ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಳಿಕೆ : ಹಿರಿಯ ರೋಗಿಗಳಿಗೆ ಅಪಾಯವೇ?

Last Updated 11 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ನೋವಾಗದಂತೆ ತಡೆಯುವ ಅರಿವಳಿಕೆ (ಜನರಲ್‌ ಅನಸ್ತೇಶಿಯ) ವೈದ್ಯಲೋಕಕ್ಕೆ ಒಂದು ವರದಾನ ಎನ್ನಬಹುದು. ವೈದ್ಯಕೀಯವಾಗಿ ರೋಗಿಗೆ ಭರಿಸುವ ಈ ಒಂದು ರೀತಿಯ ಕೋಮಾ ತಾತ್ಕಾಲಿಕ. ರೋಗಿಗೆ ಜ್ಞಾನ ತಪ್ಪಿಸುವ ಈ ಔಷಧವನ್ನು ಸಾಮಾನ್ಯವಾಗಿ ಐವಿ ಮೂಲಕ ಅಥವಾ ಉಸಿರಾಟದ ಮೂಲಕ ಹಾಕುವ ಪದ್ಧತಿಗಳಿವೆ. ಹಲ್ಲಿನ ಚಿಕಿತ್ಸೆಗೆ ಬಳಸುವಂತಹ ಲೋಕಲ್‌ ಅರಿವಳಿಕೆಯನ್ನು ಚುಚ್ಚುಮದ್ದಿನ ಮೂಲಕ ಕೊಡಲಾಗುವುದು.

1842ರಲ್ಲಿ ಕ್ರಾಫರ್ಡ್‌ ಲಾಂಗ್‌ ಎಂಬಾತ ಡೈಇಥೈಲ್‌ ಈಥರ್‌ ಅನ್ನು ರೋಗಿಯ ಮೇಲೆ ಪ್ರಯೋಗಿಸಿ ನೋವಿಲ್ಲದಂತೆ ಶಸ್ತ್ರಕ್ರಿಯೆ ಮಾಡುವಲ್ಲಿ ಯಶಸ್ವಿಯಾದ. ಆದರೆ ಇದನ್ನು ಲಾಂಗ್‌ ಬಹಿರಂಗಪಡಿಸಲಿಲ್ಲ. ಹೀಗಾಗಿ 1946ರ ಅಕ್ಟೋಬರ್‌ 16ರಂದು ಬಾಸ್ಟನ್‌ನಲ್ಲಿ ದಂತವೈದ್ಯ ಡಾ.ವಿಲಿಯಂ ಥಾಮಸ್‌ ಮಾರ್ಟನ್‌ ಡೈಇಥೈಲ್‌ ಬಳಸಿ ನೋವಿಲ್ಲದ ಶಸ್ತ್ರಚಿಕಿತ್ಸೆ ನಡೆಸುವುದನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸಿದ.

ರೋಗಿಯ ಚಲನವಲನಕ್ಕೆ ತಡೆ ಹಾಕುವುದು, ಜ್ಞಾನ ತಪ್ಪಿಸುವುದು, ಒತ್ತಡದಿಂದ ರೋಗಿಯು ನೀಡುವ ಪ್ರತಿಕ್ರಿಯೆಯನ್ನು ಅಂದರೆ ರಕ್ತದೊತ್ತಡ ಹಾಗೂ ಎದೆ ಬಡಿತದ ಏರಿಕೆ ನಿಯಂತ್ರಿಸುವುದು ಅರಿವಳಿಕೆಯ ಉದ್ದೇಶ.

ಈ ಅರಿವಳಿಕೆಯನ್ನು ನುರಿತ ತಜ್ಞರು ಸರಿಯಾದ ರೀತಿಯಲ್ಲಿ ನೀಡಿದರೆ ಅತ್ಯಂತ ಪರಿಣಾಮಕಾರಿ. ವಾಕರಿಕೆ, ವಾಂತಿ, ತಲೆ ತಿರುಗುವುದು, ಅರೆ ಎಚ್ಚರ ಇದರ ಕೆಲವು ಅಡ್ಡ ಪರಿಣಾಮಗಳು. ಕೆಲವೊಮ್ಮೆ ತಾತ್ಕಾಲಿಕ ಮರೆವು, ಗೊಂದಲ, ಮೂತ್ರ ವಿಸರ್ಜನೆಗೆ ತೊಂದರೆ, ಚಳಿ ಎನಿಸಿ ಮೈ ನಡುಕ ಬರುವುದು ಸಾಮಾನ್ಯ.

ಆದರೆ ವಯಸ್ಸಾದವರಲ್ಲಿ ಈ ಅರಿವಳಿಕೆ ಎನ್ನುವುದು ಕೆಲವೊಮ್ಮೆ ಅಪಾಯಕಾರಿಯಾಗಬಹುದು. ಅದರ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.

ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುವುದು ಸಹಜ. ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮಾತ್ರ ಪರಿಹಾರ ನೀಡಬಲ್ಲದು. ಈಗಂತೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಸುಧಾರಿತ ಪದ್ಧತಿಗಳಿಂದ ವಯಸ್ಸಾದವರ ಆರೋಗ್ಯವನ್ನು ಕಾಪಾಡಬಹುದು. ಆದರೂ ಶಸ್ತ್ರಚಿಕಿತ್ಸೆಯಲ್ಲಿ ಅಡಗಿರುವ ಅಪಾಯಗಳನ್ನು ತಳ್ಳಿ ಹಾಕುವಂತಿಲ್ಲ. ಇದಕ್ಕೆ ಕಾರಣ ಇನ್ನಿತರ ಆರೋಗ್ಯ ಸಮಸ್ಯೆಗಳು. ವಯಸ್ಸಾದಂತೆ ರಕ್ತದೊತ್ತಡದಲ್ಲಿ ಏರಿಕೆ ಉಂಟಾಗುವುದು ಸಹಜ. ರಕ್ತನಾಳಗಳು ಕಟ್ಟಿಕೊಳ್ಳುವುದು, ಹೃದ್ರೋಗ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಾಮಾನ್ಯ. ಜೊತೆಗೆ ಮಧುಮೇಹದಿಂದ ಉಂಟಾಗುವ ಇನ್ನಿತರ ಸಮಸ್ಯೆಗಳು.

ಈ ಸಮಸ್ಯೆಗಳೇ ಶಸ್ತ್ರಕ್ರಿಯೆ ಸಂದರ್ಭದಲ್ಲಿ ಅಥವಾ ನಂತರ ಹಲವು ಸಮಸ್ಯೆಗಳನ್ನು ಹುಟ್ಟು ಹಾಕಬಹುದು. ಅಡ್ಡ ಪರಿಣಾಮಗಳು ತಲೆದೋರಿ ಜೀವಕ್ಕೇ ಕುತ್ತಾಗಬಹುದು.

ನರವ್ಯೂಹಕ್ಕೆ ಅಪಾಯವೇ?

ಇವೆಲ್ಲ ಇತರ ಕಾಯಿಲೆಗಳಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳು ಒಂದು ಕಡೆಯಾದರೆ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನೀಡಲೇಬೇಕಾದ ಅರಿವಳಿಕೆಯಿಂದ ವಯಸ್ಸಾದವರಿಗೆ ಹೆಚ್ಚಿನ ತೊಂದರೆಯಾಗುತ್ತದೆ. ಚಿಕಿತ್ಸೆ ಸಂದರ್ಭದಲ್ಲಿ ನೋವಿನ ಅರಿವಾಗದಂತೆ ತಡೆಯುವ, ಅಂಗಾಂಗಗಳನ್ನು ಮರಗಟ್ಟಿಸುವ ಅಥವಾ ಜ್ಞಾನ ತಪ್ಪಿಸುವ ಈ ಅರಿವಳಿಕೆ ಹಲವು ಸಂಕೀರ್ಣ ಅಪಾಯಗಳನ್ನು ಉಂಟು ಮಾಡಬಹುದು. ಇವುಗಳಲ್ಲಿ ಪ್ರಮುಖವಾದದ್ದು ಅವರ ಮೆದುಳು ಅರಿವಳಿಕೆಯಿಂದ ತೀವ್ರ ಅಪಾಯಕ್ಕೆ ಒಳಗಾಗುವ ಸಂಭವವಿರುತ್ತದೆ.

ಶಸ್ತ್ರಚಿಕಿತ್ಸೆಯ ನಂತರ ರೋಗಿ ಭಾವೋನ್ಮಾದಕ್ಕೆ ಒಳಗಾಗಿ, ಬುದ್ಧಿ ವಿಕಲ್ಪವಾದಂತೆ ಅಸಂಬದ್ಧವಾಗಿ ಮಾತನಾಡಬಹುದು. ಇದು ತಾತ್ಕಾಲಿಕ ತೊಂದರೆ. ಅಂದರೆ ರೋಗಿಗೆ ಗೊಂದಲ ತಲೆದೋರಿ ತನ್ನ ಸುತ್ತಮುತ್ತಲಿನ ಅರಿವು ಕಳೆದುಕೊಳ್ಳಬಹುದು. ಸಮೀಪದ ಬಂಧುಗಳನ್ನು, ಕುಟುಂಬದ ಸದಸ್ಯರನ್ನು ಗುರುತಿಸಲು ವಿಫಲನಾಗುತ್ತಾನೆ. ಸ್ಮರಣಶಕ್ತಿ ಕುಂಠಿತವಾಗಿ ಏಕಾಗ್ರತೆ ಕೂಡ ಇರುವುದಿಲ್ಲ. ಉಳಿದ ವ್ಯಕ್ತಿಗಳಲ್ಲೂ ಅಂದರೆ 60ಕ್ಕಿಂತ ಕಡಿಮೆ ವಯಸ್ಸಿನವರಲ್ಲೂ ಇದು ಕಾಣಿಸಿಕೊಂಡರೂ, 24– 48 ಗಂಟೆಗಳಲ್ಲಿ ಕಡಿಮೆಯಾಗುತ್ತದೆ. ಆದರೆ ವಯಸ್ಸಾದವರಲ್ಲಿ ಮಧ್ಯೆ ಮಧ್ಯೆ ಕಡಿಮೆಯಾದಂತೆ ಕಂಡರೂ ಸಂಪೂರ್ಣ ಸರಿ ಹೋಗಲು ಕೆಲವು ವಾರಗಳು ಹಿಡಿಯಬಹುದು.

ಸ್ಮರಣಶಕ್ತಿಯ ಕೊರತೆ (ಪಿಒಸಿಡಿ)

ಇದು ಗಂಭೀರ ಸಮಸ್ಯೆಯಾಗಿದ್ದು, ದೀರ್ಘಕಾಲದವರೆಗೆ ಸ್ಮರಣಶಕ್ತಿಯ ಕೊರತೆ ಕಾಡಬಹುದು. ಇದು ಗ್ರಹಿಸಲು, ಯೋಚಿಸಲು, ಅರ್ಥ ಮಾಡಿಕೊಳ್ಳಲು ಹಾಗೂ ಏಕಾಗ್ರತೆ ವಹಿಸಲು ಅಡ್ಡಿ ಉಂಟು ಮಾಡುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸಾಮಾನ್ಯ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಮೊದಲೇ ಈ ಸಮಸ್ಯೆ ಇತ್ತೇ ಎಂಬುದಕ್ಕೆ ಕೆಲವು ಸರಳ ಪರೀಕ್ಷೆ ಮಾಡುವುದು ಒಳಿತು. ಹೃದ್ರೋಗದ ಸಮಸ್ಯೆ, ಪುಪ್ಪುಸದ ಸಮಸ್ಯೆ, ಅಲ್ಝೈಮರ್ಸ್‌, ಪಾರ್ಕಿನ್ಸನ್‌ ಕಾಯಿಲೆಯಿದ್ದರೆ, ಹಿಂದೆ ಪಾರ್ಶ್ವವಾಯು ಆಗಿದ್ದರೆ ಈ ಸಮಸ್ಯೆ ತಲೆದೋರುವ ಸಂಭವ ಹೆಚ್ಚು.

ಅರಿವಳಿಕೆ ತಜ್ಞರು ಈ ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದು, ಅಡ್ಡ ಪರಿಣಾಮ ತಡೆಗಟ್ಟುವುದು ಹೇಗೆ ಎಂಬುದನ್ನು ಕಂಡು ಹಿಡಿಯಬೇಕಾಗಿದೆ.ಈ ರೀತಿಯ ಅಪಾಯಗಳನ್ನು ತಡೆಗಟ್ಟಬೇಕಾದರೆ ಮೊದಲೇ ವೈದ್ಯರ ಹಾಗೂ ಅರಿವಳಿಕೆ ತಜ್ಞರ ಬಳಿ ಮಾತನಾಡುವುದು ಉತ್ತಮ. ಕೆಲವು ಹೆಸರಾಂತ ಆಸ್ಪತ್ರೆಗಳಲ್ಲಿ ವಯಸ್ಸಾದ (ಜೀರಿಯಾಟ್ರಿಕ್‌) ರೋಗಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ ತಜ್ಞ ವೈದ್ಯರಿರುತ್ತಾರೆ. ಹೀಗಾಗಿ ಶಸ್ತ್ರಕ್ರಿಯೆಗಿಂತ ಮೊದಲು, ಆ ವೇಳೆ ಹಾಗೂ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಇತರ ಸಮಸ್ಯೆಗಳ ವಿವರ ನೀಡಿ

ರೋಗಿಗೆ ಯಾವ ಆರೋಗ್ಯ ಸಮಸ್ಯೆಗಳಿವೆ, ಯಾವ ಔಷಧ ತೆಗೆದುಕೊಳ್ಳುತ್ತಾನೆ ಎಂಬುದರ ಬಗ್ಗೆ ವಿವರ ನೀಡುವುದು ಒಳಿತು. ಹಾಗೆಯೇ ಪೌಷ್ಟಿಕಾಂಶದ ಮಾತ್ರೆಗಳನ್ನು, ಹರ್ಬಲ್‌ ಔಷಧಿ ತೆಗೆದುಕೊಳ್ಳುತ್ತಿದ್ದರೂ ತಿಳಿಸಬೇಕು. ಹಿಂದೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅರಿವಳಿಕೆಯಿಂದ ಅಪಾಯ ಉಂಟಾಗಿದ್ದರೆ ಅದನ್ನೂ ಹೇಳುವುದು ಒಳಿತು. ವಿವರ ಮುಚ್ಚಿಟ್ಟರೆ ಅಪಾಯ ಹೆಚ್ಚು.

ಖಿನ್ನತೆ, ಆತಂಕ, ಮೂರ್ಛೆ, ಸ್ನಾಯು ಬಿಗಿತ, ನಿದ್ರೆಗೆ ತೆಗೆದುಕೊಳ್ಳುವ ಮಾತ್ರೆಗಳ ಬಗ್ಗೆ ವಿಶೇಷ ಎಚ್ಚರಿಕೆ ಅಗತ್ಯ. ಇದು ಶಸ್ತ್ರಚಿಕಿತ್ಸೆಯ ನಂತರ ಕೂಡ ವಯಸ್ಸಾದವರ ನೆನಪಿನ ಶಕ್ತಿ ಅಥವಾ ನರವ್ಯೂಹದ ಮೇಲೆ ಅಡ್ಡ ಪರಿಣಾಮ ಬೀರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT