ಗುರುವಾರ , ಆಗಸ್ಟ್ 11, 2022
24 °C
ಕೊರೊನಾ ಬಗ್ಗೆ ಒಂದಷ್ಟು ತಿಳಿಯೋಣ

ಕೋವಿಡ್‌: ಮುಖದ ಮೇಲೆ ಕಾಣಿಸುತ್ತಿದೆ ಕಪ್ಪು ಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಬಳಸುವ ಎನ್‌ಐವಿ ಮಾಸ್ಕ್‌ಗಳಿಂದ ಮುಖದ ಮೇಲೆ ಗಾಯದ ಕಲೆಗಳು ಕಾಣಿಸಿಕೊಳ್ಳುತ್ತಿವೆ. ಒಂದು ವೇಳೆ ಈ ಕಲೆಯನ್ನು ಕಡೆಗಣಿಸಿದಲ್ಲಿ ಶಾಶ್ವತವಾಗಿ ಉಳಿಯುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಗಂಭೀರವಾಗಿ ಅಸ್ವಸ್ಥರಾದ ಕೋವಿಡ್‌ ಪೀಡಿತರಿಗೆ ಆಸ್ಪತ್ರೆಗಳಲ್ಲಿ ಎನ್‌ಐವಿ ಮುಖಗವಸು ಹಾಕಿ, ಚಿಕಿತ್ಸೆ ನೀಡಲಾಗುತ್ತದೆ. ನಿರಂತರ 5 ದಿನಗಳಿಗಿಂತ ಹೆಚ್ಚಿನ ಅವಧಿ ಆಸ್ಪತ್ರೆಗಳಲ್ಲಿ ಈ ಮಾದರಿಯ ಮುಖಗವಸು ಹಾಕಿಕೊಳ್ಳುವವರಿಗೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಮುಖಗವಸು ಸಡಿಲ ಮಾಡಿದಲ್ಲಿ ಆಮ್ಲಜನಕವು ಹೊರಗಡೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎನ್‌ಐವಿ ಮಾಸ್ಕ್‌ಗಳನ್ನು ವ್ಯಕ್ತಿಯ ಮುಖಕ್ಕೆ ಬಿಗಿಯಾಗಿ ಹಾಕಲಾಗುತ್ತದೆ. ರಕ್ತದ ಹೆಪ್ಪುಗಟ್ಟುವಿಕೆಯಿಂದ ಚರ್ಮವು ಮುಖಗವಸು ಧರಿಸಿದ ಭಾಗದಲ್ಲಿ ಕಪ್ಪಾಗುತ್ತದೆ. ಕೆಲವರಿಗೆ ಗಾಯಗಳಾಗುತ್ತವೆ. ಈ ಗಾಯ ಹಾಗೂ ಕಲೆಯನ್ನು ಕಡೆಗಣಿಸಬಾರದು ಎಂದು ತಜ್ಞರು ತಿಳಿಸಿದ್ದಾರೆ.

‘ತೀವ್ರ ನಿಗಾ ಘಟಕ ಹಾಗು ವೆಂಟಿಲೇಟರ್ ಸಂಪರ್ಕದಲ್ಲಿರುವವರಿಗೆ ಮುಖಗವಸಿನ ಮೂಲಕ ಉಸಿರಾಟದ ಬೆಂಬಲ ನೀಡಲಾಗುತ್ತದೆ. ಇದರಿಂದಾಗಿ ಹಣೆ ಹಾಗೂ ಕೆನ್ನೆಯ ಭಾಗದಲ್ಲಿ ಕಲೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಕೋವಿಡ್‌ನಿಂದ ಚೇತರಿಸಿಕೊಂಡಿದ್ದರೂ ಮುಖದ ಮೇಲಿನ ಕಲೆಗಳು ಹಾಗೂ ಗಾಯಗಳಿಂದ ಕೆಲವರು ಕೀಳರಿಮೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ರಕ್ತ ಹೆಪ್ಪುಟ್ಟುವ ಪರಿಣಾಮ ಕೆಲವರಲ್ಲಿ ಕಲೆಗಳು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇರುತ್ತದೆ. ಅಂತಹ ಕಲೆಗಳನ್ನು ಚಿಕಿತ್ಸೆಯ ಮೂಲಕ ಹೋಗಲಾಡಿಸಲು ಸಾಧ್ಯ. ಪ್ಲಾಸ್ಟಿಕ್ ಸರ್ಜರಿ, ಲೇಸರ್ ಚಿಕಿತ್ಸೆ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ’ ಎಂದು ಜಿವಿಜಿ ಇನ್ವಿವೊ ಆಸ್ಪತ್ರೆಯ ಮುಖ್ಯ ಪ್ಲಾಸ್ಟಿಕ್ ಸರ್ಜನ್ ಡಾ. ಗುಣಶೇಖರ್ ವುಪ್ಪಲಪತಿ ತಿಳಿಸಿದರು.

‘ದೇಹಕ್ಕೆ ಅಗತ್ಯವಾದ ಆಮ್ಲಜನಕ ಪೂರೈಸಲು ಎನ್‌ಐವಿ ಮಾಸ್ಕ್ ಸಹಾಯಕ. ಚಿಕಿತ್ಸೆಯ ಸಂದರ್ಭದಲ್ಲಿ ಇಂತಹ ಎನ್‌ಐವಿ ಮುಖಗವಸು ಸಡಿಲವಾಗಿದ್ದಲ್ಲಿ ಆಮ್ಲಜಕನವು ಸೋರಿಕೆಯಾಗಲಿದೆ. ಈ ಕಾರಣಕ್ಕೆ ಮುಖಗವಸನ್ನು ಬಿಗಿಯಾಗಿ ಹಾಕಲಾಗುತ್ತದೆ. ಇದರಿಂದ ಮುಖಗವಸು ಧರಿಸಿದ ಭಾಗದಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗಿ, ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇವುಗಳನ್ನು ‘ಎನ್‌ಐವಿ ಕಲೆ’ ಎಂದೇ ಕರೆಯಲಾಗುತ್ತಿದೆ. ಇದು ಮುಖದ ಅಂಧವನ್ನು ಕೆಡಿಸುತ್ತದೆ. ಹಾಗಾಗಿ ಆರಂಭಿಕ ಹಂತದಲ್ಲಿಯೇ ಗಾಯ ಹಾಗೂ ಕಲೆಯ ನಿವಾರಣೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು