ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಳೆ ಸವೆಯುವ ಹೊತ್ತಲ್ಲಿ...

Last Updated 8 ಸೆಪ್ಟೆಂಬರ್ 2018, 9:57 IST
ಅಕ್ಷರ ಗಾತ್ರ

ಮನೆಯೊಳಗೇ ಮ್ಯಾರಥಾನ್‌ ಓಡುವುದು ಮಹಿಳೆಯ ದಿನಚರಿಯ ಭಾಗ. ಅವಳು ಓಡದಿದ್ದರೆ ಮನೆ ಮಂದಿಯ ದಿನಚರಿ ಏರುಪೇರು ಆಗುತ್ತದೆ. ನವಲತ್ತು ದಾಟಿದರೆ ಅವಳ ಓಟಕ್ಕೆ ದೇಹ ಸ್ಪಂದಿಸುತ್ತಿಲ್ಲ. ಎಲ್ಲೋ ಮೂಳೆ ಛಳಕ್‌ ಅನ್ನುತ್ತದೆ. ಇನ್ನೆಲ್ಲೋ ಜಡತ್ವ. ಭುಜದಿಂದ ಬೆರಳಿನವರೆಗೂ ಸಣ್ಣಪುಟ್ಟ ಸ್ನಾಯುಗಳೂ, ನರನಾಡಿಗಳೂ ಮುಷ್ಕರ ಹೂಡಿದ ಭಾವ. ನಲವತ್ತು ದಾಟಿದರೆ ನಲವತ್ತು ಸಂಕಟ ಎಂದು ಆಕೆ ನೋವನ್ನೆಲ್ಲ ನಗುವಿನಲ್ಲಿ ತೇಲಿಬಿಡುತ್ತಾಳೆ.

ವ್ಯಕ್ತಿ, ವ್ಯಕ್ತಿತ್ವದಂತೆಯೇ ದೇಹವೂ ಮಾಗುವ ನಡುವಯಸ್ಸಿನ ಕೊಡುಗೆಗಳಿವು. ಯಂತ್ರಗಳನ್ನು, ವಾಹನಗಳನ್ನು ಕಾಲಕಾಲಕ್ಕೆ ‘ಸರ್ವಿಸಿಂಗ್‌’ ಮಾಡಿಸುವಂತೆ ನಮ್ಮ ದೇಹದ ಸ್ನಾಯು, ಮೂಳೆಗಳೆಂಬ ಬಿಡಿಭಾಗಗಳಿಗೂ ‘ಸರ್ವಿಸಿಂಗ್‌’ ಬೇಕು. ಮಾಡಿಸಲು ಪುರುಸೊತ್ತಿಲ್ಲ ಎಂದು ವಿಳಂಬಿಸಿದರೆ ಅಲ್ಲಿ ಇಲ್ಲಿ ಛಳಕ್‌ ಎಂಬ ಏಟು ಅನುಭವಿಸಬೇಕು.

ನಡುವಯಸ್ಸಿನಲ್ಲಿ ಮೂಳೆ ಸವೆತದಿಂದಾಗಿ ದೇಹದಲ್ಲಿ ಸಣ್ಣಪುಟ್ಟ ಮುಷ್ಕರಗಳು ನಡೆಯುತ್ತವೆ. ಬಹುತೇಕ ಮುಷ್ಕರಗಳಿಗೆ ಸತ್ವಯುತ ಆಹಾರ ಸೇವನೆಯ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಪೌಷ್ಟಿಕ ಆಹಾರ, ಒಂದಿಷ್ಟು ವ್ಯಾಯಾಮ, ಮನಸ್ಸಿಗೂ ಮುದ ನೀಡುವ ಚಟುವಟಿಕೆಯೇ ಅತ್ಯುತ್ತಮ ಚಿಕಿತ್ಸೆಯಾದೀತು.

ಮೂಳೆ ಸವೆತ ಆಗದಂತೆ ಮುನ್ನೆಚ್ಚರಿಕೆ ವಹಿಸಲೂ, ಸವೆತವನ್ನು ನಿಯಂತ್ರಿಸಲೂ ಬೇಕಾಗಿರುವ ಅಂಶಗಳನ್ನು ಆಹಾರದ ಮೂಲಕ ದೇಹಕ್ಕೆ ಪೂರೈಸಬೇಕು. ಕ್ಯಾಲ್ಸಿಯಂ, ಮೆಗ್ನೇಸಿಯಂ, ವಿಟಮಿನ್‌ ಸಿ, ಕೆ ಮತ್ತು ಪ್ರೊಟೀನ್‌ ಸಮೃದ್ಧವಾಗಿರುವ ಆಹಾರ ಸೇವನೆ ಅಗತ್ಯ. ಈ ನಿಟ್ಟಿನಲ್ಲಿ ಹಾಲು, ಬೆಣ್ಣೆ, ಚೀಸ್‌ನಂತಹ ಹಾಲಿನ ಉತ್ಪನ್ನಗಳ ಸೇವನೆ ಅತ್ಯವಶ್ಯ.

ಎಲೆಕೋಸು (ಕ್ಯಾಬೇಜ್‌), ಹೂಕೋಸು (ಕಾಲಿಫ್ಲವರ್‌), ದೊಣ್ಣೆ ಮೆಣಸಿನಕಾಯಿ, ಅಲೂಗಡ್ಡೆ, ಸಿಹಿ (ಕೆಂಪು) ಗೆಣಸು ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್‌ ಸಿ ಹೊಂದಿರುತ್ತದೆ. ವಿಟಮಿನ್‌ ಸಿ (ಸಿಟ್ರಸ್‌) ಸಮೃದ್ಧವಾಗಿರುವ ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ, ಗಜನಿಂಬೆಯಂತಹ ನಿಂಬೆ ಜಾತಿಯ ಹಣ್ಣುಗಳ ಸೇವನೆ ಸಹಕಾರಿ. 100 ಗ್ರಾಂ ನೆಲ್ಲಿಕಾಯಿಯಲ್ಲಿ ಅಂದಾಜು 28 ಮಿ.ಗ್ರಾಂ ನಷ್ಟು ವಿಟಮಿನ್‌ ಸಿ ಸಿಗುತ್ತದೆ. ವಿಟಮಿನ್‌ ಎ, ಪೊಟ್ಯಾಸಿಯಂ, ಒಮೆಗಾ3 ಮತ್ತು ನಾರಿನಂಶ ಇರುತ್ತದೆ. ಈ ಸಾಲಿನಲ್ಲಿ ಲೀಚಿ ಮತ್ತು ಕಿವಿ ಹಣ್ಣುಗಳೂ ಸೇರುತ್ತವೆ.

ಪೇರಲೆ ಅಥವಾ ಸೀಬೆ ಹಣ್ಣುಗಳನ್ನು ನಿಯಮಿತವಾಗಿ ತಿನ್ನುತ್ತಿದ್ದರೆ ಮೂಳೆಗಳ ಶಕ್ತಿವರ್ಧನೆಯಾಗುತ್ತದೆಯಂತೆ. ಕೊತ್ತಂಬರಿ ಸೊಪ್ಪನ್ನು ಹೋಲುವ ಪಾರ್ಸ್ಲಿ ಸೊಪ್ಪು ಕೂಡಾ ವಿಟಮಿನ್‌ ಸಿ ಯಿಂದ ಸಮೃದ್ಧವಾಗಿರುತ್ತದೆ.

ಒಂದು ಕಪ್‌ ಪಪ್ಪಾಯಿ ಹಣ್ಣು ಸೇವಿಸಿದರೆ ಆ ದಿನಕ್ಕೆ ಬೇಕಾದ ವಿಟಮಿನ್‌ ಸಿಯನ್ನು ದೇಹಕ್ಕೆ ಪೂರೈಸಿದಂತಾಗುತ್ತದೆ. ಸ್ಟ್ರಾಬೆರಿ, ಪಪ್ಪಾಯಿ, ಕಿವಿ, ಲೀಚಿ, ಕಿತ್ತಳೆ, ಮೂಸಂಬಿ, ಅನಾನಸು ಹಣ್ಣುಗಳ ಸಲಾಡ್‌ ಸೇವಿಸುತ್ತಿದ್ದರೆ ಮೂಳೆಗಳ ತೊಂದರೆ ಕಾಣಿಸಿಕೊಳ್ಳದು.

ಪಥ್ಯಾಹಾರದ ಶೋಕಿಯಲ್ಲಿ ಕಡಿಮೆ ಕ್ಯಾಲೊರಿಯುಳ್ಳ ಆಹಾರಗಳನ್ನು ಸೇವಿಸುವುದು ಸೂಕ್ತವಲ್ಲ ಎಂಬುದು ವೈದ್ಯರ ಕಿವಿಮಾತು. ಆರೋಗ್ಯಕರವಾಗಿರಲು ಮಹಿಳೆಯರು ದಿನವೊಂದಕ್ಕೆ 1,200 ಕ್ಯಾಲೊರಿಗಳನ್ನು ಸತ್ವಯುತ ಆಹಾರಗಳ ಮೂಲಕ ದೇಹಕ್ಕೆ ಪೂರೈಸುವುದು ಅಗತ್ಯ. ಈ ಪ್ರಮಾಣ ಕಡಿಮೆಯಾದರೆ ಮೂಳೆಯ ಸಾಂದ್ರತೆ ಮೇಲೆ ಅಡ್ಡಪರಿಣಾಮ ಉಂಟಾಗುತ್ತದೆ.

ವಿಟಮಿನ್‌ ಸಿ ಜೊತೆಗೆ ವಿಟಮಿನ್‌ ಡಿ, ಎ, ಮೆಗ್ನೇಸಿಯಂ, ಕಾರ್ಬೊನೇಟ್‌, ಸತುವಿನ ಅಂಶಗಳೂ ಸಮೃದ್ಧವಾಗಿರುವಂತೆ ನೋಡಿಕೊಂಡರೆ ನಡುವಯಸ್ಸಿನಲ್ಲಿಯೂ ಮಹಿಳೆಯರು ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT