ಸೋಮವಾರ, ಮಾರ್ಚ್ 1, 2021
26 °C

ಕೊರೊನಾ ತಿಳಿಯೋಣ| ಕೋವಿಡ್‌ನಿಂದ ಗುಣವಾದ ನಂತರ ಶಸ್ತ್ರಚಿಕಿತ್ಸೆ ಮಾಡಿಸಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ನಿಂದ ಗುಣಮುಖರಾದವರು ಬೇರೆ ಸಮಸ್ಯೆಯಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಬಹುದೇ? ಹೀಗೊಂದು ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ಕೋವಿಡ್‌ನಿಂದ ಗುಣಮುಖರಾದರೂ ಇದಕ್ಕೆ ಸಂಬಂಧಿಸಿದ ಬೇರೆ ಕೆಲವು ತೊಂದರೆಗಳು ಬಹಳಷ್ಟು ಜನರಲ್ಲಿ ತಲೆದೋರಿದ್ದು, ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅಪಾಯ ತಂದೊಡ್ಡಬಹುದು ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿರುವುದರಿಂದ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.

ಅಷ್ಟೊಂದು ತುರ್ತಾಗಿ ಮಾಡಿಸಬೇಕಾದ ಅವಶ್ಯಕತೆಯಿಲ್ಲದಂತಹ ಶಸ್ತ್ರಚಿಕಿತ್ಸೆಗಳು ಉದಾಹರಣೆಗೆ ಮೊಣಕಾಲು ಮತ್ತು ಸೊಂಟದ ಸಮಸ್ಯೆ, ಕಿಡ್ನಿ ಕಲ್ಲು, ಹಿಸ್ಟರೆಕ್ಟಮಿ, ಆ್ಯಂಜಿಯೊಪ್ಲಾಸ್ಟಿ, ಲೇಸರ್‌ ಶಸ್ತ್ರಚಿಕಿತ್ಸೆ ಮೊದಲಾದವುಗಳಿಗೆ ಈ ಸೂತ್ರಗಳು ಅನ್ವಯಿಸುತ್ತವೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಸ್ನಾಯು ನೋವು, ಬಳಲಿಕೆ, ಉರಿಯೂತ ಸೇರಿದಂತೆ ಹಲವು ತೊಂದರೆಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಹಲವರಲ್ಲಿ ಸೋಂಕಿನ ಲಕ್ಷಣಗಳು ದೀರ್ಘಾವಧಿ ಕಾಡಲಿದ್ದು, ಅವರಿಗೆ ಗುಣಮಟ್ಟದ ಬದುಕು ಸಾಗಿಸಲು ತಡೆ ಉಂಟು ಮಾಡಬಹುದು ಎಂದು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿರುವ ಅಮೆರಿಕದ ಒರೆಗಾನ್‌ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

ಉಸಿರಾಟದ ಸಮಸ್ಯೆ, ಮೊಣಕಾಲು ನೋವು, ಎದೆನೋವು, ಸ್ಮರಣ ಶಕ್ತಿ ಕಡಿಮೆಯಾಗುವುದು, ರುಚಿ– ವಾಸನೆ ಇಲ್ಲದಿರುವುದು, ನಿದ್ರೆಯ ಕೊರತೆ ಉಂಟಾಗುವುದು ಕೊರೊನಾ ನೆಗೆಟಿವ್‌ ಬಂದ ಮೇಲೂ ದೀರ್ಘಾವಧಿ ಕಾಡುತ್ತದೆ ಎಂದು ಅಧ್ಯಯನ ತಂಡದ ಅವಿಟಲ್‌ ಒ’ಗ್ಲಾಸರ್‌ ಹೇಳಿದ್ದು, ಬೇರೆ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಸಮಗ್ರ ನಿಗಾ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿರುವ ಸಂಶೋಧಕರು, ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ; ಕಾಯಿಲೆಯ ತೀವ್ರತೆ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯೊಮಾರ್ಕರ್‌ ಪತ್ತೆ ಮಾಡಬೇಕಾಗು ತ್ತದೆ ಎಂದಿದ್ದಾರೆ. ಹಾಗೆಯೇ ರೋಗಿಗೆ ಕೋವಿಡ್ ಬಂದಿರುವ ಹಾಗೂ ಶಸ್ತ್ರ ಚಿಕಿತ್ಸೆಯ ಸಮಯ ಎರಡನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅರವಳಿಕೆ ಅಗತ್ಯ ವಿದೆಯೇ ಎಂಬುದನ್ನು ಮೊದಲೇ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರೋಗಿಯ ರಕ್ತ ಪರೀಕ್ಷೆ, ಎದೆಯ ಎಕ್ಸ್‌ರೇ, ಇಕೆಜಿ, ಉಸಿರಾಟದ ಸಮಸ್ಯೆ ತಪಾಸಣೆ, ಪೌಷ್ಟಿಕಾಂಶದ ಮಟ್ಟ ಹಾಗೂ ಮಾನಸಿಕ ಸ್ಥಿತಿಗತಿಯನ್ನೂ ಗಣನೆಗೆ ತೆಗೆದುಕೊಳ್ಳುವಂತೆ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ. ಹಾಗೆಯೇ ಕೋವಿಡ್‌ನಿಂದ ಗುಣಮುಖರಾಗಲು ತೆಗೆದುಕೊಂಡ ಅವಧಿಯನ್ನೂ ಲೆಕ್ಕ ಹಾಕಬೇಕು. ಲಕ್ಷಣರಹಿತರಾಗಿದ್ದರೆ ನಾಲ್ಕು ವಾರಗಳಲ್ಲೇ ಗುಣಮುಖ ರಾಗಿರಬೇಕು.. ಹೀಗೆ ವಿಸ್ತೃತವಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು