ಶನಿವಾರ, ಆಗಸ್ಟ್ 20, 2022
21 °C

ಬ್ಲಡ್ ಥಿನ್ನರ್‌: ವೈದ್ಯರ ಸಲಹೆ ಅಗತ್ಯ

ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್. Updated:

ಅಕ್ಷರ ಗಾತ್ರ : | |

Prajavani

ಕಾರ್ಡಿಯೊವಾಸ್ಕ್ಯುಲರ್‌ (ಹೃದಯದ ರಕ್ತನಾಳಗಳ) ಕಾಯಿಲೆಯ ನಿಯಂತ್ರಣದಲ್ಲಿ ಸಾಮಾನ್ಯವಾಗಿ ರಕ್ತವನ್ನು ತೆಳು (ಬ್ಲಡ್‌ ಥಿನ್ನರ್‌)ವಾಗಿಸುವ ಆ್ಯಂಟಿಪ್ಲೇಟ್ಲೆಟ್ ಮತ್ತು ಆ್ಯಂಟಿಥ್ರೊಂಬೊಟಿಕ್ ಏಜೆಂಟ್‌ಗಳ ಬಳಕೆ ರೂಢಿಯಲ್ಲಿದೆ. ಆದರೂ, ಈ ಔಷಧಿಗಳನ್ನು ದೀರ್ಘಕಾಲದವರೆಗೆ ಮತ್ತು ವೈದ್ಯರ ಸಲಹೆಯಿಲ್ಲದೆ ಬಳಕೆ ಮಾಡಿದರೆ ಗಂಭೀರ ಸ್ವರೂಪದ ರಕ್ತಸ್ರಾವದಂತಹ ಅಡ್ಡ ಪರಿಣಾಮಗಳು ಉಂಟಾಗಬಹುದು.

ಸಾಮಾನ್ಯವಾಗಿ ಬಳಸಲಾಗುತ್ತಿರುವ ಬ್ಲಡ್ ಥಿನ್ನರ್‌ಗಳ ಮಾದರಿಗಳು

* ಆ್ಯಸ್ಪಿರಿನ್: ಆ್ಯಸ್ಪಿರಿನ್ ಅಥವಾ ಎಕೋಸ್ಪಿರಿನ್ ಸಾಮಾನ್ಯವಾಗಿ ಬಳಸುವ ಬ್ಲಡ್ ಥಿನ್ನರ್. ಇದು ಹೃದಯಾಘಾತ ಮತ್ತು ಮೆದುಳಿನ ಆಘಾತ (ಪಾರ್ಶ್ವವಾಯು)ದಿಂದ ಸಂಭವಿಸಬಹುದಾದ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪೆರಿಫೆರಲ್ ವ್ಯಾಸ್ಕ್ಯುಲರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೂ ಇದನ್ನು ಸೂಚಿಸಲಾಗುತ್ತದೆ ಮತ್ತು ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ಇತರ ಕೆಲವು ರೋಗಗಳನ್ನು ತಡೆಗಟ್ಟುವ ಔಷಧಿಯಾಗಿ ಶಿಫಾರಸು ಮಾಡಲಾಗಿದೆ.

* ಕ್ಲೋಪಿಡೋಗ್ರೆಲ್: ಸರಳವಾದ ರೀತಿಯಲ್ಲಿ ಹೇಳಬೇಕೆಂದರೆ, ‘ಸೂಪರ್‌ ಆ್ಯಸ್ಪಿರಿನ್’ ಎಂದು ಇದನ್ನು ಕರೆಯಬಹುದು. ಇದನ್ನು ಆ್ಯಸ್ಪಿರಿನ್ ಬದಲಿಗೆ ಅಥವಾ ಆ್ಯಸ್ಪಿರಿನ್ ಸಂಯೋಜನೆಯೊಂದಿಗೆ ಆಯ್ದ ರೋಗಿಗಳಿಗೆ ಬಳಸಲಾಗುತ್ತದೆ. ಇಂತಹ ರೋಗಿಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಮುಖ್ಯ ರಕ್ತನಾಳದಲ್ಲಿ ಸ್ಟೆಂಟ್ ಅನ್ನು ಅಳವಡಿಸಲಾಗಿರುತ್ತದೆ.

* ಪ್ರಸುಗ್ರೆಲ್ ಮತ್ತು ಟಿಕಾಗ್ರೆಲೊರ್: ಇವುಗಳು ಹೊಸತಾಗಿ ಬಂದಿರುವಂತಹವು. ಶಕ್ತಿಶಾಲಿ ಬ್ಲಡ್ ಥಿನ್ನರ್‌ಗಳೆಂದು ಪರಿಗಣಿಸಲ್ಪಟ್ಟಿವೆ. ಕೊರೊನರಿ ಆರ್ಟರಿ ಸ್ಟೆಂಟಿಂಗ್‌ಗೆ ಒಳಗಾದ ರೋಗಿಗಳಿಗೆ ಕ್ಲೋಪಿಡೋಗ್ರೆಲ್‌ಗೆ ಬದಲಾಗಿ ಇವುಗಳನ್ನು ಬಳಸಲಾಗುತ್ತದೆ. ಈ ಔಷಧಿಯನ್ನು ಕೇವಲ ಹೃದ್ರೋಗ ತಜ್ಞರು ಮಾತ್ರ ಶಿಫಾರಸು ಮಾಡಬೇಕು.

* ವಾರ್‌ಫರಿನ್: ಅನಿಯಮಿತವಾದ ಹೃದಯಬಡಿತ, ಮೆಟಾಲಿಕ್ ಹಾರ್ಟ್ ವಾಲ್ವ್‌ ಹಾಕಿದ್ದರೆ, ಮರುಕಳಿಸುವ ಪಾರ್ಶ್ವವಾಯು ಮತ್ತು ಗಂಭೀರವಾದ ಪೆರಿಫೆರಲ್ ವ್ಯಾಸ್ಕ್ಯುಲರ್ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಇದನ್ನು ಸೂಚಿಸಲಾಗುತ್ತದೆ. ತಜ್ಞರ ಸಲಹೆ ಮತ್ತು ಐಎನ್‌ಆರ್ ಪರೀಕ್ಷೆಗಳೊಂದಿಗೆ ಇದರ ಪ್ರಮಾಣವನ್ನು ಅಂದರೆ ಡೊಸೇಜ್ ಅನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಈ ಎಲ್ಲಾ ಔಷಧಿಗಳ ಅಡ್ಡ ಪರಿಣಾಮವೆಂದರೆ ರಕ್ತಸ್ರಾವ. ರೋಗಿ ಗಂಭೀರ ಅಪಾಯವನ್ನು ಎದುರಿಸುತ್ತಿದ್ದರೆ ಅಂದರೆ ಕೈ ಮೀರಬಹುದಾದ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತದೆ. ಆದ್ದರಿಂದ, ಇದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ತಜ್ಞರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬಹುದು. ವೈದ್ಯಕೀಯ ಪ್ರಿಸ್ಕ್ರಿಪ್ಶನ್ ಮತ್ತು ಸೂಚನೆಗಳಿಲ್ಲದೇ ಎಂದಿಗೂ ಇದನ್ನು ತೆಗೆದುಕೊಳ್ಳಬಾರದು.

ಕೊರೊನರಿ ಸ್ಟೆಂಟ್, ಬೈಪಾಸ್ ಸರ್ಜರಿ ಅಥವಾ ಪಾರ್ಶ್ವವಾಯು ಪೀಡಿತರಿಗೆ ಬ್ಲಡ್ ಥಿನ್ನರ್ ಆಗಿ ಎಕೋಆ್ಯಸ್ಪಿರಿನ್ ಅಥವಾ ಕ್ಲೋಪಿಡೊಗ್ರೆಲ್ ಅನ್ನು ಜೀವನಪರ್ಯಂತ ಚಿಕಿತ್ಸೆಯಾಗಿ ನೀಡಲು ಸೂಚಿಸಲಾಗುತ್ತದೆ.

ಈ ಎಲ್ಲಾ ಮೂರು ವರ್ಗದ ಔಷಧಿಗಳ ಸಂಯೋಜನೆಯನ್ನು ಸೀಮಿತ ಅವಧಿಗೆ ಮಾತ್ರ ವಿರಳವಾಗಿ ಬಳಸಲು ಶಿಫಾರಸು ಮಾಡಲಾಗುತ್ತದೆ. ಆದರೆ, ಪ್ರಕರಣಗಳ ಗಂಭೀರತೆಯ ಆಧಾರದಲ್ಲಿ 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸೂಚಿಸಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಇದು ರಕ್ತಸ್ರಾವವನ್ನು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.

***

ಕಾರ್ಡಿಯೋವ್ಯಾಸ್ಕ್ಯುಲರ್ ಕಾಯಿಲೆಯ ನಿರ್ವಹಣೆಯಲ್ಲಿ ಬ್ಲಡ್‌ ಥಿನ್ನರ್‌ ಪ್ರಮುಖವಾದ ಔಷಧ. ಆದರೆ, ವಿವೇಚನೆ ಇಲ್ಲದೆ ಮತ್ತು ದೀರ್ಘಕಾಲ ಬಳಸಿದರೆ ಗಂಭೀರವಾದ ತೊಡಕುಗಳಿಗೆ ಕಾರಣವಾಗುತ್ತವೆ.

- ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್.

***

ಚಿಕಿತ್ಸೆಯ ಅಪಾಯಗಳು

ಯಾವುದೇ ಔಷಧಿಯು ಅಡ್ಡ ಪರಿಣಾಮಗಳಿಂದ ಹೊರತಾಗಿರುವುದಿಲ್ಲ. ಬ್ಲಡ್ ಥಿನ್ನರ್‌ಗಳ ಬಳಕೆಯು ರಕ್ತಸ್ರಾವದ ಅಪಾಯದ ಪ್ರಮಾಣವನ್ನು ಹೆಚ್ಚಿಸುತ್ತದೆ. ರಕ್ತಸ್ರಾವ ತೊಂದರೆಗಳು ಈ ಕೆಳಕಂಡ ರೂಪದಲ್ಲಿ ಇರಬಹುದು..

* ಸುಲಭವಾದ ಮೂಗೇಟುಗಳು ಅಥವಾ ಗಾಯ ಗಂಭೀರವಾಗಿಲ್ಲದಿದ್ದರೂ ಹೆಚ್ಚಿನ ರಕ್ತಸ್ರಾವ.

* ಜಠರಗರುಳಿನ ರಕ್ತಸ್ರಾವ ಮತ್ತು ಅಲ್ಸರೇಶನ್ ಗಂಭೀರ ಸ್ಥಿತಿಗೆ ತಲುಪಬಹುದು.

* ಮೆದುಳಿನಲ್ಲಿ ರಕ್ತಸ್ರಾವ. ಇದು ಪಾರ್ಶ್ವವಾಯುವಿಗೆ ಕಾರಣವಾಗಬಲ್ಲದು. ಇದು ಮಾರಣಾಂತಿಕ ಮತ್ತು ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವನ್ನು ತಂದೊಡ್ಡುತ್ತದೆ.

ಬ್ಲಡ್ ಥಿನ್ನರ್ ಅನ್ನು ತೆಗೆದುಕೊಳ್ಳುವ ಮೊದಲು/ ತೆಗೆದುಕೊಳ್ಳುವ ಸಂದರ್ಭದಲ್ಲಿ ವೈದ್ಯರನ್ನು ಕೇಳಬೇಕಾದ ಪ್ರಶ್ನೆಗಳು

* ಈ ಔಷಧ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ?

* ಇದನ್ನು ಎಷ್ಟು ಕಾಲದವರೆಗೆ ತೆಗೆದುಕೊಳ್ಳಬೇಕು?

* ನಿಗಾ ಇಡಲು ಯಾವ ಪರೀಕ್ಷೆಯನ್ನು ಮಾಡಬೇಕು ಮತ್ತು ಎಷ್ಟು ಬಾರಿ ಮಾಡಬೇಕಾಗುತ್ತದೆ?

* ಯಾವ ಅಡ್ಡ ಪರಿಣಾಮಗಳನ್ನು ಗಮನಿಸಬೇಕಾಗುತ್ತದೆ?

ರಕ್ತಸ್ರಾವ, ಕಪ್ಪುಮಲ, ಪಾರ್ಶ್ವವಾಯು ಚಿಹ್ನೆಗಳನ್ನು ನೀವು ಗಮನಿಸಬೇಕು. ಪ್ರಸ್ತುತ ನೀವು ಈ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಮಗೆ ಚಿಕಿತ್ಸೆ ನೀಡುವ ತಜ್ಞರ ಸಲಹೆ ಪಡೆಯದೇ ಯಾವುದೇ ಔಷಧಿಗಳನ್ನು ನಿಲ್ಲಿಸಬೇಡಿ.

(ಲೇಖಕ: ನಿರ್ದೇಶಕರು, ಕಾರ್ಡಿಯಾಲಜಿ ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು