ಸೋಮವಾರ, ಆಗಸ್ಟ್ 3, 2020
23 °C

ಫಿಟ್‌ನೆಸ್‌ಗೂ ಮುನ್ನ ಇರಲಿ ಎಚ್ಚರ

ಸುಮಾ ಬಿ. Updated:

ಅಕ್ಷರ ಗಾತ್ರ : | |

ಆಯುವತಿಗೆ 27ರ ಹರೆಯ. ತುಸು ದಪ್ಪಗಿನ ಮೈಕಟ್ಟು. ಇದೇ ಕಾರಣಕ್ಕೆ ಮದುವೆಯೂ ನಿಶ್ಚಯವಾಗಿಲ್ಲ. ಸರಿ, ಮೈ ಕರಗಿಸಲು ಮೊರೆಹೋದದ್ದು ಝುಂಬಾ ಫಿಟ್‌ನೆಸ್‌ಗೆ. ಒಮ್ಮೆಲೆ ದೇಹ ದಂಡಿಸಿ ತಿಂಗಳಲ್ಲೇ ಸ್ಲಿಮ್‌ ಆಗುವ ಇರಾದೆ ಆಕೆಯದು. ದಿನದ ಐದಾರು ಗಂಟೆ ಫಿಟ್‌ನೆಸ್‌ಗೆ ಮೀಸಲಾಯಿತು. ತರಬೇತಿಯಲ್ಲಿ ಹೇಳಿಕೊಟ್ಟ ವಿವಿಧ ಭಂಗಿಗಳನ್ನು ಮನೆಯಲ್ಲಿ ಮಾಡುವಾಗ ಸೊಂಟ ಉಳುಕಿತು. ಮೇಲೇಳಲಾಗದೆ ಆಸ್ಪತ್ರೆಗೆ ದಾಖಲಾಗಬೇಕಾಯಿತು.

***

ಮಧುಮೇಹ ಖಾಯಿಲೆ ಇರುವುದು ದೃಢಪಟ್ಟಾಗ ಆ ಮಹಿಳೆಗೆ 55 ವರ್ಷ. ನಿರಂತರ ವಾಯುವಿಹಾರ, ವ್ಯಾಯಾಮ ಮಾಡಿ ಎಂದು ವೈದ್ಯರು ಸಲಹೆ ಇತ್ತರು. ಅಂದಿನಿಂದ ಶುರುವಾಯಿತು ಯೋಗ, ಪ್ರಾಣಯಾಮದ ಕಲಿಕೆ. ದಿನಕ್ಕೆ ಐದಾರು ಕಿ.ಮೀ. ನಡಿಗೆ. ಒಮ್ಮೆ ಸರ್ವಾಂಗಾಸನ ಮಾಡಲು ಹೋದ ಆ ಮಹಿಳೆಯ ಭುಜದ ಮೂಳೆಯೆ ಮುರಿಯಿತು.

***

ಇವು ಎರಡು ಉದಾಹರಣೆಯಷ್ಟೇ. ದೇಹವನ್ನು ಫಿಟ್‌ ಆಗಿ ಇಡಬೇಕೆಂಬ ಆತುರದಲ್ಲಿ ಅನೇಕರು ಇಂತಹ ಅವಘಡಗಳಿಗೆ ತುತ್ತಾಗಿದ್ದಾರೆ. ದೇಹಕ್ಕೆ ಆಧಾರವಾಗಿರುವ ಬೆನ್ನುಮೂಳೆಯನ್ನೇ ಮುರಿದುಕೊಂಡಿರುವ, ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ. ಒತ್ತಡದ ಜೀವನಶೈಲಿಯಲ್ಲೇ ಫಿಟ್‌ನೆಸ್‌ಗೂ ಈಗ ಸಮಯ ಮೀಸಲಿದ್ದೇ ಇರುತ್ತದೆ. ದೇಹದಲ್ಲಿ ಸ್ವಲ್ಪವೂ ಬೊಜ್ಜು ಇರಬಾರದು ಎಂದು ಜಿಮ್‌ನಲ್ಲಿ ಬೆವರಿಳಿಸುವವರು ಅನೇಕರು. ಯೋಗ, ವ್ಯಾಯಾಮ, ಜುಂಬಾ ಡಾನ್ಸ್‌, ಬೆಲ್ಲಿ ಡಾನ್ಸ್‌, ಜಿಮ್‌, ಈಜು ಇವೆಲ್ಲವೂ ಫಿಟ್‌ನೆಸ್‌ನ ಭಾಗವಾಗೇ ರೂಪು ತಳೆದಿವೆ.

ಒಂದೇ ದಿನದಲ್ಲೇ ಮೈಕರಗಿಸಿಬಿಡಬೇಕು ಎನ್ನುವ ಜಿದ್ದಿಗೆ ಬೀಳುವ ಜನ ಅದರಲ್ಲೂ ಯುವಕರು ಅತಿಯಾಗಿ ದೇಹ ದಂಡಿಸುತ್ತಾರೆ. ಒಬ್ಬರನ್ನು ನೋಡಿ ಇನ್ನೊಬ್ಬರು ಅದೇ ರೀತಿಯ ಕಸರತ್ತು ಮಾಡಲು ಹೋಗಿ ಅವಘಡಗಳಿಗೆ ತುತ್ತಾಗುತ್ತಾರೆ. ಈಚೆಗೆ ಮಹಿಳೆಯರಲ್ಲೂ ಫಿಟ್‌ನೆಸ್‌ ಪ್ರಜ್ಞೆ ಅತಿಯಾಗೇ ಇದೆ. ಸ್ಲಿಮ್‌ ಆಗಿರಬೇಕೆಂದು ಆಲೋಚಿಸುವ ಮಹಿಳೆ ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಾಳೆ. ಫಿಟ್‌ನೆಸ್‌ ಯಾವರೂಪದ್ದೇ ಆದರೂ ಅದು ಪ್ರತಿಯೊಬ್ಬರ ದೇಹ ರಚನೆ, ಆರೋಗ್ಯ ಸ್ಥಿತಿ, ರಕ್ತದೊತ್ತಡದ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತದೆ ವೈದ್ಯಲೋಕ. ವರ್ಕ್‌ಔಟ್‌ ಮಾಡುವಾಗ ಮಾಂಸಖಂಡಗಳು ಸರಿದಾಡುವುದು, ಪಾದಗಳು ಉಳುಕುವುದು, ಭುಜ,ಮೊಣಕಾಲಿಗೆ ಪೆಟ್ಟಾಗುವುದು, ಮೊಣಕಾಲಿನ ಮುಂಭಾಗ ಸರಿಯು ವುದು, ಸ್ನಾಯುಗಳಲ್ಲಿ ಉರಿಯೂತ, ಮಣಿಕಟ್ಟು ಸ್ಥಳಾಂತರ ವಾಗುವುದು, ಹಿಮ್ಮಡಿ, ಪಾದಗಳ ನೋವು, ಸೊಂಟ, ಕತ್ತು ಉಳುಕುವುದು ಇವೆಲ್ಲ ಸಾಮಾನ್ಯವಾಗಿ ಆಗುವಂತಹ ಏಟುಗಳು.

ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಣ್ಣಪುಟ್ಟ ಅವಘಡಗಳನ್ನು ಅನುಭವಿಸಿಯೇ ಇರುತ್ತಾರೆ. ಸಂಶೋಧನಯೊಂದರ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವಾಗ ದೇಹದ ಅಂಗಾಂಗಳನ್ನು ಮುರಿದುಕೊಳ್ಳುವ ಪ್ರಕರಣಗಳು ಶೇ 35ರಷ್ಟು ಹೆಚ್ಚಾಗಿವೆ. ಅದರಲ್ಲೂ 17ರಿಂದ 25 ವಯಸ್ಸಿನವರಲ್ಲೇ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಫಿಟ್‌ನೆಸ್‌ ಎಂದರೆ ಜಿಮ್‌ಗೆ ಹೋಗಿ ಬೆವರಿಳಿಸುವುದೊಂದೇ ಅಲ್ಲ. ಲಿಫ್ಟ್‌ ಬದಲು ಮೆಟ್ಟಿಲು ಬಳಸುವುದು, ಹತ್ತಿರದ ಮಾರುಕಟ್ಟೆಗೆ ನಡೆದುಹೋಗಿ ಸಾಮಾನು ತರುವುದು, ಮಕ್ಕಳ ಜತೆಯಲ್ಲಿ ಕ್ರೀಡೆಯಲ್ಲಿ ತೊಡಗುವುದು ಇವೆಲ್ಲ ಫಿಟ್‌ನೆಸ್‌ಗೆ ಸೇರುತ್ತವೆ.

ಇರಲಿ ಮುನ್ನೆಚ್ಚರಿಕೆ

ಫಿಟ್‌ನೆಸ್‌ ಆಲೋಚನೆ ಮನದಲ್ಲಿ ಬಂದೊಡನೆ ದೇಹದ ವೈದ್ಯಕೀಯ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಿ, ವೈದ್ಯರ ಸಲಹೆ ಪಡೆಯಬೇಕು. ಅದರಲ್ಲೂ ವಿವಿಧ ಖಾಯಿಲೆ ಇರುವವರು (ಮಧುಮೇಹ, ಹೃದಯ ಸಂಬಂಧಿ ಖಾಯಿಲೆ, ರಕ್ತದೊತ್ತಡ ಇತ್ಯಾದಿ) ಪ್ರತಿ ಹಂತದಲ್ಲೂ ವೈದ್ಯರ ಸಲಹೆ ಪಡೆದೇ ಮುಂದುವರಿಯಬೇಕು. ದೇಹದ ಆರೋಗ್ಯ ಸ್ಥಿತಿ, ರಕ್ತದೊತ್ತಡವನ್ನು ಆಗಾಗ ಪರೀಕ್ಷಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ವರ್ಕ್‌ಔಟ್‌ ಕೈಗೊಂಡರೆ ಸಾಕು.

ವೈದ್ಯರು ವ್ಯಾಯಾಮ ಮಾಡಲು ಹೇಳಿದರೆಂದು ಮೊದಲ ದಿನದಿಂದಲೇ ಹತ್ತಾರು ಕಿ.ಮೀ ಓಡಿ ಬೆವರಿಳಿಸಲು ಮುಂದಾಗಬಾರದು. ಮಿತವಾದ ವ್ಯಾಯಾಮ ದೇಹಕ್ಕೆ ಹಿತ. ಇನ್ನು ಜಿಮ್‌ನಲ್ಲಿ ಟ್ರೆಡ್‌ಮಿಲ್‌ ಬಳಸುವವರು, ಸೈಕಲ್‌ ರೈಡಿಂಗ್‌ ಮಾಡುವವರು, ಜಂಪಿಂಗ್‌ ಮಾಡುವವರು ನಿಧಾನಕ್ಕೆ ಆರಂಭಿಸಬೇಕು. ಒಮ್ಮೆಲೆ ಅಬ್ಬರದಲ್ಲಿ ಶುರುವಿಟ್ಟುಕೊಂಡರೆ ಅವಘಡ ಕಟ್ಟಿಟ್ಟಬುತ್ತಿ. ಅತಿಯಾದ ಭಾರ ಎತ್ತಬಾರದು. ಶಕ್ತಿಗೂ ಮೀರಿ ಭಾರ ಎತ್ತಲು ಮುಂದಾದರೆ ಭುಜ ಅಥವಾ ಮೊಣಕೈನ ಕೀಲು ಸ್ಥಳಾಂತರವಾಗುವ, ಮುರಿಯುವ ಸಂಭವ ಹೆಚ್ಚು. ವಾಕಿಂಗ್‌ ಅಥವಾ ಜಿಮ್‌ ಮಾಡುವಾಗ ಪಾದಗಳಿಗೆ ಹೊಂದುವಂತಹ ಪಾದರಕ್ಷೆಗಳು ಇರಲಿ.

ಊಟ ಬಿಟ್ಟರೆ ತೆಳ್ಳಗಾಗುತ್ತಾರೆ ಎನ್ನುವ ಮನೋಭಾವ ಬಹುತೇಕರಿಲ್ಲಿದೆ. ಉಪವಾಸ ಮಾಡಿ ವ್ಯಾಯಾಮ ಕೈಗೊಳ್ಳುತ್ತಾರೆ. ಇದು ದೇಹದ ಸ್ಥಿತಿಯನ್ನೇ ಏರುಪೇರು ಮಾಡುತ್ತದೆ. ಪೌಷ್ಠಿಕಾಂಶ ಯುಕ್ತ ಮಿತಾಹಾರ ಸೇವಿಸಿ, ವ್ಯಾಯಾಮ ಕೈಗೊಳ್ಳಬಹುದು.

ಹೆಚ್ಚಿನವರು ಗುರಿ ತಲುಪಿದ ಕೂಡಲೆ ನಿಯಮಿತ ವರ್ಕ್‌ಔಟ್‌ ಅನ್ನು ಬಿಟ್ಟೇಬಿಡುತ್ತಾರೆ. ಇದು ಸರಿಯಲ್ಲ. ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ನಿತ್ಯದ ಭಾಗವಾಗಬೇಕು. ಫಿಟ್‌ನೆಸ್‌ನಲ್ಲಿ ಎಲ್ಲರಿಗೂ ಒಂದೇ ಸೂತ್ರ ಇರುವುದಿಲ್ಲ . ಪ್ರತಿಯೊಬ್ಬರ ದೇಹಪ್ರಕೃತಿ, ಆರೋಗ್ಯ ಸ್ಥಿತಿಯನ್ನು ಅವಲಂಬಿತವಾಗಿರುತ್ತದೆ. ಹಾಗಾಗಿ ವೈದ್ಯರ ಹಾಗೂ ತರಬೇತುದಾರರ ಸಲಹೆ ಪಡೆದು ಮುಂದುವರಿಯಬೇಕು. ದೇಹಕ್ಕೆ ವಿಶ್ರಾಂತಿ– ವ್ಯಾಯಾಮ ಎರಡೂ ಮುಖ್ಯ. ಫಿಟ್‌ ಆಗಿರಬೇಕೆಂದು ಪ್ರತಿದಿನವೂ ಜಿಮ್‌ ಕೈಗೊಂಡರೆ ದೇಹಕ್ಕೆ ವಿಶ್ರಾಂತಿ ಇಲ್ಲದಂತಾಗುತ್ತದೆ. ಆದ್ದರಿಂದ ವಾರಕ್ಕೆ ಒಂದುದಿನ ವಿಶ್ರಾಂತಿ ಇರಲಿ.

ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡಿ ಬೆವರಿಳಿಸುವುದರಿಂದ ದೇಹದಲ್ಲಿನ ನೀರಿನಂಶ ಹೊರಹೋಗುತ್ತದೆ. ಹಾಗಾಗಿ, ಹೆಚ್ಚು ನೀರು ಕುಡಿಯುವುದು, ನೀರಿನಂಶವಿರುವ ಹಣ್ಣುಗಳ ಸೇವನೆ ಹೆಚ್ಚಿರಲಿ. ಇಲ್ಲದಿದ್ದರೆ ಡಿಹೈಡ್ರೇಶನ್‌ ಆಗುವ ಸಂಭವ ಹೆಚ್ಚು.

ಮಿತ ಆಹಾರ, ಮಿತ ವ್ಯಾಯಾಮವನ್ನು ರೂಢಿಸಿಕೊಂಡರೆ ಯಾವುದೇ ಅಪಾಯ ಎದುರಾಗದು. ಆರೋಗ್ಯವೂ ಸಮಸ್ಥಿತಿಯಲ್ಲಿರುತ್ತದೆ. ನಮ್ಮ ದೇಹದ ಬಾಳಿಕೆ ನಮ್ಮ ಕೈಯಲ್ಲೇ ಇದೆ ಎನ್ನುವುದನ್ನು ಮರೆಯಬಾರದಷ್ಟೆ.

ಜಿಮ್‌ಗೂ ಮುನ್ನ ಆರೋಗ್ಯ ಸ್ಥಿತಿ ಅರಿಯಿರಿ


ಕಿರಣ್‌ಕುಮಾರ್‌ ಕುಲಕರ್ಣಿ

ಬಹುತೇಕರು ತಮ್ಮ ಆರೋಗ್ಯಸ್ಥಿತಿ ಅರಿಯದೆ ಜಿಮ್‌ಗೆ ಹೋಗುತ್ತಾರೆ. ಅಲ್ಲಿ ಅನಿಯಮಿತ ವರ್ಕ್‌ಔಟ್‌ ಮಾಡಿ ಒಂದೇ ದಿನದಲ್ಲಿ ಆಸ್ಪತ್ರೆ

ಸೇರುವಂತಾಗುತ್ತಾರೆ. ಆ ಬಳಿಕ ಅವರಿಗೆ ಜಿಮ್‌ಗೆ ಹೋಗುವ ಆಸಕ್ತಿಯೇ ಹೊರಟುಹೋಗುತ್ತದೆ. ಬಹುತೇಕರಲ್ಲಿ ಈ ಸಮಸ್ಯೆ ಕಾಣುತ್ತೇವೆ. ಮಧುಮೇಹಿಗಳು ವೈದ್ಯರು ಹೇಳಿದರೆಂದು ಒಂದೇ ದಿನ ಹತ್ತಾರು ಕಿ.ಮೀ ನಡೆಯುತ್ತಾರೆ. ಅದು ಸಲ್ಲದು. ಎಷ್ಟು ಕಿ.ಮೀ ನಡೆಯಬೇಕು ಎನ್ನುವುದನ್ನೂ ವೈದ್ಯರ ಸಲಹೆ ಪಡೆಯಬೇಕು. ವ್ಯಕ್ತಿಯ ದೇಹದ ಸ್ಥಿತಿ, ವಯಸ್ಸು, ತೆಗೆದುಕೊಳ್ಳುವ ಔಷಧಿಯ ಪ್ರಮಾಣ, ರಕ್ತದೊತ್ತಡ ಆಧರಿಸಿ ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೇ ವ್ಯಾಯಾಮದ ಸಂದರ್ಭದಲ್ಲಿ ಅಂಗಾಂಗಳಿಗೆ ಏಟಾದರೆ ತಕ್ಷಣ ವೈದ್ಯರನ್ನು ಕಾಣಬೇಕು. ಬಹುತೇಕರು ‘ನೋಡೋಣ ಬಿಡು; ಆರಾಮಾಗಬಹುದು’ ಎಂದು ಸುಮ್ಮನಾಗುತ್ತಾರೆ. ದಿನದಿಂದ ದಿನಕ್ಕೆ ನೋವು ಹೆಚ್ಚಾದಾಗ ವೈದ್ಯರು ನೆನಪಾಗುತ್ತಾರೆ. ಅಷ್ಟೊತ್ತಿಗಾಗಲೇ ಅಂಗಾಂಗ ವಾಸಿಯಾಗದ ಸ್ಥಿತಿಗೆ ತಲುಪುವ ಸಾಧ್ಯತೆಯೂ ಹೆಚ್ಚಿರುತ್ತದೆ.

–ಡಾ.ಕಿರಣ್‌ಕುಮಾರ್‌ ಕುಲಕರ್ಣಿ, ಕ್ರೀಡಾ ವೈದ್ಯ, ಧಾರವಾಡ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು