ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರು ಸರ್ಜಾ ಸಾವು ಮೂಡಿಸಿದ ಅರಿವು: ಹೃದಯ ತಪಾಸಣೆಗೆ ಯುವಕರ ಒಲವು

Last Updated 16 ಜೂನ್ 2020, 12:25 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯುವ ಸಮೂಹದ ಮೇಲೆ ಗಾಢ ಪರಿಣಾಮ ಬೀರಿದೆ.

ಈ ಘಟನೆಯಿಂದ ಆತಂಕಕ್ಕೆ ಒಳಗಾಗಿರುವ ಅನೇಕ ಯುವಕರು ಸ್ವಯಂಪ್ರೇರಿತರಾಗಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ.

ಕೊರೊನೊ ಸೋಂಕು ತಗಲುವ ಭಯದಿಂದ ಆಸ್ಪತ್ರೆಗಳತ್ತ ಸುಳಿಯಲು ಹಿಂಜರಿಯುತ್ತಿದ್ದವರೂ ಕಳೆದ ಒಂದು ವಾರದಿಂದ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಇಷ್ಟು ದಿನ ಖಾಲಿ ಇದ್ದ ಖಾಸಗಿ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್‌‌ ಸೆಂಟರ್‌ಗಳು ಜನರಿಂದ ತುಂಬಿದ್ದು, ಹೊಸ ಅಪಾಯಿಂಟ್‌ಮೆಂಟ್ ಸಿಗುತ್ತಿಲ್ಲ.

’ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಒಂದು ವಾರದಿಂದ ಈಚೆಗೆ ಐದಾರು ಪಟ್ಟು ಹೆಚ್ಚಿದೆ. ಅಪಾಯಿಂಟ್‌ಮೆಂಟ್‌ ಕೋರಿ ಬರುವ ದೂರವಾಣಿ ಕರೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಎರಡು ಮೂರು ದಿನ ಬಿಟ್ಟು ಸಮಯ ನೀಡುತ್ತಿದ್ದೇವೆ‘ ಎನ್ನುತ್ತಾರೆ ತಥಾಗತ್‌ ಹಾರ್ಟ್‌ಕೇರ್ ಆಸ್ಪತ್ರೆ ಸಿಬ್ಬಂದಿ.

ರಕ್ತ ತಪಾಸಣೆಗಾಗಿ ಬರುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಅವರಲ್ಲಿ ಯುವ ಸಮೂಹದವರ ಸಂಖ್ಯೆ ಹೆಚ್ಚಾಗಿದೆ. ‘ಹೆಚ್ಚಿನವರು ಇಸಿಜಿ,ಎಕೊ, ಟ್ರೆಡ್‌ಮಿಲ್‌ ಟೆಸ್ಟ್‌ (ಟಿಎಂಟಿ), ಲಿಪಿಡ್‌ ಪ್ರೊಫೈಲ್‌, ಥೈರಾಯ್ಡ್, ರಕ್ತ, ಮೂತ್ರ, ಸಕ್ಕರೆ ಕಾಯಿಲೆ, ರಕ್ತದೊತ್ತಡ‌ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣಾ ಪ್ಯಾಕೇಜ್‌ ಆಯ್ದುಕೊಳ್ಳುತ್ತಿದ್ದಾರೆ‘ ಎಂದು ಚಾನ್ ರೇ ಡಯಾಗ್ನೋಸ್ಟಿಕ್‌ ಸೆಂಟರ್ ಸಿಬ್ಬಂದಿ ಹೇಳುತ್ತಾರೆ.

ಮಂಗಳವಾರ ‘ನಮ್ಮ ಪ್ರತಿನಿಧಿ‘ ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹತ್ತಾರು ಯುವಕರು ಹೃದ್ರೋಗ ತಪಾಸಣಾ ಕೊಠಡಿಯ ಎದುರು ತಮ್ಮ ಸರದಿಗಾಗಿ ಕಾಯುತ್ತಿದ್ದದು ಕಂಡುಬಂತು. ಆ ಸಾಲಿನಲ್ಲಿ ಕುಳಿತಿದ್ದ ಹೊಸಪೇಟೆಯಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ 35ರ ಹರೆಯದ ಬಿ.ಎಂ.ಜಯರಾಜ್ ಮಾತಿಗೆ ಸಿಕ್ಕರು. ‘ನಮ್ಮ ಓರಿಗೆಯ ನಟ ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ಆತಂಕವಾಯಿತು. ಬಹಳ ದಿನಗಳಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡಿ ರಲಿಲ್ಲ. ತೂಕ ಬೇರೆ ಹೆಚ್ಚಾಗಿತ್ತು. ಹೀಗಾಗಿ ಯಾವೂದಕ್ಕೂ ಇರಲಿ ಎಂದು ಸಮಗ್ರ ತಪಾಸಣೆ ಮಾಡಿಸಿಕೊಳ್ಳಲು ಬಂದಿದ್ದೇನೆ’ ಎಂದು ಹೇಳಿದರು.

ಇತ್ತ ಹೃದ್ರೋಗ ತಪಾಸಣೆಗೆ ಯುವಕರು ಸರದಿಯಲ್ಲಿ ನಿಂತಿದ್ದರೆ, ಅತ್ತ, ಅಪಾಯಿಂಟ್‌ಮೆಂಟ್‌ ಕೋರಿ ಆಸ್ಪತ್ರೆಯ ರಿಶಿಪ್ಶನ್‌ನ ಫೋನ್‌ಗಳು ಎಡಬಿಡದೆ ಹೊಡೆದುಕೊಳ್ಳುತ್ತಿದ್ದವು. ಎಲ್ಲ ಕರೆಗಳಿಗೂ ‘ಇನ್ನೂ ಮೂರ‍್ನಾಲ್ಕು ದಿನ ಯಾವುದೇ ಅಪಾಯಿಂಟ್‌ಮೆಂಟ್‌ ಇಲ್ಲ’ ಎಂಬ ಸಿದ್ಧ ಉತ್ತರವನ್ನು ಅಲ್ಲಿಯ ಸಿಬ್ಬಂದಿ ನೀಡುತ್ತಿದ್ದರು.

ಆಸ್ಪತ್ರೆಯ ಫೋನ್‌ಗಳಷ್ಟೇ ಅಲ್ಲ, ಟ್ರೆಡ್‌ಮಿಲ್‌, ಇಸಿಜಿ, ಎಕೊ ಸೇರಿದಂತೆ ಹೃದ್ರೋಗ ತಪಾಸಣೆ ಮಾಡುವ ಹಲವು ವೈದ್ಯಕೀಯ ಉಪಕರಣಗಳು ಬಿಡುವಿಲ್ಲದೇ ದುಡಿಯುತ್ತಿದ್ದವು.

ಪ್ರತಿಯೊಂದು ರೋಗಗಳ ತಪಾಸಣೆ ಮುಗಿಸಿ ಹೊರಬರುತ್ತಿದ್ದವರು ವರದಿಯ ನಿರೀಕ್ಷೆಯಲ್ಲಿರುತ್ತಿದ್ದರು. ವರದಿಯಲ್ಲಿ ಯಾವುದೇ ತೊಂದರೆಯಿಲ್ಲ ಎಂಬ ಮಾಹಿತಿ ತಿಳಿದುಕೊಂಡವರು ನಿರಾತಂಕವಾಗಿ ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT