ಮಂಗಳವಾರ, ಜನವರಿ 26, 2021
28 °C

ಹಕ್ಕಿಜ್ವರ – ಇರಲಿ ಎಚ್ಚರ: ಸೋಂಕು ಹರಡುವಿಕೆ ತಡೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್, ಭಾರತ ಸೇರಿ ಏಷ್ಯಾದ ದೇಶಗಳು ಹಾಗೂ ಐರೋಪ್ಯ ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡಿರುವ ಹಕ್ಕಿಜ್ವರವು ಕಳವಳಕ್ಕೆ ಕಾರಣವಾಗಿದೆ. ಮನುಷ್ಯನಿಗೆ ಹಕ್ಕಿಜ್ವರ ಬಂದರೆ ಅದು ಮತ್ತೊಂದು ಸಾಂಕ್ರಾಮಿಕಕ್ಕೆ ಕಾರಣವಾಗಬಲ್ಲದು ಎನ್ನುವ ಆತಂಕ ವಿಜ್ಞಾನಿಗಳಲ್ಲಿ ಇದೆ. ಆದರೆ, ಭಾರತದಲ್ಲಿ ಹಕ್ಕಿಜ್ವರವು ಮನುಷ್ಯರಿಗೆ ವರ್ಗಾವಣೆ ಆಗಿರುವ ಬಗ್ಗೆ ವರದಿಯಿಲ್ಲ. ಹಾಗಂತ ಇದು ಮನುಷ್ಯರಿಗೆ ಬರುವುದೇ ಇಲ್ಲ ಎಂದೂ ಅಲ್ಲ. 1997ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಮನುಷ್ಯನಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತ್ತು. ಹಕ್ಕಿಜ್ವರವು ಸಾಕಷ್ಟು ರೂಪಾಂತರ ಹೊಂದಿದೆ. ಎಚ್‌5ಎನ್‌1, ಎಚ್‌7ಎನ್‌9, ಎಚ್‌9ಎನ್‌2 ಇವು ವಿವಿಧ ರೂಪಗಳು. ಭಾರತದಲ್ಲಿ ಅತಿಹೆಚ್ಚಾಗಿ ಕಂಡುಬರುವುದು ಎಚ್‌5ಎನ್‌1 ರೂಪಾಂತರ ವೈರಾಣು.

ಎಲ್ಲೆಲ್ಲಿ ಇದೆ ಹಕ್ಕಿಜ್ವರ?

ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಹರಿಯಾಣ, ಉತ್ತಾರಖಂಡ, ಹಿಮಾಚಲ ಪ್ರದೇಶ

*ದೆಹಲಿಯಲ್ಲಿ ಹಕ್ಕಿಜ್ವರದ ಭೀತಿ ಇತ್ತಾದರೂ, ಪರೀಕ್ಷೆಯ ಬಳಿಕ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ

ಸೋಂಕು ಹರಡುವಿಕೆ

*ಸೋಂಕಿತ ಹಕ್ಕಿಯ ಲಾಲಾರಸ, ಲೋಳೆ ಅಥವಾ ಮಲದಿಂದ ಸೋಂಕು ಹರಡುತ್ತದೆ

*ಸೋಂಕಿತ ಹಕ್ಕಿಯ ಸಂಪರ್ಕಕ್ಕೆ ಬರುವ ಮತ್ತೊಂದು ಹಕ್ಕಿ, ಇತರೆ ಪ್ರಾಣಿಗಳು ಮತ್ತು ಮನುಷ್ಯರಿಗೆ ಸೋಂಕು ತಗುಲಬಹುದು

*ಸೋಂಕಿತ ಕೋಳಿ ಸಂಚರಿಸಿದ ಪ್ರದೇಶದಲ್ಲಿ ಬಿದ್ದಿರುವ ಲಾಲಾರಸ, ಲೋಳೆ ಮತ್ತು ಮಲವನ್ನು ಸೇವಿಸಿದರೆ ಸೋಂಕು ಬರಬಹುದು

*ಸೋಂಕಿತ ಹಕ್ಕಿಯನ್ನು ಎತ್ತಿಕೊಂಡ ವ್ಯಕ್ತಿಯ ಶ್ವಾಸಕೋಶವನ್ನು ಸೋಂಕು ಸೇರಬಹುದು

* ಸೋಂಕಿತ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಸೋಂಕು ಹರಡುತ್ತದೆ ಎಂಬುದೂ ದೃಢಪಟ್ಟಿಲ್ಲ

ಸೋಂಕಿನಿಂದ ಯಾರಿಗೆಲ್ಲಾ ಸಮಸ್ಯೆ?

*ಕೋಳಿ ಸಾಕಾಣಿಕೆ ಮಾಡುವ ವ್ಯಕ್ತಿಗಳು

*ಹಕ್ಕಿಜ್ವರ ಸೋಂಕು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವವರು

*ಸೋಂಕಿತ ಕೋಳಿ ಅಥವಾ ಮೊಟ್ಟೆಗಳನ್ನು ಸರಿಯಾಗಿ ಬೇಯಿಸದೆ ತಿನ್ನುವವರು

*ಸೋಂಕಿತ ರೋಗಿಗಳನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರು

*ಹಕ್ಕಿಜ್ವರ ಸೋಂಕಿತ ವ್ಯಕ್ತಿಯ ಮನೆಯ ಸದಸ್ಯ

ಸುರಕ್ಷತೆ ಹೇಗೆ?

ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್‌5ಎನ್‌8 ವೈರಸ್‌ ಮನುಷ್ಯನಿಗೆ ಹರಡುವ ಶಕ್ತಿ ಹೊಂದಿದೆ. ಈ ವೈರಸ್‌ನಿಂದ ಸತ್ತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ಹರಡುವ ಸಾಧ್ಯತೆ ಇದೆ. ಆದರೆ ಈ ಸಾಧ್ಯತೆಯ ಪ್ರಮಾಣ ಅತ್ಯಂತ ಕಡಿಮೆ. ಹಕ್ಕಿಜ್ವರದಿಂದ ಮೃತಪಟ್ಟಿರುವ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ, ಸಿಬ್ಬಂದಿಯು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸರ್ಕಾರವು ಜನವರಿ 3ರಂದೇ ಹೊರಡಿಸಿದೆ. ಈಗ ಅದೇ ಮಾರ್ಗಸೂಚಿಗಳನ್ನು ಮತ್ತೆ ಹೊರಡಿಸಿದೆ.

l ಮೃತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ರಬ್ಬರ್ ಕೈಗವಸು, ಫೇಸ್‌ಶೀಲ್ಡ್‌, ರಕ್ಷಣಾ ಕೋಟ್‌ ಮತ್ತು ಕನ್ನಡಕಗಳನ್ನು ಕಡ್ಡಾಯವಾಗಿ ಬಳಸಬೇಕು

l ವೈರಸ್ ಹರಡಿರುವ ಪ್ರದೇಶಗಳಿಂದ ಹೊರಬಂದ ನಂತರ ಸೋಪು ಮತ್ತು ನೀರು ಬಳಸಿ ಕೈಗಳನ್ನು ಚೆನ್ನಾಗಿ ತೊಳೆಯಬೇಕು

l ಮೃತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ನೀರು, ಆಹಾರ ಮತ್ತು ತಿಂಡಿ-ತಿನಿಸುಗಳನ್ನು ಸೇವಿಸಬಾರದು

l ಪಕ್ಷಿಯ ಹಿಕ್ಕೆ ಮತ್ತು ಮಣ್ಣಿನಲ್ಲಿ ಈ ವೈರಸ್‌ ಹೆಚ್ಚು ಸಕ್ರಿಯವಾಗುತ್ತದೆ. ಒಮ್ಮೆ ಮಣ್ಣು ಸೇರಿದರೆ, ನಿಯಂತ್ರಣ ಕಷ್ಟವಾಗುತ್ತದೆ. ಹೀಗಾಗಿ ಮೃತ ಪಕ್ಷಿ ಮತ್ತು ಹಿಕ್ಕೆಯನ್ನು ವಿಲೇವಾರಿ ಮಾಡುವಾಗ ಡಿಟರ್ಜೆಂಟ್‌ಗಳನ್ನು ಬಳಸುವುದು ಅತ್ಯವಶ್ಯಕ

l ಈ ಕಾರ್ಯಾಚರಣೆಯಲ್ಲಿ ಇರುವ ಎಲ್ಲಾ ದಿನವೂ ‘ಇನ್‌ಫ್ಲುಯೆಂಜಾ ನಿರೋಧಕ ಔಷಧ’ವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು

(ಆಧಾರ: ಪಿಟಿಐ, ಹೆಲ್ತ್‌ಲೈನ್)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು