ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕತೆಯ ಜನಜನಿತ ತಪ್ಪು ತಿಳಿವಳಿಕೆಗಳು

Last Updated 14 ಮೇ 2021, 19:30 IST
ಅಕ್ಷರ ಗಾತ್ರ

*30 ವರ್ಷದ ಪುರುಷ. ಮದುವೆಯಾಗಿ ಒಂದು ವರ್ಷವಾಯಿತು. ನನ್ನ ಶಿಶ್ನ ಚಿಕ್ಕದಾಗಿರುವುದರಿಂದ ಮತ್ತು ಬೇಗನೆ ಗಡಸುತನವನ್ನು ಕಳೆದುಕೊಳ್ಳುವುದರಿಂದ ಲೈಂಗಿಕ ಸುಖ ಸಿಗುತ್ತಿಲ್ಲ. ಪತ್ನಿಯ ಅಂಗಾಂಗಗಳು ದೊಡ್ಡದಾಗಿವೆ ಅನ್ನಿಸುವುದರಿಂದ ಸುಖದ ಅನುಭವವಾಗುತ್ತಿಲ್ಲ. ಇದರಿಂದ ಬೇಸರವಾಗಿದೆ. ಸಹಾಯಮಾಡಿ.

ಕುಮಾರ್‌, ಹಾವೇರಿ

ಲೈಂಗಿಕ ವಿಷಯಗಳಲ್ಲಿ ನಿಮಗೆ ಬಹಳ ಹಿಂಜರಿಕೆ ಮತ್ತು ತಪ್ಪು ತಿಳಿವಳಿಕೆಗಳಿರುವಂತಿದೆ. ಅಂಗಾಂಗಗಳ ಅಳತೆಗೂ ಲೈಂಗಿಕ ಸುಖಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ದೊಡ್ಡ ಗಾತ್ರದ ಶಿಶ್ನ ಲೈಂಗಿಕ ಸುಖವನ್ನು ಹೆಚ್ಚಿಸುತ್ತದೆ ಎನ್ನುವುದು ಸಾಮಾನ್ಯ ತಪ್ಪು ತಿಳಿವಳಿಕೆ. ಹಾಗಾಗಿ ಶಿಶ್ನದ ಗಾತ್ರವನ್ನು ಹೆಚ್ಚಿಸಲು ಸಾಕಷ್ಟು ನಕಲಿ ಔಷಧಿಗಳು ಮಾರಾಟವಾಗುತ್ತವೆ. ಸ್ತ್ರೀಪುರುಷರ ಲೈಂಗಿಕ ಅಂಗಾಂಗಗಳ ತುದಿಯಲ್ಲಿ ಮಾತ್ರ ಸಂವೇದನಾಶೀಲತೆ ಹೆಚ್ಚಾಗಿರುತ್ತದೆ. ಹಾಗಾಗಿ ಲೈಂಗಿಕ ಸುಖಕ್ಕೂ ಅಂಗಾಂಗಗಳ ಅಳತೆಗೂ ಸಂಬಂಧವಿರುವುದಿಲ್ಲ. ಲೈಂಗಿಕ ಸುಖ ಮತ್ತು ತೃಪ್ತಿ ಪತಿಪತ್ನಿಯರ ಮನಸ್ಸಿನಲ್ಲಿ ಮತ್ತು ಅವರಿಬ್ಬರ ಸಂಬಂಧದಲ್ಲಿ ಏನೇನು ನಡೆಯುತ್ತಿರುತ್ತದೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಎಲ್ಲಾ ವಿಚಾರಗಳನ್ನು ಇಬ್ಬರೂ ಮುಕ್ತವಾಗಿ ಚರ್ಚೆ ಮಾಡಿ ಪರಸ್ಪರರ ಅಗತ್ಯವನ್ನು ಪೂರೈಸುವುದು ಹೇಗೆ ಎಂದು ತಿಳಿದುಕೊಳ್ಳಿ. ನಿಮ್ಮ ಅಂಗ ಬೇಗನೆ ಗಡಸುತನವನ್ನು ಕಳೆದುಕೊಳ್ಳುವುದಕ್ಕೂ ನಿಮ್ಮ ಆತಂಕ ಹಿಂಜರಿಕೆಗಳೇ ಕಾರಣ. ಅಗತ್ಯವಿದ್ದರೆ ಲೈಂಗಿಕಮನೋಚಿಕಿತ್ಸಕರನ್ನು ಸಂಪರ್ಕಿಸಿ. ಅನಗತ್ಯವಾದ ಮಾತ್ರೆ ಔಷಧಗಳನ್ನು ಸೇವಿಸಬೇಡಿ.

*ವೀರ್ಯ ಸ್ತಂಭನ (ಸೆಮನ್‌ ರಿಟೆನ್ಷನ್) ಎಂದರೇನು? ಮನಶ್ಶಾಂತಿಗೆ, ಜ್ಞಾನಾರ್ಜನೆಗೆ ಇದು ಹೇಗೆ ಸಹಾಯಮಾಡುತ್ತದೆ? ಇದನ್ನು ಹೇಗೆ ಮಾಡುವುದು?

ಹೆಸರು, ಊರು ತಿಳಿಸಿಲ್ಲ.

ಪುರುಷರ ವೀರ್ಯಾಣು ಇನ್ನೊಂದು ಹೊಸ ಜೀವವನ್ನು ಸೃಷ್ಟಿಸುವಷ್ಟು ಶಕ್ತಿಯುತವಾಗಿರುತ್ತದೆ ಎನ್ನುವ ನಂಬಿಕೆಯಿಂದ ಸಾಕಷ್ಟು ಸಂಸ್ಕೃತಿಗಳಲ್ಲಿ ವೀರ್ಯ ಸ್ತಂಭನ ಬಹಳ ಉಪಯುಕ್ತ ಎನ್ನುವ ಚಿಂತನೆ ಬಂದಿರಬಹುದು. ಆದರೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಆಧಾರಗಳಿಲ್ಲ. ಹೊಸ ಸೃಷ್ಟಿಗೆ ವೀರ್ಯಾಣುವಿನಷ್ಟೇ ಅಗತ್ಯವಾದ ಸ್ತ್ರೀಯರ ಅಂಡಾಣು 28 ದಿನಗಳ ನಂತರ ನಿರ್ಜೀವವಾಗಿ ಹೊರಹೋಗಿ ಹೊಸದೊಂದು ಸೃಷ್ಟಿಯಾಗುತ್ತದೆ. ಹಾಗೆಯೇ ವೀರ್ಯಾಣುಗಳು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಜೀವಂತವಿದ್ದು ನಂತರ ದೇಹ ಅದನ್ನು ಹೀರಿಕೊಂಡು ಹೊಸದನ್ನು ಸೃಷ್ಟಿಸುತ್ತಲೇ ಇರುತ್ತದೆ. ವೀರ್ಯಾಣುಗಳೂ ಕೂಡ ದೇಹದಲ್ಲಿ ಸೃಷ್ಟಿಯಾಗುವ ಇತರ ಜೀವಕೋಶಗಳಂತೆಯೇ ಇದ್ದು ಕೇವಲ 23 ಕ್ರೋಮೊಸೋಮ್‌ಗಳನ್ನು (ಇತರ ಜೀವಕೋಶಗಳಲ್ಲಿರುವುದು 46) ಹೊಂದಿರುತ್ತವೆ. ದೇಹದ ಎಲ್ಲಾ ಜೀವಕೋಶಗಳ ನಾಶ ಮರುಸೃಷ್ಟಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ವೀರ್ಯ ಸ್ತಂಭನ ಮನಶ್ಶಾಂತಿ, ಜ್ಞಾನಾರ್ಜನೆಗೆ ಸಹಾಯವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಲೈಂಗಿಕ ಸುಖವನ್ನು ಅನುಭವಿಸುತ್ತಲೇ ನಿಮಗೆ ಬೇಕಾದ ಎಲ್ಲಾ ಸಾಧನೆಗಳನ್ನು ಮಾಡಲು ಸಾಧ್ಯವಿದೆ.

*24ರ ಯುವಕ. ದೇವರಲ್ಲಿ ಅಪಾರ ನಂಬಿಕೆಯಿದ್ದು, ದಿನನಿತ್ಯ ಜಪತಪ ಪೂಜೆಗಳನ್ನು ಮಾಡುತ್ತೇನೆ. ಕೆಲವೊಮ್ಮೆ ಹಸ್ತಮೈಥುನ ಮಾಡುತ್ತೇನೆ. ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದಾಗಿ ಪೂಜೆ, ಧ್ಯಾನ ಮಾಡಲು ಕಷ್ಟವಾಗುತ್ತಿದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಹಸ್ತಮೈಥುನ ಪಾಪದ ಕೆಲಸ ಎನ್ನುವ ನಂಬಿಕೆಯಲ್ಲಿ ನಿಮ್ಮ ಮಾನಸಿಕ ಕಷ್ಟಗಳ ಮೂಲವಿದೆಯಲ್ಲವೇ? ಆರೋಗ್ಯಕರ ಲೈಂಗಿಕತೆಯನ್ನು ಎಲ್ಲೂ ಕೀಳುಗಳೆಯಲಾಗಿಲ್ಲ. ಭಾರತೀಯ ದೇವರುಗಳಲ್ಲಿ ಹೆಚ್ಚಿನವರು ವಿವಾಹಿತರು ಮತ್ತು ಪತ್ನಿ ಸಮೇತರಾಗಿಯೇ ಕಾಣಿಸಿಕೊಳ್ಳುತ್ತಾರೆ. ಭಾರತದ ದೇವಸ್ಥಾನಗಳ ಹೊರಾಂಗಣದಲ್ಲಿ ಇರುವ ಲೈಂಗಿಕ ಶಿಲ್ಪಗಳಲ್ಲಿ ಹಸ್ತಮೈಥುನವನ್ನು ಕೂಡ ತೋರಿಸಲಾಗಿದೆ ಎಂದು ನಿಮಗೆ ಗೊತ್ತೇ? ದೇವರಿಂದ ದೂರಹೋಗುವ ಕ್ರಿಯೆ ಇದಾಗಿದ್ದರೆ ದೇವಸ್ಥಾನಗಳಲ್ಲಿ ಇವುಗಳಿಗೆ ಸ್ಥಾನವಿರಲು ಸಾಧ್ಯವಿತ್ತೇ? ದೀರ್ಘಕಾಲದ ಸಹಜೀವನಕ್ಕೆ ಸಂಗಾತಿಯನ್ನು ಹುಡುಕಿಕೊಳ್ಳುವವರೆಗೆ ಹಸ್ತಮೈಥುನ ಲೈಂಗಿಕ ಒತ್ತಡವನ್ನು ತಣಿಸಿಕೊಳ್ಳಲು ಆರೋಗ್ಯಕರ ಮಾರ್ಗ ಎಂದು ವಿಜ್ಞಾನ ಹೇಳುತ್ತದೆ. ನಿಮ್ಮ ಲೈಂಗಿಕತೆಯನ್ನು ಆನಂದಿಸುತ್ತಲೇ ಜಪತಗಳನ್ನು ಮುಂದುವರೆಸಿ. ಲೈಂಗಿಕತೆ ಮತ್ತು ದೈವಭಕ್ತಿ ಪರಸ್ಪರ ಪೂರಕ ಶಕ್ತಿಗಳೇ ಹೊರತು ವಿರುದ್ಧ ದಿಕ್ಕಿಗೆ ನೂಕುವ ಶಕ್ತಿಗಳಾಗಿರುವುದಿಲ್ಲ.

* 23ರ ಯುವತಿ. ಮದುವೆ ನಿಶ್ಚಯವಾಗಿರುವ ಹುಡುಗನಿಗೆ ಜವಾಬ್ದಾರಿ, ಕಾಳಜಿಯಿಲ್ಲ. ಅವರ ದೃಷ್ಟಿಕೋನ ನನಗೆ ಇಷ್ಟವಾಗಲ್ಲ. ನಿಶ್ಚಿತಾರ್ಥವಾಗಿರುವುದರಿಂದ ಮುರಿಯಲೂ ಆಗುತ್ತಿಲ್ಲ. ಹುಡುಗಿಯ ಜೀವನದಲ್ಲಿ ಮದುವೆ ಬಹಳ ಮುಖ್ಯ. ಹುಡುಗರಿಗೆ ಹಾಗಲ್ಲ. ಬೇಸರದಿಂದ ಜೀವನವೇ ಬೇಡವೆನ್ನಿಸುತ್ತದೆ. ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಏನು ಮಾಡಲಿ?

ಹೆಸರಿಲ್ಲ, ತುಮಕೂರು.

ನಿಮ್ಮ ಪತ್ರದಲ್ಲಿ ಅಸಹಾಯಕತೆಯ ಧ್ವನಿಯಿದೆ. ಇಂತಹ ಅಸಹಾಯಕತೆ ಎಲ್ಲಿಂದ ಬರುತ್ತಿದೆ ಎಂದು ಯೋಚಿಸಿದ್ದೀರಾ? ನಿಮ್ಮ ಜೀವನದ ನಿರ್ಧಾರಗಳನ್ನು ನೀವು ತೆಗೆದುಕೋಳ್ಳುತ್ತಲೇ ಇಲ್ಲ. ಹೀಗೆ ನಿಷ್ಕ್ರಿಯವಾಗಿದ್ದು ನಿಮಗೆ ನೀವೇ ಸಹಾಯ ಮಾಡಿಕೊಳ್ಳದಿದ್ದರೆ ಬೇರೆಯವರು ನಿಮ್ಮ ಜೀವನದ ನಿರ್ಧಾರಗಳನ್ನು ಅವರಿಗೆ ಸರಿಯೆನಿಸುವಂತೆ ಮಾಡುತ್ತಾ ಹೋಗುತ್ತಾರೆ. ಇದನ್ನು ತಪ್ಪಿಸಲು ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಗಟ್ಟಿತನವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ವಿದ್ಯಾಭ್ಯಾಸ, ಆರ್ಥಿಕ ಸ್ವಾತಂತ್ರಗಳಿದ್ದರೆ ನೀವು ಬೇರೆಯವರ ಮೇಲೆ ಅವಲಂಬಿಸುವ ಅಗತ್ಯವೇನಿರುತ್ತದೆ? ಇನ್ನೂ 23 ವರ್ಷದವರಾಗಿರುವ ನೀವು ತಾತ್ಕಾಲಿಕ ಕಷ್ಟಗಳನ್ನು ಸಹಿಸಿಕೊಂಡು ಬೆಳೆಯುವುದು, ಸ್ವತಂತ್ರರಾಗುವುದು ಹೇಗೆ ಎಂದು ಯೋಚಿಸಿ. ಒಂದು ಕಡೆ ನಿಶ್ಚಿತಾರ್ಥವನ್ನು ಮುರಿದು ತಾತ್ಕಾಲಿಕ ಕಷ್ಟಗಳನ್ನು ಎದುರಿಸುವುದು ಹಾಗೂ ಮತ್ತೊಂದು ಕಡೆ ವಿಚ್ಚೇದನ ಪಡೆಯುವುದು ಅಥವಾ ಜೀವನವೆಲ್ಲಾ ಕೊರಗುತ್ತಾ ಬದುಕುವುದು ಅಥವಾ ಜೀವವನ್ನೇ ಕಳೆದುಕೊಳ್ಳುವುದು – ಇವೆರೆಡರಲ್ಲಿ ಯಾವುದನ್ನು ಆಯ್ದುಕೊಳ್ಳುತ್ತೀರಿ?

* ಯವಕ. ಅರೆಕಾಲಿಕ ಶಿಕ್ಷಕ, ವ್ಯವಸಾಯವನ್ನೂ ಮಾಡುತ್ತಿದ್ದೇನೆ. ತುಂಬಾ ತೆಳ್ಳಗಿದ್ದೇನೆ. ಮದುವೆಯಾಗಿಲ್ಲ. ಗಡ್ಡ ಮತ್ತು ಕಿವಿಯ ಹತ್ತಿರ ಕೂದಲು ಬೆಳ್ಳಗಾಗಿರುವುದರಿಂದ ಯಾರೂ ಒಪ್ಪುತ್ತಿಲ್ಲ. ಇದರಿಂದ ಸಾಮಾಜಿಕವಾಗಿ ಯಾರೊಟ್ಟಿಗೂ ಬೆರೆಯಲು ಆಗದೆ ಜೀವನವೇ ಬೇಡವೆನ್ನಿಸುತ್ತದೆ. ಶಾಶ್ವತ ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಬೇರೆಯವರು ಏನೆಂದುಕೊಳ್ಳುತ್ತಾರೋ ಗೊತ್ತಿಲ್ಲ, ಆದರೆ ನೀವಂತೂ ನಿಮ್ಮ ಸಂಪೂರ್ಣ ವ್ಯಕ್ತಿತ್ವ, ದೇಹದ ತೂಕ ಮತ್ತು ಬಿಳಿಕೂದಲಿನಲ್ಲಿ ಮಾತ್ರ ಅಡಗಿದೆ ಎಂದು ತಿಳಿದುಕೊಂಡಿದ್ದೀರಲ್ಲವೇ? ಹೀಗೆ ನಿಮ್ಮನ್ನೇ ನೀವು ಅವಮಾನ ಮಾಡಿಕೊಂಡರೆ ಬೇರೆಯವರಿಂದ ಏನನ್ನು ನಿರೀಕ್ಷಿಸಬಹುದು? ಆಹಾರ, ವ್ಯಾಯಾಮಗಳ ಮೂಲಕ ದೇಹವನ್ನು ಗಟ್ಟಿಯಾಗಿಸಿಕೊಳ್ಳಬಹುದು ಅಥವಾ ಕೂದಲಿಗೆ ಬಣ್ಣ ಹಚ್ಚಬಹುದು. ಆದರೆ ನೀವು ಯೋಚಿಸಬೇಕಾಗಿರುವುದು ನಿಮ್ಮ ಆತ್ಮಗೌರವವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವುದನ್ನು. ನಿಮ್ಮೊಳಗಿರುವ ಪ್ರತಿಭೆ, ಹವ್ಯಾಸ, ಒಳ್ಳೆಯತನ, ಸ್ನೇಹಪರತೆ, ಪ್ರಾಮಾಣಿಕತೆ ಮುಂತಾದವುಗಳನ್ನು ಗುರುತಿಸಿ. ಅವುಗಳ ಮೂಲಕ ಮನುಷ್ಯ ಸಂಬಂಧಗಳನ್ನು ಕಟ್ಟಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಇವುಗಳಿಂದ ನಿಮ್ಮತ್ತ ಸೆಳೆಯಲ್ಪಡುವ ಸಂಗಾತಿ ಹುಡುಕಿ ಬರುತ್ತಾಳೆ.

* 23ರ ಯುವಕ. ಬಿಎಡ್‌ ಓದುತ್ತಿದ್ದೇನೆ. ಕೆಎಎಸ್‌ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ. ಎಷ್ಟೇ ಓದಿದರೂ ತೃಪ್ತಿಯಾಗುತ್ತಿಲ್ಲ. ಒಂದು ದಿನವೂ ಕನಿಷ್ಠ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆಯವರಿಗಿಂತ ಕಡಿಮೆ ಅನ್ನಿಸುತ್ತದೆ ಮತ್ತು ಪ್ರತಿಬಾರಿ ನಾನು ಸೋಲುತ್ತೀನಿ ಅನ್ನಿಸುತ್ತದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ನಿಮ್ಮ ಪತ್ರದಲ್ಲಿರುವ ಪದಗಳನ್ನು ಗಮನಿಸಿ. ಕನಿಷ್ಠ ಅಧ್ಯಯನ, ಎಷ್ಟೇ ಓದಿದರೂ, ಬೇರೆಯವರಿಗಿಂತ ಕಡಿಮೆ-ಮುಂತಾದವು ಏನನ್ನು ಸೂಚಿಸುತ್ತಿದೆ ಗೊತ್ತೇ? ನೀವು ನಿಮ್ಮನ್ನು ಯಾವುದೋ ಅಸ್ಪಷ್ಟ ಮಾನದಂಡಗಳಿಂದ ಅಳೆದುಕೊಳ್ಳುತ್ತಿದ್ದೀರಿ. ಅಂತಹ ಮಾನದಂಡಗಳು ಏನೆಂದು ನಿಮಗೇ ಗೊತ್ತಿಲ್ಲ. ಅಷ್ಟೇ ಅಲ್ಲ ನಿಮ್ಮ ಗುರಿಯನ್ನು ಒಂದು ಕನಸಾಗಿ ಇಟ್ಟುಕೊಂಡಿದ್ದೀರಿ. ಅದನ್ನು ನನಸಾಗಿಸಲು ಬೇಕಾದ ದಾರಿಯ ಸ್ಪಷ್ಟತೆಯಿಲ್ಲದಿದ್ದಾಗ ಇಂತಹ ಗೊಂದಲಗಳಾಗುತ್ತವೆ. ಮೊದಲು ಕೆಲವು ವಿಷಯಗಳನ್ನು ನಿಮ್ಮೊಳಗೇ ಸ್ಪಷ್ಟಪಡಿಸಿಕೊಳ್ಳಿ. ನಾನು ಓದುತ್ತಿರುವ ವಿಷಯಗಳೆಲ್ಲವೂ ನನಗೆ ಆಸಕ್ತಿದಾಯಕವೇ? ಓದುವುದಕ್ಕೆ ಕೇವಲ ಪರೀಕ್ಷೆಯನ್ನು ಗುರಿಯಾಗಿ ಇಟ್ಟುಕೊಳ್ಳದೆ ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುವುದು ಹೇಗೆ? ಆಸಕ್ತಿಯಿರದ ಒಂದೆರೆಡು ವಿಷಯಗಳಿದ್ದರೆ ಅವುಗಳನ್ನು ಅಭ್ಯಾಸ ಮಾಡುವುದು ಹೇಗೆ? ನಾನು ಓದುವುದನ್ನು ಅರಗಿಸಿಕೊಳ್ಳಲು ವಿಷಯಗಳ ಆಳಕ್ಕೆ ಹೋಗುವುದು ಹೇಗೆ? ಸೋಲುಗಳನ್ನು ಹೀರಿಕೊಂಡು ನನ್ನ ಮಾನಸಿಕ ಸಮತೋಲನ ಉಳಿಸಿಕೊಳ್ಳುವುದು ಹೇಗೆ? ಇಂತಹ ಹಲವಾರು ಪ್ರಶ್ನೆಗಳಿಗೆ ನಿಮಗೆ ಸೂಕ್ತವಾಗುವ ಉತ್ತರ ಹುಡುಕಿಕೊಂಡರೆ ಗುರಿಯ ಕಡೆ ಹೋಗಬೇಕಾದ ದಾರಿಯ ಕುರಿತು ಸ್ಪಷ್ಟತೆ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT