ಮಂಗಳವಾರ, ನವೆಂಬರ್ 24, 2020
25 °C
ಕಳೆಗಿಡವೊಂದು ಅಡುಗೆ ಕಟ್ಟೆಯೇರಿದಾಗ....

PV Web Exclusive: ‘ತುರಿಕೆ ಗಿಡ’ದ ತರಹೇವಾರಿ ಅಡುಗೆ !

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕಳೆ ಗಿಡವೆಂಬ ಅನಾದರ, ಜತೆಗೆ ಮುಟ್ಟಿದರೆ ಮೈ ತುರಿಸುತ್ತದೆ ಎಂಬ ಭಯ ಇವೆರಡೂ ಒಗ್ಗೂಡಿ ತಿರಸ್ಕಾರಕ್ಕೊಳಗಾಗಿದ್ದ ಹಿತ್ತಲ ಗಿಡವೊಂದು ಸದ್ದಿಲ್ಲದೇ ಅಡುಗೆಮನೆಯ ಕಟ್ಟೆಯೇರಿದೆ. ಆರೋಗ್ಯಕ್ಕೆ ಹಿತ, ನಾಲಿಗೆಗೆ ರುಚಿಯಾಗುವ ಈ ಸಸ್ಯದ ಅಡುಗೆಗಳು ಮನೆಯಿಂದ ಮನೆಗೆ ಪಸರಿಸುತ್ತಿವೆ. ‘ಕಳೆ’ಯ ಮುಂಡಾಸ ಕಿತ್ತೊಗೆದು ‘ಸೂಪರ್ ಫುಡ್’ ಕಿರೀಟ ತೊಡುವ ತಯಾರಿಯಲ್ಲಿರುವ ಈ ಸಸ್ಯಯಾವುದೆಂಬ ಕುತೂಹಲವಾ? ಅದುವೇ ದಾರಿ ಬದಿಯಲ್ಲೆಲ್ಲ ಸೊಂಪಾಗಿ ಬೆಳೆದು ನಿಲ್ಲುವ ಕುಬ್ಜ ಸುಂದರಿ ‘ಪಂಚರಂಗಿ’.

ಮಣ್ಣು ಇದ್ದಲ್ಲೆಲ್ಲ ಚಿಗುರೊಡೆಯುವ ಈ ಸಸ್ಯವನ್ನು ಕಂಡರೆ ಮೂಗುಮುರಿಯುವುದು ಸಹಜ. ಕಿತ್ತೊಗೆಯಲು ಹೋದರೆ, ಕೈ ತುರಿಕೆಯಾಗುತ್ತದೆ. ಹಾಗೇ ಬಿಟ್ಟರೆ ಮತ್ತೆ ತನ್ನ ಸಂತತಿಯನ್ನು ಬೆಳೆಸುತ್ತದೆ. ಕಳೆ ಗಿಡಗಳ ಬಗ್ಗೆ ಕುತೂಹಲಿಯಾಗಿರುವ ಮಂಗಳೂರಿನ ಪಶುವೈದ್ಯ ಡಾ. ಮನೋಹರ ಉಪಾಧ್ಯ ಅವರು ತಾತ್ಸಾರಕ್ಕೊಳಗಾಗಿರುವ ಈ ಸಸ್ಯದ ಔಷಧೀಯ ಮೌಲ್ಯವನ್ನು ವ್ಯಾಪಕಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ಮಾಹಿತಿಗಾಗಿ ತಡಕಾಡುತ್ತಿರುವಾಗ ಪಂಚರಂಗಿಯ ಸೋದರ ಸಂಬಂಧಿ ಸಸ್ಯಗಳು ಉತ್ತರ ಭಾರತದ ಭಾಗಗಳಲ್ಲಿ ಔಷಧ ಸಸ್ಯವಾಗಿ, ಆಹಾರ ಪದಾರ್ಥವಾಗಿ ಬಳಕೆಯಾಗುತ್ತಿರುವ ಬಗ್ಗೆ ತಿಳಿದೆ. ನಮ್ಮೂರಿನ ಪಂಚರಂಗಿಗೂ ಅಲ್ಲಿ ಅಡುಗೆ, ಔಷಧಕ್ಕೆ ಬಳಸುವ ಸಸ್ಯಗಳಿಗೂ ಗುಣಧರ್ಮದಲ್ಲಿ ಸಾಮ್ಯತೆ ಇದ್ದಿದ್ದು ಕಂಡುಬಂತು. ಮುಟ್ಟಿದರೆ ತುರಿಕೆಯಾಗುವ ಈ ಗಿಡವನ್ನು ಹೇಗಾದರೂ ಅಡುಗೆಮನೆಗೆ ತರಬೇಕೆಂಬ ತುಡಿತ. ಹಪ್ಪಳ ಸುಡಲು ಬಳಸುವ ಚಿಮಟ ಹಾಗೂ ಕತ್ತರಿಯ ಸಹಾಯದಿಂದ ದಂಟುಸಹಿತ ಕುಡಿಗಳನ್ನು ಮುರಿದು, ಅಡುಗೆಮನೆಗೆ ತಂದಿದ್ದಾಯಿತು. ಮೊದಲು ಪಲ್ಯದ ಪ್ರಯೋಗ ಮಾಡಿದ್ದೂ ಆಯಿತು. ಹಾಗೆಯೇ ಒಂದೊಂದು ಹೊಸ ರುಚಿಯ ಪ್ರಯೋಗವೂ ನಡೆಯಿತು’ ಎನ್ನುತ್ತಾರೆ ಅವರು.

‘ಪಂಚರಂಗಿ’ಗೆ ಪ್ರಾದೇಶಿಕವಾಗಿ ಒಂದೊಂದು ಹೆಸರಿದೆ. ತುರುಸಣಿಗೆ, ತುರಿಕೆ ಗಿಡ, ಚೊಣಗಿ ಗಿಡ, ತುಳುವಿನಲ್ಲಿ ಆಕ್ಕಿರೇ–ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. Laportea interrupta, Urtica interrupta ಇದು ಸಸ್ಯ ಶಾಸ್ತ್ರೀಯ ಹೆಸರು. ಇದೇ ಕುಟುಂಬದ ಸಸ್ಯದಿಂದ ತಯಾರಿಸುವ ಸ್ಟಿಂಗಿಂಗ್ ನೆಟಲ್ (stinging nettle) ಪೌಡರ್ ಔಷಧವಾಗಿ ಬಳಕೆಯಾಗುತ್ತಿದೆ.

‘ವಿದೇಶಗಳಲ್ಲಿ ಇದೇ ತಳಿಯ ಸಸ್ಯಗಳನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಕೆ ಮಾಡುತ್ತಾರೆ. ಕೇರಳದಲ್ಲಿ ಪಂಚರಂಗಿ ಆಹಾರ ಸಸ್ಯಗಳ ಸಾಲಿನಲ್ಲಿದೆ. ನಮ್ಮಲ್ಲಿ ಪಂಚರಂಗಿ ‘ಕಳೆ’ಯಲ್ಲ, ಇದೊಂದು ‘ಕಳೆಯ ಬಾರದ’ ಸಸ್ಯ ಎಂಬುದು ಗೊತ್ತಾಗಬೇಕಾಗಿದೆ. ಈ ಸಸ್ಯದ ಎಲೆಯಿಂದ ತಂಬುಳಿ, ಚಟ್ನಿ, ಗೊಜ್ಜು, ಪಲ್ಯ, ಸಾಂಬಾರು, ಪತ್ರೊಡೆ, ದೋಸೆ–ಹೀಗೆ ಕೆಸು, ಹರಿವೆ, ನುಗ್ಗೆ ಸೊಪ್ಪಿನಿಂದ ಏನೆಲ್ಲವನ್ನು ಮಾಡಬಹುದೋ ಅವೆಲ್ಲವನ್ನೂ ತಯಾರಿಸಬಹುದು’ ಎಂಬುದು ಡಾ. ಮನೋಹರ ಅವರ ಅನುಭವ.

ಕಬ್ಬಿಣ, ಪೊಟಾಷಿಯಂ, ಕ್ಯಾಲ್ಸಿಯಂ, ಜೀವಸತ್ವಗಳು, ಗಂಧಕ, ಸೋಡಿಯಂ, ವಿಟಮಿನ್ ‘ಸಿ’ ಸಮೃದ್ಧವಾಗಿರುವ ಸಸ್ಯವಿದು. ಆದರೆ, ಇದರ ಬಳಕೆ ಇನ್ನೂ ಹಾಸುಹೊಕ್ಕಾಗಿಲ್ಲ. ಕಳೆಗಿಡವೆಂದಷ್ಟೇ ಇದು ಪ್ರಚಲಿತದಲ್ಲಿದೆ. ಬಳಕೆ ಮಾಡುತ್ತಿದ್ದವರಿಗೆ ಮಾತ್ರ ಇದರ ಪ್ರಯೋಜನ ಅರಿವಾಗಿದೆ. 

‘ಇದೊಂದು ಸೂಪರ್ ಫುಡ್‌ನಂತೆ. ಔಷಧ ಗುಣ ಹೊಂದಿರುವ ಇದರ ಸೇವನೆಯಿಂದ ಆಯಾಸ ಕಡಿಮೆಯಾಗುತ್ತದೆ ಎಂದು ಹಲವರು ಅನುಭವ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇದರ ಬಳಕೆಯಿಂದ ಮೈಕೈ ನೋವು, ಸಂದು ನೋವು ವಾಸಿಯಾಯಿತೆಂದಿದ್ದಾರೆ. ಹಸುವಿಗೆ ನೀಡಿದರೆ ಹಾಲು ಹೆಚ್ಚುತ್ತದೆ, ಗೊತ್ತಿಲ್ಲದೇ ಇಷ್ಟು ದಿನ ಕಳೆಯೆಂದು ಕಿತ್ತು ಬಿಸಾಡುತ್ತಿದ್ದೆವಲ್ಲ ಎಂದು ಕೆಲವರು ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ. ಒಣಗಿಸಿದ ಎಲೆಯ ಪುಡಿಯಿಂದ ಚಹಾ ಮಾಡಿ ಕುಡಿಯಬಹುದೆಂಬ ಅಭಿಪ್ರಾಯವೂ ಬಂದಿದೆ. ಅಡ್ಡ ಪರಿಣಾಮವಂತೂ ಇಲ್ಲವೇ ಇಲ್ಲ. ಬಳಕೆ ಹೆಚ್ಚುತ್ತ ಹೋದ ಹಾಗೆ ಅಚ್ಚರಿಗಳು ಅನಾವರಣಗೊಳ್ಳುತ್ತಿವೆ’ ಎಂದು ಪ್ರತಿಕ್ರಿಯೆಗಳ ಬಗ್ಗೆ ತಿಳಿಸುವ ಡಾ. ಉಪಾಧ್ಯ ಅವರ ಮುಖ್ಯ ಆಶಯವೆಂದರೆ ಇದು ಎಲ್ಲರ ಅಡುಗೆಮನೆಗಳಲ್ಲಿ ದಿನವೂ ಬಳಕೆಯಾಗಬೇಕೆಂಬುದಷ್ಟೇ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು