ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ಪ್ರಯೋಗಾಲಯದ ಪರೀಕ್ಷೆಗಳ ಪರೀಕ್ಷೆ!

ಡಾ. ವಿನಯ ಶ್ರೀನಿವಾಸ್
Published : 27 ಆಗಸ್ಟ್ 2024, 0:56 IST
Last Updated : 27 ಆಗಸ್ಟ್ 2024, 0:56 IST
ಫಾಲೋ ಮಾಡಿ
Comments

ಇತ್ತೀಚೆಗೆ ಪರಿಚಿತರ ಮಗನನ್ನು ಜ್ವರ, ವಾಂತಿ ಮತ್ತು ಹೊಟ್ಟೆನೋವು ಎಂಬ ಕಾರಣಕ್ಕಾಗಿ ಆಸ್ಪತ್ರೆಗೆ ಕರೆತಂದಿದ್ದರು. ಆತ ತೀರ ನಿತ್ರಾಣನಾಗಿದ್ದರಿಂದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ ವೈದ್ಯರು ಕೆಲವು ರಕ್ತಪರೀಕ್ಷೆಗಳನ್ನು ಸೂಚಿಸಿದ್ದರು. ಮರುದಿನ ಪ್ರಯೋಗಾಲಯದ ವರದಿಯಲ್ಲಿ ಜಾಂಡೀಸ್ ಹಾಗೂ ಇಲಿಜ್ವರ ಕಾಯಿಲೆಗೆ ‘ಪಾಸಿಟೀವ್‌ ರಿಪೋರ್ಟ್‌’ ಬಂದದ್ದನ್ನು ನೋಡಿ ಪರಿಚಿತರು ಗಾಬರಿಯಿಂದ ನನಗೆ ಕರೆ ಮಾಡಿದ್ದರು. ‘ಇದೇನಿದು, ಮಗನಿಗೆ ಎರಡು ಕಾಯಿಲೆಗಳಿವೆಯೇ – ಎಂದು ಆತಂಕವನ್ನು ವ್ಯಕ್ತಪಡಿಸಿದ್ದರು.

‘ರೋಗಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಒಮ್ಮೊಮ್ಮೆ ವಿಜಾತಿಯ ಪ್ರತಿಜನ್ಯದೊಂದಿಗೂ ಕೂಡಿ ಇಂತಹ ಪ್ರತಿಕ್ರಿಯೆಗಳು ನಡೆಯಬಹುದು. ಇಂತಹ ಸಂದರ್ಭದಲ್ಲಿ ನಾವು ಇತರ ಅಂಶಗಳನ್ನು ಗಮನಿಸಬೇಕಾಗುತ್ತದೆ. ನಿಮ್ಮ ಮಗ ಹಾಸ್ಟೆಲ್ ಮತ್ತು ಹೋಟೆಲ್ ಊಟದ ಮೇಲೆ ಅವಲಂಬಿತನಾಗಿರುವುದರಿಂದ ಹೆಚ್ಚಿನಾಂಶ ಇದು ಜಾಂಡಿಸ್ ಕಾಯಿಲೆ ಇರಬಹುದು’ ಎಂದು ಸಮಾಧಾನ ಮಾಡಿದ್ದೆ.

ಹೌದು, ಮಳೆಗಾಲದ ಈ ದಿನಗಳಲ್ಲಿ ಜ್ವರದ ಸಮಸ್ಯೆಗಾಗಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜ್ವರ ಎಂಬುದು ಕೇವಲ ಕಾಯಿಲೆಯ ಗುಣಲಕ್ಷಣವಷ್ಟೆ. ಅದರ ಹಿಂದಿರುವ ಮೂಲಕಾರಣವನ್ನು ಪತ್ತೆ ಮಾಡಿದರೆ ಮಾತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ಕೊಡುವುದು ಸಾಧ್ಯ. ಪ್ರಯೋಗಾಲಯದಲ್ಲಿಯ ರಕ್ತ, ಮೂತ್ರ, ಎಕ್ಸ್–ರೇ, ಸ್ಕ್ಯಾನಿಂಗ್ ಮತ್ತಿತರ ಪರೀಕ್ಷೆಗಳು ಕಾಯಿಲೆಯ ಪತ್ತೆಗೆ ನೆರವಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದರೊಂದಿಗೆ ರೋಗಿಯನ್ನು ಬಾಧಿಸುತ್ತಿರುವ ಇತರ ಗುಣಲಕ್ಷಣಗಳು, ಆತನ ಹಿನ್ನೆಲೆ, ಉದ್ಯೋಗ ಮತ್ತಿತರ ಅಂಶಗಳು ಕಾಯಿಲೆಯ ನಿಖರವಾದ ಪತ್ತೆಗೆ ಮಹತ್ವದ ಕೊಡುಗೆಯನ್ನು ನೀಡಬಲ್ಲವು.‌

ಹಾಗೆಂದೇ ವೈದ್ಯಕೀಯ ಶಿಕ್ಷಣದಲ್ಲಿ ರೋಗಿಯಿಂದ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವಾಗ ಆತನ ಊರು, ವಿಳಾಸ, ಉದ್ಯೋಗ, ಕುಟುಂಬ, ವೈಯಕ್ತಿಕ ಅಭ್ಯಾಸಗಳು, ಸಮಸ್ಯೆಯ ಸಂಪೂರ್ಣ ವಿವರ ಮತ್ತಿತರ ವಿಷಯಗಳ ಬಗ್ಗೆ ವಿವರವಾಗಿ ದಾಖಲಿಸಿ ಇಡುವುದನ್ನು ಕಲಿಸಲಾಗುತ್ತದೆ. ಹಾಗೆಯೇ ಸಂಪೂರ್ಣ ದೈಹಿಕ ಪರೀಕ್ಷೆ, ಎಂದರೆ ಕಣ್ಣಿನಿಂದ ಹಿಡಿದು ಕಾಲಿನ ಉಗುರಿನವರೆಗೂ, ಪರೀಕ್ಷೆಯನ್ನು ಮಾಡಿ ಅದನ್ನೂ ವಿವರವಾಗಿ ಬರೆದಿಡುವ ಪದ್ಧತಿಗೆ ಒತ್ತು ಕೊಡಲಾಗುತ್ತದೆ.

ಈ ಎಲ್ಲ ಅಂಶಗಳನ್ನು ವೈದ್ಯರು ತಮ್ಮ ವೃತ್ತಿಜೀವನದಲ್ಲಿ ತಪ್ಪದೇ ಅನುಸರಿಸಬೇಕು. ಪ್ರಯೋಗಾಲಯ ಪರೀಕ್ಷೆಗಳ ವರದಿಯ ಜೊತೆಯಲ್ಲಿ ಗುಣಲಕ್ಷಣಗಳನ್ನು ತಾಳೆ ಮಾಡಿ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ಆರಂಭಿಸಬೇಕು. ಆರಂಭಿಕ ಹಂತಗಳಲ್ಲಿ ರೋಗಾಣುಗಳಿಗೆ ನಿರ್ದಿಷ್ಟ ಪ್ರತಿಕಾಯಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗಲೂ ಪ್ರಯೋಗಾಲಯ ಪರೀಕ್ಷೆಗಳು ‘ನೆಗೆಟೀವ್’ ವರದಿಯನ್ನು ತೋರಿಸುತ್ತವೆ. ಅಂತಹ ಸಂದರ್ಭದಲ್ಲಿಯೂ ರೋಗಿಯನ್ನು ಬಾಧಿಸುವ ಲಕ್ಷಣಗಳೇ ವೈದ್ಯರಿಗೆ ಸೂಕ್ತ ಚಿಕಿತ್ಸೆಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಸಹಕರಿಸುತ್ತವೆ. ರೋಗಿಗಳು ಸಹ ತಮ್ಮನ್ನು ಕಾಡುವ ಎಲ್ಲ ಸಮಸ್ಯೆಗಳನ್ನೂ ವಿವರವಾಗಿ ವೈದ್ಯರಿಗೆ ತಿಳಿಸುವುದನ್ನು ಮರೆಯಬಾರದು.

ಇನ್ನು ಒಳರೋಗಿಯಾಗಿ ದಾಖಲಿಸಿ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ಆರಂಭಿಸಿದ ನಂತರವೂ ಕೆಲವೊಮ್ಮೆ ರಕ್ತದ ಕೆಲವು ಅಂಶಗಳಿಗಾಗಿ ದಿನವೂ ತಪಾಸಣೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಡೆಂಗಿಜ್ವರದಲ್ಲಿ ‘ಪ್ಲೇಟಿಲೆಟ್‌’ಗಳ ಮೇಲೆ, ಹಾಗೆಯೇ ಜಾಂಡಿಸ್ ಕಾಯಿಲೆಯಲ್ಲಿ ರಕ್ತದಲ್ಲಿನ ‘ಬಿಲಿರುಬಿನ್’ ಅಂಶದ ಮೇಲೆಯೂ ನಿಗಾ ಇಡಬೇಕಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿಯೂ ಕೇವಲ ಪರೀಕ್ಷೆಗಳ ವರದಿಯನ್ನು ಮಾತ್ರ ಅವಲಂಬಿಸದೆ ರೋಗಿಯ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಗಮನಿಸುವುದು ಸೂಕ್ತ. ಏಕೆಂದರೆ ಜೀವಕೋಶಗಳ ಸಂಖ್ಯೆ ಹಾಗೂ ಜೀವರಾಸಾಯನಿಕಗಳ ಅಂಶಗಳು ಪ್ರಯೋಗಾಲಯದ ಉಪಕರಣಗಳ ನೆರವಿನಿಂದ ಪತ್ತೆ ಮಾಡುವಂಥವು.

ಅಪರೂಪದ ಸಂದರ್ಭಗಳಲ್ಲಿ ತಾಂತ್ರಿಕ ಹಾಗೂ ಮನುಷ್ಯ ಮಾಡುವ ತಪ್ಪುಗಳಾಗಿ ವರದಿಯಲ್ಲಿ ವ್ಯತ್ಯಾಸವಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ ಕೆಲವು ರಾಸಾಯನಿಕಗಳು ದೇಹದಿಂದ ತಕ್ಷಣ ಹೊರಹಾಕಲ್ಪಡದೆ, ಅದರ ಪ್ರಮಾಣ ಕ್ರಮೇಣ ಕಡಿಮೆಯಾಗಬಹುದು. ಆಗಲೂ ವೈದ್ಯರು ರೋಗಿಯ ಪರಿಸ್ಥಿತಿಯ ಸುಧಾರಣೆಯನ್ನೇ ಗಮನಿಸಿ ಚಿಕಿತ್ಸೆಯಲ್ಲಿ ಬದಲಾವಣೆಯನ್ನು ಸೂಚಿಸಬೇಕಾಗುತ್ತದೆ; ಅಥವಾ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸುವುದರ ಬಗ್ಗೆ ನಿರ್ಧರಿಸಬೇಕಾಗುತ್ತದೆ.

ಇನ್ನು ಕೆಲವು ಸಂದರ್ಭಗಳಲ್ಲಿ ಕಾಯಿಲೆಯ ಸಂಭವನೀಯ ಅಪಾಯಗಳನ್ನು ಮನದಲ್ಲಿಟ್ಟುಕೊಂಡು, ಅದರ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ಗುಣಮುಖನಾದಂತೆ ಕಂಡರೂ ಅಂಥ ಸಂದರ್ಭಗಳಲ್ಲಿ ರೋಗಿಯನ್ನು ಆಸ್ಪತ್ರೆಯಲ್ಲಿ ಒಂದೆರಡು ದಿನ ಇರಲು ವೈದ್ಯರು ಸೂಚಿಸಬಹುದು. ರೋಗಿಯು ಮನೆಗೆ ತೆರಳಿ ಮತ್ತೆ ಗಾಬರಿಗೊಂಡು ಪುನಃ ಆಸ್ಪತ್ರೆಗೆ  ಬರುವುದನ್ನು ತಪ್ಪಿಸಲು ವೈದ್ಯರು ಈ ರೀತಿ ಸೂಚಿಸಬಹುದು. ಇಂತಹ ಸಂದರ್ಭಗಳಲ್ಲಿ ರೋಗಿಯ ಕಡೆಯವರು ಸಹನೆಯಿಂದ ವೈದ್ಯರ ಆದೇಶಗಳನ್ನು ಪಾಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT