ಅಂತರರಾಷ್ಟ್ರೀಯ ಚರ್ಮರೋಗ ಒಕ್ಕೂಟದ (ಐಎಫ್‌ಪಿಎ) ಪ್ರಕಾರ, ಸುಮಾರು 125 ದಶಲಕ್ಷ ಜನರಿಗೆ ಚರ್ಮ ರೋಗ ಸೋರಿಯಾಸಿಸ್ ಇದೆ. ಶೇ 10– 30ರಷ್ಟು ಜನರಿಗೆ ಇದು ರ‍್ಯುಮಟಾಯ್ಡ್ ಸಂಧಿವಾತಕ್ಕೆ ತಿರುಗಬಹುದು. ಈ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು?
ಚರ್ಮದ ಮೇಲೆ ಹುಪ್ಪಳಿಕೆ ಎದ್ದು, ಕೆಲವೊಮ್ಮೆ ನವೆಯಾಗುವ ಸ್ವರಕ್ಷಿತ (ಇಮ್ಯುನೊ) ಕಾಯಿಲೆಯಾದ ಚರ್ಮರೋಗ ಸೋರಿಯಾಸಿಸ್. ಇದರ ರೋಗಲಕ್ಷಣಗಳು ಚರ್ಮಕೋಶದ ಸಾಮಾನ್ಯ ಜೀವಿತಚಕ್ರದಲ್ಲಿ ಅಡಚಣೆಯುಂಟಾದಾಗ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಚರ್ಮದ ಕೋಶಗಳು ಸಾಮಾನ್ಯವಾಗಿ ಚರ್ಮದ ಆಳ ಪದರಗಳಲ್ಲಿ ಬೆಳೆದು 30 ದಿನಗಳಿಗೊಮ್ಮೆ ಮೇಲ್ಮೈಗೆ ಬರುತ್ತವೆ. ಚರ್ಮರೋಗವಿದ್ದಾಗ, ಸ್ವರಕ್ಷಣೆ ವ್ಯವಸ್ಥೆಯಲ್ಲಿ ಏರುಪೇರಿನಿಂದಾಗಿ, ಪ್ರತಿ 3–4 ದಿನಗಳಿಗೆ ಹೊಸ ಚರ್ಮ ಕೋಶಗಳು ಜನ್ಮತಳೆದು, ಹಳೆಯ ಕೋಶಗಳು ಉದುರಲು ಸಾಕಷ್ಟು ಕಾಲಾವಕಾಶ ನೀಡುವುದಿಲ್ಲ. ಈ ಪ್ರಕ್ರಿಯೆ ತ್ವರಿತಗೊಳ್ಳುವುದರಿಂದ, ಸತ್ತ ಕೋಶಗಳು ಚರ್ಮದ ಮೇಲ್ಮೈನಲ್ಲಿ ಶೀಘ್ರವಾಗಿ ಶೇಖರಗೊಂಡು, ಉಬ್ಬಿದ, ಶಲ್ಕದಂತಹ ಒಣಗಿದ ರಚನೆ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಕೆರೆತ ಉಂಟಾಗಿ ಕೆಂಪಗೆ ಕಾಣುವಂತೆ ಮಾಡುತ್ತವೆ.
ಸೋರಿಯಾಸಿಸ್ ಚರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಕಾಯಿಲೆ ಇರುವ ಶೇ 10–30ರಷ್ಟು ಜನರು ಸೋರಿಯಾಟಿಕ್ ಸಂಧಿವಾತ–1ಕ್ಕೆ ಒಳಗಾಗುತ್ತಾರೆ ಎಂದು ಜಾಗತಿಕ ಸಂಶೋಧನೆಗಳು ಹೇಳುತ್ತವೆ.
ಸೋರಿಯಾಸಿಸ್ ಹಾಗೂ ಸೋರಿಯಾಟಿಕ್ ಸಂಧಿವಾತಕ್ಕೆ ಸಂಬಂಧವಿದ್ದರೂ, ವಾಸ್ತವವಾಗಿ ಅವೆರಡೂ ಪ್ರತ್ಯೇಕ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು. ಸೋರಿಯಾಸಿಸ್ ಇರುವ ಅನೇಕ ಜನರಿಗೆ ಸೋರಿಯಾಟಿಕ್ ಸಂಧಿವಾತ ಉಂಟಾಗದೆಯೇ ಇರಬಹುದು ಮತ್ತು ಇನ್ನು ಕೆಲವರಲ್ಲಿ ಸೋರಿಯಾಸಿಸ್ ರೋಗಲಕ್ಷಣವಿಲ್ಲದಿದ್ದರೂ ಸೋರಿಯಾಟಿಕ್ ಸಂಧಿವಾತ ಉಂಟಾಗಬಹುದು.
ಸಾಮಾನ್ಯವಾಗಿ, ಸೋರಿಯಾಟಿಕ್ ಸಂಧಿವಾತ ಉಂಟಾಗುವ ಮುನ್ನ ಸೋರಿಯಾಸಿಸ್ ಉಂಟಾಗುತ್ತದೆ. ಸೋರಿಯಾಸಿಸ್ ರೋಗಿಗಳ ಪೈಕಿ ಶೇ 26ರಷ್ಟು ರೋಗಿಗಳಿಗೆ ಸೋರಿಯಾಟಿಕ್ ಸಂಧಿವಾತ–2 ಎನ್ನುವ ಸಂಧಿವಾತದ ಒಂದು ಬಗೆ ಉಂಟಾಗುತ್ತದೆ ಎಂದು ಜಾಗತಿಕ ಸಂಶೋಧನೆಗಳು ಸೂಚಿಸುತ್ತವೆ.
ಸೋರಿಯಾಟಿಕ್ ಸಂಧಿವಾತ ಎನ್ನುವುದು ಉರಿಯೂತದ ಸಂಧಿವಾತವಾಗಿದ್ದು, ಕೀಲು ನೋವು ಹಾಗೂ ಜಡತೆ ಸೇರಿದಂತೆ ಕೈ ಬೆರಳುಗಳು, ಕಾಲಿನ ಬೆರಳುಗಳು, ಮೊಣಕಾಲು, ಬೆನ್ನುಹುರಿಗಳ ಊತವನ್ನುಂಟು ಮಾಡುತ್ತದೆ. ಇದರಿಂದ ಕೀಲುಗಳು ಗಡುಸಾಗಿ ನೋವುಂಟಾಗುತ್ತದೆ ಮತ್ತು ದೀರ್ಘಕಾಲದ ಹಾನಿಯುಂಟು ಮಾಡುತ್ತದೆ. ಸೋರಿಯಾಟಿಕ್ ಸಂಧಿವಾತ ಒಂದು ಅಥವಾ ಹೆಚ್ಚಿನ ಕೀಲುಗಳನ್ನು ಬಾಧಿಸಬಹುದು. ಆದರೆ, ಬಹುತೇಕ ಸಂದರ್ಭಗಳಲ್ಲಿ, ತಿಳಿವಳಿಕೆಯ ಕೊರತೆಯಿಂದಾಗಿ ರೋಗ ಪತ್ತೆಯಾಗುವುದು ವಿಳಂಬವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಸೋರಿಯಾಟಿಕ್ ಸಂಧಿವಾತ ರೋಗವು ಕೀಲುವಾಯು ಸಂಧಿವಾತ ಅಥವಾ ಗೌಟ್‌ನಂಥ ಉರಿಯೂತ ಸಂಧಿವಾತದ ಇತರ ಸ್ಥಿತಿಗಳಂತೆ ಕಾಣುತ್ತದೆ.
ಈ ಎರಡರಲ್ಲಿ ಒಂದರ ತೀವ್ರತೆ ಇದ್ದರೂ ಮತ್ತೊಂದರ ಸೂಚನೆ ತಿಳಿಯುವುದಿಲ್ಲ. ಆದರೆ ಇವೆರಡರ ನಡುವೆ ಕೆಲವು ಸಾಮ್ಯತೆಗಳಿವೆ- ಮಾನವ ದೇಹದ ಸ್ವರಕ್ಷಣೆ ವ್ಯವಸ್ಥೆಯು ಉರಿಯೂತವನ್ನು ಹೆಚ್ಚಿಸಲು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಹಾಗೂ ಗಾಯವಾದ ಸಂದರ್ಭದಲ್ಲಿ ಶೀಘ್ರವಾಗಿ ಗುಣವಾಗುವಂತೆ ಮಾಡುತ್ತದೆ. ಅದೇ ರೀತಿ, ಸೋರಿಯಾಸಿಸ್ ಇದ್ದಾಗ, ಅಧಿಕವಾಗಿ ಸಕ್ರಿಯವಾಗಿರುವ ಸ್ವರಕ್ಷಣೆ ವ್ಯವಸ್ಥೆಯು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ವಿಪರೀತ ಉರಿಯೂತ ಉಂಟು ಮಾಡುತ್ತದೆ. ಹೀಗಾದಾಗ ಅದು ಸೋರಿಯಾಟಿಕ್ ಸಂಧಿವಾತದಂತೆಯೇ ವರ್ತಿಸಿ ದದ್ದು ಅಥವಾ ಕೀಲು ನೋವು ಉಂಟಾಗಬಹುದು.
ಈ ಅಪಾಯವನ್ನು ತಡೆಗಟ್ಟುವ ಸಲುವಾಗಿ ಸೋರಿಯಾಸಿಸ್ ಇರುವ ಜನರು ಕಾಲಕಾಲಕ್ಕೆ ರೋಗಲಕ್ಷಣ ಪತ್ತೆ ಹಚ್ಚುವ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಾಯಿಲೆಯ ನಿರ್ವಹಣೆ ಹಾಗೂ ಚಿಕಿತ್ಸೆಯೂ ಅಷ್ಟೇ ಮುಖ್ಯ. ಅಲ್ಲದೆ, ತೀವ್ರ ಸೋರಿಯಾಸಿಸ್‌ಗೆ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳಿರುವಾಗ, ರೋಗಿಗಳು ನಿಯಮಿತ ವ್ಯಾಯಾಮ ಮಾಡಬೇಕು. ಧೂಮಪಾನ/ ಮದ್ಯಪಾನ ವಿಸರ್ಜಿಸುವುದು ಸೇರಿದಂತೆ ಆರೋಗ್ಯಕರವಾದ ಹಾಗೂ ಕ್ರಿಯಾಶೀಲವಾದ ದಿನಚರಿ ಅನುಸರಿಸುವುದು ಒಳ್ಳೆಯದು.
(ಲೇಖಕರು ಪ್ರಾಧ್ಯಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಚಾನ್‌ರೇ ರ‍್ಯುಮಟಾಲಜಿ ಮತ್ತು ಇಮ್ಯುನಾಲಜಿ ಕೇಂದ್ರ ಮತ್ತು ಸಂಶೋಧನೆ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.