ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳುವಿರಾ?

Published 27 ಫೆಬ್ರುವರಿ 2024, 0:28 IST
Last Updated 27 ಫೆಬ್ರುವರಿ 2024, 0:28 IST
ಅಕ್ಷರ ಗಾತ್ರ

ಬೆಳಿಗ್ಗೆ ಅಲಾರಾಂ ಹೊಡೆದುಕೊಳ್ಳುತ್ತದೆ. ನಮ್ಮಷ್ಟಕ್ಕೆ ನಾವೇ ‘ಯಾಕೆ ಇಷ್ಟು ಬೇಗ ಅಲಾರಾಂ ಸೆಟ್ ಮಾಡಿಟ್ಟೆ!’ ಎಂದು ಬೈದುಕೊಂಡೇ ಏಳುತ್ತೇವೆ. ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೀರಿ. ದನಕ್ಕೆ ಗುದ್ದುತ್ತೀರಿ. ‘ಯಾರ ಮುಖ ನೋಡಿದ್ದೆನೋ’ ಎಂದು ನಿಮಗೇ ಹೇಳಿಕೊಳ್ಳುತ್ತೀರಿ. ಕೆಲವೊಮ್ಮೆ ನಮಗೇ ಅರಿವಾಗದಂತೆ ಜೋರಾಗಿಯೇ ಮಾತನಾಡುತ್ತಿರುತ್ತೇವೆ.

ತನ್ನಷ್ಟಕ್ಕೆ ತಾನೇ ಮಾತನಾಡುವ ಇಂಥ ಪ್ರವೃತ್ತಿ ಮನೋವೈದ್ಯಕೀಯ ವಿಜ್ಞಾನದ ಪ್ರಕಾರ ಒಂದು ಸಹಜ ಪ್ರಕ್ರಿಯೆ. ಮನುಷ್ಯರಾದವರೆಲ್ಲರೂ ದೈನಂದಿನ ಜೀವನದಲ್ಲಿ ಹೀಗೆ ತಮ್ಮೊಂದಿಗೆ ತಾವೇ ಮಾತನಾಡುವುದು ತುಂಬ ಸಾಮಾನ್ಯ. ಇದು ಮಾನಸಿಕ ಅಸ್ವಸ್ಥತೆಯಲ್ಲಿ ಕಾಣುವ ಭ್ರಮೆಗೆ ಪ್ರತಿಕ್ರಿಯಿಸುವ ಲಕ್ಷಣಕ್ಕಿಂತ ಬಹು ಭಿನ್ನ. ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಂಡು, ಸುತ್ತಮುತ್ತಲ ಪರಿವೆ ಇಲ್ಲದೆ ವ್ಯಕ್ತಿ ಮಾತನಾಡುವುದು ಅಸ್ವಸ್ಥತೆಯ ಲಕ್ಷಣ. ಆದರೆ ನಮ್ಮ ಮನಸ್ಸಿನೊಂದಿಗೆ ನಾವೇ ಮಾತನಾಡಿ, ಸುತ್ತಮುತ್ತಲ ಅರಿವನ್ನೂ ಕಾಯ್ದುಕೊಂಡಿರುವ ದೈನಂದಿನ ಪ್ರವೃತ್ತಿ ಮಾನವ ಮನಸ್ಸಿನ ಒಂದು ಸಹಜ ಗುಣ.

ನಾವೇಕೆ ಹೀಗೆ ನಮ್ಮಷ್ಟಕ್ಕೆ ನಾವೇ ಮಾತಾಡುತ್ತೇವೆ? ಹೀಗೆ ಮಾತನಾಡುವುದರಿಂದ ಮನಸ್ಸಿಗೆ ಆಗುವ ಪ್ರಯೋಜನವೇನು? ನಮ್ಮಷ್ಟಕ್ಕೆ ಮಾತನಾಡುವುದು ಅಥವಾ ‘Self talk’ ಅನ್ನು ‘ತಲೆಯೊಳಗಿನ ಮಾತು - ಒಳಧ್ವನಿ’ ಎಂದು ಕರೆಯಬಹುದು. ಮನಸ್ಸಿನೊಳಗೆ ನಡೆಯುವ ಲೆಕ್ಕಾಚಾರ, ಯೋಚನೆ-ಭಾವನೆಗಳಿಗಿಂತ ಇದು ಪ್ರತ್ಯೇಕವಾಗಿ ನಿಲ್ಲುತ್ತದೆ. ಈ ಯೋಚನೆ-ಭಾವನೆಗಳನ್ನು ಸ್ಪಷ್ಟ ಮಾತಿನ ರೂಪದಲ್ಲಿ ಅಂದರೆ ಒಂದು ದೈಹಿಕ ಕ್ರಿಯೆಯಾಗಿ ವ್ಯಕ್ತಪಡಿಸಿದಾಗ ಅದು ನಮ್ಮಷ್ಟಕ್ಕೆ ನಾವೇ ಆಡುವ ಮಾತಾಗುತ್ತದೆ. ಈ ಮಾತು ಜೋರಾಗಿ, ಇನ್ನೊಬ್ಬರಿಗೆ ಕೇಳುವಂತೆ ಹೊರ ಬೀಳಲೇಬೇಕೆಂದೂ ಇಲ್ಲ. ಆದರೆ ಮನಸ್ಸಿನಲ್ಲಿಯೇ ಆದರೂ ಅದು ಒಂದು ಸ್ಪಷ್ಟ ಮಾತಿನ ರೂಪ ತಳೆದಿರುತ್ತದೆ. ಇತರರು ಏನೆನ್ನುತ್ತಾರೆ ಎಂಬುದನ್ನು ಅವರು ಗಮನಿಸಲು ಹೋಗುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳಲ್ಲಿ ಇದು ಹೆಚ್ಚು.

ಸುಮಾರು 100 ವರ್ಷಗಳ ಹಿಂದೆ, ರಷಿಯಾದ ಮನೋವಿಜ್ಞಾನಿ ಲೆವ್ ಮೈಗೋಟ್‍ಸ್ಕಿ ಮಕ್ಕಳಲ್ಲಿ ಆಟವಾಡುವಾಗ ಕಂಡು ಬರುವ ಈ ರೀತಿಯ ತನ್ನಷ್ಟಕ್ಕೆ ತಾನೇ ಮಾತನಾಡುವ ಕ್ರಿಯೆ ಬೆಳವಣಿಗೆಯ ಬಹುಮುಖ್ಯ ಮೈಲಿಗಲ್ಲು ಎಂದು ಪ್ರತಿಪಾದಿಸಿದ. ಇತರರೊಂದಿಗೆ ತಾನು ನಡೆಸಿದ ಸಂಭಾಷಣೆಗಳನ್ನು ಮಕ್ಕಳು ಮತ್ತೆ ಮತ್ತೆ ಪುನರ್ ಮನನ ಮಾಡುವುದರ ಸಂಕೇತ ಇಂಥ ಮಾತು; ಇದು ತನ್ನ ನಡವಳಿಕೆ-ಭಾವನೆಗಳನ್ನು ಮಗು ಪರಿಷ್ಕರಿಸಿಕೊಳ್ಳುವ ಪ್ರಮುಖ ಹಂತ ಎಂದು ಮೈಗೋಟ್‍ಸ್ಕಿ ಹೇಳಿದ. ಕ್ರಮೇಣ ದೊಡ್ಡವರಾದಂತೆ ಈ ಮಾತು ಒಳಮಾತಾಗಿ ಬದಲಾಗಿ ಒಂದು ಖಾಸಗಿಯಾದ ಒಳ ಸಂಭಾಷಣೆಯಾಗಿ ಬದಲಾಗುತ್ತದೆ ಎಂದು ಆತ ತನ್ನ ಸಿದ್ಧಾಂತವನ್ನು ರೂಪಿಸಿದ. ಮನೋವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಅಂತರಂಗದಲ್ಲಿ ನಡೆಯುವ ಈ ಸ್ವ-ಸಂಭಾಷಣೆ ಯೋಜನೆಗಳನ್ನು ಮಾಡುವುದಕ್ಕೆ, ಕಷ್ಟದ ಸನ್ನಿವೇಶಗಳನ್ನು ಎದುರಿಸುವುದಕ್ಕೆ, ಪೂರ್ತಿ ದಿನ ಕೆಲಸ ಮಾಡುವ ಪ್ರೇರಣೆಗೆ ಬಲು ಅಗತ್ಯ. ದೈಹಿಕ-ಮಾನಸಿಕ ಆರೋಗ್ಯದ ಮೇಲೂ ಅದು ಪರಿಣಾಮ ಬೀರಬಲ್ಲದು. ಅಧ್ಯಯನಗಳಲ್ಲಿ ಕುತೂಹಲಕಾರಿ ಅಂಶವೊಂದು ಕಂಡು ಬಂದಿದೆ. ಯಾವ ಅಭ್ಯರ್ಥಿಗಳು ಕೊಟ್ಟಿರುವ ಸೂಚನೆಗಳನ್ನು ಜೋರಾಗಿ ಓದಿಕೊಂಡು ನಂತರ ಪ್ರಶ್ನಾವಳಿ /ಪ್ರಯೋಗವನ್ನು ಉತ್ತರಿಸಿದರೋ ಅವರು ಮನಸ್ಸಿನಲ್ಲಿಯೇ ಓದಿಕೊಂಡು ಉತ್ತರಿಸಿದವರಿಗಿಂತ ಉತ್ತಮವಾಗಿ ಫಲಿತಾಂಶ ಪಡೆದಿದ್ದರು. ಮತ್ತೊಂದು ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೆಲವು ವಸ್ತುಗಳನ್ನು ನೋಡಿ ಹುಡುಕಬೇಕಿತ್ತು. ಯಾರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು, ಹುಡುಕಲು ಯತ್ನಿಸಿದ್ದರೋ ಅವರ ಸಫಲತೆ ಹೆಚ್ಚಾಗಿತ್ತು.
ಮಕ್ಕಳಲ್ಲಿ ಸುಮಾರು ಒಂದೂವರೆ-ಎರಡು ವರ್ಷ ವಯಸ್ಸಿನ ವೇಳೆಗೆ ಆರಂಭವಾಗುವ ಈ ‘ಸ್ವ-ಮಾತು’ ಹೊಸ ಚಲನಾ ಕೌಶಲಗಳನ್ನು ಕಲಿಯುವುದರೊಂದಿಗೆ ಜೊತೆಯಾಗುವುದು ಕುತೂಹಲಕಾರಿ ಸಂಗತಿ. ವಸ್ತುಗಳನ್ನು ಎತ್ತುವುದು–ಇಡುವುದು, ಶೂಲೇಸ್ ಕಟ್ಟಿಕೊಳ್ಳುವುದು ಇತ್ಯಾದಿಗಳಿಗೆ ಇದು ವಿಸ್ತರಿಸುತ್ತದೆ.

ಪರೀಕ್ಷೆ-ಪ್ರದರ್ಶನ-ಸ್ವರ್ಧೆ-ಕ್ರೀಡಾ ಸ್ಪರ್ಧೆಗಳನ್ನು ಎದುರಿಸುವಾಗ ಇಂಥ ‘ಸ್ವಮಾತು’ ಹುರಿದುಂಬಿಸುವ, ಸ್ಥಿರತೆ ಕಾಯ್ದುಕೊಳ್ಳುವ 
ನಾವೇನೂ ದಿನನಿತ್ಯ ಸ್ಪರ್ಧೆ/ಪರೀಕ್ಷೆಗಳಿಗೆ ಹೋಗುವುದಿಲ್ಲವಷ್ಟೆ. ಹಾಗಿದ್ದ ಮೇಲೆ ಈ ಮನಸ್ಸಿನ ಕೌಶಲ ನಾವೇಕೆ ಉಪಯೋಗಿಸಬೇಕು ಎಂಬ ಪ್ರಶ್ನೆ ಸಹಜ. ಮನೋವೈದ್ಯಕೀಯ ಅಧ್ಯಯನಗಳ ಪ್ರಕಾರ, ನಮಗೆ ನಾವೇ ಮತ್ತೊಬ್ಬ ವ್ಯಕ್ತಿಯಂತೆ ಸಲಹೆ-ಸೂಚನೆ-ನಿರ್ದೇಶನ ಕೊಟ್ಟುಕೊಳ್ಳುವುದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಅತ್ಯುತ್ತಮ ತಂತ್ರ. ಮನಸ್ಸಿಗೆ ಹೆದರಿಕೆಯುಂಟಾದಾಗ, ಆಘಾತವಾದಾಗ, ದುಃಖವಾದಾಗ, ಆತಂಕವಾದಾಗ ಈ ರೀತಿಯ ಮಾತು ಅವುಗಳಿಂದ ಹೊರಬರಲು ಸಹಾಯಕವಾಗಬಹುದು.

ಹೀಗೆ ಮಾತನಾಡಿಕೊಳ್ಳುವಾಗ ನಮ್ಮನ್ನೇ ನಾವು ಮತ್ತೊಬ್ಬ ವ್ಯಕ್ತಿಯಂತೆ ಭಾವಿಸಿ ಸಂಬೋಧಿಸುವುದೂ ಉಪಯುಕ್ತವೇ. ಅಧ್ಯಯನವೊಂದರಲ್ಲಿ ವ್ಯಕ್ತಿಗಳ ಮಿದುಳಿನ ಗ್ರಾಫ್ – ‘ಇಇಜಿ‘ ದಾಖಲಿಸುತ್ತಾ ಕೆಲವು ಆತಂಕಕಾರಿಯಾದ ಚಿತ್ರಗಳನ್ನು ತೋರಿಸಲಾಯಿತು. ಯಾವ ವ್ಯಕ್ತಿಗಳು ‘ಇದು ಗೀತಳಿಗೆ ಆತಂಕ ತರುತ್ತಿದೆ‘ ಎಂದು ತಮ್ಮನ್ನು ಮತ್ತೊಬ್ಬ ವ್ಯಕ್ತಿಯಂತೆ ಸಂಬೋಧಿಸಿಕೊಂಡರೋ, ಅವರ ಮಿದುಳು ಕಡಿಮೆ ಆತಂಕದ ಪ್ರತಿಕ್ರಿಯೆಯನ್ನು ದಾಖಲಿಸಿತ್ತು. ಎಫ್‍.ಎಂ.ಆರ್‍.ಐ. ಅಧ್ಯಯನಗಳಲ್ಲಿಯೂ ಅಷ್ಟೆ. ನೋವನ್ನು ಸೂಕ್ಷ್ಮವಾಗಿ ಗ್ರಹಿಸುವ ಮಿದುಳಿನ ಕೇಂದ್ರಗಳು ಹೀಗೆ ಮತ್ತೊಬ್ಬ ವ್ಯಕ್ತಿಯಂತೆ ಸಂಬೋಧಿಸಿ ಮಾತನಾಡಿಕೊಂಡು ಪ್ರತಿಕ್ರಿಯಿಸದ ವ್ಯಕ್ತಿಗಳಲ್ಲಿ ನೋವಿನ ಗ್ರಹಿಕೆ ಕಡಿಮೆಯಾಗಿದ್ದು ಕಂಡು ಬಂತು.

ಈ ಸಂಶೋಧನೆಗಳು ಏನನ್ನು ಹೇಳುತ್ತಿವೆ? ನಮ್ಮಷ್ಟಕ್ಕೆ ನಾವೇ ಮಾತನಾಡುವುದು, ಸಮಸ್ಯೆ-ನೋವುಗಳನ್ನು ನಾವಾಗಿ ಅನುಭವಿಸದೆ, ದೂರ ನಿಂತು ನೋಡುವ ಕಿಂಚಿತ್ ಅಂತರವನ್ನು ಸಾಧ್ಯವಾಗಿಸುತ್ತದೆ. ನಮ್ಮನ್ನೇ ಮತ್ತೊಬ್ಬ ವ್ಯಕ್ತಿಯಂತೆ ಸಂಬೋಧಿಸಿ ಮಾತನಾಡಿಕೊಳ್ಳುವಾಗ, ನಕಾರಾತ್ಮಕವಾಗಿ ಮಾತನಾಡುವುದು, ನಡೆದ ನೋವು ತರುವ ಘಟನೆಯನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಾತನಾಡಿಕೊಳ್ಳುವುದು - ಇವುಗಳನ್ನು ತಡೆ ಹಿಡಿಯುವುದೂ ಅತ್ಯಗತ್ಯ. ಈ ರೀತಿಯ ನಕಾರಾತ್ಮಕ ಮಾತು ಆತಂಕವನ್ನು ಹೆಚ್ಚಿಸುತ್ತದೆ.

ನಿಮ್ಮಿಷ್ಟಕ್ಕೆ ನೀವೇ ಮಾತನಾಡುವುದು ಖಂಡಿತ ಕಾಯಿಲೆಯಲ್ಲ. ಆದರೆ ಅದು ನಿಮ್ಮ ಬಗ್ಗೆ ನೀವು ಪ್ರೀತಿ-ಕರುಣೆಗಳಿಂದ ಹುರಿದುಂಬಿಸಿ ಮಾತನಾಡುವ ಧ್ವನಿಯಾಗಿರಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT