ ಮೋಹಿಗಳು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.

ಬೊಂಬನ್ನು ಎರಡು ಹೋಳು ಮಾಡಿದ ಬಾಣಸಿಗರು ಹಬೆಯಾಡುತ್ತಿದ್ದ ಬಿರಿಯಾನಿ ತೆಗೆದು ಎಲೆಯಲ್ಲಿ ಬಡಿಸಿ ಒಬ್ಬೊಬ್ಬರಿಗೇ ಸಾಲಾಗಿ ಬರಲು ಸೂಚಿಸಿ ಒಂದೊಂದೇ ಪ್ಲೇಟ್‌ ಎತ್ತಿಕೊಟ್ಟರು. ಬಿರಿಯಾನಿ ಸವಿದ ಮನಸು ‘ಧನ್ಯೋಸ್ಮಿ’ ಎಂದು ನಿಟ್ಟುಸಿರು ಬಿಟ್ಟಿತು. ಏಕೆಂದರೆ ಈ ಬಿರಿಯಾನಿ ಮತ್ತೆ ಸಿಗುವುದು ಮುಂದಿನ ದಸರಾ ಸಮಯದಲ್ಲೇ!. ಅಂದು ದಸರಾ ಆಹಾರ ಮೇಳದ ಕಡೆಯದಿನ.

ಆಹಾರ ಮೇಳದ ಒಂಬತ್ತು ದಿನವೂ ಬೊಂಬು ಬಿರಿಯಾನಿ ಮಳಿಗೆ ಮುಂದೆ ಇದೇ ಚಿತ್ರಣ. ಬುಡಕಟ್ಟು ಜನಾಂಗದವರು ಆದಿಕಾಲದ ಪದ್ಧತಿಯಂತೆ ತಯಾರಿಸುತ್ತಿದ್ದ ಈ ಬಿರಿಯಾನಿಗೆ ಎಲ್ಲಿಲ್ಲದ ಬೇಡಿಕೆ. ಒಮ್ಮೆಲೆ ಪ್ರಖ್ಯಾತಿ ಪಡೆದ ಬೊಂಬು ಬಿರಿಯಾನಿ ಈಗೀಗ ಬಹುತೇಕ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲೂ ಸಿಗುತ್ತಿದೆ.

ಬಿರಿಯಾನಿಯ ಗತ್ತು, ಗಮ್ಮತ್ತೇ ಅಂತಹದ್ದು. ಯಾವುದೇ ಬಿರಿಯಾನಿಯಾಗಲಿ, ಅದನ್ನು ತಯಾರಿಸುವ ವಿಧಾನ, ಬಳಸುವ ಮಸಾಲೆಯ ವೈವಿಧ್ಯದಿಂದ ತನ್ನದೇ ಅಸ್ಮಿತೆ ಕಂಡುಕೊಂಡಿದೆ. ಪ್ರಾದೇಶಿಕ ಮಾನ್ಯತೆಯನ್ನೂ ತಂದು ಕೊಟ್ಟಿದೆ. ಹೈದರಾಬಾದಿ ಬಿರಿಯಾನಿ ಹೈದರಾಬಾದ್‌ನಲ್ಲೇ ಹುಟ್ಟಿದ್ದು ಎಂದು ಅಲ್ಲಿನವರು ಘಂಟಾಘೋಷವಾಗಿ ಹೇಳಬಹುದು. ಅಷ್ಟು ದೊಡ್ಡಮಟ್ಟದ ಹೆಸರನ್ನು ಬಿರಿಯಾನಿ ಹೈದರಾಬಾದ್‌ಗೆ ತಂದುಕೊಟ್ಟಿದೆ.

ಸೆಲೆಬ್ರಿಟಿಗಳಾದಿಯಾಗಿ ಎಲ್ಲರೂ ಇಷ್ಟಪಟ್ಟು ತಿನ್ನುವ ಹೈದರಾಬಾದ್‌ ಬಿರಿಯಾನಿ ದೇಶದ ವಿವಿಧ ಹೋಟೆಲ್‌ಗಳ ಮೆನುವಿನಲ್ಲಿ ರಾಜನಂತೆ ದರ್ಬಾರ್ ನಡೆಸುತ್ತಿದೆ. ಆದರೂ ಕೆಲವರು ಹೈದರಾಬಾದ್‌ನಿಂದಲೇ ಬಿರಿಯಾನಿಯನ್ನು ಪಾರ್ಸಲ್‌ ತರಿಸಿಕೊಳ್ಳುತ್ತಾರೆ. ಸ್ಥಳೀಯವಾಗಿ ದೊರೆಯುವ ಮಸಾಲೆ ಬೆರೆಸಿ ತಯಾರಿಸುವ ಈ ಬಿರಿಯಾನಿಗೆ ಅಪಾರ ಅಭಿಮಾನಿಗಳು.

ದೊನ್ನೆ ಬಿರಿಯಾನಿ, ದಮ್‌ ಬಿರಿಯಾನಿ, ಬೆಂಗಳೂರು ಬಿರಿಯಾನಿ, ತಮಿಳುನಾಡಿನ ಅಂಬೂರು ಬಿರಿಯಾನಿ, ಕೇರಳ, ಕರಾವಳಿ ಕಡೆಯ ಮಲಬಾರ್‌ ಅಥವಾ ಮಂಗಳೂರು ಬಿರಿಯಾನಿ, ಭಟ್ಕಳ ಬಿರಿಯಾನಿ, ತಲತೇರಿ ಬಿರಿಯಾನಿ, ಮಶ್ರೂಮ್‌ ಬಿರಿಯಾನಿ, ಎಗ್‌ ಬಿರಿಯಾನಿ, ಮಡಕೆ ಬಿರಿಯಾನಿ... ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ಬಿರಿಯಾನಿ ಮಾಂಸಾಹಾರಿಗಳ ಉದರ ತಣಿಸುತ್ತಿವೆ.

ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ಬಿರಿಯಾನಿ ಎಂದರೆ ‘ಮಂದಿ ಬಿರಿಯಾನಿ’. ಒಂದು ದೊಡ್ಡ ತಟ್ಟೆಯಲ್ಲಿ (ತಟ್ಟೆ ಎನ್ನುವುದಕ್ಕಿಂತ ಹರಿವಾಣ ಎನ್ನುವುದೇ ಉತ್ತಮ) ನಾಲ್ಕು ಜನರಿಗೆ ಆಗುವಷ್ಟು ಬಿರಿಯಾನಿಯನ್ನು ಒಂದರಲ್ಲೇ ಹಾಕಿ ಕೊಡುತ್ತಾರೆ. ಅದನ್ನು ಎಲ್ಲರೂ ಹಂಚಿಕೊಂಡು ತಿನ್ನಬೇಕು. ಅದಕ್ಕೆ ಬೆಲೆಯೂ ಅಧಿಕ. ಅರಬ್‌ ದೇಶಗಳ ಪ್ರಭಾವದಿಂದ ಈ ಬಿರಿಯಾನಿ ರಾಜ್ಯಕ್ಕೆ ಕಾಲಿಟ್ಟಿದೆ. ಮಂಗಳೂರಿನಲ್ಲಿ ಬಹುತೇಕ ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಇದರ ಹಾಜರಿ ಇದೆ. ಬೆಂಗಳೂರಿಗೂ ನಿಧಾನಕ್ಕೆ ಕಾಲಿರಿಸುತ್ತಿದೆ.

ಇನ್ನು ಮಸಾಲೆ ಒಟ್ಟಿಗೆ ತಿನ್ನಲು ಇಷ್ಟ ಪಡದಿರುವವರು ‘ತಲತೇರಿ ಬಿರಿಯಾನಿ’ ಸವಿಯಬಹುದು. ಕೇರಳದಲ್ಲಿ ಈ ಬಿರಿಯಾನಿ ಜನಪ್ರಿಯ. ಅನ್ನದ ಒಳಭಾಗದಲ್ಲಿ ಗ್ರೇವಿಯನ್ನು ಅಡಗಿಸಿಟ್ಟು ಕೊಡಲಾಗುತ್ತದೆ. ಮಾಂಸದ ತುಂಡುಗಳು, ಅನ್ನ ಒಂದೆಡೆ, ಮಸಾಲೆಯುಕ್ತ ಗ್ರೇವಿ ಮತ್ತೊಂದು ಕಡೆ ಇರುತ್ತದೆ. ಬೇಕೆನಿಸಿದರೆ ಮಿಕ್ಸ್‌ ಮಾಡಿಕೊಳ್ಳಬಹುದು. ಇಲ್ಲವಾದರೆ ಗ್ರೇವಿಯನ್ನೇ ಪ್ರತ್ಯೇಕವಾಗಿ ಸವಿಯಬಹುದು.

ಮೈಸೂರು ಭಾಗದಲ್ಲಿ ದೊನ್ನೆ ಬಿರಿಯಾನಿ, ಮಟನ್‌ ಪುಲಾವ್‌ ಹೆಚ್ಚು ಜನಪ್ರಿಯ. ಮೈಸೂರಿನಲ್ಲಿ ಪುಲಾವ್‌ ಎಂದರೆ ಬರಿ ಪುಲಾವ್‌ ಅಲ್ಲ. ಬಿರಿಯಾನಿ ಎಂದೇ ಅರ್ಥೈಸಿಕೊಳ್ಳಬೇಕು. ಮಟನ್‌ ಪುಲಾವ್‌ ಅಥವಾ ಹನುಮಂತು ಪುಲಾವ್‌ ಎಂದೇ ಮೈಸೂರಿನಲ್ಲಿ ಜನಜನಿತ. ತಾತ ಹನುಮಂತು ಅವರು ಆರಂಭಿಸಿದ ಬಿರಿಯಾನಿ ತಯಾರಿಯನ್ನು ಮೊಮ್ಮಕ್ಕಳು ಅದೇ ಹೆಸರಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸೌದೆ ಬಳಸಿ ಬಿರಿಯಾನಿ ತಯಾರಿಸುವುದು ಇಲ್ಲಿನ ವಿಶೇಷ. ಮನೆಯಲ್ಲೇ ತಯಾರಿಸುವ ಮಸಾಲೆ ಬಳಕೆ ಹಾಗೂ ಪಲಾವ್‌ಗೆ ದಮ್‌ ಕಟ್ಟುವುದರಿಂದ ಹೆಚ್ಚು ರುಚಿಕರವಾಗಿರುತ್ತದೆ ಎಂಬುದು ಆ ಹೋಟೆಲ್‌ ಮಾಲೀಕರ ವಿಶ್ಲೇಷಣೆ. ತಲೆತಲಾಂತರದಿಂದ ಸಾಂಪ್ರದಾಯಿಕ ರುಚಿಯನ್ನು ಅವರು ಇಂದಿಗೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಹನುಮಂತು ಪುಲಾವ್‌ ಹೆಚ್ಚು ಪ್ರಖ್ಯಾತಿ.

ಬೆಂಗಳೂರಿನಲ್ಲಿ ಆಯಾ ಪ್ರದೇಶಗಳ ಹೆಸರಿನಲ್ಲೇ ಬಿರಿಯಾನಿಗಳು ಪ್ರಸಿದ್ಧಿ ಆಗಿವೆ. ಚಿಕ್ಕಪೇಟೆ ದೊನ್ನೆ ಬಿರಿಯಾನಿ, ಬನಶಂಕರಿ ದೊನ್ನೆ ಬಿರಿಯಾನಿ ಹೀಗೆ. ವಾರದ ರಜೆ ಸಮಯದಲ್ಲಿ ಈ ಹೋಟೆಲ್‌ಗಳಲ್ಲಿ ಸರತಿ ಸಾಲು ಬಲು ದೂರ ಬೆಳೆಯುತ್ತದೆ.

ಈ ಬಿರಿಯಾನಿ ಪ್ರಭಾವ ಸಸ್ಯಹಾರಿ ಖಾದ್ಯಗಳ ಮೇಲೂ ಬೀರಿದೆ. ಕೆಲ ಹೋಟೆಲ್‌ಗಳಲ್ಲಿ ವೆಜ್‌ ಬಿರಿಯಾನಿಯೂ ತಯಾರಾಗುತ್ತಿದೆ. ಆದರೆ, ಬಿರಿಯಾನಿ ಎನ್ನುವ ಪದವೇ ಮಾಂಸಾಹಾರವನ್ನು ಪ್ರತಿನಿಧಿಸುವಾಗ ಅದನ್ನು ಸಸ್ಯಹಾರವಾಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುವರು ಶಾಕಾಹಾರಿಗಳು. ಇನ್ನು ರೈಲುಗಳಲ್ಲಿ ಚಿಕ್ಕದಾದ ಮಾಂಸದ ತುಂಡು ಇಟ್ಟು ಮಸಾಲೆಯುಕ್ತ ಅನ್ನ ಹಾಕಿ ಪ್ಯಾಕ್‌ ಮಾಡಿ ಅದಕ್ಕೆ ಬಿರಿಯಾನಿ ಎಂಬ ಹೆಸರು ಲೇಪಿಸಿ ಗ್ರಾಹಕರಿಗೆ ನೀಡುತ್ತಾರೆ.

ಬಿರಿಯಾನಿ ಎಕ್ಸ್‌ಪರ್ಟ್ ರಾಜಣ್ಣ

‘ದಮ್‌ ಕಟ್ಟಿದರೇನೆ ಬಿರಿಯಾನಿ ಎಂದು ಎನಿಸಿಕೊಳ್ಳುವುದು’ ಎನ್ನುವರು ಬಿರಿಯಾನಿ ತಯಾರಿಯಲ್ಲಿ ಹೆಸರವಾಸಿಯಾಗಿರುವ ಚಿತ್ರದುರ್ಗದ ರಾಜಣ್ಣ.

‘ಹದವಾದ ಬಿರಿಯಾನಿ ತಯಾರಿಗೆ ಒಂದಷ್ಟು ಅನುಭವ ಬೇಕು. ಎಲ್ಲೆಂದರಲ್ಲಿ, ಯಾರು ಬೇಕೊ ಅವರು ತಯಾರಿಸಲು ಆಗದು’ ಎನ್ನುವ ರಾಜಣ್ಣ ಅವರು ತಯಾರಿಸಿದ ಬಿರಿಯಾನಿ ಎಂದರೆ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಅಷ್ಟರಮಟ್ಟಿಗೆ ಆ ಭಾಗದಲ್ಲಿ ಅವರು ಬಿರಿಯಾನಿ ತಯಾರಿಗೆ ಜನಪ್ರಿಯವಾಗಿದ್ದಾರೆ. ಸಣ್ಣ ಪುಟ್ಟ ಸಮಾರಂಭಗಳಲ್ಲಿ, ಮದುವೆಗಳಲ್ಲಿ ಬಿರಿಯಾನಿ ಮಾತ್ರವೇ ಅವರು ತಯಾರಿಸುತ್ತಾರೆ.

ಆರೇಳು ವರ್ಷಗಳಿಂದ ರಾಜಣ್ಣ ಅವರದ್ದು ಅದೇ ಕಾಯಕ. ಎಲ್ಲಿಗೆ ಕರೆದರೂ ಅವರೇ ಪಾತ್ರೆ, ಸಾಮಗ್ರಿಗಳನ್ನು ಕೊಂಡೊಯ್ದು ಕಟ್ಟಿಗೆ ಬಳಸಿ ಬಿರಿಯಾನಿ ತಯಾರಿಸುವುದು ವಿಶೇಷ. ‘ಬಿರಿಯಾನಿ ಹದವಾಗಿ ಬೇಯಲು ಕಟ್ಟಿಗೆ ಒಲೆಯೇ ಆಗಬೇಕು. ಅರೆ ಬೆಂದ ಅಕ್ಕಿಗೆ ದಮ್‌ ಕಟ್ಟಿದರೆ ಅದರ ಸ್ವಾದವೇ ಬೇರೆ’ ಎನ್ನುವರು ರಾಜಣ್ಣ.

‘ಹದವಾದ ಮಸಾಲೆ ಹಾಕಿ, ಅಕ್ಕಿ, ನೀರು ಹಾಕಿ ಕುದಿಯಲು ಬಿಡಬೇಕು. ಅಕ್ಕಿ ಇನ್ನು ದಿಂಡು ಕಟ್ಟುವಾಗಲೇ ಕೆಳಭಾಗದಲ್ಲಿರುವ ಉರಿಯನ್ನು ತೆಗೆದು ಪಾತ್ರೆಯ ಮಾಲ್ಭಾಗಕ್ಕೆ ಒಂದು ಬಟ್ಟೆ ಹಾಕಿ ಅದರ ಮೇಲೆ ತಟ್ಟೆ ಮುಚ್ಚಿ ಕೆಂಡವನ್ನು ಹಾಕಬೇಕು. ಆಗ ಆವಿ ಮೇಲ್ಭಾಗಕ್ಕೆ ಹೋಗದೆ ಅನ್ನಕ್ಕೆ ಇಳಿಯುತ್ತದೆ. ಆಗ ಬಿರಿಯಾನಿ ಹದವಾಗಿ ಬೇಯುತ್ತದೆ. ಈ ಪ್ರಕ್ರಿಯೆಯೇ ದಮ್‌ ಕಟ್ಟುವಿಕೆ. ಇದು ಬಿರಿಯಾನಿಯ ರುಚಿ ಹೆಚ್ಚಿಸುತ್ತದೆ’ ಎಂದು ವಿವರಿಸುವರು ರಾಜಣ್ಣ.

ಭಾರತ ಉಪಖಂಡದಲ್ಲಿ ಬಿರಿಯಾನಿ ಬಹು ಜನಪ್ರಿಯ. ಸಾಂಪ್ರದಾಯಿಕ ಮಾಂಸಾಹಾರಿ ಖಾದ್ಯಗಳಲ್ಲಿ ಇದಕ್ಕೆ ಅಗ್ರಸ್ಥಾನ. ಮೊಘಲರು ಬಿರಿಯಾನಿಯನ್ನು ಭಾರತಕ್ಕೆ ಪರಿಚಯಿಸಿದರು ಎಂದು ಚರಿತ್ರೆ ಹೇಳುತ್ತದೆ. ಹೀಗೆ ಶತಶತಮಾನಗಳ ಇತಿಹಾಸ ಹೊಂದಿರುವ ಬಿರಿಯಾನಿ ನಂತರ ದಿನಗಳಲ್ಲಿ ನಾನಾ ಟಿಸಿಲುಗಳಾಗಿ ಅಗಾಧವಾಗಿ ಬೆಳೆದಿದೆ.

ಸಣ್ಣ ಪುಟ್ಟ ಹೋಟೆಲ್‌, ರಸ್ತೆ ಬದಿ ಅಂಗಡಿಗಳಲ್ಲೂ ಈಗ ಬಿರಿಯಾನಿ ಹಾಜರಿ ಇದ್ದೇ ಇರುತ್ತದೆ. ಹೀಗಿದ್ದಾಗ ಯಾವುದು ಅಸಲಿ ಬಿರಿಯಾನಿ ಎನ್ನುವ ಗೊಂದಲ ಬಿರಿಯಾನಿ ಪ್ರಿಯರಲ್ಲಿ ಉದ್ಭವಿಸುತ್ತದೆ. ‘ಬಿರಿಯಾನಿ ತಯಾರಿಗೆ ಮಾಂಸ, ಆಯ್ಕೆ, ಮಸಾಲೆ ಆಯ್ಕೆಯೂ ಬಹಳ ಮುಖ್ಯ’ ಎನ್ನುವರು ಬೆಂಗಳೂರಿನ ರೆಸ್ಟೋರೆಂಟೊಂದರ ಬಾಣಸಿಗ ಮಾಧವ್‌. ‘ಅನ್ನದಲ್ಲಿ ಬೆಂದ ಮಾಂಸದ ತುಂಡುಗಳು ಹೂವಿನ ಎಸಳಿನ ರೀತಿ ಕೈಗೆ ಬರಬೇಕು. ಅದು ನಿಜವಾದ ಬಿರಿಯಾನಿ’ ಎಂಬ ವಿಶ್ಲೇಷಣೆ ಅವರದ್ದು.

ಮಾಂಸದ ಆಯ್ಕೆ ಹೀಗಿರಲಿ

* ಚಿಕನ್‌ ಬಿರಿಯಾನಿಗೆ 1,600 ಗ್ರಾಂ ತೂಕವಿರುವ ಬಲಿತ ಕೋಳಿ ಆಯ್ಕೆ ಮಾಡಿಕೊಳ್ಳಿ.

* ಮಟನ್‌ ಬಿರಿಯಾನಿಗೆ ತಾಜಾ ಮಾಂಸವೇ ಆಗಬೇಕು. ಹೆಚ್ಚು ಬಲಿತಿರದ ಮಾಂಸವಾದರೆ ಉತ್ತಮ.

* ಬೆಳಿಗ್ಗೆಯೆ ಮಾರುಕಟ್ಟೆಗೆ ಹೋದರೆ ತಾಜಾ ಮಾಂಸ ಕೊಳ್ಳಬಹುದು.

* ಪರಿಚಯಸ್ಥರ ಮಟನ್‌ ಅಂಗಡಿಯಲ್ಲೇ ಮಾಂಸ ಖರೀಸಿದರೆ ಒಳ್ಳೆಯದು.

ಹದವಾದ ಬಿರಿಯಾನಿ ತಯಾರಿಸಲು ಒಂದಷ್ಟು ಟಿಪ್ಸ್

* ಮಾಂಸವನ್ನು ಚೆನ್ನಾಗಿ ಮ್ಯಾರಿನೆಟ್‌ (ನೆನೆಹಾಕುವುದು) ಮಾಡಿದರೆ ಹದವಾದ ಬಿರಿಯಾನಿ ತಯಾರಿಸಬಹುದು.

* ಅರೆದ ಮಸಾಲೆಯಲ್ಲಿ ಮಾಂಸವನ್ನು ಮಿಕ್ಸ್‌ ಮಾಡಿ ಎರಡು, ಮೂರು ಗಂಟೆಗಳ ಕಾಲ ನೆನೆಹಾಕಿದರೆ ಅತ್ಯುತ್ತಮ ಬಿರಿಯಾನಿ ಹೊರಹೊಮ್ಮುತ್ತದೆ.

* ಮಸಾಲೆ ಬಳಸಿ ಮ್ಯಾರಿನೆಟ್‌ ಮಾಡಿದರೆ ಹೆಚ್ಚುವರಿ ಮಸಾಲೆ ಬಳಸುವ ಅಗತ್ಯತೆ ಇರುವುದಿಲ್ಲ.

* ಇನ್‌ಸ್ಟಂಟ್‌ ಮಸಾಲೆ ಬಳಕೆ ಬೇಡ. ಮನೆಯಲ್ಲೇ ತಯಾರಿಸಿ ಬಳಸಿ.

* ನಿಂಬೆ ಹಣ್ಣು, ಮೊಸರು ಹದವಾಗಿ ಬೆರೆಸಬೇಕು.

* ಮೆಂತ್ಯ ಸೊಪ್ಪು ಬಳಕೆ ಕಡ್ಡಾಯವಾಗಿರಲಿ.

* ಅಕ್ಕಿ ಆಯ್ಕೆ ಬಹಳ ಮುಖ್ಯ. ಸಾಮಾನ್ಯವಾಗಿ ಬಾಸುಮತಿ ಅಕ್ಕಿಯ ಬಿರಿಯಾನಿ ಹೆಚ್ಚು ಜನರಿಗೆ ಪ್ರಿಯ. ಅದು ಇಷ್ಟ ಆಗದಿರುವವರು ಉತ್ತಮ ಅಕ್ಕಿ ಆಯ್ಕೆ ಮಾಡಿಕೊಳ್ಳಬೇಕು.

* ತುಪ್ಪ ಕಡ್ಡಾಯವಾಗಿ ಬಳಸಿ. ಆದರೆ ಕಡಿಮೆ ಬಳಕೆ ಇರಲಿ.

* ಬೆರಳೆಣಿಕೆಯಷ್ಟು ಗೋಡಂಬಿ, ಬಾದಾಮಿ ಬಳಸಿದರೆ ಸ್ವಾದ ಹೆಚ್ಚುತ್ತದೆ.

* ಟೇಸ್ಟ್‌ ಮೇಕರ್‌ಗಳ ಮೊರೆ ಹೋಗಬೇಡಿ. ಆರೋಗ್ಯಕ್ಕೆ ಹಾನಿಕರ.

* ಕಟ್‌ ಮಾಡಿದ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಕರಿದು ಅರ್ಧ ಭಾಗವನ್ನು ಮಸಾಲೆಗೆ ಇನ್ನರ್ಧವನ್ನು ಹಾಗೇ ಮಿಶ್ರಣ ಮಾಡಬೇಕು. ಹಸಿ ಈರುಳ್ಳಿ ಬಳಸಿದರೆ ಸ್ವಾದ ಬರುವುದಿಲ್ಲ.

* ಟೊಮೆಟೊ ಬಳಕೆ ಕಡಿಮೆ ಇದ್ದಷ್ಟೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT