ಬುಧವಾರ, ಜುಲೈ 28, 2021
23 °C

ಕಣ್ಣು, ಕಿವಿಯ ಮೂಲಕ ‍ದೇಹ ಪ್ರವೇಶಿಸಬಹುದೇ ಕೊರೊನಾ ವೈರಸ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೊರೊನಾ ವೈರಸ್‌ ಕಣ್ಣು ಮತ್ತು ಕಿವಿಗಳ ಮೂಲಕ ಪ್ರಸರಣೆಗೊಳ್ಳಬಲ್ಲದೇ ಎಂಬ ಅನುಮಾನಗಳು ಜನರಲ್ಲಿ ವ್ಯಾಪಕವಾಗಿ ಕಾಡುತ್ತಿದೆ. ಇದಕ್ಕೆ ಉತ್ತರ ನೀಡಿದ್ದಾರೆ ತಜ್ಞರು, ವೈದ್ಯರು. 

ಕಣ್ಣಿನ ಮೂಲಕ ವೈರಸ್‌ ಹರಡಬಹುದು. ಆದರೆ, ಕಿವಿಯ ಮೂಲಕ ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಮೂಗು ಮತ್ತು ಬಾಯಿಯಂತೆ ಕಣ್ಣಿನಿಂದಲೂ ವೈರಸ್‌ ಹರಡಬಹುದು. ಸೋಂಕಿತರು ಯಾರಾದರೂ ಹತ್ತಿರದಿಂದ ಕೆಮ್ಮಿದರೆ ಅಥವಾ ಸೀನಿಸಿದರೆ ಕಣ್ಣುಗಳ ಮೂಲಕ ಸೋಂಕು ದೇಹ ಪ್ರವೇಶ ಮಾಡುವ ಸಾಧ್ಯತೆ ಇದೆ. ವೈರಸ್‌ ಇರುವ ಕೈಗಳಿಂದ ಕಣ್ಣುಗಳನ್ನು ಉಜ್ಜಿದಾಗಲೂ ಸೋಂಕು ತಗಲುವ ಅಪಾಯಗಳಿವೆ ಎಂದು ವೈದ್ಯರು ಹೇಳಿದ್ದಾರೆ. 

ಸೋಂಕಿತ ವ್ಯಕ್ತಿಯ ಕಣ್ಣೀರು ಸಹ ವೈರಸ್ ಅನ್ನು ಹರಡಬಹುದು ಎನ್ನುತ್ತಾರೆ ವೈದ್ಯರು.

ಆಗಾಗ್ಗೆ ಕೈ ತೊಳೆಯುವುದು, ದೈಹಿಕ ಅಂತರ ಪಾಲಿಸುವುದು ಮತ್ತು ಹೊರಗೆ ಹೋದಾಗ ಮಾಸ್ಕ್‌ ಬಳಸುವುದು ವೈರಸ್‌ ಅನ್ನು ತಡೆಯಬಹುದಾದ ಮಾರ್ಗಗಳು. ಈ ಕ್ರಮಗಳು ಕಣ್ಣಿಂದ ವೈರಸ್‌ ಪ್ರವೇಶಿಸುವುದನ್ನು ತಡೆಯುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ನೇತ್ರಶಾಸ್ತ್ರ ಅಕಾಡೆಮಿ ಪ್ರಕಾರ ಕನ್ನಡಕ ಧರಿಸುವುದರಿಂದಲೂ ಕೊರೊನಾ ವೈರಸ್‌ನಿಂದ ನಾವು ಹೆಚ್ಚಿನ ರಕ್ಷಣೆ ಪಡೆಯಬಹುದು. ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ವೈದ್ಯರು, ಆರೋಗ್ಯ ಕಾರ್ಯಕರ್ತರು ಸುರಕ್ಷತಾ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಅದು ಸಲಹೆ ನೀಡಿದೆ. 

ಮತ್ತೊಂದೆಡೆ, ಕಿವಿಗಳಿಂದ ಸೋಂಕು ಪ್ರವೇಶಿಸುವ ಸಾಧ್ಯತೆಗಳಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ. 

ಕಿವಿಯ ಮಾರ್ಗದಲ್ಲಿನ ಚರ್ಮವು ಸಾಮಾನ್ಯವಾಗಿ ಹೊರ ಮೈನ ಚರ್ಮದಂತೆಯೇ ಇರುತ್ತದೆ. ಬಾಯಿ, ಮೂಗು ಮತ್ತು ಸೈನಸ್‌ಗಳಲ್ಲಿನ ಅಂಗಾಂಶಗಳಿಗಿಂತ ಭಿನ್ನವಾಗಿರುತ್ತದೆ. ಹೀಗಾಗಿ ವೈರಸ್‌ಗಳು ಕಿವಿಯ ಮೂಲಕ ಪ್ರವೇಶಿಸುವ ಸಾಧ್ಯತೆಗಳು ಇಲ್ಲ ಎಂದು ಬೋಸ್ಟನ್‌ನಲ್ಲಿರುವ ಮ್ಯಾಸಚೂಸೆಟ್ಸ್ ಐ ಅ್ಯಂಡ್‌ ಇಯರ್‌ ಸಂಸ್ಥೆಯ ಡಾ. ಬೆಂಜಮಿನ್ ಬ್ಲಿಯರ್ ತಿಳಿಸಿದ್ದಾರೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು