ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೀಡಿತರಿಗೆ ಮತ್ತೊಂದು ಶಿಲೀಂಧ್ರ ಸೋಂಕು, ಏನಿದು ಆಸ್ಪರ್‌ಜಿಲ್ಲೋಸಿಸ್?

Last Updated 28 ಮೇ 2021, 11:09 IST
ಅಕ್ಷರ ಗಾತ್ರ

ವಡೋದರ: ಕೋವಿಡ್–19 ಪೀಡಿತರಿಗೆ ಶಿಲೀಂಧ್ರದಿಂದ ಉಂಟಾಗುವ ಮತ್ತೊಂದು ಸೋಂಕು (ಆಸ್ಪರ್‌ಜಿಲ್ಲೋಸಿಸ್) ತಗುಲಿರುವ ಬಗ್ಗೆ ವರದಿಯಾಗಿದೆ.

ಗುಜರಾತ್‌ನ ವಡೋದರ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ 8 ಮಂದಿ ಸೋಂಕಿತರಿಗೆ ‘ಆಸ್ಪರ್‌ಜಿಲ್ಲೋಸಿಸ್’ ಸೋಂಕು ತಗುಲಿರುವುದು ತಿಳಿದುಬಂದಿದೆ.

ವಡೋದರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ 262 ಮ್ಯೂಕರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ) ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 8 ಮಂದಿಗೆ ‘ಆಸ್ಪರ್‌ಜಿಲ್ಲೋಸಿಸ್’ ಸೋಂಕು ತಗುಲಿರುವುದು ಕಳೆದ ವಾರ ಪತ್ತೆಯಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಕೋವಿಡ್‌ ಸೋಂಕಿನ ಎರಡನೇ ಅಲೆ ತೀವ್ರಗೊಂಡ ಬಳಿಕ ದೇಶದಲ್ಲಿ ಹಲವು ಶಿಲೀಂಧ್ರ ಸೋಂಕುಗಳು ವರದಿಯಾಗುತ್ತಿವೆ. ಕೋವಿಡ್‌ನಿಂದ ಚೇತರಿಸಿಕೊಂಡ ಹಲವರಲ್ಲಿ ಮ್ಯೂಕರ್‌ಮೈಕೊಸಿಸ್, ಬಿಳಿ ಶಿಲೀಂಧ್ರ, ಹಳದಿ ಶಿಲೀಂಧ್ರ ಸೋಂಕು ಪತ್ತೆಯಾಗಿವೆ. ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ಸ್ಟೆರಾಯ್ಡ್ ಬಳಕೆಯಿಂದ ರೋಗ ನಿರೋಧಕ ಶಕ್ತಿ ಕುಂದುವಿಕೆ, ಮಧುಮೇಹ ಮತ್ತು ಆಮ್ಲಜನಕ ಸಿಲಿಂಡರ್‌ಗಳ ಅಸಮರ್ಪಕ ಬಳಕೆಯಿಂದ ಈ ಶಿಲೀಂಧ್ರ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದಾದ್ಯಂತ ಗಾಳಿ ಮತ್ತು ಮಣ್ಣಿನಲ್ಲಿ ಕಂಡುಬರುವ ‘ಆಸ್ಪರ್‌ಜಿಲ್ಲಸ್’ ಎಂಬ ಶಿಲೀಂಧ್ರದಿಂದ ‘ಆಸ್ಪರ್‌ಜಿಲ್ಲೋಸಿಸ್’ ಸೋಂಕು ತಗಲುತ್ತದೆ. ಈ ಶಿಲೀಂಧ್ರವು ಹೆಚ್ಚಾಗಿ ನಿರುಪದ್ರವಿಯಾಗಿದ್ದರೂ, ಇದರ ಕೆಲವು ಪ್ರಭೇದಗಳು ಸರಳವಾದ ಅಲರ್ಜಿ ಪ್ರತಿಕ್ರಿಯೆಗಳಿಂದ ತೊಡಗಿ ಮಾರಣಾಂತಿಕ ಕಾಯಿಲೆವರೆಗೆ ಹಲವು ನಮೂನೆಯ ಸೋಂಕಿಗೆ ಕಾರಣವಾಗಬಲ್ಲದು ಎನ್ನಲಾಗಿದೆ.

ಸೋಂಕಿನ ಲಕ್ಷಣಗಳೇನು?

* ಮೂಗಿನಲ್ಲಿ ನೀರು ಸ್ರವಿಸುವುದು

* ಮೂಗು ಕಟ್ಟುವಿಕೆ

* ಜ್ವರ

* ಮುಖ ನೋವು, ತಲೆನೋವು

ಮಿದುಳಿಗೂ ಹರಡಬಲ್ಲದು

ಮೂಗಿನ ಸೈನಸ್‌ಗಳಲ್ಲಿ ಕಂಡುಬರುವ ‘ಆಸ್ಪರ್‌ಜಿಲ್ಲೋಸಿಸ್’ ಸೋಂಕು ಮಿದುಳಿಗೂ ಹರಡಬಲ್ಲದು. ಕೆಲವೊಮ್ಮೆ ಮುಖದ ಭಾಗದಲ್ಲಿರುವ ಮೂಳೆಗಳ ಮೇಲೂ ಹಾನಿ ಉಂಟುಮಾಡಬಲ್ಲದು.

ಚಿಕಿತ್ಸೆ ಹೇಗೆ?

ಸದ್ಯ ದೇಶದಲ್ಲಿ ಇತರ ಎಲ್ಲ ಶಿಲೀಂಧ್ರ ಸಂಬಂಧಿ ಸೋಂಕುಗಳಿಗೆ ಬಳಸುವ ‘ಆಂಫೊಟೆರಿಸಿನ್ ಬಿ' ಔಷಧವನ್ನೇ ‘ಆಸ್ಪರ್‌ಜಿಲ್ಲೋಸಿಸ್’ ಚಿಕಿತ್ಸೆಯಲ್ಲೂ ಉಪಯೋಗಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT