ಮಂಗಳವಾರ, ಏಪ್ರಿಲ್ 13, 2021
23 °C

PV Web Exclusive | ಕೋವಿಡ್ ಲಸಿಕೆ: ರೋಗಿಗಳಿಗೆ ವಯಸ್ಸಿನ ಮಿತಿ ಬೇಡ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಎರಡನೇ ಅಲೆ ವ್ಯಾಪಕವಾಗುತ್ತಿದ್ದಂತೆ ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ವಿವಿಧ ಆರೋಗ್ಯ ಸ್ಥಿತಿಯಲ್ಲಿ ಇರುವ 45 ವರ್ಷ ಒಳಗಿನ ರೋಗಿಗಳ ಸ್ಥಿತಿ ಏನು ಎನ್ನುವ ಬಗ್ಗೆ ಆರೋಗ್ಯ ವಲಯದಲ್ಲಿ ಕಳವಳ ಶುರು ಆಗಿದೆ.

***

ಕೊರೊನಾ ಎರಡನೆ ಅಲೆಯ ಭೀತಿ ಎದುರಾಗಿದೆ. ಈ ಬಾರಿ ಕೋವಿಡ್‌ ವಿರುದ್ಧ ಲಸಿಕೆ ಎನ್ನುವ ಬಾಣವನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದೀವಾದರೂ ಅದರ ಸುತ್ತ ಇರುವ ಗೊಂದಲ, ತಪ್ಪು ಗ್ರಹಿಕೆಗಳು ಮುಂದಡಿ ಇಡದಂತೆ ತಡೆಯುತ್ತಿವೆ.

ಎರಡನೆ ಅಲೆ ವ್ಯಾಪಕವಾಗುತ್ತಿದ್ದಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 1ರಿಂದ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ವಿವಿಧ ಆರೋಗ್ಯ ಸ್ಥಿತಿಯಲ್ಲಿ ಇರುವ 45 ವರ್ಷ ಒಳಗಿನ ರೋಗಿಗಳ ಸ್ಥಿತಿ ಏನು ಎನ್ನುವ ಬಗ್ಗೆ ಆರೋಗ್ಯ ವಲಯದಲ್ಲಿ ಕಳವಳ ಶುರು ಆಗಿದೆ. ವಿವಿಧ ಪ್ರಕಾರಗಳ ಕ್ಯಾನ್ಸರ್‌, ದೀರ್ಘಕಾಲದ ಮೂತ್ರಪಿಂಡ, ಯಕೃತ್ತು, ಹೃದಯ ಸಮಸ್ಯೆ ಇರುವವರಲ್ಲಿ ವಯಸ್ಸಿನ ಅಂತರವನ್ನು ಪರಿಗಣಿಸುವಂತಿಲ್ಲ. ಏಕೆಂದರೆ ಇಂತಹ ಕಾಯಿಲೆಗಳು ವಯಸ್ಸು ನೋಡಿಕೊಂಡು ಬರುವುದಿಲ್ಲ. ಇಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಲಸಿಕೆಯ ಅಗತ್ಯ ಹೆಚ್ಚಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ವೈದ್ಯರ ಅಭಿಪ್ರಾಯ.

ಕಿಡ್ನಿ ವಾರಿಯರ್ಸ್‌ ಫೌಂಡೇಶನ್‌ನ ಅಂಕಿಅಂಶಗಳ ಪ್ರಕಾರ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ (ಸಿಕೆಡಿ) ಗುರಿಯಾಗುವವರಲ್ಲಿ ಶೇಕಡ 30ರಷ್ಟು ಮಂದಿ 45ಕ್ಕಿಂತ ಕಡಿಮೆ ವಯೋಮಿತಿಯಲ್ಲಿ ಇರುತ್ತಾರೆ. ಆದ್ದರಿಂದ ಈ ಗುಂಪಿನಲ್ಲಿರುವ ಜನರನ್ನು ಕಡೆಗಣಿಸಿದಲ್ಲಿ ಅಪಾಯದ ಪ್ರಮಾಣ ಹೆಚ್ಚು.

“60 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಆರೋಗ್ಯ ಸ್ಥಿತಿಯಲ್ಲಿರುವ 45 ವರ್ಷ ಮೇಲ್ಪಟ್ಟ ರೋಗಿಗಳು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿತ್ತು. ಇದೀಗ ಏಪ್ರಿಲ್‌ 1ರಿಂದ 45 ವರ್ಷ ದಾಟಿದ ಎಲ್ಲರೂ ಲಸಿಕೆಗೆ ಅರ್ಹರು ಎಂದು ಘೋಷಿಸಿದೆ. ಆದರೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ 45ಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ ಏನೂ ಕಡಿಮೆ ಇಲ್ಲ. ಹೀಗಾಗಿ ಈ ಗುಂಪಿನ ಜನರ ಬಗ್ಗೆ ನಾವೀಗ ಆಲೋಚಿಸಬೇಕಿದೆ’’ ಎನ್ನುತ್ತಾರೆ ರೀಗಲ್ ಹಾಸ್ಪಿಟಲ್‌ನ ಪ್ರಧಾನ ಮೂತ್ರಪಿಂಡ ತಜ್ಞರಾದ ಡಾ. ಸೂರಿರಾಜು.

‘‘ವಾಸ್ತವದಲ್ಲಿ ಸರ್ಕಾರದ ಹಾಗೂ ಆರೋಗ್ಯ ಕಾರ್ಯಕರ್ತರ ನಿರಂತರ ಪ್ರಯತ್ನದ ಬಳಿಕವೂ ಹೆಚ್ಚು ಜನ ಲಸಿಕಾ ಕೇಂದ್ರಗಳಿಗೆ ಹೋಗುತ್ತಿಲ್ಲ. ಇದರಿಂದಾಗಿ ಲಸಿಕೆ ನೀಡುವ ಪ್ರಕ್ರಿಯೆಗೆ ಮೀಸಲಿಟ್ಟಿರುವ ಸಂಪನ್ಮೂಲಗಳು ವ್ಯರ್ಥವಾಗುತ್ತಿವೆ. ಇದನ್ನು ತಪ್ಪಿಸಲು ಸರ್ಕಾರ ತುರ್ತಾಗಿ ವಯೋಮಿತಿಯ ನಿರ್ಬಂಧವನ್ನು ತೆಗೆದುಹಾಕಬೇಕು. ವಿವಿಧ ಆರೋಗ್ಯ ಸಮಸ್ಯೆಗಳಲ್ಲಿ ಇರುವ ಎಲ್ಲರಿಗೂ ವಯೋಬೇಧವಿಲ್ಲದೆ ಲಸಿಕೆ ಸಿಗಬೇಕು’’ ಎನ್ನುವುದು ಅವರ ಅರಿಕೆ.

ಲಸಿಕಾ ಕೇಂದ್ರಗಳ ಸಂಪನ್ಮೂಲ ವ್ಯರ್ಥವಾಗಲು ಎರಡು ಕಾರಣಗಳನ್ನು ಅವರು ಗುರುತಿಸಿದ್ದಾರೆ. ಮೊದಲನೆಯದಾಗಿ ತಪ್ಪುಗ್ರಹಿಕೆ. ತಪ್ಪು ಮಾಹಿತಿಯಿಂದಾಗಿ ವಿನಾಕಾರಣ ಆತಂಕ ಪಡುವ ಜನ ಲಸಿಕೆಗೆ ಮುಂದಾಗುತ್ತಿಲ್ಲ. ಎರಡನೆಯದು ಲಸಿಕಾ ಕೇಂದ್ರಗಳಿಗೆ ಹೋಗುವ ಎಲ್ಲರಿಗೂ ಲಸಿಕೆಗಳು ಸಿಗುತ್ತಿಲ್ಲ. ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವ ಜನರು ಲಸಿಕೆ ಪಡೆಯಲು ಸರಿಯಾದ ವೈದ್ಯಕೀಯ ಪ್ರಮಾಣಪತ್ರವನ್ನು ಪೂರೈಸದ ಕಾರಣ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎನ್ನುತ್ತಾರೆ ಅವರು.

ಈ ಗೊಂದಲಗಳಿಂದಾಗಿ ಡಯಾಲಿಸಿಸ್‌ನಂತಹ ಸೂಕ್ಷ್ಮ ಆರೋಗ್ಯ ಸ್ಥಿತಿಯಲ್ಲಿ ಬದುಕುತ್ತಿರುವವರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಅಂಥವರು ಸಮಯಕ್ಕೆ ಸರಿಯಾಗಿ ಡಯಾಲಿಸಿಸ್‌ಗೂ ಹೋಗಲಾಗದೇ, ಕೋವಿಡ್‌ ಲಸಿಕೆಗೂ ಒಡ್ಡಿಕೊಳ್ಳಲಾಗದೆ ವಿಚಿತ್ರ ತಳಮಳದಲ್ಲಿ ಜೀವನ ಸಾಗಿಸುತ್ತಿದ್ದಾರೆ.


ಡಾ. ಸೂರಿರಾಜು

ಡಯಾಲಿಸಿಸ್‌ ರೋಗಿಗಳಲ್ಲಿ ಭೀತಿ
ಡಯಾಲಿಸಿಸ್‌ ಪಡೆಯುತ್ತಿರುವವರು ಕೋವಿಡ್‌ ಲಸಿಕೆ ಹಾಕಿಸಿಕೊಂಡರೆ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ತಪ್ಪು ಗ್ರಹಿಕೆಯ ಕಾರಣ ಹೆಚ್ಚು ಜನ ಇದರಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಆಧಾರವಿಲ್ಲದ ಭಯವನ್ನು ಜನರ ಮನದಿಂದ ಓಡಿಸಲು ಸರ್ಕಾರ, ಆರೋಗ್ಯ ಕಾರ್ಯಕರ್ತರು ಪ್ರಯತ್ನಿಸಬೇಕು.

‘‘ನಿಜವಾದ ಅರ್ಥದಲ್ಲಿ ಕೊರೊನಾ ಲಸಿಕೆ ಡಯಾಲಿಸಿಸ್‌ಗೆ ಒಳಗಾಗುವವರಿಗೆ ಹೆಚ್ಚಿನ ಸುರಕ್ಷೆಯನ್ನು ನೀಡಬಲ್ಲದು. ಡಯಾಲಿಸಿಸ್‌ಗೆ ಒಳಗಾಗುತ್ತಿರುವವರಿಗೆ ಕೊರೊನಾ ಸೋಂಕು ತಗುಲಿದರೆ ಸಾಮಾನ್ಯರಿಗಿಂತ ಹೆಚ್ಚು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಅಪಾಯದಿಂದ ಪಾರಾಗಲು ಅವರಿಗೆ ಲಸಿಕೆಯೇ ರಾಮಬಾಣ. ಇಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವ ಯಾರೇ ಆಗಲಿ, ಯಾವುದೇ ವಯೋಮಾನದವರೇ ಆಗಲಿ, ಅವರಿಗೆ ಲಸಿಕೆ ಲಭಿಸುವಂತಾಗಬೇಕು. ಅದರಲ್ಲೂ ಡಯಾಲಿಸಿಸ್‌ ರೋಗಿಗಳು ವಿವಿಧ ಲಸಿಕಾ ಕೇಂದ್ರಗಳನ್ನು ಹುಡುಕಿಕೊಂಡು ಹೋಗುವ ಬದಲು ಡಯಾಲಿಸಿಸ್‌ ಕೇಂದ್ರಗಳಲ್ಲಿಯೇ ಲಸಿಕೆ ಸಿಗುವಂತಾಗಬೇಕು’’ ಎನ್ನುತ್ತಾರೆ ಡಾ. ಸೂರಿರಾಜು.

ಜ್ವರದ ಭಯ ಬಿಡಿ
‘ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಜನರಲ್ಲಿ ಜ್ವರ ಮತ್ತು ಸೋಂಕಿನ ಬಗ್ಗೆ ಭಯ ಹೆಚ್ಚಿದೆ. ಕೋವಿಡ್‌ ಲಸಿಕೆಯನ್ನು ಪಡೆದಾಗ ಬರುವ ಜ್ವರ ಮೂತ್ರಪಿಂಡ ವೈಫಲ್ಯದ ರೋಗಿಗಳಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಎನ್ನುವ ಆತಂಕ ಅನೇಕರನ್ನು ಕಾಡುತ್ತಿದೆ. ಮೂತ್ರಪಿಂಡ ವೈಫಲ್ಯದ ರೋಗಿಗಳು ಲಸಿಕೆ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕಲು ಇದೂ ಒಂದು ಕಾರಣ. ‘‘ಆದರೆ ಇದು ನಿಜವಲ್ಲ. ಲಸಿಕೆ ಪಡೆಯುವ ಮೂಲಕ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಲಸಿಕೆಯು ಅವರನ್ನು ಸೋಂಕು ತಗುಲದಂತೆ ಕಾಪಾಡುತ್ತದೆ ಎನ್ನುವುದನ್ನು ನಿಖರವಾಗಿ ಹೇಳಲಾಗದು. ಆದಾಗ್ಯೂ, ಸೋಂಕಿನ ತೀವ್ರತೆ ಮತ್ತು ಮರಣ ಪ್ರಮಾಣವನ್ನು ಇದು ಬಹುತೇಕ ತಗ್ಗಿಸುತ್ತದೆ’ ಎನ್ನುತ್ತಾರೆ ಏಸ್ ಸುಹಾಸ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಮೂತ್ರಪಿಂಡ ತಜ್ಞರಾದ ಡಾ. ನರಸಿಂಹಯ್ಯ.

ಇದನ್ನೂ ಓದಿ... PV Web Exclusive: ಇಂಗ್ಲಿಷ್‌ನಲ್ಲಿ ಮಿಡಿದ ತುಳುವರ ‘ಹೃದಯ ಬಡಿತ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು