ಸೋಮವಾರ, ಅಕ್ಟೋಬರ್ 3, 2022
24 °C

ಮಕ್ಕಳ ಆರೋಗ್ಯ: ಗೋಲ್ ಕೀಪರ್‌, ಅಂಪೈರ್‌ಗಳ ಮೇಲೆ ಕಣ್ಣಿಟ್ಟಿರಿ!

ಡಾ. ಕುಶ್ವಂತ್‌ ಕೋಳಿಬೈಲು Updated:

ಅಕ್ಷರ ಗಾತ್ರ : | |

ನಮ್ಮ ದೇಹದ ಚರ್ಮ, ಶ್ವಾಸಕೋಶ‌ ಅಥವಾ ಜಠರಗಳು ಅನೇಕ‌ ಬಾರಿ ಅವುಗಳ ಸಂಪರ್ಕಕ್ಕೆ ಬರುವ ಎಲ್ಲಾ ಪದಾರ್ಥಗಳನ್ನು ಒಪ್ಪಿಕೊಳ್ಳುವುದಿಲ್ಲ. ದೇಹದ ಈ ಅಂಗಾಂಗಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರತಿರೋಧವನ್ನು ಒಡ್ಡಿದಾಗ ದೇಹದ ರೋಗನಿರೋಧಕ ಶಕ್ತಿಯು ಈ ಅಲರ್ಜಿ ಉಂಟುಮಾಡುವ ಪದಾರ್ಥಗಳ ವಿರುದ್ಧ ತಿರುಗಿ ಬೀಳುತ್ತದೆ. ಕೆಲವೊಮ್ಮೆ ಈ ಕ್ರಿಯೆಗಳಿಂದ ದೇಹಕ್ಕೆ ಹೆಚ್ಚು ನಷ್ಟವಾಗುವ ಸಂಭವವಿದೆ. ಇಂತಹ ಸಂಕೀರ್ಣ ಕಾಯಿಲೆಗಳ ಗುಣಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಶೀಘ್ರವಾಗಿ ಪತ್ತೆ ಹಚ್ಚಿ, ಸಮರ್ಪಕವಾದ ಚಿಕಿತ್ಸೆಯನ್ನು ನೀಡಿದ್ದಲ್ಲಿ ರೋಗಿಗಳ ನರಳಾಟವನ್ನು ತಪ್ಪಿಸಬಹುದು. ಇಂತಹ ಕಾಯಿಲೆಗಳು ಮಕ್ಕಳನ್ನು ಕಾಡುತ್ತಿದ್ದರೆ ಅವನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡುವುದು ತುಂಬ ಸವಾಲಿನದ್ದು. ಏಕೆಂದರೆ ಇವು ಮಕ್ಕಳ ದೇಹದಲ್ಲಿರುವ ಬಗ್ಗೆ ಡಂಗುರ ಹೊಡೆಯುವುದಿಲ್ಲ, ಮೌನವಾಗಿ  ಆರೋಗ್ಯವನ್ನು ನಾಶ ಮಾಡುತ್ತಿರುತ್ತವೆ.

ಮಕ್ಕಳ ಜೀವನಕ್ರಮಗಳನ್ನು ಹತ್ತಿರದಿಂದ ಗಮನಿಸಿದರೆ ಮಾತ್ರ ನಿಮಗೆ ಅವರ ಅನಾರೋಗ್ಯದ ಬಗ್ಗೆ ಸುಳಿವು ಸಿಕ್ಕುವುದು. ಹೆಚ್ಚಿನ ಮಕ್ಕಳಿಗೆ ಶಾಲಾ ದಿನಗಳಲ್ಲಿ ವೈರಲ್ ಶೀತಜ್ವರ ಬರುವುದು ಸಾಮಾನ್ಯ ಮತ್ತು ಇಂತಹ ಮಕ್ಕಳು ಶೀಘ್ರದಲ್ಲಿ ಗುಣಮುಖರಾಗುತ್ತಾರೆ ಕೂಡ. ಆದರೆ ಕೆಲವು ಮಕ್ಕಳ ಶ್ವಾಸಕೋಶದಲ್ಲಿ ಈ ಶೀತಜ್ವರದ ವೈರಸ್‌ಗಳು ಅಲರ್ಜಿಯನ್ನು ಉಂಟು ಮಾಡಿ, ಅವರ ಶ್ವಾಸಕೋಶದ ನಾಳಗಳನ್ನು ಸಂಕುಚಿತಗೊಳಿಸಿ ಉಸಿರನ್ನು ಹೊರಹಾಕುವ ಪ್ರಕ್ರಿಯೆಯನ್ನು ತ್ರಾಸದಾಯಕವಾಗುವಂತೆ ಮಾಡುತ್ತದೆ. ಇಂತಹ ಮಕ್ಕಳು ಉಸಿರು ಬಿಡುವಾಗ ಶ್ವಾಸಕೋಶದೊಳಗೆ ಸಾವಿರ ಕೊಳಲುಗಳ ಸಂಗೀತ ಕಛೇರಿ ನಡೆಯುವ ರೀತಿಯಲ್ಲಿ ‘ವೀಝಿಂಗ್’ ಧ್ವನಿ ಉತ್ಪಾದನೆಯಾಗುತ್ತದೆ.

ದೇಹದಲ್ಲಿರುವ ಹಾರ್ಮೋನುಗಳ ಪ್ರಮಾಣಗಳಲ್ಲಿ ಹಗಲು-ರಾತ್ರಿಗಳಲ್ಲಿ ಬದಲಾವಣೆಯಿರುವುದರಿಂದ ಈ ವೀಝಿಂಗ್ ಸಮಸ್ಯೆ ರಾತ್ರಿಯ ಸಮಯದಲ್ಲಿ ಉಲ್ಬಣಗೊಂಡು ಮಗು ರಾತ್ರಿಯಿಡೀ ಉಸಿರನ್ನು ಹೊರಹಾಕಲು ಪ್ರಯಾಸ ಪಡುತ್ತದೆ. ಒಣಕೆಮ್ಮು ಮಗುವಿನ ರಾತ್ರಿಯ ನಿದ್ದೆಯನ್ನು ನುಂಗಿಬಿಡುತ್ತದೆ. ರಾತ್ರಿ ನಿದ್ದೆಯಿಲ್ಲದ ಇಂತಹ ಮಕ್ಕಳಲ್ಲಿ ಹಗಲಿನ ವೇಳೆ ತರಗತಿಯಲ್ಲಿ ಪಾಠ ಕೇಳಲು ಏಕಾಗ್ರತೆಯ ಕೊರತೆಯಾಗುತ್ತದೆ. ನಿಃಶಕ್ತಿಯೂ ಕಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಸರ್ವಾಂಗೀಣ ಅಭಿವೃದ್ಧಿಗೂ ತೊಡಕಾಗುತ್ತದೆ. ಮಕ್ಕಳ ಶ್ವಾಸಕೋಶದೊಳಗೆ ಅಲರ್ಜಿಯನ್ನು ಹುಟ್ಟುಹಾಕಿ ಅವರಿಗೆ ಆಸ್ತಮಾ ಮಾದರಿಯ ವೀಝಿಂಗ್ ಉಂಟುಮಾಡುವಲ್ಲಿ ವೈರಸ್‌ಗಳ ಜೊತೆಗೆ ಮನೆಯೊಳಗಿನ ದೂಳು, ಫಂಗಸ್ ಮತ್ತು ಸಾಕುಪ್ರಾಣಿಗಳ ಚರ್ಮದಲ್ಲಿರುವ ಸೂಕ್ಷ್ಮ ಕಣಗಳು ಸೇರಿದಂತೆ ಶ್ವಾಸಕೋಶದ ಒಳಗೆ ಸೇರಬಲ್ಲ ಅನೇಕ ಸೂಕ್ಷ್ಮಪದಾರ್ಥಗಳು ಈ ಸಮಸ್ಯೆಯ ಮುಖ್ಯಪಾತ್ರಧಾರಿಗಳಾಗಿರುತ್ತವೆ. ಕೆಲವು ಮಕ್ಕಳ ಶ್ವಾಸಕೋಶದ ಸಮಸ್ಯೆ ಹಗಲಿನ ವೇಳೆಯಲ್ಲಿ ಕಡಿಮೆ ತ್ರಾಸದಾಯಕವೆನಿಸಬಹುದು. ಆದರೆ ಇಂತಹವರು ಆಟೋಟದಲ್ಲಿ ಇತರ ಮಕ್ಕಳಂತೆ ಉತ್ಸಾಹದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಕ್ರೀಡೆಯಲ್ಲಿ ತಮ್ಮ ಸ್ನೇಹಿತರ ಜೊತೆಗೆ ಈ ಪುಟಾಣಿಗಳು ಭಾಗವಹಿಸಿದರೂ ಅವರು ಹೆಚ್ಚು ದೈಹಿಕ ಶ್ರಮದ ಅವಶ್ಯಕತೆಯಿಲ್ಲದ ಚಟುವಟಿಕೆಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ. ಅಂತಹ ಹೆಚ್ಚಿನ ಮಕ್ಕಳು ಆಟದ ಮೈದಾನದೊಳಗೆ ಫುಟ್ಬಾಲಿನಲ್ಲಿ ಗೋಲ್ ಕೀಪರ್ ಮತ್ತು ಕ್ರಿಕೆಟಿನಲ್ಲಿ ಅಂಪೈರ್ ಅಥವಾ ವಿಕೆಟ್ ಕೀಪರ್ ಪಾತ್ರ ನಿರ್ವಹಿಸುವಲ್ಲಿಗೆ ಸೀಮಿತವಾಗಿರುತ್ತಾರೆ!

ಶ್ವಾಸಕೋಶದ ಅಲರ್ಜಿಯಿಂದ ಬಳಲುವ ಮಕ್ಕಳಲ್ಲಿ ಕಂಡುಬರುವ ದೊಡ್ಡ ಸಮಸ್ಯೆ ಎಂದರೆ ರಾತ್ರಿ ವೇಳೆ ಹೆಚ್ಚಾಗಿ ಕಂಡುಬರುವ ಕೆಮ್ಮು. ಬೇರೆ ಬೇರೆ ವೈದ್ಯರು ನೀಡಿರುವ ಹಲವು ಬಗೆಯ ಬಣ್ಣಬಣ್ಣದ ಕಾಫ್ ಸಿರಪ್ಪುಗಳ ಬಾಟಲಿಗಳಿಂದ ಈ ಮಕ್ಕಳ ಮನೆ ತುಂಬಿದ್ದರೂ, ಅವರ ರಾತ್ರಿಯ ಕೆಮ್ಮು ಕಡಿಮೆಯಾಗುವುದಿಲ್ಲ; ಮಕ್ಕಳು ನಿದ್ದೆಯಿಲ್ಲದೆ ರಾತ್ರಿ ನರಳಾಡುವುದನ್ನೂ ನಿಲ್ಲಿಸಿರುವುದಿಲ್ಲ. ಇಂತಹ ಮಕ್ಕಳ ಕಾಯಿಲೆಯ ಇತಿಹಾಸವನ್ನು ಸೂಕ್ಷ್ಮವಾಗಿ ಕೆದಕಿದಾಗ ಮತ್ತು ಶ್ವಾಸಕೋಶದ ಎಕ್ಸರೆಯಲ್ಲಿರುವ ಸುಳಿವುಗಳನ್ನು ಗಮನಿಸಿದಲ್ಲಿ ಇವರಿಗಿರುವ ಬಾಲ್ಯದ ಕಾಯಿಲೆಯಾದ ‘ಹೈಪರ್ ರೆಸ್ಪಾನ್ಸಿವ್ ಏರ್ವೇ ಡಿಸೀಸ್’ ಮತ್ತು ‘ವೈರಸ್ ಇನ್‌ಡ್ಯೂಸ್ಡ್‌ ವೀಝ್’ (Hyper Responsive Airway Disease / Virus Induced Wheeze ) ಬಗ್ಗೆ ಸಾಕ್ಷಿಗಳು ಸಿಗುತ್ತವೆ. ಈ ಸಮಸ್ಯೆ ಹೆಚ್ಚು ಉಲ್ಬಣಗೊಂಡಲ್ಲಿ ಅದು ಮುಂದೆ ಬಾಲ್ಯದ ಆಸ್ತಮಾಕ್ಕೆ ತಿರುಗಬಹುದು. ಶ್ವಾಸಕೋಶದ ಕಾಯಿಲೆಯನ್ನು ದೃಢೀಕರಿಸಲು ರೋಗಿಗಳನ್ನು ಪಲ್ಮನರಿ ಫಂಕ್ಷನ್ ಟೆಸ್ಟಿಗೆ (Pulmonary function test) ಒಳಪಡಿಸಬೇಕಾಗುತ್ತದೆ. ಆಗ ಶ್ವಾಸಕೋಶದಲ್ಲಿರುವ ಎಲ್ಲ ಸಮಸ್ಯೆಗಳನ್ನು ಮತ್ತು ಆ ಸಮಸ್ಯೆಗಳ ತೀವ್ರತೆಯನ್ನು ಪತ್ತೆ ಹಚ್ಚಬಹುದು. ಶ್ವಾಸಕೋಶದ ಕಾಯಿಲೆಗಳು ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಗ್ಗೆಯನ್ನೂ ಆ ಪರೀಕ್ಷೆಗಳಿಂದ ತಿಳಿಯಬಹುದು. ಆದರೆ ಅಂತಹ ಸಂಕೀರ್ಣವಾದ ಶ್ವಾಸಕೋಶದ ಪರೀಕ್ಷೆಗೆ ಒಳಪಡುವಾಗ ರೋಗಿಗಳ ಸಹಕಾರ ತುಂಬ ಬೇಕಾಗುತ್ತದೆ. ಹೀಗಾಗಿ ಆರು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಪುಟಾಣಿಗಳನ್ನು ಇಂತಹ ಪರೀಕ್ಷೆಗಳಿಗೆ ಒಳಪಡಿಸಿ ರೋಗ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳ ರಾತ್ರಿಯ ಒಣಕೆಮ್ಮು ಮತ್ತು ವೈರಲ್ ಜ್ವರ, ವೀಝಿಂಗ್ ಸಮಸ್ಯೆಗಳನ್ನು ‘ಕಾಫ್ ಸಿರಪ್’ಗಳಿಂದ ಬಗ್ಗಿಸಲೂ ಆಗುವುದಿಲ್ಲ; ಕಾಯಿಲೆಯ ಮೂಲವನ್ನು ಹುಡುಕುವುದರಲ್ಲೂ ವೈದ್ಯರು ವಿಫಲರಾಗುತ್ತಾರೆ. ಹೀಗಾಗಿ ಸೂಕ್ತ ಚಿಕಿತ್ಸೆಯಿಲ್ಲದೆ ಅಂತಹ ಮಕ್ಕಳ ಬಾಲ್ಯವು ಯಾತನಾಮಯವಾಗಿರುತ್ತದೆ. ನಿದ್ದೆಯ ಸಮಸ್ಯೆಗಳ ಜೊತೆ ಜೊತೆಗೆ ವಿದ್ಯಾಭ್ಯಾಸ ಮತ್ತು ಕ್ರೀಡೆಯಲ್ಲಿಯೂ ಹಿಂದುಳಿದವರೆಂಬ ಹಣೆಪಟ್ಟಿಯನ್ನು ಪ್ರಾಥಮಿಕ ಶಾಲೆಯ ಹಂತದಿಂದಲೇ ಅಂಟಿಸಿಕೊಂಡು ಇಂತಹ ಮಕ್ಕಳು ಆತ್ಮವಿಶ್ವಾಸದ ಕೊರತೆಯಿಂದ ನರಳುತ್ತಾರೆ.

ಸದಾ ಕಾಲ ಫುಟ್ಬಾಲಿನಲ್ಲಿ ಗೋಲ್ ಕೀಪರ್ ಮತ್ತು ಕ್ರಿಕೆಟಿನಲ್ಲಿ ಅಂಪೈರ್ ಆಗಲು ಮಾತ್ರವೇ ಬಯಸುತ್ತಿರುವ ಮಕ್ಕಳ ಆರೋಗ್ಯದ ಇತಿಹಾಸವನ್ನು ಜಾಲಾಡಿ ಅವರ ಒಣಕೆಮ್ಮಿನ ಜಾಡು ಹಿಡಿದು ಹೋದಾಗ ಮಾತ್ರ ಆರೋಗ್ಯ ಸಮಸ್ಯೆಗಳ ಮೂಲವನ್ನು ಪತ್ತೆ ಹಚ್ಚಬಹುದು. ಶ್ವಾಸಕೋಶದ ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಿ, ಮಕ್ಕಳ ಬಾಲ್ಯವನ್ನು ಆಹ್ಲಾದಕರವಾಗುವಂತೆ ಮಾಡಬಲ್ಲ ಚಿಕಿತ್ಸಾ ಕ್ರಮಗಳಿವೆ. ಈ ಸಮಸ್ಯೆಗಳು ಮಕ್ಕಳ ತಜ್ಞರು ಕಡಿಮೆಯಿರುವ ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಕಂಡು ಬರುತ್ತವೆ. ಹೀಗಾಗಿ ಹೆತ್ತವರು ಮತ್ತು ಶಿಕ್ಷಕರು ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಮುತುವರ್ಜಿಯನ್ನು ತೋರಿಸಬೇಕು. ಆಗ ಮಾತ್ರ ಮಕ್ಕಳ ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ನೀಡಲು ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು