ಸೋಮವಾರ, ಮಾರ್ಚ್ 30, 2020
19 °C

ಕೋವಿಡ್ ಕುರಿತು ವದಂತಿ ನಂಬಬೇಡಿ, ಈ ಎಚ್ಚರಿಕೆಗಳನ್ನು ಅನುಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೋವಿಡ್‌ 19 ವೈರಸ್‌ ಈಗ ನಮ್ಮ ಸುತ್ತಮುತ್ತ ಸುಳಿದಾಡುವ ಭೀತಿ ಶುರುವಾಗಿದೆ. ವೈರಸ್‌ ನಿಯಂತ್ರಣಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ, ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ವೈರಸ್‌ ಹರಡದಂತೆ ತಡೆಯಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲ್ಲಿ ವಿವರಿಸಲಾಗಿದೆ.

ರೋಗ ಲಕ್ಷಣ

* ಜ್ವರ, ಮೂಗು ಕಟ್ಟಿಕೊಳ್ಳುವುದು, ಉಸಿರಾಟ ತೊಂದರೆ, ಕೆಮ್ಮು, ಶೀತ, ಎದೆಭಾಗ ಬಿಗಿತ, ತಲೆ ಮತ್ತು ಮೈಕೈ ನೋವು ಸಾಮಾನ್ಯ ಲಕ್ಷಣ 

* ಕೆಲವು ರೋಗಿಗಳಲ್ಲಿ ಸೋಂಕು 24 ಗಂಟೆ ಒಳಗೆ ಪ್ರಕಟವಾಗಬಹುದು.ಇತರರಲ್ಲಿ, ವಾರ ತೆಗೆದುಕೊಳ್ಳಬಹುದು 

* ಸೋಂಕು ವಿಷಮಿಸಿದಾಗ ನ್ಯೂಮೋನಿಯಾ ಮತ್ತು ಮೂತ್ರಪಿಂಡ ವೈಫಲ್ಯ ಕಾಣಿಸಿಕೊಳ್ಳಬಹುದು

* ವೈರಾಣು ದೇಹದಲ್ಲಿ ಹರಡುವ ಅವಧಿ ಸುಮಾರು 7-14 ದಿನ 

ಚಿಕಿತ್ಸೆ ಇಲ್ಲ

* ಆರಂಭಿಕ ರೋಗ ಲಕ್ಷಣ ಪತ್ತೆ ನಿರ್ಣಾಯಕ

* ಈ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇನ್ನೂ ಸಂಶೋಧನೆ ನಡೆಯುತ್ತಿವೆ

* ಕೆಲವೊಮ್ಮೆ ರೋಗಲಕ್ಷಣ ತಾವಾಗಿಯೇ ಕಡಿಮೆಯಾಗುತ್ತವೆ 

* ರೋಗ ಲಕ್ಷಣಗಳ ಆಧಾರದ ಮೇಲೆ ಸೋಂಕು ಹರಡದಂತೆ ನಿಯಂತ್ರಿಸಲು ಬೆಂಬಲಿತ ಚಿಕಿತ್ಸೆ ನೀಡಲಾಗುತ್ತದೆ 

ಆಹಾರ ಕ್ರಮ ಹೀಗಿರಲಿ

* ಸರಿಯಾಗಿ ಬೇಯಿಸಿದ ಮಾಂಸವನ್ನು ಮಾತ್ರ ಸೇವಿಸಿ. ಫ್ರಿಡ್ಜ್‌ನಲ್ಲಿಟ್ಟ ತಂಪಾದ ಮಾಂಸ ಸೇವನೆ ತ್ಯಜಿಸುವುದು ಒಳ್ಳೆಯದು

* ಬೆಚ್ಚಗಿನ ನೀರು ಕುಡಿಯಿರಿ, ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಿ

* ಸಾಕಷ್ಟು ವಿಶ್ರಾಂತಿ ಮತ್ತು ಪೌಷ್ಟಿಕ ಆಹಾರ, ದ್ರವ ಆಹಾರ ಸೇವಿಸಿ

**

ವೈರಸ್ ತಡೆಯುವುದು ಹೇಗೆ?

*  ಸೋಂಕಿತ ವ್ಯಕ್ತಿಗಳು ಬಳಸುವ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಬಾಗಿಲು ಚಿಲಕ, ಬೀಗ, ಪೆನ್‌, ವಾಚ್‌, ಕಪ್‌, ಸ್ಟೇರ್‌ಕೇಸ್‌, ಟಿಶ್ಯೂ ಪೇಪರ್‌ ಮತ್ತು ಮಾಸ್ಕ್‌ಗಳಲ್ಲಿಯೂ ವೈರಾಣುಗಳು ಅಡಗಿರುವ ಸಾಧ್ಯತೆ ಇದೆ

*  ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಾಣು ಹತ್ತಿರದ ಆರೋಗ್ಯವಂತ ವ್ಯಕ್ತಿಯ ಕಣ್ಣು, ಮೂಗು ಅಥವಾ ಬಾಯಿ ಮೂಲಕ ದೇಹ ಪ್ರವೇಶಿಸುತ್ತದೆ. ವ್ಯಕ್ತಿಗಳು ಕೆಮ್ಮುವಾಗ ಅಥವಾ ಸೀನುವಾಗ ಅವರಿಂದ ಅಂತರ ಕಾಪಾಡಿಕೊಳ್ಳಿ

*  ಸಂತೆ, ಜಾತ್ರೆ, ಸಿನಿಮಾ, ನಾಟಕ, ಬಸ್‌ ನಿಲ್ದಾಣ, ರೈಲು ನಿಲ್ದಾಣ... ಹೀಗೆ ಅಪಾರ ಸಂಖ್ಯೆಯಲ್ಲಿ ಜನ ಸೇರುವ ಸಾರ್ವಜನಿಕ ಜನನಿಬಿಡ ಸ್ಥಳಗಳಿಗೆ ತೆರಳದಿರುವುದು ಒಳ್ಳೆಯದು 

*  ಗುಣಮಟ್ಟದ ಮಾಸ್ಕ್‌ ಧರಿಸಬೇಕು. ಇದರಿಂದ ವೈರಾಣು ನಮ್ಮ ದೇಹ ಪ್ರವೇಶಿಸದಂತೆ ತಡೆಗಟ್ಟಬಹುದು

*  ಸೋಂಕಿತ ವ್ಯಕ್ತಿಗಳ ವೈರಾಣು ಅವರು ಬಳಸುವ ವಸ್ತುಗಳಲ್ಲಿ ಉಳಿದಿರುವ ಸಾಧ್ಯತೆ ಇದೆ. ಪರಸ್ಪರ ತಬ್ಬಿಕೊಳ್ಳುವುದು, ಹಸ್ತಲಾಘವ ಬೇಡ 

*  ಆಕಸ್ಮಿಕವಾಗಿ ನೀವು ಇಂತಹ ವಸ್ತುಗಳನ್ನು ಮುಟ್ಟಿ, ನಿಮ್ಮ ಕೆನ್ನೆ, ಮುಖ, ಕಣ್ಣು ಉಜ್ಜಿದಾಗ ವೈರಾಣು ಸುಲಭವಾಗಿ ನಿಮ್ಮ ದೇಹ ಪ್ರವೇಶಿಸುತ್ತದೆ. 

*  ಯಾವುದೇ ವಸ್ತುಗಳ ಮೇಲೆ ಕೋವಿಡ್‌ ವೈರಸ್‌ ಕೇವಲ 48 ಗಂಟೆ ಮಾತ್ರ ಬದುಕಿರಬಲ್ಲದು. ಸೋಪ್‌, ಸೋಪ್‌ ವಾಟರ್‌ನಿಂದ ಚೆನ್ನಾಗಿ ಉಜ್ಜಿ ಒರೆಸುವ ಮೂಲಕ ಅಪಾಯ ತಪ್ಪಿಸಬಹುದು.

**
ಅನಗತ್ಯ ಭಯಪಡಬೇಡಿ
‘ಕೋವಿಡ್‌ 19’ ವೈರಸ್‌ ಸೋಂಕು ತಗುಲಿದ ಗಂಭೀರ ಪ್ರಕರಣಗಳನ್ನು ನಿರ್ವಹಿಸಲು ನಮ್ಮ ಸಂಸ್ಥೆ ಸಜ್ಜಾಗಿದೆ. ಈಗಾಗಲೇ ಪ್ರತ್ಯೇಕ 15 ಬೆಡ್‌ಗಳಿವೆ. ಗಂಭೀರ ಪ್ರಕರಣಗಳ ನಿರ್ವಹಣೆಗೆ ಇಂಟೆನ್ಸಿವ್ ಕೇರ್ ಯೂನಿಟ್ ಇದೆ. ಸುಸಜ್ಜಿತ ಉಪಕರಣಗಳಿವೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. 2008–09ರಲ್ಲಿ ಎಚ್‌1ಎನ್‌1 ಪ್ರಕರಣಗಳನ್ನು ಎದುರಿಸಿದ ಅನುಭವವಿದೆ. ಹಾಗಾಗಿ, ಮೊದಲೇ ಜಾಗೃತಿವಹಿಸಿದ್ದೇವೆ.

ನಿನ್ನೆಯಿಂದ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾನ್ಯ ದಿನಗಳಲ್ಲಿ 15 ರಿಂದ 20 ಮಂದಿ ತಪಾಸಣೆಗೆ ಬರುತ್ತಾರೆ. ನಿನ್ನೆಯ ಪ್ರಕರಣದ ನಂತರ 97 ಮಂದಿ ತಪಾಸಣೆಗೆ ಬಂದಿದ್ದರು. ಇವತ್ತು ಮಧ್ಯಾಹ್ನ 3 ಗಂಟೆಯೊಳಗೆ 63 ಜನ ಬಂದಿದ್ದರು. ಯಾವ ಪ್ರಕರಣದಲ್ಲೂ ‘ಪಾಸಿಟಿವ್‌’ ಕಂಡುಬಂದಿಲ್ಲ.

ಸಾರ್ವಜನಿಕರು ಅನಗತ್ಯವಾಗಿ ಆತಂಕಪಡಬೇಡಿ. ಸರ್ಕಾರ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಕೆಮ್ಮು, ಸೀನು ಬಂದಾಗ ಬಟ್ಟೆ ಅಡ್ಡ ಹಿಡಿದುಕೊಳ್ಳಿ. ಆಗಾಗ್ಗೆ ಕೈತೊಳೆದುಕೊಳ್ಳಿ. ಜ್ವರ, ಕೆಮ್ಮ, ನೆಗಡಿ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಿ. ಚೆನ್ನಾಗಿ ದ್ರವರೂಪದ ಆಹಾರ ತೆಗೆದುಕೊಳ್ಳಿ.
-ಡಾ. ಸಿ. ನಾಗರಾಜ್, ನಿರ್ದೇಶಕರು, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ

**
ಸಹಾಯವಾಣಿ

1800 425 012

080–23417100

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು