ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಲ್ಲಿ ನಾನೇ ಕುಕ್‌’

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

ನನಗೆ ಸಣ್ಣ ವಯಸ್ಸಿನಿಂದಲೂ ಅಡುಗೆ ಅಂದ್ರೆ ಆಸಕ್ತಿ ವಿಷಯವೇ. ನಾನು ಆಗ ನಾಲ್ಕು ಅಥವಾ ಐದನೇ ಕ್ಲಾಸಿನಲ್ಲಿದ್ದೆ. ಮನೆಯಲ್ಲಿ ಮಿಕ್ಸಿತಗೊಳ್ಳುವ ಮುಂಚೆ ರುಬ್ಬುವ ಕಲ್ಲಿನಲ್ಲಿ ಇಡ್ಲಿ, ದೋಸೆ ಹಿಟ್ಟನ್ನು ರುಬ್ಬಲು ನಾನು ಅಮ್ಮನಿಗೆ ಸಹಾಯ ಮಾಡ್ತಿದ್ದೆ. ನನಗೆ ಆ ಕಲ್ಲನ್ನು ಎತ್ತಲು ಸಾಧ್ಯವಾಗಿಲ್ಲ ಅಂದ್ರೂ ಕಷ್ಟಪಟ್ಟು, ಏದುಸಿರು ಬಿಡುತ್ತಾ ನಾನೇ ಮಾಡಬೇಕು ಎಂದು ಹಟ ಮಾಡಿ ರುಬ್ಬುತ್ತಿದ್ದೆ. ಅಡುಗೆ ಮನೆಯಲ್ಲಿ ಅಮ್ಮನಿಗೆ ತರಕಾರಿ ಕತ್ತರಿಸಲು, ತೊಳೆಯಲು ಸಹಾಯ ಮಾಡುತ್ತಿದ್ದೆ.

ನಾನು ಕಾಲೇಜಿಗೆ ಹೋಗುತ್ತಿರುವಾಗ ಪುಲಾವ್‌ ಮಾಡಿದ್ದೆ. ರುಚಿ ನೋಡಿದಾಗ ತುಂಬ ಕೆಟ್ಟದಾಗಿತ್ತು. ಮತ್ತೊಂದು ಬಾರಿ ‘ಅವಕಾಡೋ ಡಯೆಟ್‌ ಕೇಕ್‌’ ಹೊಸ ಪ್ರಯೋಗಮಾಡಿದ್ದೆ. ಅದಂತೂ ಎಷ್ಟು ಕೆಟ್ಟದಾಗಿತ್ತು ಎಂದರೆ ಹೇಳಲಸಾಧ್ಯ.ಬರುಬರುತ್ತಾ ನಾನು ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿಯುತ್ತಾ ಹೋದೆ. ಈಗ ನನ್ನ ಅಡುಗೆಯೇ ನನಗಿಷ್ಟ. ನನ್ನಮ್ಮ ಹಾಗೂ ನನಗೆ ಅಡುಗೆಗೆ ಯಾರೂ ಸಹಾಯ ಮಾಡಬಾರದು. ನಾವೇ ಮಾಡಬೇಕು. ಹಾಗಾಗಿ ನಾವು ಮನೆಯಲ್ಲಿ ಯಾರೂ ಅಡುಗೆಯವರನ್ನು ಇಟ್ಟುಕೊಂಡಿಲ್ಲ. ನನಗಂತೂ ಕೈಯ್ಯಾರೆ ಅಡುಗೆ ಮಾಡಿಕೊಂಡು ತಿಂದರಷ್ಟೇ ಸಮಾಧಾನ.

ನಾನು ಅಡುಗೆ ವಿಷಯಕ್ಕೆ ಬಂದರೆ ಡಯೆಟ್‌, ಫಿಟ್‌ನೆಸ್‌ ಎಂದು ಜಾಸ್ತಿ ತಲೆಕೆಡಿಸಿಕೊಳ್ಳಲ್ಲ. ಏನು ಇಷ್ಟವೋ ಅದನ್ನು ತಿನ್ನುತ್ತೇನೆ. ನಾನು ಗರ್ಭಿಣಿಯಾಗಿದ್ದಾಗ ದೇಶದ ಪ್ರಸಿದ್ಧ ಸಿಹಿತಿಂಡಿಗಳನ್ನು ತರಿಸಿಕೊಂಡು ತಿಂದಿದ್ದೆ. ನನಗೆ ಸ್ವೀಟ್ಸ್‌ ಅಂದ್ರೆ ತುಂಬಾ ಇಷ್ಟ. ಐಸ್‌ಕ್ರೀಂ, ಚಾಕ್ಲೇಟ್‌, ಕೇಕ್‌ ತಿನ್ನುವುದೆಂದರೆ ನನಗೇ ತುಂಬ ಇಷ್ಟ. ಗರ್ಭಿಣಿಯಾಗಿದ್ದಾಗ ನನಗೇನಿಷ್ಟವೋ ಎಲ್ಲವನ್ನೂ ತಿನ್ನುತ್ತಿದ್ದೆ. ಮುಂದೆ ಮಗಳು ದೊಡ್ಡವಳಾದಾಗ ಸ್ವೀಟ್ಸ್‌ ವಿಚಾರದಲ್ಲಿ ನನಗೇ ಅವಳಿಗೆ ಜಗಳವಾಗುತ್ತೋ ಏನೋ!.

ನನ್ನ ಮನೆಯಲ್ಲಿ ನಾನೇ ಕುಕ್‌. ಸಿನಿಮಾ ಶೂಟಿಂಗ್‌ ಇದ್ದಾಗ ನಾನೇ ಬೆಳಿಗ್ಗೆ ಎದ್ದು, ತಿಂಡಿ, ಅನ್ನ, ಸಾರು ಮಾಡಿಕೊಂಡು ಬಾಕ್ಸಿಗೆ ಹಾಕಿಕೊಂಡು ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ನನ್ನ ಗಂಡನಿಗೆ ಆಲೂ ಗೋಬಿ, ಮಟರ್‌ ಪಲ್ಯ ತುಂಬಾ ಇಷ್ಟ. ಮದುವೆಯಾದ ಹೊಸತರಲ್ಲಿ ನಾನು ಅವರಿಗೇ ಅದನ್ನೇ ಮಾಡಿಕೊಟ್ಟಿದ್ದೆ. ತುಂಬ ಇಷ್ಟಪಟ್ಟು ತಿಂದಿದ್ದರು. ಈಗಲೂ ಅವರ ಊಟದ ಡಬ್ಬಿ ಜವಾಬ್ದಾರಿ ನನ್ನದೇ.

ನನಗೆ ಅಡುಗೆ ತಾಜಾ, ಬಿಸಿಬಿಸಿಯಾಗಿರಬೇಕು. ಹಾಗೇ ಪೋಷಕಾಂಶಗಳಿಂದ ಸಮೃದ್ಧವಾಗಿ ಇರಬೇಕು. ಅಡುಗೆಯಲ್ಲಿ ಧಾನ್ಯಗಳು, ತರಕಾರಿ, ಸೊಪ್ಪುಗಳನ್ನುಬಳಸುತ್ತೇನೆ. ವಾರದಲ್ಲಿ ಎರಡು ದಿನ ಸೊಪ್ಪಿನ ಸಾರು, ಹುಳಿ ಇದ್ದೇ ಇರುತ್ತದೆ. ಒಂದಿನ ಹಾಗಲಕಾಯಿ ಗೊಜ್ಜಿರುತ್ತದೆ. ಈಗ ಮಗು ಇರುವುದರಿಂದ ರಾತ್ರಿ ಸರಿ ನಿದ್ದೆ ಇರುವುದಿಲ್ಲ. ಅವಳ ಜೊತೆ ಹೆಚ್ಚು ಸಮಯ ಕಳೆಯಬೇಕು. ಅವಳ ಮೇಲೆ ಗಮನ ಇಡಬೇಕು. ಆಗ ನನಗಾಗಿ ಸಮಯ ಸಿಗುವುದೇ ಇಲ್ಲ.ನಿದ್ರೆ ಸರಿಯಾಗಿ ಆಗಿಲ್ಲ ಅಂದರೆ ದೇಹದ ರೋಗ ನಿರೋಧಕ
ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಈಗ ನವಣೆ, ಓಟ್ಸ್‌, ಬಾರ್ಲಿ, ರಾಜಮುಡಿ ಅಕ್ಕಿ, ಪನೀರ್‌, ಸೊಪ್ಪು, ತರಕಾರಿ, ಹಣ್ಣುಗಳನ್ನುಸೇವಿಸುತ್ತೇನೆ. ಇದರಲ್ಲಿ ಪ್ರೊಟೀನ್‌, ನಾರಿನಾಂಶ ಹೆಚ್ಚು ದೇಹಕ್ಕೆ ಸಿಗುತ್ತದೆ.

ಪಾಲಕ್‌, ಚೀಸ್‌ ಮಶ್ರೂಮ್‌

ಬೇಕಾಗುವ ಸಾಮಗ್ರಿಗಳು: 1/4 ಕಪ್‌ ಆಲಿವ್‌ ಎಣ್ಣೆ, 30 ಸ್ವಚ್ಛ ಮಾಡಿದ ಅಣಬೆ, 1 ಮೊಟ್ಟೆ, ಉಪ್ಪು, ಕಾಳುಮೆಣಸು ಪುಡಿ, ಸಣ್ಣದಾಗಿ ಹಚ್ಚಿದ ಬೆಳ್ಳುಳ್ಳಿ, ಸಣ್ಣದಾಗಿ ಕತ್ತರಿಸಿದ ಪಾಲಕ್‌ ಸೊಪ್ಪು 1 ಬಟ್ಟಲು, 1/4 ಕಪ್‌ ಪಾರ್ಮೆಸನ್‌ ಚೀಸ್‌, 1/4 ಕಪ್‌ ಗೌಡ್ಚೀಸ್‌, 1/4 ಬ್ರೆಡ್‌ ತುಂಡುಗಳು.

ಮಾಡುವ ವಿಧಾನ: 190 ಡಿಗ್ರಿ ಸೆಲ್ಸಿಯಸ್‌ನಲ್ಲಿ ಓವನ್‌ ಅನ್ನು ಬಿಸಿಮಾಡಿಕೊಂಡಿರಬೇಕು. ಪ್ಯಾನ್‌ಗೆ ಆಲಿವ್‌ ಎಣ್ಣೆ ಹಾಗೂ 30 ಅಣಬೆಗಳನ್ನು ಇಟ್ಟು, ಉಳಿದಿರುವ ಎಣ್ಣೆಯನ್ನು ಅಣಬೆಗಳ ಮೇಲೆ ಸುರಿಯಬೇಕು. ಇದನ್ನು ಸುಮಾರು 12 ನಿಮಿಷಗಳ ಕಾಲ ಅಣಬೆ ಕೆಂಪು ಬಣ್ಣ ಬರುವವರೆಗೂಬೇಯಿಸಬೇಕು. ಈಗ ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆ, ಉಪ್ಪು, ಬೆಳ್ಳುಳ್ಳಿಯನ್ನು ಮಿಶ್ರ ಮಾಡಿಕೊಳ್ಳಬೇಕು. ಇದಕ್ಕೆ ಕತ್ತರಿಸಿದ ಪಾಲಕ್‌ ಸೊಪ್ಪು,ಪಾರ್ಮೆಸನ್‌ ಚೀಸ್‌, ಗೌಡ್ಚೀಸ್‌, ಬ್ರೆಡ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈಗ ಓವನ್‌ನಿಂದ ಅಣಬೆಗಳನ್ನು ತೆಗೆದು, ಅದಕ್ಕೆ ಈ ಮಿಶ್ರಣವನ್ನು ಅದ್ದಬೇಕು. ಪುನಃ ಪಾತ್ರೆಯಲ್ಲಿಟ್ಟು, ಅದರ ಮೇಲೆ ಉಳಿದಿರುವ ಚೀಸ್‌ಗಳನ್ನು ತುರಿದು ಹಾಕಬೇಕು. ನಂತರ ಒವನ್‌ನಲ್ಲಿ 10 ನಿಮಿಷಗಳ ಕಾಲ ಬೇಯಿಸಿದರೆ ಪಾಲಕ್‌, ಚೀಸ್‌ ಮಶ್ರೂಮ್‌ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT