ಸೋಮವಾರ, ಆಗಸ್ಟ್ 2, 2021
24 °C

ಅನ್ನ, ಚಪಾತಿ ಮಿಕ್ಕಿದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮಧ್ಯಾಹ್ನ ಮಾಡಿದ ಅನ್ನ ಜಾಸ್ತಿ ಆಗಿಬಿಡ್ತು, ತಂಗಳನ್ನ ಅಂತ ಯಾರೂ ತಿನ್ನೋದಿಲ್ಲ, ಏನು ಮಾಡುವುದಪ್ಪಾ ಛೇ.. ರಾತ್ರಿ ಲಟ್ಟಿಸಿದ ಚಪಾತಿಯೂ 3–4 ಮಿಕ್ಕಿ ಬಿಡ್ತು, ಕಷ್ಟಪಟ್ಟು ಲಟ್ಟಿಸಿದ ಚಪಾತಿಯನ್ನು ಕಸದ ಜೊತೆ ಸೇರಿಸಬೇಕಲ್ಲ..’ ಹೀಗೆ ಮಿಕ್ಕಿದ ಆಹಾರದ ಕುರಿತ ಚಿಂತೆ ಬಹುತೇಕ ಪ್ರತಿ ಮನೆಯ ಮಹಿಳೆಯರನ್ನು ಒಂದಲ್ಲ ಒಂದು ಬಾರಿ ಕಾಡಿರುತ್ತದೆ. ಅದರಲ್ಲೂ ಈ ಕೋವಿಡ್‌ –19 ಕಾಲದಲ್ಲಿ, ಅತ್ಯಂತ ನಾಜೂಕಾಗಿ ಸಂಸಾರದ ಖರ್ಚನ್ನು ಸಾಗಿಸುತ್ತಿರುವಾಗ ಈ ರೀತಿ ಆಹಾರ ಹಾಳು ಮಾಡುವ ಮನಸ್ಸು ಯಾರಿಗೂ ಬಾರದು. ಹಾಗಂತ ಫ್ರಿಜ್‌ನಲ್ಲಿಟ್ಟು ಗಟ್ಟಿಯಾದ ಅನ್ನ, ಒರಟಾದ ಚಪಾತಿ, ತಣ್ಣನೆಯ ಇಡ್ಲಿ.. ತಿನ್ನುವ ಬದಲು ಅದನ್ನು ರುಚಿಕರ ತಿನಿಸಾಗಿ ಪರಿವರ್ತಿಸಿದರೆ ಹೇಗೆ? ಇದು ಪರಿಸರ, ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಿಂದಲೂ ಒಳ್ಳೆಯದು.

ಅನ್ನದಿಂದ...

ಮಿಕ್ಕಿದ ಅನ್ನದಿಂದ ಚಿತ್ರಾನ್ನ ತಯಾರಿಸುವುದು ಮಾಮೂಲು. ಹೆಚ್ಚೆಂದರೆ ಓವೆನ್‌ ಇದ್ದರೆ ಒಂಚೂರು ಬೆಚ್ಚಗೆ ಮಾಡಿ ಮೊಸರನ್ನ ತಯಾರಿಸಬಹುದು. ಆದರೆ ಅದರಿಂದ ತರಹೇವಾರಿ ತಿನಿಸು ತಯಾರಿಸಿ ಚಪ್ಪರಿಸಿಕೊಂಡು ಸವಿಯಬಹುದು ಗೊತ್ತೇ? ವಿವಿಧ ತರಕಾರಿಗಳು, ಮಸಾಲೆ ಸೇರಿಸಿ ವೆಜಿಟೇಬಲ್‌ ಫ್ರೈಡ್‌ ರೈಸ್‌ ಸಿದ್ಧಪಡಿಸಬಹುದು. ಅನ್ನ ಮಾಡುವ ಸಮಯವೂ ಉಳಿತಾಯ. ದೋಸೆ ಹಾಗೂ ಇಡ್ಲಿ ತಯಾರಿಸಬಹುದು. ಇದನ್ನು ನಾದಿಕೊಂಡು ಅಕ್ಕಿ ಹಿಟ್ಟು ಸೇರಿಸಿ ಕಲೆಸಿ ಅಕ್ಕಿ ಉಬ್ಬು ರೊಟ್ಟಿ (ಜೋಳದ ಭಕ್ರಿ ತರಹ) ತಯಾರಿಸಿ, ಕಾಯಿಚಟ್ನಿ ಜೊತೆ ಸವಿಯಬಹುದು.

ಅನ್ನವನ್ನು ಕೈಯಿಂದ ಮೆತ್ತಗೆ ಹಿಸುಕಿ. ಇದಕ್ಕೆ ಇಡ್ಲಿ ರವೆ, ಉಪ್ಪು ಸೇರಿಸಿ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿದರೆ ಕಡುಬು ಸಿದ್ಧ. ವೆಜ್‌ ಅಥವಾ ನಾನ್‌ವೆಜ್‌ ಕುರ್ಮಾ ಜೊತೆ ತಿಂದರೆ ಬೆಳಗಿನ ಉಪಾಹಾರದ ಚಿಂತೆ ಮುಗಿದಂತೆ.

ಸಂಜೆಯ ತಿಂಡಿಗೆ ಇದರ ಪಕೋಡ ಮಾಡಬಹುದು. ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಸೇರಿಸಿ. ಒಂಚೂರು ಚಿರೋಟಿ ರವೆ ಹಾಕಿ ಕಲೆಸಿ ಕರಿದರೆ ಸಂಜೆ ಸುರಿವ ಮಳೆಗೆ ಬಿಸಿ ಬಿಸಿ ಪಕೋಡ ಸಿದ್ಧವಾಗುತ್ತದೆ. ಇದೇ ಹಿಟ್ಟನ್ನು ಸ್ವಲ್ಪ ಬಿಸಿ ಮಾಡಿ ಕಟ್ಲೆಟ್‌ ಮಾಡಬಹುದು. ಇನ್ನು ಅನ್ನಕ್ಕೆ ಬೆಲ್ಲ, ಹಾಲು, ಏಲಕ್ಕಿ ಪುಡಿ ಸೇರಿಸಿ ಕುದಿಸಿದರೆ ಪಾಯಸ ಸಿದ್ಧ.

ಚಪಾತಿ ಉಳಿದರೆ...

ಮಿಕ್ಕಿದ ಚಪಾತಿಯಿಂದ ಚಿಪ್ಸ್‌ ತಯಾರಿಸಿ ಮೊಸರಿನಲ್ಲಿ ಅದ್ದಿ ತಿನ್ನಬಹುದು. ಟೋರ್ಟಿಲ್ಲಾ ತರಹ ಕ್ವೆಸಾಡಿಲ್ಲಾ ಮಾಡಬಹುದು. ಲಕೋಟೆ ತರಹ ಮಡಚಿ ಒಳಗೆ ಆಲೂಗಡ್ಡೆ ಪಲ್ಯ ತುಂಬಿಸಿ ತವಾದ ಮೇಲೆ ಬಿಸಿ ಮಾಡಿದರೆ ಈ ಮೆಕ್ಸಿಕನ್‌ ತಿನಿಸು ಸಿದ್ಧ. ಹಾಗೆಯೇ ಮೋಮೊ, ಚಿವ್ಡಾ ತಯಾರಿಸಿ ಸಂಜೆಯ ತಿಂಡಿಯಾಗಿ ತಿನ್ನಬಹುದು. ಮೊಟ್ಟೆ ಪ್ರಿಯರಾದರೆ, ಚಪಾತಿಯನ್ನು ತವಾದ ಮೇಲೆ ಬಿಸಿ ಮಾಡಿ ಮೇಲೆ ಹಸಿ ಮೊಟ್ಟೆಯನ್ನು ಒಡೆದು ಹಾಕು. ಬೆಂದ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಸಿಂಪಡಿಸಿ, ಟೊಮೆಟೊ ಕೆಚಪ್‌ ಹಾಕಿಕೊಂಡು ತಿನ್ನಬಹುದು. ಒಣಗಿದ ಚಪಾತಿ ಚೂರು ಮಾಡಿ ಅದಕ್ಕೆ ಒಡೆದ ಮೊಟ್ಟೆ ಹಾಕಿ, ಈರುಳ್ಳಿ, ಟೊಮೆಟೊ ಚೂರುಗಳನ್ನು ಸೇರಿಸಿ ಬೇಯಿಸಿದರೆ ಮೊಟ್ಟೆ ಬುರ್ಜಿ ಸಿದ್ಧ.

ಗಮನಿಸಿ: ಅನ್ನ ಹೊರಗಡೆ ಎರಡು ತಾಸು ಮಾತ್ರ ತಾಜಾ ಇರುತ್ತದೆ. ನಂತರ ಬ್ಯಾಕ್ಟೀರಿಯ ತನ್ನ ಕೆಲಸ ಆರಂಭಿಸಿಬಿಡುತ್ತದೆ. ಹೀಗಾಗಿ ಸ್ಟೀಲ್‌ ಅಥವಾ ಗಾಜಿನ ಡಬ್ಬಿಯಲ್ಲಿಟ್ಟು ಫ್ರಿಜ್‌ನಲ್ಲಿಡಿ. 24 ಗಂಟೆಯೊಳಗೆ ಮತ್ತೆ ಬಿಸಿ ಮಾಡಿ. ಆದರೆ ಒಂದಕ್ಕಿಂತ ಹೆಚ್ಚು ಸಲ ಬಿಸಿ ಮಾಡಬೇಡಿ. ಬಿಸಿ ಮಾಡುವಾಗ ಒಂದು ಚಮಚ ನೀರು ಸಿಂಪಡಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು