ಶುಕ್ರವಾರ, ಏಪ್ರಿಲ್ 3, 2020
19 °C

ಸಿದ್ದಪ್ಪನ ‘ಹಾಫ್ ದೋಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಂಬ ಜನರ ಬಾಯಲ್ಲಿ ಕೇಳಿದ್ದ ಹೆಸರು ‘ಸಿದ್ದಪ್ಪ ಹೋಟೆಲ್’!

ಈ ವಾರದ ತಿಂಡಿ ತಿನ್ನುವ ಹೋಟೆಲ್ ಎಂದು ಇದನ್ನೇ ಆಯ್ಕೆ ಮಾಡಿ, ಸಂಪಂಗಿರಾಮ ನಗರದಲ್ಲಿರುವುದನ್ನು ಖಾತ್ರಿ ಪಡಿಸಿಕೊಂಡು, ಹುಡುಕುತ್ತಾ ಹೋದೆವು. ಪಾರ್ಕಿಂಗ್ ಜಾಗ ಇಲ್ಲ. ಹಾಗಾಗಿ, ದೂರದಲ್ಲೇ ಕಾರ್ ನಿಲ್ಲಿಸಿ ಕೇಳುತ್ತಾ ಹೋದೆವು. ಹಳೇ ಬೆಂಗಳೂರಿನ ವಾತಾವರಣ, ದೇವಸ್ಥಾನದ ಪ್ರಾಂಗಣದ ನಡುವೆ ದೊಡ್ಡ ಅರಳಿ ಮರದ ಕೆಳಗೆ ನಿಂತ ದೊಡ್ಡ ಸಾಲು. ದೇವಸ್ಥಾನಕ್ಕೆ ಬಂದವರೇನೋ ಅಂದುಕೊಂಡರೆ, ಅದು ನಾವು ಹುಡುಕುತ್ತಿದ್ದ ಸಿದ್ದಪ್ಪನ ಹೋಟೆಲ್‌ಗೆ ನಿಂತಿರುವ ಕ್ಯೂ ಅಂತ ಗೊತ್ತಾಯಿತು.

ನಾವೂ ಕೂಡ ಆ ಸಾಲು ಸೇರಿಕೊಂಡೆವು. 1984ರಲ್ಲಿ ಆರಂಭವಾದ ಈ ಹೋಟೆಲ್‌ಗೆ ಸಿನೆಮಾ ತಾರೆಯರು, ದೊಡ್ಡ ಸೆಲೆಬ್ರಿಟಿಗಳೂ ಭೇಟಿ ಕೊಡುತ್ತಾರಂತೆ! ಬೆಳಗ್ಗೆ 8ರಿಂದ 11ಗಂಟೆಯವರೆಗೆ ಮಾತ್ರ (ಭಾನುವಾರ 7.30ರಿಂದ) ತೆರೆದುಕೊಳ್ಳುವ ಈ ಹೋಟೆಲ್ ಅಲ್ಲಿನ ಹಾಫ್ ದೋಸೆಗೆ ಫೇಮಸ್ ಅಂತ ಗೊತ್ತಾಯಿತು. ಒಂದು ಹಳೆಯ ಸಣ್ಣ ಮನೆಯ ಹಾಲ್‌ನಲ್ಲಿ ಕೂತು, ಆ ಮನೆಯವರೇ ಮಾಡಿ ಬಡಿಸುವ ಇಡ್ಲಿ, ಖಾಲಿ ದೋಸೆ, ತುಪ್ಪದ ಖಾಲಿ ದೋಸೆ, ರೈಸ್ ಬಾತ್, ಮಸಾಲಾ ದೋಸೆ ಇಷ್ಟೇ ಇಲ್ಲಿನ ಮೆನು.

ನಿಮಗೆ ಯಾವುದೋ ಹೋಟೆಲ್‌ನಲ್ಲಿ ತಿನ್ನುತ್ತಿದ್ದೇವೆ ಎನ್ನುವಂಥ ಫೀಲ್ ಕೂಡ ಬಾರದಂತೆ ಒತ್ತಾಯ ಮಾಡಿ ಬಡಿಸುವುದರ ಜೊತೆಗೆ ರೇಟು ಕೂಡ ನಿಮ್ಮ ಜೇಬಿಗೆ ಭಾರವಾಗದು (₹10ರಿಂದ ₹45 ರೂಪಾಯಿಗಳು ಮಾತ್ರ ). ಅಪ್ಪಟ ಮನೆಯ ರುಚಿಯ ತುಪ್ಪದ ಖಾಲಿ ದೋಸೆ, ಮೃದುವಾದ ಇಡ್ಲಿ, ಒಂದೊಂದೇ ಟ್ರೈ ಮಾಡಬಹುದು. ತಿಂದಿರುವುದು ತುಂಬಾ ಜಾಸ್ತಿ ಆಯಿತು ಆದರೂ ಮಸಾಲಾ ದೋಸೆ ಟ್ರೈ ಮಾಡ್ಬೇಕಿತ್ತು ಅನ್ನಿಸಿದರೆ, ಹಾಫ್ ದೋಸೆ ತಿನ್ನಬಹುದು. ಇದೇ ಇಲ್ಲಿಯ ಸ್ಪೆಷಾಲಿಟಿ! ಬಂದ ಜನರನ್ನು ವಾಪಸ್ಸು ಕಳಿಸಲಾಗದೆ ಹಾಫ್ ದೋಸೆ ರೂಢಿಗೆ ಬಂತಂತೆ. ಒಮ್ಮೆ ಟ್ರೈ ಮಾಡ್ಬೇಕು ಅನ್ನಿಸಿದ್ದಲ್ಲಿ ಅಶ್ವಥ್ ನಗರ, 7ನೇ ಬ್ಲಾಕ್, ಸಂಪಂಗಿರಾಮ ನಗರದಲ್ಲಿರುವ ಈ ಹೋಟೆಲ್‌ಗೆ ಭೇಟಿ ಕೊಡಿ.

–ಗಾಯತ್ರಿ ರಾಜ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು