ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನ ಎಂಬುದು ಕೇವಲ ಭೌತಿಕ ನಿಯಮವಲ್ಲ; ಮಾನಸಿಕ ಮತ್ತು ಆಂತರಿಕ ಮೌಲ್ಯವೂ ಹೌದು

Last Updated 12 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಮತೋಲನ ಎಂಬುದು ಕೇವಲ ಭೌತಿಕ ನಿಯಮವಲ್ಲ; ಅದು ಮಾನಸಿಕ ಮತ್ತು ಆಂತರಿಕ ಮೌಲ್ಯವೂ ಹೌದು. ಜೈವಿಕ ಯಂತ್ರಶಾಸ್ತ್ರದಲ್ಲಿ (ಬಯೋಮೆಕಾನಿಕ್ಸ್) ‘ಸಮತೋಲನ’ ಎಂದರೆ ಆಧಾರದ ತಳದೊಳಗೆ ದೇಹದ ಗುರುತ್ವ ರೇಖೆಯನ್ನು (ದ್ರವ್ಯರಾಶಿಯ ಕೇಂದ್ರದಿಂದ ಲಂಬರೇಖೆ) ಭಂಗಿಯಲ್ಲಿ ಕನಿಷ್ಠತಮ ತೂಗಾಟದೊಂದಿಗೆ ಕಾಪಾಡಿಕೊಳ್ಳುವ ಸಾಮರ್ಥ್ಯ. ಅಂದರೆ ವಸ್ತುವೊಂದು ಉರುಳದಂತೆ ತನ್ನ ತೂಕವನ್ನು ಆಧರಿಸಿ ನಿಲ್ಲುವುದು. ಇಲ್ಲಿ ಎರಡು ಬಹು ಮುಖ್ಯವಾದ ಅಂಶಗಳಿವೆ. ಮೊದಲನೆಯದು ವಸ್ತುವಿನ ಆಕಾರ. ಎರಡನೆಯದು ಗುರುತ್ವಾಕರ್ಷಣ ಶಕ್ತಿ.

ವಸ್ತು ನಿಲ್ಲಬೇಕು ಉರುಳಬಾರದು ಎಂದಾದರೆ ಅದನ್ನು ಹಿಡಿದಿಡುವ ಗುರುತ್ವಾಕರ್ಷಣ ಶಕ್ತಿ ಬಲವಾಗಿರಬೇಕು. ಇದು ಗ್ರಹದಿಂದ ಗ್ರಹಕ್ಕೆ ಬದಲಾಗುತ್ತದೆ. ಮತ್ತು ಅದು ಗ್ರಹದ ತೂಕ ಮತ್ತು ಅದರ ತಿರುಗುವಿಕೆಯ ವೇಗವನ್ನು ಆಧರಿಸಿರುತ್ತದೆ ಎಂಬುದನ್ನು ಮರೆಯಬಾರದು. ಇವೆಲ್ಲ ಹೇಗೆ ಒಂದಕ್ಕೊಂದು ಜೋಡಣೆಯಾಗಿ ನಮ್ಮ ಆಂತರಿಕ ಬದುಕಿಗೂ ಅನ್ವಯವಾಗುತ್ತದೆ ಎಂದು ಆಲೋಚಿಸಿದಾಗ ಮಾತು ಮೂಕವಾಗುತ್ತದೆ. ಎರಡನೆಯ ಗಮನಿಕೆಯ ಅಂಶ ವಸ್ತುವಿನ ಆಕಾರ. ಒಂದೊಂದು ವಸ್ತುವಿನ ಆಕಾರವೂ ಬೇರೆ. ಎಷ್ಟೇ ನಿಖರವಾದದ್ದು ಎನಿಸಿಕೊಂಡರೂ, ಅದು ಅದ್ಭುತ ಯಂತ್ರದಲ್ಲೇ ಸೃಷ್ಟಿಯಾದರೂ ಒಂದು ವಸ್ತುವಿದ್ದಂತೆ ಇನ್ನೊಂದು ಇರಲಾರದು. ಇದು ಆರಂಭದ ಹಂತದ ಸೂಕ್ಷ್ಮ ವ್ಯತ್ಯಾಸ. ಆದರೆ ವಸ್ತು ಸವಕಳಿಯಾದಂತೆ ಮತ್ತೆ ಅದರ ಆಕಾರ ಬದಲಾಗುತ್ತದೆ, ಅದರ ಗುರುತ್ವರೇಖೆ ಕೂಡ ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ನಾವು ಬಳಸುವ ನಾಲ್ಕು ಚಕ್ರ ವಾಹನಗಳ ‘ವ್ಹೀಲ್‌ ಅಲೈನ್‌ಮೆಂಟ್’.‌ ಕಾರು ಕೊಳ್ಳುವಾಗ ಅದರ ವ್ಹೀಲ್ ಅನ್ನು ಅಲೈನ್‌ ಮಾಡಿರುತ್ತಾರೆ. ಆದರೆ ಮುಂದೆಯೂ ನಾವು ಆಗಾಗ ಅಲೈನ್‌ ಮಾಡಿಸುತ್ತಲೇ ಇರುತ್ತೇವೆ.

ಸಮತೋಲನಕ್ಕೂ ಸಾಮರಸ್ಯಕ್ಕೂ ಹತ್ತಿರದ ನಂಟು, ಗಂಟು. ವಸ್ತುಗಳ ಸಮತೋಲನ ಸರಿಯಿದ್ದಾಗ ಮಾತ್ರ ಅಲ್ಲಿ ಸಾಮರಸ್ಯ ಸಾಧ್ಯ. ವಸ್ತುಗಳನ್ನು ಒಂದರ ಪಕ್ಕ ಒಂದು ಒಪ್ಪವಾಗಿ ಜೋಡಿಸಿಬಿಟ್ಟರೆ ಅದು ಯಂತ್ರವಾಗದು. ಅವು ರೂಪಿತವಾದ ನಿರ್ದಿಷ್ಟ ಕಾರ್ಯವನ್ನು ಸಮರ್ಪಕವಾಗಿ ನೆರವೇರಿಸಲು ಸಾಧ್ಯವಾಗುವಂತೆ ಅವು ಪರಸ್ಪರ ಹೊಂದಿಕೊಂಡು ಮಿಳಿತವಾಗಿ ಒಟ್ಟೂ ಯಂತ್ರದ ನಿರೀಕ್ಷಿತ ಕಾರ್ಯವನ್ನು ಮಾಡುವಂತೆ ಇರಬೇಕು. ವಸ್ತುಗಳ ಸಂಯೋಜನೆಯಿಂದ ಉಪಕರಣಗಳು. ಹೀಗಾಗಿ ಅವುಗಳ ಜೋಡಣೆ ಸರಿಯಾಗಿ ಆಗಬೇಕಾದರೆ, ಸಾಮರಸ್ಯದ ಪೂರ್ಣಫಲ ಪಡೆಯಬೇಕಾದರೆ ಅಲ್ಲಿ ಎಲ್ಲವೂ ಸಮತೋಲನದಲ್ಲಿರಬೇಕು. ಅರ್ಥಾತ್‌, ಬಿಡಿಭಾಗಗಳ ಸಮತೋಲನದ ಸಮನ್ವಯತೆಯೇ ಸಾಮರಸ್ಯ. ಇದನ್ನು ಬಹಳ ಆಳವಾಗಿ ಭಾವಿಸಿದಾಗ ಕಣಗಳ ಸಂಯೋಜನೆಯಿಂದ ಅಣುವು, ಅಣುಗಳ ಸಂಯೋಜನೆಯಿಂದ ವಸ್ತುವೂ, ವಸ್ತುಗಳ ಸಂಯೋಜನೆಯಿಂದ ಯಂತ್ರವೂ ರೂಪುಗೊಳ್ಳುತ್ತದೆ ಎಂದು ತಿಳಿಯುತ್ತೇವೆ. ‘ಅಣೋರಣಿಯಾನ್‌ ಮಹತೋಮಹಿಯಾನ್’ – ಎಂಬ ತತ್ತ್ವವೇ ಇಲ್ಲಿದೆ.

ಭೌತಜಗತ್ತಿನ ಈ ಸೂತ್ರಗಳನ್ನು ಜೈವಿಕ ಜಗತ್ತಿಗೂ ಮನುಷ್ಯ ಮತ್ತು ಸಮಾಜಕ್ಕೂ ಅನ್ವಯಿಸಿದಾಗ ಇದು ಮತ್ತಷ್ಟು ಸುಂದರವಾಗಿ ಗೋಚರಿಸುತ್ತದೆ. ಜೀವ-ನಿರ್ಜೀವ ಎಂಬ ವರ್ಗೀಕರಣವೂ ಒಂದರ್ಥದಲ್ಲಿ ಅಪಸವ್ಯವೇ. ಏಕೆಂದರೆ ಇರುವುದೆಲ್ಲವೂ ಒಂದೇ ಶಕ್ತಿಯ ಆವಿರ್ಭಾವ. ಕೆಲವದರಲ್ಲಿ ಅದರ ಸ್ಪಂದನ ಕನಿಷ್ಠವಾಗಿದ್ದು ಅವು ನಿರ್ಜೀವ ಎನಿಸಿಕೊಳ್ಳುತ್ತವೆ. ಕೆಲವದರಲ್ಲಿ ಅದು ಗರಿಷ್ಠ ಮಟ್ಟದಲ್ಲಿದ್ದು ಜೀವ ಎನಿಸಿಕೊಳ್ಳುತ್ತದೆ. ಅಲ್ಲಿಂದ ಮತ್ತೂ ಮುಂದುವರೆಯುತ್ತದೆ. ಆ ವಿಚಾರ ‘ಅಧ್ಯಾತ್ಮ’ ಎಂದು ಎಸಿಕೊಳ್ಳುತ್ತದೆ. ಅದು ಅಂತರಂಗದ ಪಯಣ. ಅದು ಪ್ರತ್ಯೇಕ ವಿಚಾರ. ಪ್ರಸ್ತುತ ಸಮತೋಲನದ ಸೂತ್ರವನ್ನು ಜೀವಜಗತ್ತಿಗೆ ಅನ್ವಯಿಸಿದಾಗ ವ್ಯಷ್ಟಿಮಟ್ಟದಲ್ಲಿ ಅದು ದೇಹದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳ ಸಮತೋಲನ. ಅಂದರೆ ಇವು ಮೂರೂ ಸಾಧ್ಯವಾದಷ್ಟರ ಮಟ್ಟಿಗೆ ಅತಿ ಉನ್ನತ ಶ್ರೇಣಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮತ್ತು ಅವುಗಳ ನಡುವೆ ಸಾಮರಸ್ಯವೂ ಇರಬೇಕು. ಅಂತಹ ವ್ಯಕ್ತಿತ್ವದಿಂದ ಅಪರಿಮಿತ ಸಾಧನೆ ಸಾಧ್ಯ. ಇಂತಹ ಸಮರ್ಥ ವ್ಯಕ್ತಿಗಳ ನಡುವಣ ಸಾಮರಸ್ಯವೇ ಸಂಸ್ಥೆ, ಸಂಘಟನೆ, ಸಮಾಜ. ಎಲ್ಲಿ ಸಾಮರಸ್ಯ ಕೆಡುತ್ತದೋ ಅಲ್ಲಿ ಸಮತೋಲನ ತಪ್ಪುತ್ತದೆ. ಸಮತೋಲನ ತಪ್ಪಿದೆಡೆಯಲ್ಲಿ ಪ್ರಗತಿ ಕುಂಠಿತವಾಗುತ್ತದೆ. ಇದು ಸಹಜ, ನಿಯಮ.

ಇಷ್ಟಾಗಿಯೂ ವ್ಯಕ್ತಿಯಲ್ಲಿ ಸಮಾಜದಲ್ಲಿ ಅದೇಕೆ ಅಸಮತೋಲನಗಳಿವೆ? ಇದು ಹೀಗೇಯೇ? ಹೀಗಾದರೆ ಈ ಜಗತ್ತಿನಲ್ಲಿ ನಮ್ಮ ಬದುಕು ಹೇಗೆ ಎಂಬೆಲ್ಲ ಆಲೋಚನೆ ಬರುತ್ತದೆ. ಜಗತ್ತಿನಲ್ಲಿ ತಾವೊಬ್ಬರೇ ಸರಿ, ಉಳಿದವರೆಲ್ಲ ತಪ್ಪು ಎಂದು ಎಲ್ಲರೂ ಭಾವಿಸುತ್ತೇವೆ. ಆದರೆ ಬಾಯಿಬಿಟ್ಟು ಹೇಳುವುದಿಲ್ಲ ಅಷ್ಟೆ! ಗೊಂದಲದ ಗೂಡೊಳಗೆ ನಿಂದನೆಯ ಮಾಡೊಳಗೆ ನೆಟ್ಟಗೆ ನಿಲ್ಲುವವನೇ ಯೋಗಿ. ಜಗತ್ತಿನ ನಡೆಯೇ ಹಾಗೇ; ‘ವಿಕಟ ಪರಿಹಾಸ, ಆಸ್ಯ ಗಂಭೀರ…ವಿಶ್ವಾಸದುಪಚಾರ; ಹುಣಿಸೆಮೆಣಸಾಹಾರ.’ ಆದ್ದರಿಂದಲೇ ಜಗತ್ತಿನಲ್ಲಿ ಸಮತೋಲನಕ್ಕಾಗಿ ಬಹುಬೇಡಿಕೆಯಿದೆ. ಸಮತೋಲನದ ಸಾಮರಸ್ಯವೇ ಯೋಗ ಮತ್ತು ಪ್ರಾಣಾಯಾಮ. ಎಲ್ಲ ಅಸಮತೆಗಳ ನಡುವೆ ಧೃತಿಗೆಡದೆ ನಿಲುವವನೆ ಯೋಗಿ. ಆದರೆ ಇದರ ಸಾಧನೆಗೆ ಬೇಕಾಗುವ ಪ್ರಯತ್ನ ಮಾತ್ರ ಅಪಾರ. ಇದನ್ನು ಕಗ್ಗ ಸೊಗಸಾಗಿ ಹೇಳುತ್ತದೆ: ‘ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು, ಅಸಮಂಜಸದಿ ಸಮನ್ವಯ ಸೂತ್ರ ನಯವ, ವೆಸನಮಯ ಸಂಸಾರದಲಿ ವಿನೋದವ ಕಾಣ್ಬ ರಸಿಕತೆಯೆ ಯೋಗವೆಲೊ – ಮಂಕುತಿಮ್ಮ.’

ಜಗತ್ತೆಂಬ ಸಂಸಾರದ ಅಸಮತೆಯ ಕೃತ್ರಿಮತೆಯಲ್ಲಿ ವಿನೋದವನ್ನು ಕಾಣುವ ಯೋಗರಸಿಕತೆ ನಮಗೆಲ್ಲ ದೊರೆಯಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT