ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಕೋವಿಡ್‌ ಪರೀಕ್ಷೆಗೆ ಕಿಟ್‌

Last Updated 4 ಡಿಸೆಂಬರ್ 2020, 20:13 IST
ಅಕ್ಷರ ಗಾತ್ರ

ರಕ್ತದ ಪರೀಕ್ಷೆಗಳಿಂದ ಕರಾರುವಕ್ಕಾಗಿ ಕೋವಿಡ್‌–19 ಪತ್ತೆಹಚ್ಚಲು ಸಾಧ್ಯವಿಲ್ಲ; ಗಂಟಲಿನ ದ್ರವದ ವಿಶ್ಲೇಷಣೆ ಮಾಡುವ ಆರ್‌ಟಿ– ಪಿಸಿಆರ್‌ ಮಾತ್ರ ಸದ್ಯ ಇರುವಂತಹ ಅತ್ಯುತ್ತಮ ಪರೀಕ್ಷೆ ವಿಧಾನ ಎಂದು ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ದೃಢಪಡಿಸಿದೆ. ಆ್ಯಮಸ್ಟರ್‌ಡ್ಯಾಮ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ಕಾಯಿಲೆ ವಿಭಾಗದ ಪ್ರಾಧ್ಯಾಪಕ ಮಾರಿಸ್ಕಾ ಲೀಫ್‌ಲ್ಯಾಂಗ್‌ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಕೋವಿಡ್‌–19 ಪತ್ತೆಗೆ ಪ್ರಯೋಗಾಲಯದಲ್ಲಿ ನಡೆಸುವ 67 ಬಗೆಯ ಪರೀಕ್ಷೆಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಯಿತು. ಇದರ ವರದಿ ‘ಕೋಕ್ರಾನ್‌ ಡೇಟಾಬೇಸ್‌ ಆಫ್‌ ಸಿಸ್ಟಮೆಟಿಕ್‌ ರಿವ್ಯೂ’ನಲ್ಲಿ ಪ್ರಕಟವಾಗಿದೆ.

ಸದ್ಯಕ್ಕೆ ಆರ್‌ಟಿ– ಪಿಸಿಆರ್‌ ಅತ್ಯುತ್ತಮವಾದ ಪರೀಕ್ಷೆಯೆಂದು ಪರಿಗಣಿಸಲಾಗಿದೆ. ಇದರಲ್ಲಿ ಗಂಟಲಿನ ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಈ ಪರೀಕ್ಷೆಗೆ ಹೆಚ್ಚು ಸಮಯ ಬೇಕು. ಹೀಗಾಗಿ ಹಲವು ಪ್ರಯೋಗಾಲಯಗಳು ರಕ್ತದಲ್ಲಿ ಸೋಂಕಿನ ಅಂಶವನ್ನು ಪತ್ತೆ ಹಚ್ಚುವ ಪರೀಕ್ಷೆಗಳನ್ನು ನಡೆಸುತ್ತಿವೆ. ಅಂದರೆ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿ ಬದಲಾವಣೆ, ಕೆಲವು ಪ್ರೊಟೀನ್‌ ಮಟ್ಟದಲ್ಲಿ ಏರಿಕೆ ಪತ್ತೆ ಹಚ್ಚುವ ಪರೀಕ್ಷೆಗಳಿವು. ಆದರೆ ಇತರ ಕೆಲವು ಸೋಂಕುಗಳನ್ನು ಪತ್ತೆ ಮಾಡಲೂ ಇದನ್ನು ಪರಿಗಣಿಸುವುದರಿಂದ ಕೋವಿಡ್‌ ದೃಢಪಡಿಸುವುದು ಕಷ್ಟ ಎಂದು ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನಕ್ಕೆ ಭಾರತ ಸೇರಿದಂತೆ ಚೀನಾ, ಇಟಲಿ, ಅಮೆರಿಕ, ತೈವಾನ್‌ ಮೊದಲಾದ ದೇಶಗಳ ಕೊರೊನಾ ಸೋಂಕಿತರ ಗಂಟಲು ದ್ರವ ಮತ್ತು ರಕ್ತವನ್ನು ಬಳಸಿಕೊಳ್ಳಲಾಗಿತ್ತು. ಆರ್‌ಟಿ– ಪಿಸಿಆರ್‌ ಪರೀಕ್ಷೆಯಲ್ಲಿ ಅತ್ಯಂತ ಕರಾರುವಕ್ಕಾದ ಫಲಿತಾಂಶ ಲಭಿಸಿದೆ ಎಂದು ವರದಿ ಹೇಳಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್‌– 19 ಪತ್ತೆಗಾಗಿ ರಕ್ತದ ಪರೀಕ್ಷೆಗೆ ಮೊರೆ ಹೋಗಬಾರದು; ಪ್ರಯೋಗಾಲಯಗಳೂ ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅಧ್ಯಯನ ತಂಡ ಹೇಳಿದೆ.

ಹೊಸ ಕಿಟ್‌: ಈ ಮಧ್ಯೆ ಅಮೆರಿಕದಲ್ಲಿ ಕೋವಿಡ್‌–19 ತುರ್ತು ಪರೀಕ್ಷೆಗಾಗಿ ಮನೆಯಲ್ಲೇ ತಪಾಸಣೆ ಮಾಡಿಕೊಳ್ಳುವ ಹೋಂ ಕಿಟ್‌ ಮಾರುಕಟ್ಟೆಗೆ ಬಂದಿದೆ. ‘ಲ್ಯುಸಿರಾ ಕೋವಿಡ್‌–19 ಆಲ್‌ ಇನ್‌ ಒನ್‌ ಟೆಸ್ಟ್‌ ಕಿಟ್‌’ ಸಾರ್ಸ್‌ ಕೋವ್‌–2 ವೈರಸ್‌ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅಲ್ಲಿಯ ಎಫ್‌ಡಿಎ (ಫುಡ್‌ ಅಂಡ್‌ ಡ್ರಗ್‌ ಅಡ್‌ಮಿನಿಸ್ಟ್ರೇಶನ್‌) ಹೇಳಿದೆ.

ಮೂಗಿನ ದ್ರವ ತೆಗೆದು ಪರೀಕ್ಷಾ ಯೂನಿಟ್‌ ಮೇಲಿರುವ ಬಾಟಲ್‌ನಲ್ಲಿ ಹಾಕಿದರೆ ಅರ್ಧ ತಾಸಿನ ನಂತರ ಪಾಸಿಟಿವ್‌ ಅಥವಾ ನೆಗೆಟಿವ್‌ ಎಂದು ಯೂನಿಟ್‌ ಮೇಲಿರುವ ಫಲಕದಲ್ಲಿ ಕಾಣುತ್ತದೆ. ಆದರೆ ವೈರಸ್‌ ಲೋಡ್‌ ಕಡಿಮೆ ಇದ್ದರೆ ನೆಗೆಟಿವ್‌ ತೋರಿಸುತ್ತದೆ; ಆದರೂ ಲಕ್ಷಣಗಳು ಇದ್ದರೆ ಆರ್‌ಟಿ– ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಇದನ್ನು ತಯಾರಿಸಿದ ಲ್ಯುಸಿರಾ ಕಂಪನಿ ಹೇಳಿದೆ.

ಈ ಕಿಟ್‌ ಬಳಕೆಯಿಂದ ಪ್ರಯೋಗಾಲಯಗಳಲ್ಲಿ ಜನಸಂದಣಿ ಕಡಿಮೆ ಮಾಡಬಹುದು ಎಂದು ಹೇಳಿರುವ ಕಂಪನಿ ಮುಂದಿನ ಫೆಬ್ರುವರಿಯಲ್ಲಿ ಬೇರೆ ದೇಶಗಳಿಗೂ ವಿತರಿಸುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT