ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಚೇತರಿಸಿಕೊಂಡವರಿಗೂ ಲಸಿಕೆ ಅಗತ್ಯ

Last Updated 8 ಜನವರಿ 2021, 21:34 IST
ಅಕ್ಷರ ಗಾತ್ರ

ಒಮ್ಮೆ ಕೋವಿಡ್‌–19 ಬಂದವರಲ್ಲಿ ಪ್ರತಿಕಾಯಗಳು ಹುಟ್ಟಿಕೊಂಡು ಪುನಃ ಕೊರೊನಾ ಸೋಂಕು ಉಂಟಾಗುವುದಿಲ್ಲ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಇಂತಹ ಸುರಕ್ಷತೆಯ ಅವಧಿ ಗರಿಷ್ಠ ಮೂರು ತಿಂಗಳು ಮಾತ್ರ. ಹೀಗಾಗಿ ಕೋವಿಡ್‌ನಿಂದ ಚೇತರಿಸಿಕೊಂಡವರೂ ಕೂಡ ಲಸಿಕೆ ಪಡೆಯಬೇಕಾಗುತ್ತದೆ, ಇದನ್ನು 90 ದಿನಗಳವರೆಗೆ ಮುಂದೂಡಬಹುದು ಅಷ್ಟೆ ಎಂದು ಅಮೆರಿಕದ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಹೇಳಿದೆ.

ಒಮ್ಮೆ ಸೋಂಕು ಉಂಟಾಗಿ ಚೇತರಿಸಿಕೊಂಡ ನಂತರ ಎಷ್ಟು ದಿನಗಳವರೆಗೆ ಈ ಪ್ರತಿರಕ್ಷಕ ಗುಣ ದೇಹದಲ್ಲಿರುತ್ತದೆ ಎಂಬುದನ್ನು ವಿಜ್ಞಾನಿಗಳು ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಹಾರ್ವರ್ಡ್‌ನ ವೈದ್ಯಕೀಯ ವಿಜ್ಞಾನ ಮತ್ತು ರೋಗ ನಿರೋಧಕ ಶಕ್ತಿ ಅಧ್ಯಯನ ವಿಭಾಗದ ನಿರ್ದೇಶಕ ಶಿವ ಪಿಳ್ಳೈ ಪ್ರಕಾರ, ರೋಗ ನಿರೋಧಕ ಶಕ್ತಿಯ ಅವಧಿಯು ವ್ಯಕ್ತಿಗೆ ತಗಲಿದ ಸೋಂಕಿನ ತೀವ್ರತೆಯನ್ನು ಅವಲಂಬಿಸಿದೆ.

ಕಡಿಮೆ ಸೋಂಕು ತಗಲಿ ಚೇತರಿಸಿಕೊಂಡವರಲ್ಲಿ ಪ್ರತಿಕಾಯಗಳ ಮಟ್ಟ ಕೂಡ ಕಡಿಮೆ ಇರುತ್ತದೆ. ಹೀಗಾಗಿ 90 ದಿನಗಳ ಕಾಲ ಪ್ರತಿರಕ್ಷಕ ಗುಣ ಇದ್ದರೂ ಕೂಡ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ಹಾರ್ವರ್ಡ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಅವರು ಹೇಳಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಲಿಂಫ್‌ನೋಡ್‌ ಅಧ್ಯಯನವನ್ನು ನಡೆಸಿ ಅವರು ವರದಿ
ಪ್ರಕಟಿಸಿದ್ದಾರೆ.

ವ್ಯಕ್ತಿಗೆ ಸೋಂಕು ತಗಲಿದಾಗ ಅವರ ದೇಹವು ವೈರಸ್‌ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಇದರಲ್ಲಿರುವ ಟಿ ಕೋಶಗಳು ವೈರಸ್‌ ಅನ್ನು ಗುರುತಿಸಿ ಅದರ ಮೇಲೆ ದಾಳಿ ನಡೆಸುತ್ತವೆ. ಸೋಂಕು ಕಡಿಮಯಾದರೂ ಕೂಡ ಈ ಕೋಶಗಳು ವೈರಸ್‌ ಅನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ಸೋಂಕಾಗಿ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಕಾಯಿಲೆಯ ತೀವ್ರತೆ ಕೂಡ ಈ ಪ್ರತಿರಕ್ಷಕ ಗುಣದ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ವೈರಸ್‌ ಲೋಡ್‌ ಕಡಿಮೆಯಿದ್ದರೆ ಈ
ಪ್ರತಿಕ್ರಿಯೆ ಕೂಡ ದುರ್ಬಲವಾಗಿರುತ್ತದೆ. ಹೀಗಾಗಿ ಪ್ರತಿಕಾಯಗಳ ಮಟ್ಟವೂ ಕಡಿಮೆ ಇರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ದಿನ ಕಳೆದಂತೆ ಪ್ರತಿಕಾಯಗಳ ಮಟ್ಟ ಕುಸಿದು ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತ ಹೋಗುತ್ತದೆ. ಸೋಂಕು ಲಕ್ಷಣರಹಿತವಾಗಿದ್ದರೂ ಕೂಡ ಪ್ರತಿಕಾಯಗಳ ಮಟ್ಟ ಕಡಿಮೆಯಿದ್ದು, ಪುನಃ ಸೋಂಕಿನಿಂದ ರಕ್ಷಿಸಿಕೊಳ್ಳುವ ಸಾಧ್ಯತೆ ಕಡಿಮೆ.

ಮಂಗನ ಬಾವು, ದಡಾರ ಮೊದಲಾದ ಕಾಯಿಲೆಯಾದರೆ ಜೀವನಪರ್ಯಂತ ಇದರ ವಿರುದ್ಧ ಪ್ರತಿರಕ್ಷಕ ಗುಣ ದೇಹದಲ್ಲಿರುತ್ತದೆ. ಆದರೆ ಸಾರ್ಸ್‌ ಕಾಯಿಲೆಯಂತಹ ಸಾಂಕ್ರಾಮಿಕ ರೋಗ ಬಂದರೆ ಮೂರು ವರ್ಷಗಳೊಳಗೆ ಈ ಪ್ರತಿಕಾಯಗಳು ಕಣ್ಮರೆಯಾಗುತ್ತವೆ. ಕೋವಿಡ್‌–19 ದೇಹಕ್ಕೆ ವಿಪರೀತ ಹಾನಿ ಉಂಟು ಮಾಡುತ್ತದೆ ಎಂಬುದು ಸಾಬೀತಾಗಿದೆ. ಹೀಗಾಗಿ ಸೋಂಕಿನ ವಿರುದ್ಧ ಹೋರಾಡುವ ಬಿ ಕೋಶಗಳು ಹಾಗೂ ಪ್ರತಿಕಾಯಗಳನ್ನು ಸೃಷ್ಟಿಸುವ ದೇಹದ ಸಾಮರ್ಥ್ಯವನ್ನೂ ಕೋವಿಡ್‌–19 ಕುಗ್ಗಿಸಿಬಿಡುತ್ತದೆ.

ಆದರೆ ಕೋವಿಡ್‌–19 ಲಸಿಕೆಯಿಂದ ಸೋಂಕಿತರೂ ಕೂಡ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ಫೈಜರ್‌ ಮತ್ತು ಮೋಡರ್ನಾ ಲಸಿಕೆಗಳನ್ನು ತಯಾರಿಸಿದವರು ಸೋಂಕಿಗೊಳಗಾದವರಲ್ಲಿ ಈ ಲಸಿಕೆಯಿಂದ ಎಷ್ಟು ಪ್ರಯೋಜನ ಎಂಬುದರ ಬಗ್ಗೆ ಅಧ್ಯಯನ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಸಂಶೋಧನೆ ಬೆಳಕು ಚೆಲ್ಲಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT