ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸವೂ ದೇಹ– ಭಾವದ ಶುದ್ಧಿಯೂ

Last Updated 1 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಅವರಿಗೆ ಉಪವಾಸ ಎನ್ನುವುದು ಅವರು ನಂಬಿದ್ದ ಅಹಿಂಸೆ ಹಾಗೂ ಸತ್ಯಾಗ್ರಹವೆಂಬ ತತ್ವದ ಒಂದು ಭಾಗವೇ ಆಗಿತ್ತು. ದೇಹ, ಮನಸ್ಸು ಮತ್ತು ಆತ್ಮದ ಶುದ್ಧಿಗಾಗಿ ಉಪವಾಸ ಕೈಗೊಂಡ ಗಾಂಧಿ ತಾವು ಸೇವಿಸುವ ಆಹಾರದಲ್ಲೂ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ಹಸಿ ತರಕಾರಿ, ವೇಗನ್‌ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರಕ್ಕೆ ಒತ್ತು ನೀಡುತ್ತಿದ್ದರು. ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ಉಪವಾಸದ ಮಹತ್ವ ಹಾಗೂ ಪೌಷ್ಟಿಕ ಆಹಾರ ಹೇಗಿರಬೇಕು ಎಂಬುದರ ಬಗ್ಗೆ ಅವಲೋಕನ..

---

ಮಹಾತ್ಮ ಗಾಂಧಿ ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತಮ್ಮ ಮನಸ್ಸಿಗೆ ಯಾತನೆಯಾದಾಗಲೆಲ್ಲ ಬಳಸಿದ್ದು ಉಪವಾಸ ಎಂಬ ಶಮನಕಾರಿ ಸಾಧನವನ್ನು. ಉಪವಾಸ ಹಾಗೂ ಪ್ರಾರ್ಥನೆ ತಮ್ಮೊಳಗೆ ಅಂತರ್ಗತವಾಗಿವೆ; ಕಣ್ಣುಗಳು ಹೊರಜಗತ್ತನ್ನು ದರ್ಶಿಸಲು ಬೇಕಾದರೆ, ಅಂತರಂಗಕ್ಕೆ ಉಪವಾಸ ಬೇಕು ಎಂದು ಗಾಂಧೀಜಿ ಒಂದೆಡೆ ಹೇಳಿದ್ದಾರೆ. ‘ನಿಜವಾದ ಉಪವಾಸ ದೇಹ, ಮನಸ್ಸು, ಆತ್ಮವನ್ನು ಪರಿಶುದ್ಧಗೊಳಿಸುತ್ತದೆ. ನಿಮಗೆ ಮಲಬದ್ಧತೆಯಿದ್ದರೆ, ಅಜೀರ್ಣವಿದ್ದರೆ, ತಲೆನೋವಿದ್ದರೆ, ರ‍್ಯುಮಟೈಡ್‌ ಅಥವಾ ಗೌಟ್‌ ಸಮಸ್ಯೆಯಿದ್ದರೆ, ಖಿನ್ನತೆಯಿದ್ದರೆ, ಸಿಟ್ಟಿದ್ದರೆ ಉಪವಾಸ ಮಾಡಿ. ನಿಮಗೆ ಯಾವುದೇ ಔಷಧಿಯ ಅಗತ್ಯವಿರುವುದಿಲ್ಲ ಎಂದು ನಿಮಗೇ ಗೊತ್ತಾಗುತ್ತದೆ’ ಎಂಬುದು ಅವರು ಅಭಿಪ್ರಾಯವಾಗಿತ್ತು.

ಹೌದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಸೂತ್ರವೆಂದರೆ ವಿಶ್ರಾಂತಿ ಹಾಗೂ ಉಪವಾಸ. ಉಪವಾಸವೆಂದರೆ ಹಸಿವು ಕಟ್ಟಿಕೊಂಡಿರುವುದು ಎಂದಲ್ಲ; ಹಾಗೆಯೇ ದೇಹದ ತೂಕ ಇಳಿಸುವ ಡಯೆಟ್‌ ಕೂಡ ಅಲ್ಲ. ನಿಶ್ಚಿತ ಅವಧಿಯವರೆಗೆ ಆಹಾರ ಮತ್ತು ಪಾನೀಯದಿಂದ ದೂರ ಇದ್ದು ಮನಸ್ಸು ಹಾಗೂ ದೇಹವನ್ನು ಶುದ್ಧಗೊಳಿಸಿಕೊಳ್ಳುವುದು ಉಪವಾಸದ ಮೂಲ ಮಂತ್ರ.

ಆಹಾರ ಸೇವನೆಯಿಂದ ಕೆಲ ಕಾಲ ದೂರವಿರುವುದು ಬಹುತೇಕ ಸಂಸ್ಕೃತಿ ಹಾಗೂ ಧಾರ್ಮಿಕ ಸಂಪ್ರದಾಯಗಳಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತಹದ್ದು. ಪ್ರಮುಖ ಧರ್ಮಗಳು ಈ ಉಪವಾಸವನ್ನು ಒಂದಲ್ಲ ಒಂದು ರೀತಿಯಲ್ಲಿ ಆಚರಿಸಿಕೊಂಡು ಬಂದಿವೆ. ಹಿಂದೂಗಳಲ್ಲಿ ಏಕಾದಶಿ ಮತ್ತಿತರ ಧಾರ್ಮಿಕ ಆಚರಣೆಗಳಲ್ಲಿ (ಹಿರಿಯರು ವಾರಕ್ಕೆ ಒಂದು ದಿನ ಹಗಲಿಡೀ ಉಪವಾಸ ಮಾಡಿ ರಾತ್ರಿ ಅಲ್ಪಾಹಾರ ಸೇವಿಸುವ ವ್ರತವನ್ನೇ ಹಿಡಿಯುತ್ತಿದ್ದರು), ಮುಸ್ಲಿಮರ ರಂಜಾನ್‌, ಕ್ರೈಸ್ತರ ಲೆಂಟ್‌... ಹೀಗೆ ಕೆಲವನ್ನು ಉದಾಹರಿಸಬಹುದು. ಉಪವಾಸ ಎಂದರೆ ಆಹಾರ ಮತ್ತು ಪಾನೀಯದಿಂದ ಕೆಲ ಕಾಲ ದೂರ ಇರುವುದು ಅಥವಾ ಕಡಿಮೆ ಆಹಾರ ಸೇವನೆ ಎಂತಲೂ ಅರ್ಥೈಸಬಹುದು.

ಆರೋಗ್ಯಕ್ಕಾಗಿ ಕೆಲ ಕಾಲ ಉಪವಾಸ ಮಾಡುವುದು ಬಹಳ ಹಿಂದಿನಿಂದಲೂ ಜನಪ್ರಿಯ. ಕ್ರಿ.ಪೂ. 5ನೇ ಶತಮಾನದಲ್ಲೇ ಪಾಶ್ಚಿಮಾತ್ಯ ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪೊಕ್ರೇಟ್ಸ್‌ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಉಪವಾಸವನ್ನು ಶಿಫಾರಸು ಮಾಡುತ್ತಿದ್ದನಂತೆ. ಆಯುರ್ವೇದದಲ್ಲಂತೂ ವಾರಕ್ಕೊಮ್ಮೆ ಉಪವಾಸ ಮಾಡುವುದು ಜೀರ್ಣಾಂಗ ವ್ಯೂಹದ ಶುದ್ಧಿಗೆ ಒಳಿತು ಎಂದು ಹೇಳಲಾಗಿದೆ. ಬಹುತೇಕ ಅಧ್ಯಯನಗಳೂ ಕೂಡ ಆರೋಗ್ಯ ವೃದ್ಧಿಗೆ, ದೀರ್ಘಾಯುಷ್ಯಕ್ಕೆ, ತೂಕ ಕಡಿಮೆ ಮಾಡಲು ಉಪವಾಸ ಎನ್ನುವುದು ಔಷಧವಿದ್ದಂತೆ ಎನ್ನುತ್ತವೆ.

‘ಸಾಮಾನ್ಯ ಆಹಾರ ಸೇವನೆಯನ್ನು ಕೆಲವು ದಿನಗಳ ಕಾಲ ತ್ಯಜಿಸಿ, ಕಡಿಮೆ ತಿನ್ನಿ ಅಥವಾ 15–16 ತಾಸುಗಳ ಕಾಲ ಘನ ಆಹಾರ ಸೇವಿಸದಿದ್ದರೆ ನಿಮ್ಮ ದೇಹಕ್ಕೆ ಕೆಲವು ಕಾಲ ಆಂತರಿಕ ವಿಶ್ರಾಂತಿ ಲಭಿಸುತ್ತದೆ. ಅನಾರೋಗ್ಯವನ್ನು ತಡೆಯಲು ಇದ ಸಹಕಾರಿ’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ. ಸರಸ್ವತಿ ಭಟ್‌.

ಉಪವಾಸದಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ ಎನ್ನುತ್ತದೆ ಅಧ್ಯಯನ. ‘ರೋಗ ನಿರೋಧಕ ಶಕ್ತಿ ಹೆಚ್ಚಾದಂತೆ ಸಹಜವಾಗಿಯೇ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ವಿರುದ್ಧ ಹೋರಾಡಲು ದೇಹಕ್ಕೆ ಬಲ ಬರುತ್ತದೆ. ಉಪವಾಸವನ್ನು ವಾರಗಟ್ಟಲೆ ಮಾಡಬೇಕಾಗಿಲ್ಲ. ವಾರಕ್ಕೊಮ್ಮೆ 16– 18 ತಾಸಿನ ಕಾಲ ಹೊಟ್ಟೆ ಖಾಲಿ ಬಿಡಿ. ನಂತರ ಹಗುರ ಆಹಾರ ಸೇವಿಸಿ’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆಗಳ ತಜ್ಞ ಡಾ.ಟಿ.ಎಸ್‌.ತೇಜಸ್‌.

ಯಾವ ರೀತಿಯ ಉಪವಾಸ ಒಳಿತು?

ಇತ್ತೀಚೆಗೆ ಇಂಟರ್‌ಮಿಟೆಂಟ್‌ ಉಪವಾಸ ಅಂದರೆ ಮಧ್ಯೆ ಮಧ್ಯೆ ಉಪವಾಸ ಹಾಗೂ ಆಹಾರ ಸೇವನೆ ಮಾಡುವ ಕ್ರಮ ಜನಪ್ರಿಯವಾಗಿದೆ. ‘ಎರಡು ಊಟಗಳ ಮಧ್ಯೆ 16 ತಾಸು ಖಾಲಿ ಹೊಟ್ಟೆಯಲ್ಲಿರಬಹುದು. ಮಧ್ಯಾಹ್ನ 12ಕ್ಕೆ ಊಟ ಮಾಡಿದರೆ, ಇನ್ನೊಂದು ಊಟ ರಾತ್ರಿ ಎಂಟಕ್ಕೆ. ಅಲ್ಲಿಗೆ 6 ತಾಸು ಉಪವಾಸವಿದ್ದಂತಾಗುತ್ತದೆ’ ಎನ್ನುವ ಆಯುರ್ವೇದ ವೈದ್ಯ ಡಾ.ಬ್ರಹ್ಮಾನಂದ ನಾಯಕ, ಮಧುಮೇಹ, ಕೊಲೆಸ್ಟರಾಲ್‌, ಥೈರಾಯ್ಡ್‌ ಸಮಸ್ಯೆಯಲ್ಲದೇ, ಇತರ ಕೆಲವು ಕಾಯಿಲೆಗಳನ್ನೂ ಇದರಿಂದ ನಿಯಂತ್ರಣಕ್ಕೆ ತಂದಿರುವುದಾಗಿ ಹೇಳುತ್ತಾರೆ.
ಉಪವಾಸದ ಸಂದರ್ಭದಲ್ಲಿ ದೇಹವು ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕಿ ಶುದ್ಧವಾಗುತ್ತದೆ. ಹಾಗೆಯೇ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ.

ಇನ್ನೊಂದು ಬಗೆಯ ಉಪವಾಸವೆಂದರೆ, ವರ್ಷಕ್ಕೆ 2–3 ಸಲ ಐದು ದಿನಗಳ ಕಾಲ ಉಪವಾಸವಿರುವುದು. ಇದು ಕೂಡ ಪೂರ್ಣ ಪ್ರಮಾಣದಲ್ಲಿ ಹೊಟ್ಟೆ ಖಾಲಿ ಬಿಡುವುದಲ್ಲ. ನಿತ್ಯ ಸ್ವಲ್ಪ ಬೇಯಿಸಿದ ತರಕಾರಿ, ತರಕಾರಿ ಸೂಪ್‌ ಮಾತ್ರ ಸೇವಿಸುವುದು. ಪ್ರಕೃತಿ ಚಿಕಿತ್ಸೆಯಲ್ಲಿ ಕೇವಲ ಜೇನುತುಪ್ಪ ಬೆರೆಸಿದ 8–10 ಲೀಟರ್‌ ನೀರು ಸೇವಿಸಿ 3–5 ದಿನಗಳ ಕಾಲ ಉಪವಾಸ ಮಾಡುವವರಿದ್ದಾರೆ.

ಉಪವಾಸ ಮಾಡುವಾಗ ಎಚ್ಚರ

* ಶರೀರಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು

* ಉಪವಾಸ ಮುರಿದ ನಂತರ ಪೌಷ್ಟಿಕಾಂಶವಿರುವ ಸಮತೋಲಿತ ಆಹಾರವನ್ನು ಕೊಂಚ ಕೊಂಚವೇ ಸೇವಿಸಬೇಕು

* ದೈಹಿಕ ಚಟುವಟಿಕೆ ಕಡಿಮೆ ಮಾಡಿ, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ

* ಒತ್ತಡವಿದ್ದಾಗ ಉಪವಾಸ ಮಾಡದಿರುವುದು ಸೂಕ್ತ

* 18 ವರ್ಷಗಳಿಗಿಂತ ಚಿಕ್ಕವರು, ವಯಸ್ಸಾ ದವರು, ಮಧುಮೇಹ, ಅಧಿಕ ರಕ್ತದೊತ್ತಡವಿದ್ದವರು ವೈದ್ಯರ ಸಲಹೆ ಮೇರೆಗೆ ಉಪವಾಸ ಮಾಡುವುದು ಒಳಿತು

ಉಪವಾಸದ ಪರಿಣಾಮಗಳು

* ಒತ್ತಡ ಕಡಿಮೆಯಾಗಿ ಮನಸ್ಸಿನಲ್ಲಿ ಶಾಂತಿ, ಸಮಾಧಾನ ತುಂಬುತ್ತದೆ.

* ಹಸಿವು ಕಡಿಮೆಯಾಗಿ, ತೃಪ್ತಿಕರ ಭಾವ ಹುಟ್ಟಿಸುವ ಲೆಪ್ಟಿನ್‌ ಎಂಬ ಹಾರ್ಮೋನ್‌ ಜಾಸ್ತಿಯಾಗುತ್ತದೆ.

* ಜೀರ್ಣಕ್ರಿಯೆ ನಿಂತಾಗ ಚಯಾಪಚಯ ಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಇದು ಕ್ಯಾಲರಿ ಹಾಗೂ ಕೊಬ್ಬನ್ನು ಕರಗಿಸುತ್ತದೆ.

* ಹೃದಯದ ಕಾರ್ಯಕ್ಷಮತೆ ಸುಧಾರಿಸುತ್ತದೆ.

* ಉರಿಯೂತ ಕಡಿಮೆಯಾಗಿ, ಹಾರ್ಮೋನ್‌, ಇನ್‌ಸುಲಿನ್‌ ಮಟ್ಟ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

* ಮೆದುಳಿನಲ್ಲಿ ಹಳೆಯ ಜೀವಕೋಶಗಳು ನಶಿಸಿ, ಹೊಸ ಕೋಶಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ವಯಸ್ಸಾಗುವ ಪ್ರಕ್ರಿಯೆ ನಿಧಾನವಾಗುತ್ತದೆ ಎನ್ನುತ್ತಾರೆ ತಜ್ಞರು.

* ರ‍್ಯುಮಟೈಡ್‌ ಸಂಧಿವಾತದಂತಹ ಆರೋಗ್ಯ ಸಮಸ್ಯೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT