ಮಂಗಳವಾರ, ಮೇ 26, 2020
27 °C

ಮನೆಯಿಂದಲೇ ಅಂದ ಕಾಪಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್ ಪರಿಣಾಮ ಮನೆಯೊಳಗೆ ಇದ್ದು ಚರ್ಮ, ಉಗುರು ಹಾಗೂ ಕೂದಲ ಸೌಂದರ್ಯದ ಬಗ್ಗೆ ನಾವು ಅಷ್ಟೊಂದು ತಲೆಕೆಡಿಸಿಕೊಂಡಿರುವುದಿಲ್ಲ. ಸೌಂದರ್ಯಪ್ರಜ್ಞೆ ಹೆಚ್ಚಿರುವವರಿಗೆ ಈ ಲಾಕ್‌ಡೌನ್ ವರದಾನವಾಗಿದೆ. ಯಾಕೆಂದರೆ ಬಿರುಬಿಸಿಲಿಗೆ ಚರ್ಮ, ಕೂದಲನ್ನು ಒಡ್ಡುವುದಕ್ಕೆ ತಡೆ ಬಿದ್ದಿದೆ. ಆದರೆ, ಮನೆಯಲ್ಲಿಯೇ ಇದ್ದರೂ ದೂಳು, ಬಿಸಿಲಿನ ಕಾರಣದಿಂದ ಚರ್ಮವು ಕಾಂತಿ ಕಳೆದುಕೊಂಡಿರುತ್ತದೆ. ಕೂದಲು, ಉಗುರುಗಳು ಅಡ್ಡಾದಿಡ್ಡಿ ಬೆಳೆದಿರುತ್ತವೆ. ಬ್ಯೂಟಿಪಾರ್ಲರ್ ಹಾಗೂ ಸಲೂನ್‌ಗಳಿಗೆ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲೇ ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ಕೂದಲು, ಉಗುರು ಹಾಗೂ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಉಗುರಿನ ಹೊರಪೊರೆ ಸ್ವಚ್ಛಗೊಳಿಸಿ

ಉಗುರು ಹಾಗೂ ಬೆರಳುಗಳ ಸಂಧಿಯಲ್ಲಿ ಕ್ಯೂಟಿಕಲ್ಸ್‌ಗಳು ಬೆಳೆಯುವುದು ಸಾಮಾನ್ಯ. ಇವು ಉಗುರಿನ ಅಂದವನ್ನು ಹಾಳು ಮಾಡುತ್ತವೆ. ಬೆಳವಣಿಗೆಗೂ ಅಡ್ಡಿಪಡಿಸುತ್ತವೆ. ಅಲ್ಲಲ್ಲಿ ಚರ್ಮ ಒಣಗಿ ಬಿರಿದಂತೆ ಕಾಣಿಸಬಹುದು. ಅದನ್ನು ತಡೆಯಲು ಕ್ಯೂಟಿಕಲ್ ಎಣ್ಣೆ ಸಹಾಯಕ. ಈ ಎಣ್ಣೆ ಇಲ್ಲದಿದ್ದರೆ ತೆಂಗಿನೆಣ್ಣೆ ಅಥವಾ ಆಲೀವ್‌ ಎಣ್ಣೆ ಬಳಸಬಹುದು. ಎಣ್ಣೆಯಲ್ಲಿ ಬ್ರಷ್‌  ಅದ್ದಿ ಉಗುರು, ಬೆರಳಿನ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಕ್ಯೂಟಿಕಲ್ಸ್‌ಗಳು ಸ್ವಚ್ಛಗೊಂಡು ಉಗುರಿನ ಅಂದ ಹೆಚ್ಚುತ್ತದೆ. ವಾರಕ್ಕೊಮ್ಮೆ ಹೀಗೆ ಮಾಡುವುದು ಉತ್ತಮ. 

ಕೂದಲ ತುದಿಗೆ ಕತ್ತರಿ ಹಾಕಿ

ಕಳೆದೆರಡು ತಿಂಗಳಿಂದ ಸಲೂನ್‌ಗೆ ಭೇಟಿ ನೀಡಲು ಸಾಧ್ಯವಾಗದೇ ಕೂದಲು ಅಡ್ಡಾದಿಡ್ಡಿ ಬೆಳೆದಿರಬಹುದು. ಕೂದಲ ತುದಿ ಸೀಳಿಕೊಂಡು ಅಸಹ್ಯವಾಗಿ ಕಾಣಿಸಬಹುದು. ಹಾಗಾಗಿ ಮನೆಯಲ್ಲಿಯೇ ಯಾರದ್ದಾದರೂ ಸಹಾಯ ಪಡೆದು ಕೂದಲ ತುದಿಯನ್ನು ಟ್ರಿಮ್ ಮಾಡಿಸಿಕೊಳ್ಳಿ. ಇದರಿಂದ ಕೂದಲ ಬೆಳವಣಿಗೆಗೆ ಸಹಾಯವಾಗುತ್ತದೆ.

ಮುಖಕ್ಕೆ ಹಬೆ ಹಿಡಿಯಿರಿ

ಮನೆಯಲ್ಲಿ ಸ್ಟೀಮರ್ ಇದ್ದರೆ ನಿಜಕ್ಕೂ ಸಂತೋಷ. ಇಲ್ಲದಿದ್ದರೆ ಚಿಂತೆ ಬೇಡ. ಬಿಸಿನೀರನ್ನು ಪಾತ್ರೆಯೊಂದಕ್ಕೆ ಹಾಕಿಕೊಂಡು ಟವೆಲ್‌ ಮೂಲಕ ಮುಚ್ಚಿಕೊಂಡು ಬಿಸಿನೀರಿನ ಶಾಖ ನೇರವಾಗಿ ಮುಖಕ್ಕೆ ಬೀಳುವಂತೆ ಮಾಡಿಕೊಳ್ಳಿ. ಇದರಿಂದ ಮುಖದ ರಂಧ್ರಗಳು ತೆರೆದುಕೊಳ್ಳುತ್ತವೆ. ಚರ್ಮದ ಬಿಗಿ ಸಡಿಲವಾಗುತ್ತದೆ. ಜೊತೆಗೆ ಮುಖದ ಹೊರಪದರದಲ್ಲಿ ಕುಳಿತಿರುವ ಕಲ್ಮಷ ಪೂರ್ಣವಾಗಿ ಸ್ವಚ್ಛಗೊಳ್ಳುತ್ತದೆ. ವಾರಕ್ಕೆರಡು ಬಾರಿ ಹೀಗೆ ಮಾಡುವುದು ಒಳಿತು. ಮನೆಯಲ್ಲಿಯೇ ಸಿಗುವ ಅರಿಸಿನ, ಕಡಲೆಹಿಟ್ಟು, ಜೇನುತುಪ್ಪ ಇವುಗಳ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 

ನೈಸರ್ಗಿಕ ಕಂಡೀಷನರ್‌  

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದು ಕಿರಿಕಿರಿ ಎನ್ನಿಸಬಹುದು. ಹಾಗಾಗಿ ಕೂದಲ ಬುಡ ಒಣಗಿರುತ್ತದೆ. ಹಾಗಾಗಿ ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಸಮಸ್ಯೆ ಕಾಣಿಸಿಕೊಳ್ಳಬಹುದು. ಆ ಕಾರಣಕ್ಕೆ ತೆಂಗಿನಎಣ್ಣೆಯೊಂದಿಗೆ ಸೀಗೆಕಾಯಿ ಎಣ್ಣೆ, ಜೇನುತುಪ್ಪ ಹಾಗೂ ಬೆಣ್ಣೆ ಹಣ್ಣಿನ ತಿರುಳು ಸೇರಿಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ. ಇದರಿಂದ ನೈಸರ್ಗಿಕ ಕಂಡೀಷನರ್ ರೀತಿಯಲ್ಲಿ ಕೆಲಸ ಮಾಡುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು