ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮೀಯ ಸಂಬಂಧದಲ್ಲಿ ಗಡಿರೇಖೆಗಳು!

Last Updated 3 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಪದವೀಧರ, ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ನಾನು ಮನೆಯಲ್ಲಿ ಮಾತನಾಡಿದ ವೈಯುಕ್ತಿಕ ವಿಷಯಗಳನ್ನು ಸೋದರಮಾವ ಸಂಬಂಧಿಕರಿಗೆ ಹೇಳುತ್ತಾರೆ. ಮನೆಯವರು ಮತ್ತು ಸಂಬಂಧಿಕರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದೇನೆ. ಜೀವನದಲ್ಲಿ ಜಿಗುಪ್ಸೆ ಬಂದಿದೆ. ಗೆಳೆಯರ ಸಮಸ್ಯೆಗಳಿಗೆ ಪರಿಹಾರ ಹೇಳುತ್ತೇನಾದರೂ ನನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಆಗುತ್ತಿಲ್ಲ.

ಮಾದೇಗೌಡ, ಊರಿನ ಹೆಸರಿಲ್ಲ

ಮನೆಯವರಿಂದ ಅನುಭವಿಸುತ್ತಿರುವ ದೈಹಿಕ ಮತ್ತು ಮಾನಸಿಕ ಹಿಂಸೆ ತೀವ್ರವಾದ ನೋವನ್ನು ಕೊಡುತ್ತಿರಬೇಕಲ್ಲವೇ? ಇದಕ್ಕೆಲ್ಲಾ ಅವಕಾಶಗಳನ್ನು ಕೊಟ್ಟವರು ನೀವೇ ಅಲ್ಲವೇ? ಬಹುಶಃ ನೀವು ಮನೆಯವರ ಮೇಲೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಅವಲಂಬಿಸಿದ್ದೀರಿ. ಮೊದಲು ಚಿಕ್ಕದಾದರೂ ಒಂದು ಉದ್ಯೋಗವನ್ನು ಹುಡುಕಿ ಆರ್ಥಿಕವಾಗಿ ಸ್ವಾವಲಂಬಿಯಾಗಿ. ಉದ್ಯೋಗದ ಜೊತೆ ಪರೀಕ್ಷೆಗಳಿಗೂ ಓದಿ. ಸ್ವಾತಂತ್ರ್ಯ ನೀಡುವ ಸಮಾಧಾನದಿಂದ ಓದು ಪರಿಣಾಮಕಾರಿಯಾಗಿರುತ್ತದೆ. ನಿಧಾನವಾಗಿಯಾದರೂ ನಿಮ್ಮ ಗುರಿ ಸೇರುವ ಸಾಧ್ಯತೆಗಳಿರುತ್ತವೆ.

ಮನೆಯವರ ಮೇಲೆ ನಿಮ್ಮ ಮಾನಸಿಕ ಅವಲಂಬನೆ ಹೇಗೆ ಬಂದಿರಬಹುದು? ಮನೆಯವರು ಅಥವಾ ಪ್ರೀತಿಪಾತ್ರರು ಎಂದರೆ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳಲೇಬೇಕು ಎಂದುಕೊಂಡಿರಬೇಕಲ್ಲವೇ? ಎಂತಹಆತ್ಮೀಯಸಂಬಂಧವಾದರೂ ಅದಕ್ಕೆ ಗಡಿರೇಖೆಗಳಿರುತ್ತವೆ. ಅವುಗಳನ್ನು ಗುರುತಿಸಿಕೊಳ್ಳುವುದಕ್ಕೆ ನಿಮಗೆ ಕಷ್ಟವಾಗುತ್ತಿದೆ. ನಿಮ್ಮ ತೀರಾ ಖಾಸಗಿ ವಿಷಯಗಳನ್ನು ಮನೆಯವರಲ್ಲಿ ಹೇಳಿಕೊಳ್ಳಬೇಕಾಗಿಲ್ಲ. ಒತ್ತಾಯದ ಪ್ರಶ್ನೆಗಳು ಬಂದರೆ ‘ನನಗೆ ಇದನ್ನು ಮಾತನಾಡಲು ಇಷ್ಟವಿಲ್ಲ’ ಎಂದು ಕೋಪಗೊಳ್ಳದೆ ನಯವಾಗಿ ನಿರಾಕರಿಸಿ. ನಿಮಗೆ ಅವಮಾನವಾಗುವಂತೆ ವರ್ತಿಸಿದರೆ ಕೂಗಾಡದೆ ಪ್ರತಿಭಟಿಸಿ. ಉಳಿದಂತೆ ಅವರೊಡನೆ ಪ್ರೀತಿಯಿಂದಿರಿ. ತಾತ್ಕಾಲಿಕವಾಗಿ ಸಂಬಂಧ ಹಾಳಾದಂತೆ ಕಂಡರೂ ನಿಧಾನವಾಗಿ ಸುಧಾರಿಸುತ್ತದೆ. ಹೀಗೆ ನಿಮ್ಮ ಸ್ವಂತಿಕೆ, ವ್ಯಕ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳುವುದನ್ನು ನಿಧಾನವಾಗಿ ಕಲಿಯಬೇಕಾಗುತ್ತದೆ.

ನಾನು ಒಂದು ಹುಡುಗಿಯನ್ನು ಪ್ರೀತಿಸಿದ್ದೆ. ಅವಳೂ ನನ್ನೊಡನೆ ತನ್ನ ಪ್ರೀತಿಯನ್ನು ಹಂಚಿಕೊಂಡಿದ್ದಳು. ನಂತರ ಅವಳು ನನ್ನನ್ನು ಬಿಟ್ಟು ಹೋದಳು. ನನ್ನಿಂದ ಅವಳನ್ನು ಮರೆಯಲು ಸಾಧ್ಯವಿಲ್ಲ. ಇದಕ್ಕೆ ಉಪಾಯ ಹೇಳಿ.

ಹೆಸರು, ಊರು ತಿಳಿಸಿಲ್ಲ

ನೀವಿಬ್ಬರೂ ಪ್ರೀತಿಯ ಹುಡುಕಾಟದಲ್ಲಿದ್ದಿರಿ. ಇದರ ಮೊದಲ ಹಂತವಾಗಿ ಯೌವನದ ಸಹಜ ಆಕರ್ಷಣೆಗೆ ಒಳಗಾಗಿದ್ದಿರಿ. ಹುಡುಗಿಗೆ ಈ ಆಕರ್ಷಣೆ ಜೀವಮಾನವಿಡೀ ಉಳಿಯಬಲ್ಲ ಪ್ರೀತಿಯಾಗಿ ಬದಲಾಗುವುದು ಸಾಧ್ಯವಿಲ್ಲ ಎನ್ನಿಸಿರಬೇಕು. ಹಾಗಾಗಿ ದೂರಹೋದಳು. ನೀವಿನ್ನೂ ಹಳೆಯ ಆಕರ್ಷಣೆಯಿಂದ ಹೊರಬಂದಿಲ್ಲ. ನಿಮಗೆ ಕಾಡುತ್ತಿರುವ ‘ನಾನೇನೋ ಕಳೆದುಕೊಂಡಿದ್ದೇನೆ’ ಎನ್ನುವ ಅನುಭವ ಏನನ್ನು ಹೇಳುತ್ತದೆ ಗೊತ್ತೇ? ‘ಮತ್ತೆ ನನಗೆ ಜೀವನದಲ್ಲಿ ಅದು ಸಿಗಲಾರದೇನೋ, ನನಗೆ ಪ್ರೀತಿಯನ್ನು ಪಡೆಯುವ ಯೋಗ್ಯತೆ ಇಲ್ಲವೇನೋ’ ಎಂದು ನಿಮ್ಮ ಬಗ್ಗೆ ನಿಮ್ಮ ಮನಸ್ಸಿನಲ್ಲಿಯೇ ಇರುವ ಅನುಮಾನಗಳನ್ನು ಇದು ಸೂಚಿಸುತ್ತದೆ. ಹಾಗಾಗಿ ಮೊದಲು ನಿಮ್ಮ ಕಣ್ಣಿನಲ್ಲಿ ನೀವೇ ಯೋಗ್ಯ ವ್ಯಕ್ತಿಯಾಗುವುದು ಹೇಗೆಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಉದಾಹರಣೆಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಿ. ಸ್ನೇಹಿತರ ಗುಂಪನ್ನು ಹೆಚ್ಚು ಮಾಡಿ. ಹೊಸ ಹೊಸ ಹವ್ಯಾಸಗಳನ್ನು ಹುಡುಕಿ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತನ್ನಿ. ನಿಮ್ಮ ಅಂತರಂಗದ ಸೌಂದರ್ಯ, ಆತ್ಮಗೌರವ ಹೆಚ್ಚಾದಾಗ ಬಹುಕಾಲ ನಿಲ್ಲಬಲ್ಲ ಪ್ರೀತಿಯನ್ನು ಹಂಚಿಕೊಳ್ಳುವ ಸಂಗಾತಿ ಹುಡುಕಿಕೊಂಡು ಬರುತ್ತಾಳೆ.

ನಾನು ಕ್ಷುಲ್ಲಕ ವಿಷಯಕ್ಕೆ ಕೂಡ ಕೋಪಿಸಿಕೊಳ್ಳುತ್ತೇನೆ. ಕೋಪವನ್ನು ಹಿಡಿತಕ್ಕೆ ತರುವುದಕ್ಕೆ ಸಲಹೆ ನೀಡಿ.

ಅರ್ಚನಾ, ಊರಿನ ಹೆಸರಿಲ್ಲ

ಕೋಪವನ್ನು ಹಿಡಿತಕ್ಕೆ ತರಲು ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕಲ್ಲವೇ? ಅದಕ್ಕಾಗಿ ನಿಮ್ಮ ಬಗ್ಗೆ ಮತ್ತು ಕೋಪದ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳಿದ್ದಿದ್ದರೆ ಸಹಾಯವಾಗುತ್ತಿತ್ತು. ಪದೇಪದೇ ಕೋಪಗೊಳ್ಳುವುದು ನಿಮ್ಮೊಳಗೇ ಇರುವ ಭಯ, ಬೇಸರ, ಅಸಹಾಯಕತೆ, ಅಭದ್ರತೆ, ಹತಾಶೆಗಳನ್ನು ಸೂಚಿಸುತ್ತಿರಬಹುದು. ಕೋಪಗೊಳ್ಳುವುದರ ಮೂಲಕ ಅವುಗಳನ್ನು ಹೊರಹಾಕುತ್ತಿದ್ದೀರಿ. ಕೋಪ ಬಂದಾಗ ಯಾರ ಮೇಲೆ ಮತ್ತು ಯಾವ ವಿಚಾರಕ್ಕೆ ಕೋಪಬಂದಿದೆ ಎಂದು ಗಮನಿಸದೆ ಆ ಕೋಪ ನಿಮ್ಮೊಳಗೆ ಎಂತಹ ಭಾವನೆ ಮೂಡಿಸುತ್ತಿದೆ ಎಂದು ಗಮನಿಸಿ. ಉದಾಹರಣೆಗೆ ನಿಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ನಿಮಗನ್ನಿಸಿದರೆ ಅಧಿಕಾರವನ್ನು, ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವ ಭಯ ನಿಮಗಿರಬಹುದು. ಅಧಿಕಾರವನ್ನು ಉಪಯೋಗಿಸದೆ ಎಲ್ಲರ ಜೊತೆಗೆ ಸಮಾಧಾನದಿಂದ ಬದುಕುವುದು ಹೇಗೆ ಎಂದು ಯೋಚಿಸಿ. ಹೀಗೆ ಕೋಪದ ಆಳಕ್ಕೆ ಹೋದಾಗ ಮಾತ್ರ ಅದರ ಮೇಲೆ ಹಿಡಿತ ಸಾಧಿಸಬಹುದು.

(ಅಂಕಣಕಾರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT