ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿಪರೀಕ್ಷೆ ದಿಕ್ಸೂಚಿ: ವಿದ್ಯುತ್ ಜನಕ (ಪರ್ಯಾಯ)

Last Updated 24 ಫೆಬ್ರುವರಿ 2021, 16:31 IST
ಅಕ್ಷರ ಗಾತ್ರ

ಭೌತಶಾಸ್ತ್ರ

ವಿದ್ಯುತ್ಕಾಂತೀಯ ಪ್ರೇರಣೆಯ ವಿದ್ಯಮಾನದ ಆಧಾರದ ಮೇಲೆ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವನ್ನು ವಿದ್ಯುತ್ ಜನಕ ಎನ್ನುವರು.

ತಿರುಗುವ ಆಯತಾಕಾರದ ಸುರುಳಿ ABCD ಯನ್ನು ಕಾಂತದ ಎರಡು ಧ್ರುವಗಳ ನಡುವೆ ಇರಿಸಲಾಗುತ್ತದೆ. ಸುರುಳಿಯ ಎರಡು ತುದಿಗಳನ್ನು ಉಂಗುರಗಳು R1 ಮತ್ತು R2 ಗೆ ಜೋಡಿಸಲಾಗುತ್ತದೆ.

ಈ ಉಂಗುರಗಳನ್ನು ಸ್ಥಿರವಾದ ವಾಹಕ ಕುಂಚಗಳಾದ B1 ಮತ್ತು B2ಗಳಿಗೆ ಕ್ರಮವಾಗಿ ಜೋಡಿಸಲಾಗಿದೆ. R1 ಮತ್ತು R2ಗಳನ್ನು ಆಂತರಿಕವಾಗಿ ದಂಡಕ್ಕೆ ಜೋಡಿಸಲಾಗುತ್ತದೆ. ಕಾಂತ ಕ್ಷೇತ್ರದೊಳಗೆ ಸುರುಳಿ ತಿರುಗಿಸುವಂತೆ ಮಾಡಲು ದಂಡವನ್ನು ಯಾಂತ್ರಿಕವಾಗಿ ಹೊರಗಿನಿಂದ ತಿರುಗಿಸುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ವಿದ್ಯುತ್ ಪ್ರವಾಹವನ್ನು ಗುರುತಿಸಲು ಕುಂಚಗಳನ್ನು ಗೆಲ್ವನೋಮೀಟರ್‌ಗೆ ಜೋಡಿಸಲಾಗಿದೆ.

ಕಾರ್ಯ

ದಂಡವನ್ನು ಪ್ರದಕ್ಷಿಣೆಯಾಗಿ ತಿರುಗಿಸಿದಾಗ ಸುರುಳಿಯ ಬಾಹು AB ಯು ಮೇಲಕ್ಕೆ ಚಲಿಸುತ್ತದೆ ಮತ್ತು ಬಾಹು CD ಯು ಕೆಳಕ್ಕೆ ಚಲಿಸುತ್ತದೆ. ಫ್ಲೆಮಿಂಗ್‌ನ ಬಲಗೈ ನಿಯಮದ ಪ್ರಕಾರ ಪ್ರೇರಿತ ವಿದ್ಯುತ್ ಪ್ರವಾಹವು AB ಮತ್ತು CD ದಿಕ್ಕಿನ ಮೂಲಕ ಪ್ರವಹಿಸಲಾರಂಭಿಸುತ್ತದೆ. ಹೀಗಾಗಿ ಪ್ರೇರಿತ ವಿದ್ಯುತ್ ಪ್ರವಾಹವು ABCD ದಿಕ್ಕಿನಲ್ಲಿ ಪ್ರವಹಿಸುತ್ತದೆ. ಬಾಹ್ಯ ಮಂಡಲದಲ್ಲಿ ಪ್ರವಾಹವು B2 ನಿಂದ B1 ಕಡೆಗೆ ಪ್ರವಹಿಸುತ್ತದೆ. ಅರ್ಧ ಸುತ್ತಿನ ನಂತರ ಬಾಹು CD ಯು ಮೇಲ್ಮುಖವಾಗಿಯೂ ಬಾಹು AB ಯು ಕೆಳಮುಖವಾಗಿಯೂ ಚಲಿಸುವುದರಿಂದ ಪ್ರೇರಿತ ವಿದ್ಯುತ್ ಪ್ರವಾಹವು DCBA ದಿಕ್ಕಿನಲ್ಲಿ ಪ್ರವಹಿಸುತ್ತದೆ ಮತ್ತು ಬಾಹ್ಯ ಮಂಡಲದಲ್ಲಿ B1ನಿಂದ B2 ಕಡೆಗೆ ಪ್ರವಹಿಸುತ್ತದೆ. ಈ ಕ್ರಿಯೆಯಲ್ಲಿ ವಿದ್ಯುತ್ ಪ್ರವಾಹದ ಧ್ರುವೀಯತೆಯು ಸಮಯದ ಸಮಾನ ಕಾಲಾವಧಿಗಳ ನಂತರ ಬದಲಾಗುತ್ತಿದ್ದು ಇದನ್ನು ಪರ್ಯಾಯ ವಿದ್ಯುತ್ ಪ್ರವಾಹವೆಂತಲೂ ಈ ಸಾಧನವನ್ನು ಪರ್ಯಾಯ ವಿದ್ಯುತ್ ಜನಕ ಎಂತಲೂ ಕರೆಯುತ್ತಾರೆ.

ನೇರ ವಿದ್ಯುತ್ ಜನಕ

ಸಮಯದ ಸಮಾನ ಕಾಲಾವಧಿಯಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದ ವಿದ್ಯುತ್ ಪ್ರವಾಹವನ್ನು ನೇರ ವಿದ್ಯುತ್ ಪ್ರವಾಹವೆಂದು ಕರೆಯುತ್ತಾರೆ. ನೇರ ವಿದ್ಯುತ್ ಜನಕಗಳಲ್ಲಿ ಒಡಕು ಉಂಗುರಗಳನ್ನು ದಿಕ್ಪರಿವರ್ತಕಗಳಾಗಿ ಉಪಯೋಗಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಒಂದು ಕುಂಚವು ಯಾವಾಗಲೂ ಕಾಂತಕ್ಷೇತ್ರದ ಮೇಲ್ಮುಖವಾಗಿ ಚಲಿಸುತ್ತಿರುವ ಬಾಹುವಿನೊಂದಿಗೆ ಸಂಪರ್ಕದಲ್ಲಿದ್ದರೆ ಇನ್ನು ಕುಂಚವು ಯಾವಾಗಲೂ
ಕೆಳಮುಖವಾಗಿ ಚಲಿಸುತ್ತಿರುವ ಬಾಹುವಿನೊಂದಿಗೆ ಸಂಪರ್ಕದಲ್ಲಿರುತ್ತದೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಒಂದೇ ದಿಕ್ಕಿನಲ್ಲಿ ಪ್ರವಹಿಸುವ ವಿದ್ಯುತ್ ಪ್ರವಾಹ ಉತ್ಪತ್ತಿಯಾಗುತ್ತದೆ.

ಗೃಹಬಳಕೆಯ ವಿದ್ಯುತ್ ಮಂಡಲಗಳು

ವಿದ್ಯುತ್ ಪೂರೈಕೆಯಲ್ಲಿನ ತಂತಿಗಳಲ್ಲಿ ಸಾಮಾನ್ಯವಾಗಿ ಕೆಂಪು ಅವಾಹಕ ಹೊದಿಕೆಯನ್ನು ಸಜೀವ ತಂತಿ (ಧನಾತ್ಮಕ) ಎಂದು ಹಾಗೂ ಕಪ್ಪು ಅವಾಹಕ ಹೊದಿಕೆಯನ್ನು ಹೊಂದಿರುವ ತಂತಿಯನ್ನು ತಟಸ್ಥ ತಂತಿ (ಋಣಾತ್ಮಕ) ಎಂದು ಕರೆಯುವರು.

ಸಾಮಾನ್ಯವಾಗಿ ಮನೆಗಳಲ್ಲಿ ಪ್ರತ್ಯೇಕ ಎರಡು ರೀತಿಯ ವಿದ್ಯುನ್ಮಂಡಲಗಳನ್ನು ಬಳಸಲಾಗುತ್ತಿದ್ದು ಒಂದು 15A ವಿದ್ಯುತ್ ಪ್ರವಾಹ ಪ್ರವಹಿಸುವ ಮಂಡಲಗಳಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳ ಗೀಸರ್‌ಗಳು, ಕೂಲರ್‌ಗಳು ಮತ್ತು ತಂಪುಕಾರಗಳನ್ನು ಜೋಡಿಸಲಾಗುತ್ತದೆ ಇನ್ನೊಂದು 5A ವಿದ್ಯುತ್ ಪ್ರವಾಹ ಪ್ರವಹಿಸುವ ಮಂಡಲಗಳಲ್ಲಿ ಕಡಿಮೆ ಸಾಮರ್ಥ್ಯವುಳ್ಳ ಬಲ್ಪ್, ಫ್ಯಾನ್ ಇತ್ಯಾದಿಗಳನ್ನು ಬಳಸಲಾಗುತ್ತದೆ.

ಭೂ ಸಂಪರ್ಕ ತಂತಿ

ಇದು ಕಡಿಮೆ ರೋಧವನ್ನು ಹೊಂದಿರುವ ಭೂ ಸಂಪರ್ಕಕ್ಕೆ ಪಥವನ್ನು ಉಂಟು ಮಾಡುವ ಸಂಪರ್ಕವಾಗಿದೆ. ಇದು ಲೋಹಗಳ ಮೇಲ್ಮೈಗೆ ಸಂಪರ್ಕವನ್ನು ಮಾಡಲಾಗಿದ್ದು, ಉಪಕರಣಕ್ಕೆ ಯಾವುದೇ ರೀತಿಯ ಹೆಚ್ಚಿನ ವಿದ್ಯುತ್ ಸೋರಿಕೆಯಾದಲ್ಲಿ ಅದರ ವಿಭವಾಂತರವನ್ನು ಭೂಮಿಯ ವಿಭವಾಂತರಕ್ಕೆ ಸಮನಾಗಿ ಉಪಕರಣವನ್ನು ಆಘಾತದಿಂದ ಸಂರಕ್ಷಿಸುತ್ತದೆ.

ವಿದ್ಯುತ್ ಫ್ಯೂಸ್

ವಿದ್ಯುನ್ಮಂಡಲದಲ್ಲಿ ಹ್ರಸ್ವ ಮಂಡಲವಾದಾಗ ವಿದ್ಯುತ್ ಫ್ಯೂಸ್ ಜೌಲ್‌ನ ತಾಪದಿಂದ ಕರಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಉಪಕರಣಗಳು ಆಘಾತದಿಂದ ಸುರಕ್ಷಿತವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT