ಬುಧವಾರ, ನವೆಂಬರ್ 25, 2020
19 °C

ಕಟ್ಟುನಿಟ್ಟಿನ ಪಥ್ಯ, ವ್ಯಾಯಾಮ ಮರೆಯದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಬಸವರಾಜ ಬಳಿಗಾರ

ಹುಬ್ಬಳ್ಳಿ: ‘ಕೋವಿಡ್‌ ಬರದಂತೆ ವಹಿಸುವಷ್ಟೇ ಕಾಳಜಿ, ಎಚ್ಚರಿಕೆಯನ್ನು ಕೋವಿಡ್‌ಗೆ ತುತ್ತಾಗಿ ಗುಣಮುಖರಾದವರೂ ವಹಿಸುವುದು ಅತ್ಯಗತ್ಯ. ಹೃದಯದ ಸಮಸ್ಯೆ ಇದ್ದರಂತೂ ಮೈಯೆಲ್ಲ ಕಣ್ಣಾಗಿರಬೇಕು’ ಎನ್ನುತ್ತಾರೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಸವರಾಜ ಬಳಿಗಾರ.

‘ಕೋವಿಡ್‌ಗೆ ತುತ್ತಾದ ಕೆಲವರಲ್ಲಿ ರಕ್ತದ ಸಾಂದ್ರತೆ ಗಾಢವಾಗುತ್ತದೆ. ಹೀಗಾದಾಗ ಹೃದಯ ಸ್ತಂಭನ, ಬ್ರೇನ್‌ಸ್ಟ್ರೋಕ್‌ ಕಾಣಿಸಿ ಕೊಳ್ಳುತ್ತದೆ. ಈ ಪ್ರಮಾಣ ಶೇ 5ರಿಂದ ಶೇ 10ರಷ್ಟು ಮಾತ್ರ. ಇಂಥ ಪ್ರಕರಣಗಳನ್ನು ವೈದ್ಯರು ರೋಗಿಗಳಿಗೆ ಕೋವಿಡ್‌ ಚಿಕಿತ್ಸೆ ನೀಡುವಾಗಲೇ ಗುರುತಿಸಿ, ಔಷಧೋಪಚಾರ ಹೇಳಿರುತ್ತಾರೆ. ಕೋವಿಡ್‌ನಿಂದ ಗುಣಮುಖರಾದರೂ 4–6 ವಾರಗಳ ಕಾಲ ವೈದ್ಯರು ಹೇಳಿದ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಅಪಾಯ ಆಹ್ವಾನಿಸಿದಂತೆಯೇ ಸರಿ’ ಎನ್ನುತ್ತಾರೆ ಅವರು.

‘ಹೃದಯ ಸಮಸ್ಯೆ ಇರುವವರಿಗೆ ಕೋವಿಡ್‌ ಬಂದರೆ, ರಿಸ್ಕ್‌ ಇನ್ನಷ್ಟು ಹೆಚ್ಚುತ್ತದೆ. ರಕ್ತದೊತ್ತಡ, ಮಧುಮೇಹ ಇರುವವರು, ಧೂಮಪಾನ, ಮದ್ಯಪಾನದಂಥ ದುಶ್ಚಟಗಳನ್ನು ಹೊಂದಿರುವವರಿಗೆ ಕೋವಿಡ್‌ ಬಂದರೆ, ಹೃದಯ ಸ್ತಂಭನ, ಬ್ರೇನ್‌ಸ್ಟ್ರೋಕ್‌ ಆಗುವ ಸಾಧ್ಯತೆಗಳು ಹೆಚ್ಚು’ ಎನ್ನುತ್ತಾರೆ ಬಳಿಗಾರ.

ಆಹಾರದಲ್ಲಿ ಪಥ್ಯ ಇರಲಿ: ಕೋವಿಡ್‌ನಿಂದ ಗುಣಮುಖರಾದವರು ರಕ್ತದೊತ್ತಡ, ಮಧುಮೇಹ ಪ್ರಮಾಣವನ್ನು ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಾಳಜಿ ವಹಿಸಬೇಕು.

ರಕ್ತದೊತ್ತಡ ಇದ್ದವರು ಉಪ್ಪಿನಕಾಯಿ, ಸಂಡಿಗೆಯಂಥ ಉಪ್ಪಿನಾಂಶ ಹೆಚ್ಚಿರುವ ಪದಾರ್ಥಗಳನ್ನು ತಿನ್ನಬಾರದು. ಅವುಗಳನ್ನು ತಿಂದರೆ ರಕ್ತದೊತ್ತಡ ಹೆಚ್ಚಿ ಹೃದಯ ಸಮಸ್ಯೆಯಾಗುವ ಸಾಧ್ಯತೆಗಳು ಅಧಿಕ. ಹೀಗಾಗಿ ಎಚ್ಚರಿಕೆ ಅಗತ್ಯ.

ಮಧುಮೇಹ ಇರುವವರು ತುಸು ಹೆಚ್ಚೇ ಕಾಳಜಿ ವಹಿಸಬೇಕು. ಇದು ಮೊದಲೇ ಹಬ್ಬಗಳ ಸಮಯ. ದೀಪಾವಳಿಯೂ ಬಂದೇ ಬಿಟ್ಟಿದೆ. ಸಿಹಿ ತಿನಿಸುಗಳಿಂದ ದೂರ ಇರುವುದೇ ಒಳಿತು. ಚಹಾ–ಕಾಫಿ ಜೊತೆಗೆ ಅನ್ನವನ್ನೂ ತುಸು ಕಡಿಮೆ ಮಾಡುವುದು ಉತ್ತಮ.

ಆಹಾರ ಸೇವನೆ ಮಿತವಾಗಿರಲಿ. ಮಾಂಸಾಹಾರ ಸೇರಿದಂತೆ ಕೊಬ್ಬು ಹೆಚ್ಚಿರುವ ಪದಾರ್ಥಗಳ ಸೇವನೆ ಬೇಡ.

* ಕೋವಿಡ್‌ನಿಂದ ಗುಣಮುಖರಾದ ಬಳಿಕವೂ 6ರಿಂದ 8 ವಾರ ಆರೋಗ್ಯ ಕಾಳಜಿ ಅಗತ್ಯ.

* ಕೋವಿಡೋತ್ತರವೂ ಉತ್ತಮ ಆಹಾರ ಸೇವನೆ ಆದ್ಯತೆ ಆಗಲಿ, ನಿಯಮಿತ ವ್ಯಾಯಾಮವೂ ಜೊತೆಗಿರಲಿ.

* ರಕ್ತದೊತ್ತಡ, ಮಧುಮೇಹ ಇದ್ದವರು ಅವುಗಳನ್ನು ಕಡ್ಡಾಯ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.

* ಮದ್ಯಪಾನ, ಧೂಮಪಾನಗಳಂಥ ಚಟಗಳಿಂದ ದೂರ ಉಳಿಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು