ಮಂಗಳವಾರ, ಫೆಬ್ರವರಿ 25, 2020
19 °C

ಕೊರೊನಾ ವೈರಸ್‌ ಬಗ್ಗೆ ಇರಲಿ ಜಾಗರೂಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೀನಾ ಸೇರಿದಂತೆ ಕೆಲ ದೇಶಗಳು ಕೊರೊನಾ ವೈರಸ್‌ಗೆ ತತ್ತರಿಸಿದ್ದು, ಇದರಿಂದ ವಿಶ್ವದ ಹಲವೆಡೆ ಆತಂಕದ ಛಾಯೆ ಕಾಣಿಸಿಕೊಂಡಿದೆ. ಇದಕ್ಕೆ ಉದ್ಯಾನನಗರಿಯು ಹೊರತಲ್ಲ. ಹಾಗೆಂದು ಸುಖಾಸುಮ್ಮನೆ ಭಯ ಪಡುತ್ತಾ ಕುಳಿತರೆ ಪ್ರಯೋಜನವಿಲ್ಲ. ಈ ವೈರಸ್‌ಗಳನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು. 

ವಿದೇಶದಲ್ಲಿ ಈ ವೈರಸ್‌ ಕಾಣಿಸಿಕೊಂಡಿದ್ದರಿಂದ ನಗರದ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸಿಬ್ಬಂದಿಯು ಪ್ರಯಾಣಿಕರನ್ನು ಥರ್ಮಲ್‌ ಸ್ಕ್ಯಾನರ್‌ನಿಂದ ತಪಾಸಣೆಗೆ ಒಳಪಡಿಸುತ್ತಿದ್ದಾರೆ. 

ಇದಕ್ಕೆ ಸಂಬಂಧಪಟ್ಟಂತೆ ಈವರೆಗೆ 18 ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ನಗರದಲ್ಲಿನ ಆರೋಗ್ಯ ಕಾರ್ಯಕರ್ತೆಯರು ಅನಾರೋಗ್ಯ ಪೀಡಿತರ ಮಾಹಿತಿ ಕಲೆ
ಹಾಕುತ್ತಿದ್ದಾರೆ. 

ಎಲ್ಲೆಲ್ಲಿ ತಪಾಸಣೆ? 

ಶಂಕಿತರಿಗಾಗಿ ನಗರದ ಫೋರ್ಟಿಸ್‌, ನಾರಾಯಣ ಹೆಲ್ತ್‌, ವಿಕ್ಟೋರಿಯಾ ಹಾಗೂ ಮಣಿಪಾಲ್‌, ರಾಜೀವ್‌ಗಾಂಧಿ ಎದೆರೋಗದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸಲಾಗಿದ್ದು, ವಿಶೇಷ ನಿಗಾ ಇಡಲಾಗಿದೆ. 

ವೈದ್ಯಕೀಯ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಆರೋಗ್ಯ ಇಲಾಖೆ ಪರಸ್ಪರ ಜತೆಗೂಡಿ ಕೆಲಸ ಮಾಡುತ್ತಿದೆ. 

ಈ ಬಗ್ಗೆ ‘ಮೆಟ್ರೊ’ದೊಂದಿಗೆ ಮಾಹಿತಿ ಹಂಚಿಕೊಂಡ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ವಿಜಯೇಂದ್ರ, ‘ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡುವ ಶಂಕಿತರನ್ನು ಸಂಬಂಧಪಟ್ಟ ರಾಜ್ಯದ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ. ನಗರದವರಾದರೆ ಬೌರಿಂಗ್‌, ವಿಕ್ಟೋರಿಯಾ ಅಥವಾ ರಾಜೀವ್‌ ಗಾಂಧಿ ಆಸ್ಪತ್ರೆಗೆ ಕಳುಹಿಸಿ, ನಿಗಾ ವಹಿಸಲಾಗುತ್ತದೆ’ ಎಂದು ಹೇಳಿದರು. 

ಈವರೆಗೆ ಕೊರೊನಾ ವೈರಸ್‌ ನಗರದಲ್ಲಿ ಪತ್ತೆಯಾಗಿಲ್ಲ. ಆದರೂ ಈ ವೈರಸ್‌ನ ಬಗ್ಗೆ ರೇಡಿಯೊ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್‌ ಹೇಳುವಂತೆ, ‘ಮೊದಲು ಪುಣೆಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಲ್ಲಿ ಮಾತ್ರ (ವೈದ್ಯಕೀಯ ಪರೀಕ್ಷಾ ವರದಿ) ಎನ್‌ಐವಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಈಗ ಈ ಸೌಲಭ್ಯ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಇದೆ. ವೈದ್ಯಕೀಯ ವರದಿ  24 ತಾಸಿನೊಳಗೆ ಕೈ ಸೇರುತ್ತದೆ. ಎರಡೂ ಕಡೆ ಪರೀಕ್ಷೆ ಲಭ್ಯವಾಗಿರುವುದರಿಂದ ವೈದ್ಯಕೀಯ ವರದಿಗಳು ಶೀಘ್ರ ಸಿಗುತ್ತಿರುವುದು ಸಮಾಧಾನಕರ ಸಂಗತಿ’ ಎನ್ನುತ್ತಾರೆ. 

ಈವರೆಗೆ 102 ಜನರ ವರದಿ ನೆಗೆಟಿವ್‌ ಎಂದು ಬಂದಿದೆ. ಶಂಕಿತ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಿಶ್ವಾಸ ಅವರದ್ದು. 

ಏನು ಮಾಡಬೇಕು?

ಸಾರ್ವಜನಿಕ ಸಾರಿಗೆ ಬಳಸುವವರು ಆದಷ್ಟು ಜಾಗ್ರತೆ ವಹಿಸಿ. ಮೆಟ್ರೊ, ಬಸ್‌ಗಳಲ್ಲಿ ಹೋಗುವಾಗ ಯಾರಾದರೂ ಸೀನುತ್ತಿದ್ದರೆ, ಕೆಮ್ಮುತ್ತಿದ್ದರೆ ಅವರಿಂದ ದೂರವಿರಿ. ಕೈಕುಲುಕುವುದು, ಮುಖದ ಸಮೀಪದಲ್ಲಿ ಮಾತನಾಡುವುದು ಮಾಡಬಾರದು. ಮುಖಕ್ಕೆ ಮಾಸ್ಕ್‌ ಬಳಸುವುದು ಒಳ್ಳೆಯದು. ಸೋಂಕಿತರನ್ನು ಮನೆಯೊಳಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು. 

ಅನಗತ್ಯ ಪ್ರಯಾಣ ಮಾಡಬೇಡಿ

ಈ ರೋಗದ ಭೀತಿ ಕಡಿಮೆಯಾಗುವ ತನಕ ಯಾವುದೇ ದೇಶಗಳಿಗೆ ಅಥವಾ ದೇಶದ ಬೇರೆ ಭಾಗಗಳಿಗೆ ಅನಗತ್ಯವಾಗಿ ಪ್ರಯಾಣ ಬೆಳೆಸಬೇಡಿ. ವೈರಸ್‍ಗಳು ಬಹುವೇಗವಾಗಿ ಮಕ್ಕಳಲ್ಲಿ ಹರಡುತ್ತವೆ. ಶಾಪಿಂಗ್‌ ಮಾಲ್‌, ಮೈದಾನ ಸೇರಿ ಆದಷ್ಟು ಮಕ್ಕಳನ್ನು ಸಾರ್ವಜನಿಕ ಸ್ಥಳಗಳಿಗೆ ಸ್ವಲ್ಪ ದಿನ ಕಳುಹಿಸದೇ ಇರುವುದು ಒಳ್ಳೆಯದು ಎಂಬುದು ವೈದ್ಯರ ಕಾಳಜಿ ಮಾತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು